ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುತಿಹುದು ಪೊಲೀಸರ ಮನೆಯ ಮಾಳಿಗೆ...

ಶಿಥಿಲಗೊಂಡ ಮನೆಗಳ ರಿಪೇರಿ ಇಲ್ಲ, ಹಲವರಿಗೆ ಸಿಗದ ನಿವಾಸ; ಬಾಡಿಗೆ ಮನೆಯಲ್ಲಿ ವಾಸ
Last Updated 3 ಜುಲೈ 2022, 16:23 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ವಿವಿಧೆಡೆ ಪೊಲೀಸ್‌ ವಸತಿ ಗೃಹಗಳು ಶಿಥಿಲಗೊಂಡಿದ್ದು ಅಲ್ಲಿಯ ನಿವಾಸಿಗಳು ಸಂಕಷ್ಟಗಳ ನಡುವೆ ಜೀವನ ಸಾಗಿಸುತ್ತಿದ್ದಾರೆ. ಮನೆಯ ಮಾಳಿಗೆ ಸೋರುತ್ತಿದ್ದು ಮಳೆ ಬಂದರೆ ಗೋಡೆಗಳ ಮೂಲಕ ನೀರಿಳಿಯುತ್ತಿದೆ.

ಬಹುತೇಕ ಕಡೆಗಳಲ್ಲಿ ವಸತಿಗೃಹ ಕೊರತೆಯಾಗಿದ್ದು, ಪೊಲೀಸರು ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ನಗರದ ಬನ್ನೂರು ರಸ್ತೆಯಲ್ಲಿ ಸ್ವಾತಂತ್ರ್ಯ ಪೂರ್ವಕ್ಕೂ ಮೊದಲೇ ಪೊಲೀಸರಿಗಾಗಿಯೇ ರೂಪಿಸಲಾಗಿದ್ದ ಪೊಲೀಸ್‌ ಕಾಲೊನಿಯಲ್ಲಿ 250ಕ್ಕೂ ಹೆಚ್ಚು ವಸತಿ ಗೃಹಗಳಿವೆ. ವಿಶಾಲವಾದ ಸ್ಥಳದಲ್ಲಿ ಹೊಸ ಕಟ್ಟಡಗಳೂ ತಲೆ ಎತ್ತಿವೆ. ಆದರೆ, ಹಳೆಯ ಮನೆಗಳು ತೀರ ಹಳೆಯದಾಗಿದ್ದು, ವಾಸ ಮಾಡಲು ಯೋಗ್ಯವಾಗಿಲ್ಲ.

ಆದರೂ ವಸತಿ ಗೃಹಗಳು ಕೊರತೆ ಇರುವ ಕಾರಣ ಹಳೆಯ ಮನೆಯಲ್ಲೇ ಪೊಲೀಸರು ಜೀವನ ನಡೆಸುತ್ತಿದ್ದಾರೆ. ಇಲ್ಲಿ 50ಕ್ಕೂ ಹೆಚ್ಚು ಮನೆಗಳು ಮಳೆ ಬಂದರೆ ಸೋರುತ್ತವೆ. ಹಲವು ಸಿಬ್ಬಂದಿ ತಮ್ಮ ಸ್ವಂತ ಹಣ ಹಾಕಿ ಚುರಕಿ ಹಾಕಿಸಿಕೊಂಡಿದ್ದಾರೆ. ಕಟ್ಟಡ ತೀವ್ರ ಶಿಥಿಲಗೊಂಡಿರುವ ಕಾರಣ ಗೋಡೆಯಿಂದಲೇ ನೀರು ಇಳಿಯುತ್ತಿದ್ದು ತೊಂದರೆ ಉಂಟಾಗಿದೆ. ಕೆಲವು ಮನೆಗಳಲ್ಲಿ ಚಾವಣಿಗೆ ಟಾರ್ಪಲಿನ್‌ ಕಟ್ಟಿಕೊಂಡಿದ್ದಾರೆ.

‘ಮಳೆ ಬಂದರೆ ಭಯವಾಗುತ್ತದೆ. ಗೋಡೆಯಲ್ಲಿ ನೀರು ಇಳಿಯುವ ಕಾರಣ ಮನೆ ಮಕ್ಕಳಿಗೆ ಶೀತವಾಗುತ್ತದೆ. 6 ತಿಂಗಳ ಹಿಂದೆ ಚಾವಣಿಗೆ ಚುರಕಿ ಹಾಕಿಸಿದ್ದರು. ಆದರೂ ಸೋರುವ ಸಮಸ್ಯೆ ಬಗೆಹರಿದಿಲ್ಲ. ಹೊಸ ಮನೆ ವಿತರಣೆ ಮಾಡುವಂತೆ ಮನವಿ ಮಾಡಿದ್ದೇವೆ’ ಎಂದು ಪೊಲೀಸ್‌ ಸಿಬ್ಬಂದಿಯೊಬ್ಬರು ತಿಳಿಸಿದರು.

ಮನೆ ಕೊರತೆ: ನಗರದಲ್ಲಿ ಸುಸಜ್ಜಿತವಾದ ಪೊಲೀಸ್‌ ಬಡಾವಣೆ ಇದ್ದರೂ ವಸತಿ ಗೃಹಗಳ ಕೊರತೆ ಇದೆ. ನೂರಾರು ಸಿಬ್ಬಂದಿಗೆ ವಸತಿ ಗೃಹ ಸಿಗದಕಾರಣ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬಹುತೇಕ ಮಂದಿ ಅರ್ಜಿ ಸಲ್ಲಿಸಿದ್ದು, ಎಲ್ಲರಿಗೂ ಮನೆ ನೀಡಲು ಸಾಧ್ಯವಾಗಿಲ್ಲ. ಹಿರಿತನದ ಆಧಾರದ ಮೇಲೆ ಸಿಬ್ಬಂದಿಗೆ ವಸತಿ ಗೃಹ ಹಂಚಿಕೆ ಮಾಡಲಾಗುತ್ತಿದೆ.

ಶ್ರೀರಂಗಪಟ್ಟಣದ ಗ್ರಾಮಾಂತರ ಮತ್ತು ಪಟ್ಟಣ- ಎರಡೂ ಪೊಲೀಸ್ ಠಾಣೆಗಳಿಂದ 60ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಆದರೆ, ಶೇ 50ರಷ್ಟು ಸಿಬ್ಬಂದಿಗೆ ವಸತಿ ಸೌಕರ್ಯ ಇಲ್ಲದ ಕಾರಣ ಬಾಡಿಗೆ ಮನೆಯಲ್ಲಿ ವಾಸ‌ ಮಾಡುತ್ತಿದ್ದಾರೆ. ಮತ್ತೆ ಕೆಲವರು ವಸತಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಂಡ್ಯ, ಮೈಸೂರು ನಗರಗಳಲ್ಲಿ ಮನೆ ಮಾಡಿಕೊಂಡಿದ್ದಾರೆ.

ಪಟ್ಟಣದ ರಾಂಪಾಲ್ ರಸ್ತೆ ಪಕ್ಕದಲ್ಲಿದ್ದ ಕೆಲವು ವಸತಿ ಗೃಹಗಳನ್ನು ಶಿಥಿಲಗೊಂಡಿವೆ ಎಂಬ ಕಾರಣಕ್ಕೆ ಆರು ತಿಂಗಳ ಹಿಂದೆಯೇ ನೆಲಸಮ ಮಾಡಲಾಗಿದೆ. ಇದುವರೆಗೆ ವಸತಿ ಗೃಹಗಳ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಬೇರೆಡೆ ನಿವೇಶನ ಕೂಡ ಗುರುತಿಸಿಲ್ಲ. ತಾಲ್ಲೂಕಿನ ಕೆ.ಆರ್.ಎಸ್ ಠಾಣೆಯ ಸಿಬ್ಬಂದಿಗೂ ವಸತಿ ಸಮಸ್ಯೆ ಇದೆ ಎಂದು ಸಿಬ್ಬಂದಿ ತಿಳಿಸಿದರು.

ಪಾಂಡವಪುರ ಪಟ್ಟಣದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಪೊಲೀಸ್ ವಸತಿಗೃಹಗಳನ್ನು ನೆಲಸಮ ಮಾಡಲಾಗಿದೆ. ಹೀಗಾಗಿ ಸಿಬ್ಬಂದಿ ಬಾಡಿಗೆ ಮನೆಯಲ್ಲಿದ್ದಾರೆ. ಮೇಲುಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿಗೆ ನೂತನ ಕಟ್ಟಡವಿದ್ದು, ಅಲ್ಲಿ ವಾಸವಾಗಿದ್ದಾರೆ. ನಾಗಮಂಗಲ ಗ್ರಾಮಾಂತರ ಮತ್ತು ಪಟ್ಟಣ ಪೋಲಿಸ್ ಠಾಣೆ ಸಿಬ್ಬಂದಿಗೆ ಇತ್ತೀಚೆಗೆ ನಾಲ್ಕು ಹೊಸ ವಸತಿ ಗೃಹಗಳ ಸಂಕೀರ್ಣ ನಿರ್ಮಾಣಗೊಂಡಿದ್ದು 42 ಮನೆಗಳಿವೆ.

ಆದರೆ ಉನ್ನತ ಅಧಿಕಾರಿಗಳಿಗಾಗಿ ಮೀಸಲಿರುವ ವಸತಿ ಗೃಹ ಹಳೆಯದಾಗಿದ್ದು, ಹೊಸ ಕಟ್ಟಡದ ಅಗತ್ಯವಿದೆ. ಜೊತೆಗೆ ಬಿಂಡಿಗನವಿಲೆ ಠಾಣೆ ವ್ಯಾಪ್ತಿಯ ವಸತಿ ಗೃಹ ಹಳೆಯದಾಗಿದ್ದು, ಮಳೆ ಬಂದರೆ ಸೋರುತ್ತದೆ. ಬೆಳ್ಳೂರು ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಒಟ್ಟು 35 ವಸತಿ ಗೃಹಗಳ ಅಗತ್ಯವಿದ್ದು, ಕೇವಲ 12 ವಸತಿಗೃಹಗಳಿವೆ.

ಕೆ.ಆರ್.ಪೇಟೆ ಪಟ್ಟಣದಲ್ಲಿ ಗ್ರಾಮಾಂತರ, ಪಟ್ಟಣ ಠಾಣೆಯ ಸಿಬ್ಬಂದಿಗೆ ಮನೆ ಕೊರತೆಯಾಗಿದ್ದು ಹಲವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಮೇಲಂತಸ್ತಿನ ಮನೆಗಳು ಚಾವಣಿ ಸೀಲಿಂಗ್‌ ಹಾಳಾಗಿದ್ದು ಸೋರುತ್ತವೆ. ಕಿಕ್ಕೇರಿ ಠಾಣೆ ಸಿಬ್ಬಂದಿಯ ವಸತಿಗೃಹಗಳು ಹಳೆಯದಾಗಿದೆ. ಅಕ್ಕಿಹೆಬ್ಬಾಳು, ಸಂತೇಬಾಚಹಳ್ಳಿ ಸಿಬ್ಬಂದಿಗೂ ಸುಸಜ್ಜಿತ ವಸತಿಗೃಹಗಳ ಅವಶ್ಯಕತೆ ಇದೆ.

ಮಳವಳ್ಳಿ ಗ್ರಾಮಾಂತರ ಮತ್ತು ಪಟ್ಟಣದ ಎರಡೂ ಪೊಲೀಸ್ ಠಾಣೆಗಳಿಂದ 50ಕ್ಕೂ ಹೆಚ್ಚು ಸಿಬ್ಬಂದಿ ಪಟ್ಟಣದ ತಾಲ್ಲೂಕು ಕಚೇರಿಯ ಪಕ್ಕದ ವಸತಿ ಗೃಹಗಳಲ್ಲಿ ವಾಸವಿದ್ದಾರೆ. 2012ರಲ್ಲಿ ಹಳೆಯ ಕಟ್ಟಡಗಳನ್ನು ನವೀಕರಣ ಮಾಡಿದ್ದು, 2018ರಲ್ಲಿ ಹೊಸದಾಗಿ 20ಕ್ಕೂ ವಸತಿ ಗೃಹಗಳನ್ನು ನಿರ್ಮಾಣ ಮಾಡಿದ್ದು, 49 ಕುಟುಂಬಗಳ ವಾಸವಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಟ್ಟಡಗಳು ಸುಸ್ಥಿತಿಯಲ್ಲಿವೆ.

ವಸತಿ ಗೃಹಗಳಲ್ಲಿನ ರಸ್ತೆ ಹಾಳಾಗಿದ್ದು, ರಸ್ತೆ ಸರಿಪಡಿಸುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಿಬ್ಬಂದಿ ಹೇಳುತ್ತಾರೆ. ಕಿರುಗಾವಲು ಗ್ರಾಮದ ಬಳಿ ಇರುವ ವಸತಿ ಗೃಹಗಳಲ್ಲಿ ಶೇ 50ರಷ್ಟು ಮಾತ್ರ ವಾಸವಿದ್ದು, ಉಳಿದವು ಖಾಲಿ ಉಳಿದಿವೆ.

ಮದ್ದೂರು ಪಟ್ಟಣದ ತಾಲ್ಲೂಕು ಕಚೇರಿಯ ಹಿಂದೆ ಇತ್ತೀಚೆಗೆ ಪೊಲೀಸ್ ನೂತನ ವಸತಿಗೃಹಗಳ ನಿರ್ಮಾಣ ಮಾಡಲಾಗಿದೆ. 28 ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರು ವಾಸಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸ್ ಠಾಣೆಯ ಹಿಂಭಾಗವಿರುವ ವಸತಿ ಗೃಹದಲ್ಲಿ 18 ಸಿಬ್ಬಂದಿ ವಾಸಿಸುತ್ತಿದ್ದಾರೆ. ಸೌಲಭ್ಯಗಳು ಸುಸಜ್ಜಿತವಾಗಿವೆ.‌

ಸ್ವಚ್ಛತೆ ಕೊರತೆ; ನಗರಸಭೆ ವಿರುದ್ಧ ಆಕ್ರೋಶ: ಮಂಡ್ಯದ ಪೊಲೀಸ್‌ ಬಡಾವಣೆಯಲ್ಲಿ ನೂರಾರು ಮರ, ಗಿಡಗಳಿದ್ದು ಮಲೆನಾಡಿನ ವಾತಾವರಣವಿದೆ. ಆದರೆ, ಸ್ವಚ್ಛತೆಯ ಕೊರತೆಯಿರುವ ಕಾರಣ ಅಲ್ಲಿಯ ನಿವಾಸಿಗಳಿಗೆ ಆತಂಕ ಎದುರಾಗಿದೆ. ತೆರೆದ ಚರಂಡಿಗಳು ಮಕ್ಕಳಲ್ಲಿ ರೋಗಭೀತಿ ಸೃಷ್ಟಿಸಿವೆ.

ತಿಂಗಳಿಗೆ 2 ದಿನವಾದರೂ ನಗರಸಭೆ ಸಿಬ್ಬಂದಿ ಬಡಾವಣೆಗೆ ಬಂದು ಸ್ವಚ್ಛತೆ ಮಾಡಬೇಕು ಎಂದು ನಿವಾಸಿಗಳು ಒತ್ತಾಯಿಸುತ್ತಾರೆ. ಆದರೆ, ಪೊಲೀಸ್‌ ಬಡಾವಣೆಗೆ ನಗರಸಭೆ ಸ್ವಚ್ಛತಾ ಸಿಬ್ಬಂದಿಯನ್ನು ಕಳುಹಿಸಲು ನಿರಾಕರಿಸುತ್ತಿರುವುದು ಆಕ್ರೋಶ ಮೂಡಿಸಿದೆ.

‘ನಾವು ಪ್ರತಿ ವರ್ಷ ನಗರಸಭೆಗೆ ₹ 11 ಲಕ್ಷ ಕಂದಾಯ ಪಾವತಿಸುತ್ತೇವೆ. ನಮಗೆ ಸೌಲಭ್ಯ ನೀಡುವುದು ನಗರಸಭೆಯ ಕರ್ತವ್ಯ. ಮೈಸೂರು, ಬೆಂಗಳೂರು ಪೊಲೀಸ್‌ ಬಡಾವಣೆಯಲ್ಲಿ ಪಾಲಿಕೆ ಸಿಬ್ಬಂದಿಯೇ ಸ್ವಚ್ಛತೆ ನೋಡಿಕೊಳ್ಳುತ್ತಾರೆ. ಆದರೆ, ಮಂಡ್ಯದಲ್ಲಿ ನಗರಸಭೆ ಸಿಬ್ಬಂದಿ ಸ್ವಚ್ಛತೆಯ ಸೌಲಭ್ಯ ಒದಗಿಸಿಲ್ಲ’ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

216 ಮನೆಗಳ ನಿರ್ಮಾಣ: ಎಸ್ಪಿ: ‘ಪೊಲೀಸ್‌ ಸಿಬ್ಬಂದಿಗಾಗಿ ಹೊಸದಾಗಿ 216 ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಸೋರುತ್ತಿರುವ ಮನೆಗಳಲ್ಲಿ ಇರುವ ನಿವಾಸಿಗಳಿಗೆ ಆದ್ಯತೆಯ ಮೇರೆಗೆ ಮನೆ ಹಂಚಿಕೆ ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ತಿಳಿಸಿದರು.

‘ಜಿಲ್ಲೆಯಾದ್ಯಂತ 18 ಬ್ಲಾಕ್‌ ವಸತಿಗೃಹ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಬ್ಲಾಕ್‌ನಲ್ಲಿ 12 ಮನೆಗಳು ಇರುತ್ತವೆ. ಈಗಾಗಲೇ ಹಳೆಯ ಕೆಲವು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಸಾಧ್ಯವಾದಷ್ಟು ಎಲ್ಲ ಸಿಬ್ಬಂದಿಗೂ ವಸತಿಗೃಹ ವಿತರಣೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ನಿರ್ವಹಣೆ: ಎಂ.ಎನ್‌.ಯೋಗೇಶ್‌, ಪೂರಕ ಮಾಹಿತಿ: ಗಣಂಗೂರು ನಂಜೇಗೌಡ, ಬಲ್ಲೇನಹಳ್ಳಿ ಮಂಜುನಾಥ್, ಅಶೋಕ್‌ಕುಮಾರ್‌, ಲಿಂಗರಾಜು, ಪ್ರಕಾಶ್‌, ಉಲ್ಲಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT