ಭಾನುವಾರ, ಜನವರಿ 19, 2020
24 °C
ನೆಲತಾಯಿ ಪ್ರಶಸ್ತಿ ಪ್ರದಾನ; ಸಾಹಿತಿ ಪ್ರೊ.ಹುಲ್ಕೆರೆ ಮಹದೇವು ಅಭಿಮತ

ನೊಂದ ಹೆಣ್ಣುಮಕ್ಕಳಿಗೆ ತ್ವರಿತ ನ್ಯಾಯ ಸಿಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಮಹಿಳೆಯ ಮೇಲೆ ನಡೆಯುತ್ತಿರುವ ಎಲ್ಲಾ ವಿಧದ ದೌರ್ಜನ್ಯಗಳನ್ನು ಹಿಮ್ಮೆಟ್ಟಿಸಲು ಇಡೀ ವ್ಯವಸ್ಥೆ ಒಂದಾಗಬೇಕು. ಆ ಮೂಲಕ ನೊಂದ ಹೆಣ್ಣು ಮಕ್ಕಳಿಗೆ ತ್ವರಿತವಾಗಿ ನ್ಯಾಯ ದೊರೆಯುವಂತೆ ಮಾಡಬೇಕು’ ಎಂದು ಸಾಹಿತಿ ಪ್ರೊ.ಹುಲ್ಕೆರೆ ಮಹದೇವು ಹೇಳಿದರು.

ಕರ್ನಾಟಕ ಸಂಘದ ಆವರಣದಲ್ಲಿ ಶುಕ್ರವಾರ ಸ್ವರಾಜ್‌ ಸಂಘಟನೆ, ಆಕ್ಷನ್‌ ಏಯಿಡ್‌ ಹಾಗೂ ಸ್ವಯಂ ಸಂಘಟನೆಗಳ ಒಕ್ಕೂಟ ವತಿಯಿಂದ ನಡೆದ ನೆಲತಾಯಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹಲವು ಕಷ್ಟ, ಕೋಟಲೆಗಳನ್ನು ದಾಟಿ ಬಂದು ಸಮಾಜಕ್ಕೆ ಮಾದರಿಯಾಗಿರುವ ಹೆಣ್ಣು ಮಕ್ಕಳು ನಮ್ಮ ನಡುವೆ ಇದ್ದಾರೆ. ಅವರನ್ನು ಗುರುತಿಸಿ, ಗೌರವಿಸುವಂತಹ ಕೆಲಸಗಳಾಗಬೇಕು. ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆ, ಸರ್ಕಾರಗಳ ನಿರ್ಲಕ್ಷ್ಯದಿಂದ ಮಹಿಳೆಯರು ಹಲವು ಶೋಷಣೆಗಳನ್ನು ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಧೋರಣೆ ವಿರುದ್ಧ ಸಮಾಜದ ಪ್ರತಿಯೊಬ್ಬರೂ ವಿರೋಧ ವ್ಯಕ್ತಪಡಿಸಿ ಮಹಿಳೆಯರಿಗೆ ಹಕ್ಕುಗಳು ದೊರೆಯುವಂತಹ ವಾತಾವರಣ ನಿರ್ಮಾಣಗೊಳ್ಳಬೇಕು’ ಎಂದು ಹೇಳಿದರು.

‘ಅಕ್ಕ ಮಹಾದೇವಿ ಬಹು ಹಿಂದೆಯೇ ಶೋಷಣೆ, ದೌರ್ಜನ್ಯಗಳ ವಿರುದ್ಧ ಸಿಡಿದೆದ್ದು ನಿಂತಿದ್ದರು. ಆ ಕುರಿತಂತೆ ಅವರು ಹಲವು ವಚನಗಳನ್ನು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅಕ್ಕನ ಮನೋಭಾವ ಇಂದಿನ ಪ್ರತಿಯೊಬ್ಬ ಮಹಿಳೆಗೂ ಮಾದರಿಯಾಗಬೇಕು. ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುವ ವಾತಾವರಣ ನಿರ್ಮಾಣಗೊಳ್ಳಬೇಕು’ ಎಂದು ಹೇಳಿದರು.

ರೈತ ನಾಯಕಿ ನಂದಿನಿ ಜಯರಾಂ ಮಾತನಾಡಿ ‘2011ರಿಂದಲೂ ಮಹಿಳೆಯರಿಗೆ ಮಾದರಿಯಾಗುವ ಹೆಣ್ಣುಮಕ್ಕಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ನೆಲದಲ್ಲಿ ನೋವುಂಡು, ಮತ್ತೆ ಮೇಲೆದ್ದು ಬಂದ ಹೆಣ್ಣು ಮಕ್ಕಳು ಇಡೀ ಮಹಿಳಾ ಕುಲಕ್ಕೆ ಪ್ರೇರಕ ಶಕ್ತಿಯಾಗಿ ನಿಂತಿದ್ದಾರೆ. ಸಂಘರ್ಷದ ಬದುಕು ನಡೆಸಿ ಮಾದರಿ ಸ್ಥಾನದಲ್ಲಿ ನಿಂತಿದ್ದಾರೆ. ಅವರ ಬದುಕುಗಳನ್ನು ನೋಡಿದರೆ ಧೈರ್ಯ ಪ್ರತಿಯೊಬ್ಬರಲ್ಲೂ ಮೂಡುತ್ತದೆ’ ಎಂದು ಹೇಳಿದರು.

‘ನೆಲತಾಯಿ ಪ್ರಶಸ್ತಿಗೆ ಭಾಜನರಾಗುತ್ತಿರುವ ಎಲ್ಲಾ ಮಹಿಳೆಯರು ಘನತೆಯ ಬದುಕಿಗೆ ಸಾಕ್ಷಿಯಾಗಿದ್ದಾರೆ. ಆತ್ಮಹತ್ಯೆಯೊಂದೇ ದಾರಿ ಎಂದು ಸಾವಿನ ಹಾದಿ ಹುಡುಕುತ್ತಿದ್ದವರು ಅಲ್ಲಿಂದ ಹೊರ ಬಂದು ಗೌರವದ ಬದುಕು ಕಟ್ಟಿಕೊಂಡಿದ್ದಾರೆ. ಅವರೆಲ್ಲರ ಬದುಕು ಇಡೀ ಪೀಳಿಗೆಗೆ ಮಾನಸಿಕ ಸ್ಥೈರ್ಯ ತುಂಬುತ್ತದೆ’ಎಂದು ಹೇಳಿದರು.

ಸಿಐಟಿಯು ನಾಯಕಿ ಸಿ.ಕುಮಾರಿ ಮಾತನಾಡಿ ‘ಮಾತೆಯೇ ಮಾನ್ಯ ಆಗಿದ್ದ ಕಾಲದಲ್ಲಿ ನಿಯಂತ್ರಣ, ನಿರ್ಧಾರ, ಆಯ್ಕೆಯ ಅಧಿಕಾರ ಎಲ್ಲವೂ ಮಹಿಳೆಯ ಬಳಿ ಇದ್ದವು. ಕೃಷಿ, ಮಡಿಕೆ, ಕುಡಿಕೆಗಳನ್ನು ಕಂಡು ಹಿಡಿದವಳು ಮಹಿಳೆಯೇ ಆಗಿದ್ದಾಳೆ. ಆದರೆ ಸಮಾಜ ಪರುಷ ಪ್ರಧಾನವಾದ ನಂತರ ಮಹಿಳೆಯ ಮೇಲೆ ದೌರ್ಜನ್ಯ ನಡೆಯುವುದಕ್ಕೆ ಆರಂಭವಾಯಿತು. ಮಹಿಳೆಯನ್ನು ಮಕ್ಕಳು ಹಡೆಯುವ ಯಂತ್ರದಂತೆ ಬಳಸಿಕೊಳ್ಳಲಾಯಿತು’ ಎಂದು ವಿಷಾದಿಸಿದರು.

‘ಸಮಾಜದಲ್ಲಿ ಲಿಂಗ ಸಂವೇದನೆ ಮೂಡಿ ಮಹಿಳೆಗೆ ಉತ್ತಮ ಸ್ಥಾನ ದೊರೆಯುವಂತಾಗಬೇಕು. ಅದಕ್ಕಾಗಿ ಸ್ಥಾಪಿತ ದುಷ್ಟ ಶಕ್ತಿಗಳು ಇನ್ನಿಲ್ಲವಾಗಬೇಕು. ಎಲ್ಲಾ ಕಟ್ಟುಪಾಡುಗಳಿಂದ ಮಹಿಳೆ ಸಿಡಿದು ಹೊರಬಂದು ಮಹಿಳೆ ಗೌರವಯುತ ಬದುಕನ್ನು ಪಡೆಯಬೇಕು’ ಎಂದರು.

ಮಂಡ್ಯ ಜಿಲ್ಲೆಯ ಮಂಜುಳಾ, ಚಿಕ್ಕೋಳಮ್ಮ, ಸುನಂದಾ, ಚೈತ್ರಾ, ಜಿ.ಸರಸ್ವತಿ, ಬೆಂಗಳೂರಿನ ಕೋಕಿಲಾ, ರಾಯಚೂರಿನ ಹನುಮಮ್ಮ, ಮೈಸೂರು ಜಿಲ್ಲೆಯ ನೀಲಮ್ಮ ಅವರಿಗೆ ನೆಲತಾಯಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 2018 ನೆಲತಾಯಿ ಪ್ರಶಸ್ತಿ ಪುರಸ್ಕೃತೆ ಝಾನ್ಸಿರಾಣಿ, ಆಕ್ಷನ್‌ ಏಯಿಡ್‌ ಪ್ರಾಂತೀಯ ವ್ಯವಸ್ಥಾಪಕಿ ನಂದಿನಿ, ಸ್ವಯಂ ಸೇವ ಸಂಘಗಳ ಒಕ್ಕೂಟದ ಅಧ್ಯಕ್ಷ ಮಹೇಶ್‌ ಚಂದ್ರಗುರು ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು