ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಅನ್ಯ ಉದ್ದೇಶಕ್ಕೆ ಗ್ರಂಥಾಲಯ ಕರ ಬಳಕೆ

₹ 2 ಕೋಟಿಗೂ ಅಧಿಕ ಹಣ ಬಾಕಿ, ವಸೂಲಿ ಮಾಹಿತಿ ಮುಚ್ಚಿಡುವ ಸ್ಥಳೀಯ ಸಂಸ್ಥೆ ಅಧಿಕಾರಿಗಳು
Last Updated 12 ಸೆಪ್ಟೆಂಬರ್ 2022, 4:43 IST
ಅಕ್ಷರ ಗಾತ್ರ

ಮಂಡ್ಯ: ನಗರ, ಸ್ಥಳೀಯ ಸಂಸ್ಥೆಗಳು ತೆರಿಗೆ, ಕಂದಾಯದ ಜೊತೆ ವಸೂಲಿ ಮಾಡುವ ಗ್ರಂಥಾಲಯ ಕರದ ಹಣ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದ್ದು ಜಿಲ್ಲೆಯಾದ್ಯಂತ ಗ್ರಂಥಾಲಯಗಳು ಸೊರಗುತ್ತಿವೆ. ಸ್ಥಳೀಯ ಸಂಸ್ಥೆ ಆಡಳಿತ ಮಂಡಳಿ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯ ಗ್ರಂಥಾಲಯಗಳು ಡಿಜಿಟಲ್‌ ರೂಪ ಪಡೆಯಲು ಹಿಂದೆ ಬಿದ್ದಿವೆ.

ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಗಳು ಮನೆ ಕಂದಾಯ, ಆಸ್ತಿ ತೆರಿಗೆ ರೂಪದಲ್ಲಿ ಶೇ 6ರಷ್ಟು ಹಣವನ್ನು ಗ್ರಂಥಾಲಯ ಸೆಸ್‌ ಆಗಿ ಸಂಗ್ರಹಿಸುತ್ತವೆ. ಈ ಹಣ ಗ್ರಂಥಾಲಯಗಳ ಕಟ್ಟಡ, ಪುಸ್ತಕ, ಪೀಠೋಪಕರಣ, ಕಂಪ್ಯೂಟರ್‌ ಸೇರಿದಂತೆ ಗ್ರಂಥಾಲಯಗಳಿಗೆ ಸೌಲಭ್ಯ ಒದಗಿಸಲು ಬಳಕೆಯಾಗಬೇಕು.

ಸೆಸ್‌ ಹಣವನ್ನು ಸ್ಥಳೀಯ ಸಂಸ್ಥೆಗಳು ಗ್ರಂಥಾಲಯ ಇಲಾಖೆಗೆ ಪಾವತಿ ಮಾಡಬೇಕು. ಆದರೆ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಗಳು ₹ 2 ಕೋಟಿಗೂ ಹೆಚ್ಚು ಗ್ರಂಥಾಲಯ ಸೆಸ್‌ ಬಾಕಿ ಉಳಿಸಿಕೊಂಡಿರುವ ಕಾರಣ ಗ್ರಂಥಾಲಯಗಳು ಮೂಲಸೌಲಭ್ಯಗಳ ಕೊರತೆಯಿಂದ ನರಳುವಂತಾಗಿದೆ. ಗ್ರಂಥಾಲಯ ಇಲಾಖೆ ಅಧಿಕಾರಿಗಳು ಬಾಕಿ ಹಣವನ್ನು ಪಾವತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಹಣ ಪಾವತಿ ಮಾಡಲು ನಿರ್ಲಕ್ಷ್ಯ ತೋರುತ್ತಿದ್ದಾರೆ.

ಸ್ಥಳೀಯ ಸಂಸ್ಥೆಗಳು ಗ್ರಂಥಾಲಯ ಸೆಸ್‌ ಹಣವನ್ನು ಉದ್ದೇಶಪೂರ್ವಕವಾಗಿಯೇ ಅನ್ಯ ಉದ್ದೇಶಕ್ಕೆ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ರಸ್ತೆ, ಚರಂಡಿ ಮುಂತಾದ ಮೂಲಸೌಲಭ್ಯ ಉದ್ದೇಶಕ್ಕೆ ಗ್ರಂಥಾಲಯ ಸೆಸ್‌ ಹಣ ಬಳಕೆಯಾಗುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳು ಕೂಡ ಪ್ರಶ್ನೆ ಮಾಡದ, ಕ್ರಮ ಕೈಗೊಳ್ಳದ ಕಾರಣ ಗ್ರಂಥಾಲಯ ಇಲಾಖೆ ಅಧಿಕಾರಿಗಳ ಮನವಿ ಕೇವಲ ಅರಣ್ಯ ರೋದನವಾಗಿದೆ.

ಮಂಡ್ಯ ನಗರಸಭೆ ಸೇರಿದಂತೆ ಪಾಂಡವಪುರ, ಮಳವಳ್ಳಿ, ನಾಗಮಂಗಲ, ಕೆ.ಆರ್‌.ಪೇಟೆ, ಮದ್ದೂರು ನಗರಸಭೆ, ಬೆಳ್ಳೂರು ಪಟ್ಟಣ ಪಂಚಾಯಿತಿಗಳು ಅತಿ ಹೆಚ್ಚು ಸೆಸ್‌ ಹಣವನ್ನು ಬಾಕಿ ಉಳಿಸಿಕೊಂಡಿವೆ. ಶ್ರೀರಂಗಪಟ್ಟಣ ಪುರಸಭೆ ಹೆಚ್ಚು ಹಣ ಬಾಕಿ ಉಳಿಸಿಕೊಳ್ಳದೆ ಗ್ರಂಥಾಲಯ ಇಲಾಖೆಗೆ ಪಾವತಿ ಮಾಡಿದೆ. ರೋಹಿಣಿ ಸಿಂಧೂರಿ ಅವರು ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದಾಗ ಗ್ರಂಥಾಲಯ ಸೆಸ್‌ ಬಾಕಿ ಉಳಿಸಿಕೊಳ್ಳಕೂಡದು ಎಂದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಖಡಕ್‌ ಸೂಚನೆ ಕೊಟ್ಟಿದ್ದರು. ಆದರೆ, ಅವರು ವರ್ಗಾವಣೆಯಾದ ಕಾರಣ ಅವರ ಸೂಚನೆ ನನೆಗುದಿಗೆ ಬಿತ್ತು.

ಆರ್‌ಡಿಪಿಆರ್‌ಗೆ ಗ್ರಾ.ಪಂ ಗ್ರಂಥಾಲಯಗಳು: 2019ಕ್ಕೂ ಮೊದಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವಾಲಯದ ಅಡಿ ಕಾರ್ಯನಿರ್ವಹಿಸುತ್ತಿದ್ದ ಗ್ರಂಥಾಲಯ ಇಲಾಖೆಯೇ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಗ್ರಂಥಾಲಯಗಳನ್ನು ನಿರ್ವಹಣೆ ಮಾಡುತ್ತಿತ್ತು. ಗ್ರಾ.ಪಂಗಳಲ್ಲಿ ಸಂಗ್ರಹವಾಗುತ್ತಿದ್ದ ಕರವನ್ನು ಗ್ರಂಥಾಲಯ ಇಲಾಖೆಗೆ ಪಾವತಿ ಮಾಡಬೇಕಾಗಿತ್ತು. ಆದರೆ, 2019ರ ನಂತರ ಗ್ರಾ.ಪಂ ಗ್ರಂಥಾಲಯಗಳನ್ನು ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸುಪರ್ದಿಗೆ ನೀಡಲಾಗಿದೆ.

ಈ ಬದಲಾವಣೆ ನಂತರ ಗ್ರಾ.ಪಂ ವ್ಯಾಪ್ತಿಯ ಗ್ರಂಥಾಲಯ ಕರ ಆರ್‌ಡಿಪಿಆರ್‌ಗೆ ಹೋಗುತ್ತಿದೆ. ಈ ಗ್ರಂಥಾಲಯಗಳನ್ನು ಪಂಚಾಯತ್‌ ರಾಜ್‌ ಇಲಾಖೆಯೇ ನಿರ್ವಹಣೆ ಮಾಡುತ್ತಿದೆ. ಇದರ ಪರಿಣಾಮವಾಗಿ ಜಿಲ್ಲೆಯ ಬಹುತೇಕ ಗ್ರಂಥಾಲಯಗಳು ಡಿಜಿಟಲ್‌ ರೂಪ ಪಡೆದಿವೆ. ಉತ್ತಮ ಪುಸ್ತಕ ಸಂಗ್ರಹ, ಪೀಠೋಪಕರಣ, ಕಂಪ್ಯೂಟರ್‌ಗಳನ್ನು ಒಳಗೊಂಡಂತೆ ಸುಸಜ್ಜಿತವಾಗಿವೆ. ಕೆಲವೇ ಕೆಲವು ಗ್ರಂಥಾಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

ಆದರೆ, ಗ್ರಾಮ ಪಂಚಾಯಿತಿಗಳು ಕೂಡ ಗ್ರಂಥಾಲಯ ಕರವನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿವೆ. ಗ್ರಂಥಾಲಯಕ್ಕೆ ಸೆಸ್‌ ಕಟ್ಟಲು ಆಡಳಿತಮಂಡಳಿ ಸದಸ್ಯರು, ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಆದರೂ ಆರ್‌ಡಿಪಿಆರ್‌ ಅಧಿಕಾರಿಗಳು ಪ್ರತ್ಯೇಕ ಖಾತೆ ತೆರೆದು ಪರಿಣಾಮಕಾರಿಯಾಗಿ ಸೆಸ್‌ ಹಣ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನಗರಸಭೆಯಲ್ಲಿ ಸಂಗ್ರಹಿಸುವ ಗ್ರಂಥಾಲಯ ಕರವನ್ನು ನಗರ ಕೇಂದ್ರ ಗ್ರಂಥಾಲಯಕ್ಕೆ (ಸಿಸಿಎಲ್‌) ಪಾವತಿ ಮಾಡಬೇಕು. ಪುರಸಭೆಗಳಲ್ಲಿ ಸಂಗ್ರಹವಾಗುವ ಕರವನ್ನು ಜಿಲ್ಲಾಕೇಂದ್ರ ಗ್ರಂಥಾಲಯಕ್ಕೆ (ಡಿಸಿಎಲ್‌) ಪಾವತಿ ಮಾಡಬೇಕು. ನಗರಸಭೆ ಹಾಗೂ ಪುರಸಭೆಗಳಿಂದ ಗ್ರಂಥಾಲಯ ಕರ ವಸೂಲಿ ಮಾಡುವುದೇ ಗ್ರಂಥಾಲಯ ಇಲಾಖೆ ಅಧಿಕಾರಿಗಳಿಗೆ ಸವಾಲಾಗಿದೆ.

ಸಮರ್ಪಕ ಮಾಹಿತಿ ಇಲ್ಲ: ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಎಷ್ಟು ಕರ ವಸೂಲಿಯಾಗುತ್ತದೆ ಎಂಬ ಬಗ್ಗೆ ಅಲ್ಲಿಯ ಅಧಿಕಾರಿಗಳು ಸಮರ್ಪಕವಾದ ಮಾಹಿತಿ ನೀಡುವುದಿಲ್ಲ. ಮಾಹಿತಿಯನ್ನು ಮುಚ್ಚಿಡಲು ಪ್ರಯತ್ನಿಸುವುದು ಗ್ರಂಥಾಲಯ ಇಲಾಖೆ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ನಗರಸಭೆ ಪೌರಾಯುಕ್ತರು ಕೂಡ ಗ್ರಂಥಾಲಯ ಕರದ ಸಮರ್ಪಕ ಮಾಹಿತಿ ನೀಡಲು ನಿರಾಕರಿಸುತ್ತಾರೆ ಎಂಬ ಆರೋಪವಿದೆ.

‘ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿಗಳು ಈ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಹೊಂಚು ಹಾಕುತ್ತಾರೆ. ಗ್ರಂಥಾಲಯಗಳ ಅಭಿವೃದ್ಧಿಗೆ ಬಳಸುವುದು ಎಂದರೆ ಪುಕ್ಕಟೆ ಕೊಟ್ಟಂತೆ ಎಂದೇ ನಂಬಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಂಥಾಲಯಕ್ಕೆ ಸೌಲಭ್ಯ ಕೊಡುವುದು ಎಂದರೆ ಅದು ವ್ಯರ್ಥ ಎಂದೇ ನಂಬಿದ್ದಾರೆ. ಸ್ಥಳೀಯ ಸಂಸ್ಥೆ ಅಧಿಕಾರಿಗಳು ಈ ನಂಬಿಕೆಯಿಂದ ಹೊರಬರಬೇಕು’ ಎಂದು ಗ್ರಂಥಾಲಯ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.

ರಚನೆಯಾಗದ ಸಲಹಾ ಸಮಿತಿ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಗಳ ನಿರ್ವಹಣೆಗಾಗಿ ಆರ್‌ಡಿಪಿಆರ್‌ ಹಾಗೂ ಸ್ಥಳೀಯ ಗ್ರಾ.ಪಂ ಆಡಳಿತ ಮಂಡಳಿ ಸದಸ್ಯರನ್ನು ಒಳಗೊಂಡ ಸಲಹಾ ಸಮಿತಿ ರಚನೆ ಮಾಡಲು ಸರ್ಕಾರ ಸೂಚಿಸಿದೆ. ಸರ್ಕಾರದ ಮಟ್ಟದಲ್ಲೂ ಈ ಸಮಿತಿ ಇದೆ. ಆದರೆ, ಗ್ರಾ.ಪಂ ಮಟ್ಟದಲ್ಲಿ ಸಮಿತಿಗಳು ರಚನೆಯಾಗದ ಕಾರಣ ಕರ ವಸೂಲಿ ಸಮರ್ಪಕವಾಗಿ ನಡೆಯುತ್ತಿಲ್ಲ.

ಗ್ರಾ.ಪಂ ಅಧ್ಯಕ್ಷರು ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುತ್ತಾರೆ. ಸ್ಥಳೀಯ ಪ್ರೌಢಶಾಲೆ ಮುಖ್ಯಶಿಕ್ಷಕ, ಯುವಕ ಮಂಡಳದ ಪ್ರತಿನಿಧಿ, ಯುವತಿ ಮಂಡಳಿಯ ಪ್ರತಿನಿಧಿ, ಗ್ರಾಮದ ಹಿರಿಯ ನಾಗರಿಕ, ಸ್ಥಳೀಯ ಸಾಹಿತಿ, ಗ್ರಂಥಾಲಯ ಮೇಲ್ವಿಚಾರಕರು, ಪಿಡಿಒ ಸದಸ್ಯರಾಗಿರುತ್ತಾರೆ. ಇವರು ಗ್ರಂಥಾಲಯ ಕರ ಬಳಕೆಯ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ.

ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಸಮಿತಿ ರಚನೆಯಾಗಿಲ್ಲ. ಹೀಗಾಗಿ ಗ್ರಂಥಾಲಯಗಳನ್ನು ಪರಿಪೂರ್ಣ ಡಿಜಿಟಲ್‌ ಮಾಹಿತಿ ಕೇಂದ್ರವನ್ನಾಗಿ ರೂಪಿಸಲು ಸಾಧ್ಯವಾಗಿಲ್ಲ. ಈ ರೀತಿಯ ಸಮಿತಿ ಇದೆ ಎಂಬುದೇ ಬಹುತೇಕ ಪಿಡಿಒಗಳಿಗೆ ಗೊತ್ತಿಲ್ಲದಿರುವುದು ದುರದೃಷ್ಟಕರ.

ಶ್ರೀರಂಗಪಟ್ಟಣ ಪುರಸಭೆ ಮಾದರಿ
ಜಿಲ್ಲೆಯ ಆರು ಪುರಸಭೆಗಳಲ್ಲಿ ಶ್ರೀರಂಗಪಟ್ಟಣ ಪುರಸಭೆ ಅಧಿಕಾರಿಗಳು ಕಾಲಕಾಲಕ್ಕೆ ಗ್ರಂಥಾಲಯ ಕರವನ್ನು ಗ್ರಂಥಾಲಯ ಇಲಾಖೆಗೆ ಪಾವತಿ ಮಾಡುತ್ತಿದ್ದಾರೆ. ನಿಯಮಿತವಾಗಿ ಕರದ ಹಣ ಸಂದಾಯವಾಗುತ್ತಿದೆ. ಶ್ರೀರಂಗಪಟ್ಟಣ ಪುರಸಭೆ ಹೊರತುಪಡಿಸಿ ಮತ್ತಾವ ಪುರಸಭೆಯೂ ನಿಯಮಿತವಾಗಿ ಸೆಸ್‌ ಹಣವನ್ನು ಗ್ರಂಥಾಲಯ ಇಲಾಖೆಗೆ ನೀಡುತ್ತಿಲ್ಲ.

‘ಸೆಸ್‌ ಹಣವನ್ನು ಖಾಯಂ ಅಲ್ಲದ ನೌಕರರ ಗೌರವ ಧನ, ಪುಸ್ತಕಗಳ ಖರೀದಿ, ಪತ್ರಿಕೆಗಳ ಬಾಬ್ತು ಪಾವತಿ ಮತ್ತು ಮೂಲ ಸೌಕರ್ಯಗಳಿಗೆ ಬಳಸಲಾಗುತ್ತಿದೆ. ಗ್ರಂಥಾಲಯಗಳು ಈ ಕರದಿಂದ ಬರುವ ಹಣದಿಂದಲೇ ನಡೆಯುತ್ತಿವೆ’ ಎಂದು ಶ್ರೀರಂಗಪಟ್ಟಣ ಶಾಖಾ ಗ್ರಂಥಾಲಯದ ಪ್ರಭಾರದಾರ ಎಂ.ಎನ್.ಮುರಳಿ ಹೇಳುತ್ತಾರೆ.

_______

ನಿರ್ವಹಣೆ: ಎಂ.ಎನ್‌.ಯೋಗೇಶ್‌
ಪೂರಕ ಮಾಹಿತಿ: ಗಣಂಗೂರು ನಂಜೇಗೌಡ, ಬಲ್ಲೇನಹಳ್ಳಿ ಮಂಜುನಾಥ್‌, ಅಶೋಕ್‌ ಕುಮಾರ್, ಟಿ.ಕೆ.ಲಿಂಗರಾಜು, ಹಾರೋಹಳ್ಳಿ ಪ್ರಕಾಶ್‌, ಯು.ವಿ.ಉಲ್ಲಾಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT