ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾ: ರೈತರ ಮನೆಮನೆಗೆ ಭೇಟಿ

ಪ್ರಜಾವಾಣಿ ವಾರ್ತೆ‌
Last Updated 16 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ಮಂಡ್ಯ: ‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಬೆಳೆ ಸಾಲ ಮನ್ನಾ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗುವುದು. ಮನ್ನಾ ಆದ ಪ್ರತಿ ರೈತರ ಮನೆಮನೆಗೆ ಭೇಟಿ ನೀಡಿ ಮಾಹಿತಿ ನೀಡಲಾಗುವುದು’ ಎಂದು ಜೆಡಿಎಸ್‌ ಮುಖಂಡ ಎಲ್‌.ಆರ್‌.ಶಿವರಾಮೇಗೌಡ ಬುಧವಾರ ಹೇಳಿದರು.

ರೈತರ ಸಾಲಾ ಮನ್ನಾ ವಿವರವನ್ನೊಳಗೊಂಡ ‘ಸಾಲ ಮನ್ನಾ; ಲಕ್ಷಾಂತರ ರೈತರಿಗೆ ಅನುಕೂಲ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಎಲ್ಲಾ ಜಿಲ್ಲೆಗಳಲ್ಲಿ ತಲಾ ಒಂದೊಂದು ಪುಸ್ತಕ ಮುದ್ರಿಸಲಾಗಿದ್ದು ಮನ್ನಾ ಆದ ಸಾಲದ ಮೊತ್ತ, ಅನುಕೂಲ ಪಡೆದ ರೈತರ ಸಂಖ್ಯೆ, ರೈತರ ವಿಳಾಸ, ಅವರ ಬ್ಯಾಂಕ್‌ ಖಾತೆ ಸಂಖ್ಯೆ, ಅವರ ಮೊಬೈಲ್‌ ಸಂಖ್ಯೆಗಳನ್ನು ಪುಸ್ತಕದಲ್ಲಿ ಮುದ್ರಿಸಲಾಗಿದೆ. ಅನುಮಾನವಿದ್ದರೆ ರೈತರಿಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಬಹುದು. ಆಯಾ ಜಿಲ್ಲಾ ಮಟ್ಟದಲ್ಲಿ ಜೆಡಿಎಸ್‌ ಮುಖಂಡರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ’ ಎಂದರು.

‘ಸಾಲ ಮನ್ನಾ ಬಗ್ಗೆ ಬಿಜೆಪಿ ಮುಖಂಡರು ಪ್ರಶ್ನೆ ಮಾಡುತ್ತಿದ್ದರು. ರೈತರಿಗೆ ಯಾವುದೇ ಅನುಕೂಲ ಆಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದರು. ಆದರೆ ಇದೀಗ ಅಧಿಕೃತ ದಾಖಲೆ ಸಮೇತ ಪುಸ್ತಕ ಮುದ್ರಿಸಲಾಗಿದೆ. ಬಿಜೆಪಿ ಮುಖಂಡರ ಮಾತುಗಳನ್ನು ರೈತರು ನಂಬಬಾರದು. ಪುಸ್ತಕದಲ್ಲಿರುವ ಮಾಹಿತಿ ಪರಿಶೀಲಿಸಬೇಕು’ ಎಂದರು.

‘ಪುಸ್ತಕ ಮುದ್ರಿಸಿ ನಾವು ಸುಮ್ಮನೆ ಕೂರುವುದಿಲ್ಲ. ಮನ್ನಾ ಆದ ರೈತರ ಮನೆಮನೆಗೆ ಭೇಟಿ ನೀಡಿ ಎಚ್‌.ಡಿ.ಕುಮಾರಸ್ವಾಮಿ ಅವರ ಕಾರ್ಯದ ಬಗ್ಗೆ ಅರಿವು ಮೂಡಿಸುತ್ತೇವೆ. ಉಪ ಚುನಾವಣೆ ಇರುವ ಕ್ಷೇತ್ರಗಳಲ್ಲಿ ಮೊದಲು ಈ ಕೆಲಸ ಮಾಡುತ್ತೇವೆ. ಮುಂದಿನ ವಾರದಿಂದ ಕೆ.ಆರ್‌.ಪೇಟೆ ಕ್ಷೇತ್ರದಿಂದಲೇ ಆರಂಭಿಸುತ್ತೇವೆ. ಅದಕ್ಕಾಗಿ ಜೆಡಿಎಸ್‌ನ ಒಂದು ತಂಡ ಸಿದ್ಧಗೊಳಿಸಲಾಗಿದೆ’ ಎಂದು ಹೇಳಿದರು. ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT