ಮಂಡ್ಯ: ನಗರಸಭೆಗೆ ಆರಿಸಿ ಬಂದ ಹಾಡುಗಾರ ಶ್ರೀಧರ್‌!

7
ಸಂಗೀತ – ಸಮಾಜ ಸೇವೆಯ ಭರವಸೆ

ಮಂಡ್ಯ: ನಗರಸಭೆಗೆ ಆರಿಸಿ ಬಂದ ಹಾಡುಗಾರ ಶ್ರೀಧರ್‌!

Published:
Updated:
Deccan Herald

ಮಂಡ್ಯ: ಜನಪದ ಹಾಡು, ಚಿತ್ರ ಸಂಗೀತ ಹಾಗೂ ಭಾವ ಗೀತಾ ಗಾಯನದಲ್ಲಿ ಪರಿಚಿತರಾಗಿರುವ ಎಂ.ಎನ್‌.ಶ್ರೀಧರ್‌ ಈಗ ನಗರಸಭಾ ಸದಸ್ಯ. 26ನೇ ವಾರ್ಡ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು 207 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಸಿದ್ಧಾರ್ಥ ಯುವ ವೇದಿಕೆಯ ಅಧ್ಯಕ್ಷರೂ ಆಗಿರುವ ಅವರು ಸಂಗೀತ ಹಾಗೂ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡವರು. 80ರ ದಶಕದಲ್ಲಿ ವಿನಾಯಕ ವಾದ್ಯಗೋಷ್ಠಿಯ ಮೂಲಕ ಸಂಗೀತ ಲೋಕಕ್ಕೆ ಪದಾರ್ಪಣೆ ಮಾಡಿದ್ದ ಅವರು ಉತ್ತಮ ಧ್ವನಿಯಿಂದ ಭರವಸೆ ಮೂಡಿಸಿದವರು. ಶಾಸ್ತ್ರೀಯವಾಗಿ ಸಂಗೀತ ಕಲಿಯದಿದ್ದರೂ ಮನದುಂಬಿ ಹಾಡುವ ಶ್ರೀಧರ್‌ ನೂರಾರು ಕಾರ್ಯಕ್ರಮಗಳಲ್ಲಿ ಹಾಡಿದವರು. ಚಿಕ್ಕಂದಿನಿಂದಲೂ ಜನಪದ ಗೀತೆ, ಚಿತ್ರಗೀತೆ, ದೇವರ ನಾಮಗಳಿಗೆ ಜೀವ ತುಂಬುತ್ತಾ ಜನರ ಪ್ರೀತಿ ಗಳಿಸಿದ ಅವರು ತಮ್ಮ ಬಡಾವಣೆ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದರು. ಅದೇ ಸಮಾಜ ಸೇವೆಯ ರೂಪ ಪಡೆಯಿತು.‌

ಇತ್ತೀಚೆಗೆ ನಗರದ ಕಲಾಮಂದಿರದಲ್ಲಿ ನಡೆದ ‘ಎಂದೂ ಮರೆಯದ ಹಾಡು’ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ‘ಹೃದಯ ಸಮುದ್ರ ಕಲಕಿ’ ಚಿತ್ರೆಗೀತೆ ಹಾಡಿದ್ದರು. ಸಚಿವರ ಹಾಡಿಗೆ ಶ್ರೀದರ್‌ ಧ್ವನಿಗೂಡಿಸಿ ಗಮನ ಸೆಳೆದಿದ್ದರು. ಶ್ರೀರಂಗಪಟ್ಟಣ ದಸರಾ, ಜಪಲಾತೋತ್ಸವ, ಸುಗಮ ಸಂಗೀತ ಅಕಾಡೆಮಿಯ ಗೀತೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಶ್ರೀಧರ್‌ ಹಾಡಿದ್ದಾರೆ. ಬಿ.ಕೆ.ಸುಮಿತ್ರಾ, ರತ್ನಾಮಾಲಾ ಪ್ರಕಾಶ್‌, ಕಿಕ್ಕೇರಿ ಕೃಷ್ಣಮೂರ್ತಿ ಮುಂತಾದ ಗಾಯಕರ ಜೊತೆ ಅವರು ಧ್ವನಿಗೂಡಿಸಿದ್ದಾರೆ. ಬೆಂಗಳೂರು, ಮೈಸೂರು, ತುಮಕೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಕಾರ್ಯಕ್ರಮ ನೀಡಿರುವ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.

ಶ್ರೀಧರ್‌ ಅವರ ಸಂಗೀತ ಸೇವೆಗೆ 2008ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಕಲಾ ಕಾರಂಜಿ, ಚೈತನ್ಯ ರತ್ನ, ಕದಂಬ ಸೇವಾ ರತ್ನ ಮುಂತಾದ ಗೌರವಗಳು ಮುಡಿಗೇರಿವೆ. ‘ಸಂಗೀತದಿಂದಲೇ ನಾನು ಜನರ ನಡುವೆ ಗುರುತಿಸಿಕೊಂಡೆ. ಹಾಡುತ್ತಲೇ ಸಮಾಜ ಸೇವೆಯ ಹಾದಿ ಹಿಡಿದೆ. 2001ರ ನಗರಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 230 ಮತ ಗಳಿಸಿದ್ದೆ. ಈಗ ಕಾಂಗ್ರೆಸ್‌ ಮುಖಂಡರು ನನಗೆ ಟಿಕೆಟ್‌ ನೀಡಿ ಪ್ರೋತ್ಸಾಹಿಸಿದರು. ಜನರ ಆಶೀರ್ವಾದದಿಂದ ಗೆಲುವು ಸಿಕ್ಕದೆ. ನನ್ನ ವಾರ್ಡ್‌ ಜನರ ಸೇವೆ ಹಾಗೂ ಸಂಗೀತ ಸೇವೆಯನ್ನು ನನ್ನೆರಡು ಕಣ್ಣಿನಂತೆ ಪೋಷಣೆ ಮಾಡುತ್ತೇನೆ’ ಎಂದು ಎಂ.ಎನ್‌.ಶ್ರೀಧರ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !