ಸ್ಥಳೀಯ ಚುನಾವಣೆಯಲ್ಲೂ ‘ನೋಟಾ’ಗೆ ಅವಕಾಶ

7
ಇಂದಿನಿಂದ ನಾಮಪತ್ರ ಸಲ್ಲಿಕೆ, ಆ.29ರಂದು ಮತದಾನ, ಸೆ.1ರಂದು ಎಣಿಕೆ ಕಾರ್ಯ

ಸ್ಥಳೀಯ ಚುನಾವಣೆಯಲ್ಲೂ ‘ನೋಟಾ’ಗೆ ಅವಕಾಶ

Published:
Updated:
Deccan Herald

ಮಂಡ್ಯ: ‘ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನೋಟಾ (ಮೇಲಿನವರು ಯಾರೂ ಅಲ್ಲ) ಚಲಾಯಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಹೇಳಿದರು.

‘ಆಗಸ್ಟ್‌ 29ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಸಲಾಗುತ್ತಿದೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಳಸಲಾದ ಮತ ಖಾತರಿ ಯಂತ್ರ (ವಿವಿ ಪ್ಯಾಟ್‌) ಈ ಚುನಾವಣೆಯಲ್ಲಿ ಇರುವುದಿಲ್ಲ. ಇದೇ ಮೊದಲ ಬಾರಿಗೆ ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರ ಮುದ್ರಿಸಲು ಕ್ರಮ ವಹಿಸಲಾಗಿದೆ. ಇದಕ್ಕೂ ಮೊದಲು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನೋಟಾ ಇರಲಿಲ್ಲ, ಈ ಬಾರಿ ಆಯೋಗ ಅವಕಾಶ ನೀಡಿದೆ. ನ್ಯಾಯಸಮ್ಮತ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಡ್ಯ ನಗರಸಭೆ, ಮದ್ದೂರು, ನಾಗಮಂಗಲ, ಪಾಂಡವಪುರ ಪುರಸಭೆ, ಬೆಳ್ಳೂರು ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಹಾಗೂ ಇತರ ಸಿಬ್ಬಂದಿಗೆ ಈಗಾಗಲೇ ಎರಡು ಸುತ್ತಿನ ತರಬೇತಿ ನೀಡಲಾಗಿದೆ. ಮಂಡ್ಯ ನಗರಸಭೆಗೆ ಉಪ ವಿಭಾಗಾಧಿಕಾರಿಯನ್ನು ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗೆ ತಹಶೀಲ್ದಾರ್‌ರನ್ನು ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಮೇಲುಸ್ತುವಾರಿಗಾಗಿ ನೋಡೆಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಆ.2ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ನಗರದಾದ್ಯಂತ ಜಾಹೀರಾತು ಫಲಕ, ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ. ನೀತಿ ಸಂಹಿತೆ ಪಾಲನೆಗೆ ಸೆಕ್ಟರ್‌ ಅಧಿಕಾರಿಗಳು, ನೀತಿ ಸಂಹಿತೆ ತಂಡ ರಚಿಸಲಾಗಿದೆ. ಈ ತಂಡದ ಸದಸ್ಯರು ನೀತಿ ಸಂಹಿತೆ ಉಲ್ಲಂಘನೆಯ ಮೇಲೆ ನಿಗಾ ವಹಿಸುವರು’ ಎಂದರು.

‘ಆ.10ರಿಂದ 17ರವರೆಗೆ ನಾಮಪತ್ರ ಸ್ವೀಕರಿಸಲಾಗುವುದು. ಇದರಲ್ಲಿ ಆ.12 ಭಾನುವಾರ, ಆ.15 ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಾಮಪತ್ರ ಸ್ವೀಕಾರ ಇರುವುದಿಲ್ಲ. ನಾಮಪತ್ರ ಸಲ್ಲಿಸಲು ಬರುವ ಜನರ ಸಂಖ್ಯೆ 5, ವಾಹನ ಸಂಖ್ಯೆಯನ್ನು 2ಕ್ಕೆ ಮಿತಿಗೊಳಿಸಲಾಗಿದೆ. ಪ್ರತಿ ವಾರ್ಡ್‌ನಿಂದ ಗರಿಷ್ಠ ನಾಲ್ಕು ನಾಮಪತ್ರ ಸಲ್ಲಿಸಲು ಅವಕಾಶ ಇದೆ’ ಎಂದು ಹೇಳಿದರು.

‘ನಗರಸಭೆಗೆ ನಾಮಪತ್ರ ಸಲ್ಲಿಸುವಾಗ ಸಾಮಾನ್ಯ ಅಭ್ಯರ್ಥಿ ₹ 2 ಸಾವಿರ ಠೇವಣಿ ಪಾವತಿಸಬೇಕು. ಹಿಂದುಳಿದ ವರ್ಗ, ಎಸ್‌ಸಿ, ಎಸ್‌ಟಿ, ಮಹಿಳಾ ಅಭ್ಯರ್ಥಿ ₹ 1 ಸಾವಿರ ಪಾವತಿಸಬೇಕು. ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗೆ ಸಾಮಾನ್ಯ ಅಭ್ಯರ್ಥಿ ₹ 1 ಸಾವಿರ, ಹಿಂದುಳಿದ ವರ್ಗ, ಎಸ್‌ಸಿ, ಎಸ್‌ಟಿ, ಮಹಿಳಾ ಅಭ್ಯರ್ಥಿಗಳು ₹ 500 ಠೇವಣಿ ಪಾವತಿಸಬೇಕು. ಅಭ್ಯರ್ಥಿಯು ನಾಮಪತ್ರ ಸಲ್ಲಿಸುವಾಗ ಆಸ್ತಿ ವಿವರದ ಪ್ರಮಾಣ ಪತ್ರ ಸಲ್ಲಿಸಬೇಕು. ನಗರಸಭೆ ಹಾಗೂ ಪುರಸಭೆಗೆ ವಿಶೇಷ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಿಸಲಾಗಿದೆ’ ಎಂದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !