ಮಹಾ ಚುನಾವಣೆಯ ನಂತರ ಸ್ಥಳೀಯ ಮಿನಿ ಸಮರ ಶುರು

7

ಮಹಾ ಚುನಾವಣೆಯ ನಂತರ ಸ್ಥಳೀಯ ಮಿನಿ ಸಮರ ಶುರು

Published:
Updated:
Deccan Herald

ಮಂಡ್ಯ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಿದೆ. ವಿಧಾನಸಭಾ ಮಹಾಯುದ್ಧ ಮುಗಿಸಿ ವಿಶ್ರಾಂತಿಯಲ್ಲಿದ್ದ ಸ್ಥಳೀಯ ಜನಪ್ರತಿನಿಧಿಗಳಿಗೆ ಈಗ ಮಿನಿ ಸಮರ ಎದುರಾಗಿದೆ. ಚುನಾವಣಾ ನೀತಿ ಸಂಹಿತೆ ಈಗಾಗಲೇ ಜಾರಿಯಾಗಿದ್ದು ಅಧಿಕಾರಿಗಳು ಜನಪ್ರತಿನಿಧಿಗಳ ಮೇಲೆ ನಿಗಾ ವಹಿಸಿದ್ದಾರೆ.

ಮಂಡ್ಯ ನಗರಸಭೆ, ಮದ್ದೂರು ಪುರಸಭೆ, ಪಾಂಡವಪುರ ಪುರಸಭೆ, ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿಗೆ ಆಗಸ್ಟ್‌ 29ರಂದು ಚುನಾವಣೆ ನಡೆಯಲಿದೆ. ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಚುನಾವಣಾ ಕಾರ್ಯಗಳು ಆರಂಭವಾಗಿದ್ದು ಮತದಾರರ ಪಟ್ಟಿಯನ್ನು ವಾರ್ಡ್‌ವಾರು ವಿಭಾಗ ಮಾಡಿಕೊಳ್ಳಲಾಗಿದೆ. ನಗರಾಭಿವೃದ್ಧಿ ಇಲಾಖೆ ನಗರಸಭೆಯ ಎಲ್ಲಾ 35 ವಾರ್ಡ್‌ಗಳ ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ. ಮೇ 25ರಂದು ಕರಡು ಮೀಸಲಾತಿ ಪ್ರಕಟಗೊಂಡಿತ್ತು. ನಂತರ ಕೆಲ ಸದಸ್ಯರು ಆಕ್ಷೇಪಣೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅಂತಿಮ ಅಧಿಸೂಚನೆ ಆ.1ರಂದು ಪ್ರಕಟಗೊಂಡಿದೆ.

ನಗರಸಭೆಯಲ್ಲಿ ಒಟ್ಟು 35 ವಾರ್ಡ್‌ಗಳಿವೆ. 199 ಮತಗಟ್ಟೆಗಳಿದ್ದು ಪ್ರತಿ ವಾರ್ಡ್‌ನಲ್ಲಿ 2ರಿಂದ 4 ಮತಗಟ್ಟೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಚುನಾವಾಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಮಾದರಿ ನೀತಿ ಸಂಹಿತೆ ತಂಡ, ಲೆಕ್ಕ ಪತ್ರ ನಿರ್ವಹಣಾ ತಂಡ, ವೀಡಿಯೊ ಕಣ್ಗಾವಲು ತಂಡ ರಚನೆ ಮಾಡಲಾಗಿದೆ. ‘ಈಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯ ನಂತರ ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸಲಾಗಿದೆ. ಮತಗಟ್ಟೆಗಳಿಗೆ ರ‍್ಯಾಂಪ್‌, ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಟಿ.ಎನ್‌.ನಗಸಿಂಹಮೂರ್ತಿ ಹೇಳಿದರು.

ಸೆಪ್ಟೆಂಬರ್‌ 16ರಂದು ಹಾಲಿ ನಗರಸಭೆ ಸದಸ್ಯರ ಅವಧಿ ಮುಗಿಯಲಿದೆ. ಸೆ.1ರಂದೇ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಹೊಸ ಅಧ್ಯಕ್ಷರ ಆಯ್ಕೆಯ ನಂತರ ಹೊಸ ಆಡಳಿತ ಮಂಡಳಿಯ ಅವಧಿ ಆರಂಭವಾಗುತ್ತದೆ. 15 ದಿನಗಳ ಹಿಂದಷ್ಟೇ ನೂತನ ಅಧ್ಯಕ್ಷೆಯಾಗಿ 26ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ ಷಹಜಹಾನ್‌ ಆಯ್ಕೆಯಾಗಿದ್ದರು. ಅವರು ಹೊಸ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳುವವರೆಗೂ ಅವರು ಮುಂದುವರಿಯಲಿದ್ದಾರೆ.

ಮೂರು ಪುರಸಭೆ:
ನಾಗಮಂಗಲ ಮತ್ತು ಪಾಂಡವಪುರ ಪಟ್ಟಣ ಪಂಚಾಯಿತಿಯನ್ನು ಎರಡು ವರ್ಷಗಳ ಹಿಂದೆ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇಲ್ಲಿ ಇದೇ ಮೊದಲ ಬಾರಿಗೆ ಪುರಸಭೆ ಚುನಾವಣೆ ನಡೆಯಲಿದೆ. ತಲಾ 23 ವಾರ್ಡ್‌ ಹಾಗೂ 23 ಮತಗಟ್ಟೆಗಳಿವೆ. ಮದ್ದೂರು ಪುರಸಭೆಯಲ್ಲೂ 23 ವಾರ್ಡ್‌, 23 ಮತಗಟ್ಟೆಗಳು ಇವೆ. ಬೆಳ್ಳೂರು ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಯಲಿದ್ದು 13 ವಾರ್ಡ್ 13 ಮತಗಟ್ಟೆಗಳಿವೆ. ‘ನೋಟಾ’ ಮತ ಚಲಾವಣೆ ಅವಕಾಶವನ್ನು ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಗೆ ನೀಡಲಾಗಿದೆ.

ಹೊಸ ಮೀಸಲಾತಿ ಪಟ್ಟಿ ಸದಸ್ಯರ ಕೈಸೇರಿದ್ದು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ವಾರ್ಡ್‌ ಹುಡುಕಾಟದಲ್ಲಿ ತೊಡಗಿದ್ದಾರೆ. ನಗರಸಭೆಯಲ್ಲಿ  ಶೇ 70ರಷ್ಟು ಸದಸ್ಯರಿಗೆ ಹಾಲಿ ವಾರ್ಡ್‌ ಕೈತಪ್ಪಿದೆ. ಮೀಸಲಾತಿಯಂತೆ ಬದಲಿ ವಾರ್ಡ್‌ ಆಯ್ಕೆಯಲ್ಲಿ ತೊಡಗಿದ್ದಾರೆ.

ನಗರಸಭೆ: ಅಂತಿಮ ಮೀಸಲಾತಿ ಪಟ್ಟಿ
ನಗರಸಭೆಯ 35 ವಾರ್ಡ್‌ಗಳ ವಾರ್ಡ್‌ವಾರು ಅಂತಿಮ ಮೀಸಲಾತಿ ಪಟ್ಟಿಯನ್ನು ಆ.1ರಂದು ನಗರಾಭಿವೃದ್ಧಿ ಸಚಿವಾಲಯವು ಪ್ರಕಟಿಸಿದ್ದು ಅದರ ವಿವರ ಹೀಗಿದೆ.
ಮೀಸಲಾತಿ ವಿವರ: ವಾರ್ಡ್‌1–ಸಾಮಾನ್ಯ, 2– ಹಿಂದುಳಿದ ವರ್ಗ (ಎ) (ಮಹಿಳೆ) 3– ಸಾಮಾನ್ಯ, 4–ಸಾಮಾನ್ಯ (ಮಹಿಳೆ), 5– ಹಿಂದುಳಿದ ವರ್ಗ (ಎ), 6– ಸಾಮಾನ್ಯ, 7– ಪರಿಶಿಷ್ಟ ಪಂಗಡ, 8– ಹಿಂದುಳಿದ ವರ್ಗ (ಎ), 9– ಪರಿಶಿಷ್ಟ ಜಾತಿ (ಮಹಿಳೆ), 10– ಪರಿಶಿಷ್ಟ ಜಾತಿ, 11– ಸಾಮಾನ್ಯ, 12– ಸಾಮಾನ್ಯ, 13–ಹಿಂದುಳಿದ ವರ್ಗ (ಎ) (ಮಹಿಳೆ), 14– ಹಿಂದುಳಿದ ವರ್ಗ (ಎ), 15– ಸಾಮಾನ್ಯ (ಮಹಿಳೆ), 16– ಹಿಂದುಳಿದ ವರ್ಗ (ಎ) (ಮಹಿಳೆ), 17– ಪರಿಶಿಷ್ಟ ಜಾತಿ (ಮಹಿಳೆ), 18– ಸಾಮಾನ್ಯ (ಮಹಿಳೆ), 19– ಸಾಮಾನ್ಯ (ಮಹಿಳೆ), 20– ಸಾಮಾನ್ಯ, 21– ಸಾಮಾನ್ಯ, 22– ಪರಿಶಿಷ್ಟ ಜಾತಿ, 23– ಸಾಮಾನ್ಯ (ಮಹಿಳೆ), 24– ಸಾಮಾನ್ಯ (ಮಹಿಳೆ), 25– ಹಿಂದುಳಿದ ವರ್ಗ (ಎ), 26– ಪರಿಶಿಷ್ಟ ಜಾತಿ, 27– ಹಿಂದುಳಿದ ವರ್ಗ (ಬಿ), 28– ಸಾಮಾನ್ಯ (ಮಹಿಳೆ), 29– ಹಿಂದುಳಿದ ವರ್ಗ (ಬಿ) (ಮಹಿಳೆ), 30– ಹಿಂದುಳಿದ ವರ್ಗ (ಎ), 31–ಸಾಮಾನ್ಯ, 32– ಸಾಮಾನ್ಯ (ಮಹಿಳೆ), 33– ಸಾಮಾನ್ಯ (ಮಹಿಳೆ), 34– ಸಾಮಾನ್ಯ, 35– ಹಿಂದುಳಿದ ವರ್ಗ (ಎ) (ಮಹಿಳೆ).
******
ಹೆಸರು ಸೇರ್ಪಡೆಗೆ ಅವಕಾಶ
‘ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಲು ಆ.10ರವರೆಗೆ ಅವಕಾಶ ನೀಡಲಾಗಿದೆ. ಪ್ರತಿ ವಾರ್ಡ್‌ನ ಬೂತ್‌ ಮಟ್ಟದ ಅಧಿಕಾರಿಗಳು ಪಟ್ಟಿ ಪರಿಷ್ಕರಣೆ ಮಾಡಲಿದ್ದಾರೆ’ ಎಂದು ಮಂಡ್ಯ ಉಪ ವಿಭಾಗಾಧಿಕಾರಿ ಎಂ.ಆರ್‌.ರಾಜೇಶ್‌ ತಿಳಿಸಿದರು.
*******
ಕೆ.ಆರ್‌.ಪೇಟೆ, ಶ್ರೀರಂಗಪಟ್ಟಣ, ಮಳವಳ್ಳಿ ಪುರಸಭೆ ಚುನಾವಣೆ ಮಾರ್ಚ್‌ಗೆ
ಕೆ.ಆರ್‌.ಪೇಟೆ, ಶ್ರೀರಂಗಪಟ್ಟಣ ಹಾಗೂ ಮಳವಳ್ಳಿ ಪುರಸಭೆ ಚುನಾವಣೆ ಆರು ತಿಂಗಳು ತಡವಾಗಿ ನಡೆಯಲಿದೆ. ಮೀಸಲಾತಿ ಸಮಸ್ಯೆ ಉಂಟಾಗಿ ಈ ಪುರಸಭೆಗಳ ಅಧ್ಯಕ್ಷರು ಆರು ತಿಂಗಳು ತಡವಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮಾರ್ಚ್‌ವರೆಗೂ ಮುಂದುವರಿಯಲಿದೆ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ದಿನದಿಂದ 5 ವರ್ಷದವರೆಗೆ ಆಡಳಿತ ಮಂಡಳಿ ಮುಂದುವರಿಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !