ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಸಚಿವರು ಮೀನು ಖರೀದಿಸುತ್ತಿದ್ದರು

Last Updated 27 ಫೆಬ್ರುವರಿ 2018, 9:37 IST
ಅಕ್ಷರ ಗಾತ್ರ

ಸವದತ್ತಿ: ಬೆಂಗಳೂರಿನ ಎಚ್‌ಎಎಲ್‌ ಕಂಪನಿಗೆ ನೀಡಿದ್ದ ರಫೇಲ್‌ ಯುದ್ಧ ವಿಮಾನದ ಬಿಡಿಭಾಗಗಳ ಜೋಡಣೆ ಕಾರ್ಯದ ಗುತ್ತಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರದ್ದು ಪಡಿಸುತ್ತಿದ್ದಾಗ ಆಗಿನ ರಕ್ಷಣಾ ಸಚಿವರು (ಮನೋಹರ ಪರ್ರೀಕರ) ಗೋವಾದಲ್ಲಿ ಮೀನು ಖರೀದಿಸುತ್ತಿದ್ದರು’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವ್ಯಂಗ್ಯವಾಡಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ‘ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ಗುತ್ತಿಗೆಯನ್ನು ಮೋದಿ ರದ್ದುಪಡಿಸುತ್ತಿದ್ದರೆ, ಈ ವಿಷಯದ ಬಗ್ಗೆ ಇಲಾಖೆಯ ಸಚಿವರಿಗೇ ಮಾಹಿತಿ ಇರಲಿಲ್ಲ’ ಎಂದು ಹೇಳಿದರು.

‘ಬೆಂಗಳೂರಿನ ಸಾವಿರಾರು ಯುವಕರು ಕೆಲಸ ಮಾಡುವ, ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ ಕಂಪನಿಗೆ ನೀಡಿದ್ದ ಗುತ್ತಿಗೆಯನ್ನು ತಮ್ಮ ಸ್ನೇಹಿತನ (ಅಂಬಾನಿ ಕಂಪನಿ) ಕಂಪನಿಗೆ ಲಾಭ ಮಾಡಿಸಿಕೊಡುವ ಉದ್ದೇಶದಿಂದ ರದ್ದುಪಡಿಸಿದ್ದರು. ವಿಮಾನದ ಬಿಡಿಭಾಗಗಳನ್ನು ಜೋಡಿಸುವುದರಲ್ಲಿ 70 ವರ್ಷದ ಅನುಭವ ಎಚ್‌ಎಎಲ್‌ ಕಂಪೆನಿಗೆ ಇತ್ತು. ಆದರೆ, ಗುತ್ತಿಗೆ ನೀಡಲಾಗಿರುವ ಕಂಪನಿಗೆ ಯಾವುದೇ ಅನುಭವ ಇಲ್ಲ’ ಎಂದು ಆರೋಪಿಸಿದರು.

ಹಿಂದಿಯಲ್ಲಿಯೇ ವಚನ: ಎರಡು ದಿನಗಳ ಹಿಂದೆ ಅಥಣಿಯಲ್ಲಿ ಬಸವಣ್ಣನವರ ವಚನಗಳನ್ನು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದರು. ಆದರೆ, ಸ್ಪಷ್ಟ ಉಚ್ಛಾರವಾಗಿರಲಿಲ್ಲ. ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದರ ಪರಿಣಾಮವೇನೋ ಎಂಬಂತೆ ರಾಹುಲ್‌, ಕನ್ನಡ ಶಬ್ದಗಳ ಪ್ರಯೋಗಕ್ಕೆ ಇಳಿಯಲಿಲ್ಲ.

‘ಬಸವಣ್ಣ ಅವರ ನುಡಿದಂತೆ ನಡೆ ಹಾಗೂ ಕಾಯಕವೇ ಕೈಲಾಸವನ್ನು ಹಿಂದಿಯಲ್ಲಿಯೇ ಉಲ್ಲೇಖಿಸಿ ಮಾತನಾಡಿದ ಅವರು, ‘ಬಸವಣ್ಣಾಜಿ ನೇ ಕಹಾ ಹೈ, ಕಾಮ ಭಗವಾನ್‌ ಹೈ ಔರ್‌ ಜೋ ಕೆಹೆತೆ ಹೋ, ವೈಸೆ ಕರೋ’ ಎಂದು ಹೇಳಿದರು.

‘ಬಸವಣ್ಣನವರ ಹೆಸರು ಉಲ್ಲೇಖಿ\ಸುವ ಮೋದಿ, ಬಸವಣ್ಣನವರ ಮಾತುಗಳನ್ನು ಪಾಲಿಸುವುದಿಲ್ಲ. ಕೇವಲ ಸುಳ್ಳು ಹೇಳುತ್ತಾ ಹೋಗುತ್ತಿದ್ದಾರೆ. ₹15 ಲಕ್ಷ ಹಣವನ್ನು ಬ್ಯಾಂಕ್‌ ಖಾತೆಗೆ ಹಾಕಿಲ್ಲ. ಉದ್ಯೋಗಾವಕಾಶ ಸೃಷ್ಟಿಸಿಲ್ಲ. ರೈತರ ಸಾಲಮನ್ನಾ ಮಾಡಿಲ್ಲ. ಉದ್ಯಮಿಗಳ ಕೋಟ್ಯಂತರ ರೂಪಾಯಿ ಸಾಲಮನ್ನಾ ಮಾಡಿದ್ದಾರೆ. ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿದ ಉದ್ಯಮಿಗಳನ್ನು ದೇಶ ಬಿಟ್ಟು ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಸವದತ್ತಿಯಲ್ಲಿ ಕಳೆದ ಎರಡು ಚುನಾವಣೆಗಳಿಂದ ಬಿಜೆಪಿಯವರು (ಆನಂದ ಮಾಮನಿ) ಆಯ್ಕೆಯಾಗಿ ಬರುತ್ತಿದ್ದಾರೆ. ಈ ಸಲ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿ’ ಎಂದು ಮನವಿ ಮಾಡಿದರು.

‘ರೈತರ ಸಾಲಮನ್ನಾ ಮಾಡುವುದಿಲ್ಲ ಎಂದು ಮೋದಿ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳುತ್ತಾರೆ. ಇಂಥವರ ಸರ್ಕಾರ ಬರಬೇಕಾ? ಜೈಲಿಗೆ ಹೋಗಿ ಬಂದಿರುವ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ಬೇಕಾ? ಅಥವಾ ಕಳೆದ ಚುನಾವಣೆಯಲ್ಲಿ ನೀಡಿದ್ದ ಎಲ್ಲ ಆಶ್ವಾಸನೆ ಈಡೇರಿಸಿರುವ ನಮ್ಮ ಪಕ್ಷ ಪುನಃ ಅಧಿಕಾರಕ್ಕೆ ಬರಬೇಕಾ? ನೀವೇ ತೀರ್ಮಾನಿಸಿ’ ಎಂದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ, ರಾಜ್ಯದ ಉಸ್ತುವಾರಿ ವೇಣುಗೋಪಾಲ್‌, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ, ಸಂಸದ ಮಲ್ಲಿಕಾರ್ಜುನ ಖರ್ಗೆ, ಡಿ.ಬಿ. ಇನಾಂದಾರ, ಮಾರ್ಗರೇಟ್‌ ಆಳ್ವ, ಬಿ.ಕೆ. ಹರಿಪ್ರಸಾದ್‌, ಆನಂದ ಛೋಪ್ರಾ, ಮಹಾಂತೇಶ ಕೌಜಲಗಿ ಭಾಗವಹಿಸಿದ್ದರು.

ರಾಮದುರ್ಗದಿಂದ ಸವದತ್ತಿಗೆ ಬರುವ ದಾರಿ ಮಧ್ಯೆ ವೃತ್ತದಲ್ಲಿ ಯುವಕರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಇದನ್ನು ಕಂಡ ರಾಹುಲ್ ಸೀಟಿನಿಂದ ಎದ್ದು ಕೈಬೀಸಲು ಬಸ್ ಕ್ಯಾಬಿನ್ ಬಳಿ ಹೊರಟರು

ಏಕಾಏಕಿ ಯುವಕರು ಮೋದಿ ಮೋದಿ ಎಂದು ಘೋಷಣೆ ಕೂಗಲಾರಂಭಿಸಿದರು. ಅಲ್ಲಿ ರಕ್ಷಣೆಗಿದ್ದ ಪೊಲೀಸರು ಒಂದು ಕ್ಷಣ ವಿಚಲಿತರಾದರು. ಘೋಷಣೆ ಹೆಚ್ಚಾಗುತ್ತಿದ್ದಂತೆ ರಾಹುಲ್ ಪೆಚ್ಚಾಗಿ ಸೀಟಿನಲ್ಲಿ ವಾಪಸ್ ಕುಳಿತರು. ಇತ್ತ ಪೊಲೀಸರು ಲಾಠಿ ಬೀಸಿ ಯುವಕರನ್ನು ಬೆದರಿಸಿದರು.

ರಾಮದುರ್ಗ ತಾಲ್ಲೂಕಿನ ಪೀರನಗುಡಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಕೈಲಿ ಕಾಂಗ್ರೆಸ್ ಧ್ವಜ, ರಾಹುಲ್ ಫೋಟೊ ಇದ್ದ ಸ್ವಾಗತ ಫಲಕ ಹಿಡಿದು ಸ್ವಾಗತಿಸಿದರು. ಸುನ್ನಾಳ ಗ್ರಾಮದಲ್ಲಿ ಶಾಲೆ ಮಕ್ಕಳು ಸಾಲುಗಟ್ಟಿ ಸ್ವಾಗತಕ್ಕೆ ನಿಂತು, ರಾಹುಲ್ ಕೈ‌ಕುಲುಕಿ ಖುಷಿಪಟ್ಟರು.

ಸವದತ್ತಿ ಬಸ್ ನಿಲ್ದಾಣ ರಾಹುಲ್ ಸ್ವಾಗತ ಸಭೆಯಾಗಿ ಮಾರ್ಪಟ್ಟಿತ್ತು. ಸಾರಿಗೆ ಸಂಸ್ಥೆ ಬಸ್ ಗಳನ್ನು ನಿಲ್ದಾಣದಿಂದ ಹೊರಗೆ ನಿಲ್ಲಿಸಲಾಗಿತ್ತು. ಯಾತ್ರೆ ಸಾಗಿಬಂದ ಮಾರ್ಗದುದ್ದಕ್ಕೂ ವಿವಿಧ ಗ್ರಾಮಗಳಲ್ಲಿ ಹಳ್ಳಿಗರು ರಾಹುಲ್ ಗೆ ಹಾರಹಾಕಿ, ಕೈ ಕುಲುಕಿ ಖುಷಿಪಟ್ಟರು.

‘ನೀರು ಕೊಟ್ಟು ಮಾತು ಉಳಿಸಿಕೊಳ್ಳಿ’

ಸವದತ್ತಿ: ಮಲಪ್ರಭಾಗೆ ಮಹದಾಯಿ ಜೋಡಿಸಲು ಸಹಕರಿಸುವಂತೆ ಗೋವಾ ವಿರೋಧ ಪಕ್ಷ ಕಾಂಗ್ರೆಸ್‌ಗೆ ರಾಹುಲ್‌ ಗಾಂಧಿ ಸೂಚಿಸಬೇಕು ಎಂದು ಒತ್ತಾಯಿಸಿ 2 ದಿನಗಳಿಂದ ನಡೆಸಿದ್ದ ಧರಣಿಯನ್ನು ರೈತ ಸೇನಾ ಮುಖಂಡರು ಸೋಮವಾರ ಅಂತ್ಯಗೊಳಿಸಿದರು.

ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಹುಲ್‌ ಆಗಮಿಸಿದ್ದರು. ಈ ಸಂದರ್ಭ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲು ಭಾನುವಾರ ಬೆಳಿಗ್ಗೆಯಿಂದ ರೈತರು ಧರಣಿ ಕುಳಿತಿದ್ದರು. ರೈತಸೇನಾ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹಾಗೂ ಪಂಚನಗೌಡ ದ್ಯಾಮನಗೌಡರ ನೇತೃತ್ವ ವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಸ್ಥಳೀಯ ಮುಖಂಡ ಆನಂದ ಚೋಪ್ರಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್‌ ಅವರ ಜೊತೆ ಚರ್ಚಿಸಲು ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು. ಆಗ ಸದಸ್ಯರು, ಧರಣಿ ಅಂತ್ಯಗೊಳಿಸಿದರು.

ರಾಹುಲ್‌ ಜೊತೆ ಭೇಟಿ: ರಾಹುಲ್‌ ಅವರನ್ನು ಭೇಟಿಯಾದ ವೀರೇಶ ಸೊಬರದಮಠ, ಮಹದಾಯಿ ನೀರನ್ನು ಮಲಪ್ರಭಾ ನದಿಗೆ ಹರಿಸಬೇಕು ಎಂದು ಮನವಿ ಮಾಡಿದರು.
ಪಂಚನಗೌಡ ದ್ಯಾಮನಗೌಡರ ಮಾತನಾಡಿ, ‘ನಮ್ಮ ಹೋರಾಟ ಯಾರ ವಿರುದ್ಧ ಇಲ್ಲ. ನಮ್ಮದು ಜ್ಯಾತ್ಯತೀತ, ಪಕ್ಷಾತೀತ ಹಾಗೂ ನ್ಯಾಯಯುತವಾಗಿದೆ. ನೀರನ್ನು ಪ್ರಾಣತೆತ್ತಾದರೂ ತರುತ್ತೇವೆ. ದೆಹಲಿಗೆ ಆಗಮಿಸಬೇಕೆಂದರೆ ಅಲ್ಲಿಗೂ ಬಂದು ಚರ್ಚಿಸುತ್ತೇವೆ’ ಎಂದರು.

ರೈತರ ವಶಕ್ಕೆ ಪಡೆದ ಪೊಲೀಸರು

ರಾಮದುರ್ಗ:ಮಹದಾಯಿ ವಿಚಾರವಾಗಿ ಪಕ್ಷದ ಸ್ಪಷ್ಟನೆ ಪ್ರಕಟಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕಪ್ಪುಬಟ್ಟೆ ಪ್ರದರ್ಶಿಸಲು ಮುಂದಾಗಿದ್ದ ಕರ್ನಾಟಕ ರೈತ ಸೇನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ್ದ ಸುಮಾರು 40 ಜನ ರೈತರು ರಾಮದುರ್ಗದಲ್ಲಿ ನಡೆಯುವ ರೋಡ್ ಶೋ ವೇಳೆ ಕಪ್ಪು ಬಟ್ಟೆ ಪ್ರದರ್ಶನಕ್ಕೆ ರಸ್ತೆ ಪಕ್ಕದಲ್ಲಿ ಟೆಂಟ್ ಹಾಕಿ ಕಾದು ಕುಳಿತ್ತಿದ್ದರು.

ಪೊಲೀಸರು ರೈತರನ್ನು ವಶಕ್ಕೆ ತೆಗೆದುಕೊಂಡು ಪಕ್ಕದ ಸುರೇಬಾನ ಪೊಲೀಸ್ ಹೊರಠಾಣೆಯಲ್ಲಿ ಇಟ್ಟಿದ್ದರು. ರಾಹುಲ್ ಸವದತ್ತಿ ತಾಲ್ಲೂಕಿನತ್ತ ಪ್ರಯಾಣ ಬೆಳೆಸಿದ ನಂತರವೇ ರೈತರನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT