ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಅದಾಲತ್‌ನಲ್ಲಿ ಉಚಿತ ಕಾನೂನು ಸೇವೆ

2020ರಲ್ಲಿ ಐದು ದಿನ ಜನತಾ ನ್ಯಾಯಾಲಯ, ಸದುಪಯೋಗ ಮಾಡಿಕೊಳ್ಳಲು ಅಧ್ಯಕ್ಷರ ಸಲಹೆ
Last Updated 29 ಜನವರಿ 2020, 12:39 IST
ಅಕ್ಷರ ಗಾತ್ರ

ಮಂಡ್ಯ: ‘ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಫೆಬ್ರುವರಿಯಿಂದ ಡಿಸೆಂಬರ್‌ವರೆಗೆ 5 ದಿನ ರಾಷ್ಟ್ರೀಯ ಲೋಕ ಅದಾಲತ್‌ ನಡೆಯಲಿದೆ. ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವ ಕಕ್ಷಿದಾರರಿಗೆ ಉಚಿತ ಕಾನೂನು ಸೇವೆ ನೀಡಲಾಗುವುದು’ ಎಂದು ಪ್ರಾಧಿಕಾರ ಅಧ್ಯಕ್ಷರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಚ್‌.ಜಿ.ವಿಜಯಕುಮಾರಿ ಹೇಳಿದರು.

‘ಹೈಕೋರ್ಟ್‌ ನಿರ್ದೇಶನದ ಮೇರೆಗೆ 2020ರಲ್ಲಿ ಫೆ.8, ಏ.11, ಜುಲೈ 11, ಸೆ.12, ಡಿ.12ರಂದು ಲೋಕ ಅದಾಲತ್‌ ನಡೆಯಲಿದೆ. ಅದಕ್ಕಾಗಿ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 12 ನ್ಯಾಯ ಪೀಠ ರೂಪಿಸಲಾಗಿದ್ದು ನ್ಯಾಯಧೀಶರು, ವಕೀಲರು ಸೇರಿ 45 ಜನರು ಜನರಿಗೆ ಕಾನೂನು ಸೇವೆ ಒದಗಿಸಲಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವ್ಯಾಜ್ಯ ಪೂರ್ವ ಪ್ರಕರಣಗಳು, ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಲೋಕ ಅದಾಲತ್‌ಗೆ ವರ್ಗಾವಣೆ ಮಾಡಲು ಅವಕಾಶವಿದೆ. ಪ್ರಕರಣಗಳ ಎರಡೂ ಪಕ್ಷದಾರರು ರಾಜಿ, ಸಂಧಾನನಕ್ಕೆ ಒಪ್ಪಿ ಬಂದರೆ ಲೋಕ ಅದಾಲತ್‌ನಲ್ಲಿ ಸ್ನೇಹಯುತವಾಗಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ನ್ಯಾಯಾಲಯದ ಅತೀ ಹೆಚ್ಚು ಪ್ರಕರಣ ತಗ್ಗಿಸಲು, ದೀರ್ಘಾವಧಿ ಕೋರ್ಟ್‌ ಕಲಾಪ ತಪ್ಪಿಸಲು ಸಾರ್ವಜನಿಕರು ಲೋಕ ಅದಾಲತ್‌ ಪ್ರಕ್ರಿಯೆಯನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಶುಲ್ಕ ವಾಪಸ್‌: ‘ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪಕ್ಷಗಾರರು ಲೋಕ ಅದಾಲತ್‌ಗೆ ಬಂದರೆ ಅವರು ಕೋರ್ಟ್‌ಗೆ ಪಾವತಿಸಿರುವ ಶುಲ್ಕವನ್ನು ಸಂಪೂರ್ಣವಾಗಿ ವಾಪಸ್‌ ನೀಡಲಾಗುವುದು. ಇದರಿಂದ ಕಕ್ಷಿದಾರರಿಗೆ ಹಣ ಉಳಿತಾಯವಾಗುತ್ತದೆ. ಇದರ ಜೊತೆಗೆ ವಕೀಲರಿಗೆ ನೀಡುವ ಶುಲ್ಕವನ್ನೂ ತಪ್ಪಿಸಬಹುದು. ಎರಡು ತಿಂಗಳಿಗೆ ಒಂದು ದಿನ ಲೋಕ ಅದಾಲತ್‌ ನಡೆಯಲಿದ್ದು ಕಾನೂನು ಪಕ್ರಿಯೆಗೆ ಅನುಕೂಲವಾಗುವ ರೀತಿಯಲ್ಲಿ ದಿನಾಂಕ ನಿಗದಿ ಮಾಡಲಾಗಿದೆ’ ಎಂದರು.

7049 ಪ್ರಕರಣ ಇತ್ಯಾರ್ಥ: 2019ರ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲೆಯ 7,049 ಪ್ರಕರಣ ಇತ್ಯಾರ್ಥಗೊಳಿಸಲಾಗಿದೆ. ಅದರಲ್ಲಿ ಒಟ್ಟಾರೆ ₹ 65 ಕೋಟಿ ಪರಿಹಾರ ಹಣ ವಸೂಲಿ ಮಾಡಲಾಗಿದೆ. ಕಳೆದ ವರ್ಷ ಮಾ.9, ಜುಲೈ 13, ಸೆ.14, ಡಿ.14ರಂದು ನಾಲ್ಕು ದಿನ ಲೋಕ ಅದಾಲತ್‌ ನಡೆಸಲಾಗಿತ್ತು. ಕಕ್ಷಿದಾರರು ಉತ್ತಮ ಪ್ರತಿಕ್ರಿಯೆ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವರ್ಷ 5 ದಿನ ದಿನಾಂಕ ನಿಗದಿ ಮಾಡಲಾಗಿದೆ’ ಎಂದು ಹೇಳಿದರು.

‘ಲೋಕ ಅದಾಲತ್‌ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಎಲ್ಲಾ ತಾಲ್ಲೂಕುಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಲೋಕ ಅದಾಲತ್‌ನಿಂದ ಆಗುವ ಅನುಕೂಲಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಲಾಗುತ್ತಿದೆ. ಈ ಬಾರಿಯೂ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ಇದೆ. ಜನರಿಗೆ ಶೀಘ್ರವಾಗಿ ಉತ್ತಮ ನ್ಯಾಯದಾನ ನೀಡುವುದೇ ಪ್ರಾಧಿಕಾರದ ಉದ್ದೇಶವಾಗಿದೆ’ ಎಂದು ಹೇಳಿದರು.

‘ಕ್ರಿಮಿನಲ್‌, ಸಿವಿಲ್‌ ಪ್ರಕರಣ ಸೇರಿ ಜಿಲ್ಲಾ ನ್ಯಾಯಾಲಯದಲ್ಲಿ ಅಂದಾಜು 70 ಸಾವಿರ ಪ್ರಕರಣಗಳಿವೆ. ಆದ್ಯತೆಯ ಮೇರೆಗೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ನ್ಯಾಯಾಲಯದ ಹೊರೆ ತಗ್ಗಿಸಲು ಜನತಾ ನ್ಯಾಯಾಲಯ ಪ್ರಮುಖ ಪಾತ್ರ ವಹಿಸಲಿದೆ’ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶೆ ಎನ್‌.ಡಿ.ಮಾಲಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್‌ ಹಾಜರಿದ್ದರು.

**************

ಅರ್ಹ ಪ್ರಕರಣಗಳು ಯಾವುವು?

ವ್ಯಾಜ್ಯ ಪೂರ್ವ ಪ್ರಕರಣ: ಚೆಕ್‌ ಬೌನ್ಸ್‌, ಆರ್ಥಿಕ ಪರಿಹಾರ ವಸೂಲಾತಿ, ಕೈಗಾರಿಕೆ, ಕಾರ್ಮಿಕ ವಿವಾದ, ವಿದ್ಯುತ್‌–ನೀರಿನ ಶುಲ್ಕ, ಹಣಕಾಸಿನ ಪರಿಹಾರ, ರಾಜಿಯಾಗಬಲ್ಲ ಅಪರಾಧಿಕ, ವೈವಾಹಿಕ ಪ್ರಕರಣಗಳು.

ಬಾಕಿ ಉಳಿದಿರುವ ಪ್ರಕರಣಗಳು: ಮೋಟಾರ್‌ ವಾಹನ ಅಪಘಾತ ನ್ಯಾಯಾಧೀಕರಣದ ಪ್ರಕರಣಗಳು, ವೈವಾಹಿಕ–ಕುಟುಂಬ ನ್ಯಾಯಾಲಯದ ಪ್ರಕರಣಗಳು, ವೇತನ ಭತ್ಯೆ, ಪಿಂಚಣಿ ಪ್ರಕರಣಗಳು, ಕಂದಾಯ, ಬಾಡಿಗೆ, ಜಿಲ್ಲಾ ನ್ಯಾಯಾಲಯ– ಹೈಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳು.

*************

2019ರ ಲೋಕ ಅದಾಲತ್‌ನಲ್ಲಿ ಇತ್ಯರ್ಥವಾದ ಪ್ರಕರಣಗಳ ವಿವರ (ಪಟ್ಟಿ)

ದಿನಾಂಕ ಪಡೆದ ಪ್ರಕರಣ ಇತ್ಯರ್ಥ ಪರಿಹಾರ ಹಣ (ಕೋಟಿ)
ಮಾ.9 1880 608 ₹ 5.16
ಜು.13 6452 2907 ₹ 14.13
ಸೆ.14 5025 1479 ₹ 18.24
ಡಿ.14 8322 2055 ₹ 27.77
ಒಟ್ಟು 21679 7049 ₹ 65.32

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT