ಲೋಕಸಭೆ: ದೇವೇಗೌಡ ಕುಟುಂಬ ಸದಸ್ಯರೇ ಕಣಕ್ಕೆ?

7
ಉಪ ಚುನಾವಣೆ; ನಿಖಿಲ್‌ ಅಥವಾ ಪ್ರಜ್ವಲ್‌ಗೆ ಟಿಕೆಟ್‌, ಸಾರ್ವತ್ರಿಕ ಚುನಾವಣೆ ಮೇಲೆ ಕಣ್ಣು

ಲೋಕಸಭೆ: ದೇವೇಗೌಡ ಕುಟುಂಬ ಸದಸ್ಯರೇ ಕಣಕ್ಕೆ?

Published:
Updated:
Deccan Herald

ಮಂಡ್ಯ: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಈ ಉಪ ಚುನಾವಣೆಯಲ್ಲಿ ತಮ್ಮ ಕುಟುಂಬ ಸದಸ್ಯರನ್ನೇ ಕಣಕ್ಕಿಳಿಸುತ್ತಾರೆ ಎಂಬ ಸುದ್ದಿ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.

ಎಚ್‌.ಡಿ.ದೇವೇಗೌಡರು ಮಂಡ್ಯದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂಬ ವಿಷಯ ಕಳೆದ ಆರು ತಿಂಗಳಿಂದಲೂ ಮುನ್ನೆಲೆಗೆ ಬಂದಿದೆ. ಸಾರ್ವತ್ರಿಕ ಚುನಾವಣೆಗೂ ಮೊದಲು ಬಂದಿರುವ ಈ ಉಪ ಸಮರದಲ್ಲಿ ಸ್ಪರ್ಧಿಸುವ ಜೆಡಿಎಸ್‌ ಅಭ್ಯರ್ಥಿಯ ಬಗ್ಗೆ ಸಾಕಷ್ಟು ಕುತೂಹಲ ಸೃಷ್ಟಿಯಾಗಿದೆ. ಉಪ ಚುನಾವಣೆಗೂ ಪಕ್ಷದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿಯೇ ಇದೆ.

ಅತ್ಯಲ್ಪ ಅವಧಿಗೆ ಬೇರೆಯವರಿಗೆ ಟಿಕೆಟ್‌ ಕೊಟ್ಟರೆ ಗುಂಪುಗಾರಿಕೆ, ವಿರೋಧ ಉಂಟಾಗುತ್ತದೆ. ಕುಟುಂಬ ಸದಸ್ಯರನ್ನೇ ಕಣಕ್ಕಿಳಿಸಿದರೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ. ಇದು ಸಾರ್ವತ್ರಿಕ ಚುನಾವಣೆ ಮೇಲೂ ಪರಿಣಾಮ ಬೀರುತ್ತದೆ ಎಂದು ದೇವೇಗೌಡರು ಲೆಕ್ಕಾಚಾರ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಉಪ ಚುನಾವಣೆಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ತರಾತುರಿಯಲ್ಲಿ ಚುನಾವಣೆಗೆ ಹೋಗಬೇಕಾದ ಅನಿವಾರ್ಯತೆ ಬಂದಿದೆ. ಜಿಲ್ಲೆಯಲ್ಲಿರುವ ಜೆಡಿಎಸ್‌ ಒಗ್ಗಟ್ಟಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕಾಗಿದೆ. ಹೀಗಾಗಿ ಕುಟುಂಬ ಸದಸ್ಯರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್‌ ನೀಡುವುದು ಅನುಮಾನ. ಹೀಗಾಗಿ ನಿಖಿಲ್‌ ಕುಮಾರಸ್ವಾಮಿ ಅವರೇ ಅಭ್ಯರ್ಥಿ ಎನ್ನಲಾಗುತ್ತಿದೆ. ನಿಖಿಲ್‌ ಒಪ್ಪದಿದ್ದರೆ ಪ್ರಜ್ವಲ್‌ ರೇವಣ್ಣ ಅವರನ್ನೇ ಕಣಕ್ಕಿಳಿಸುತ್ತಾರೆ’ ಎಂದು ಜೆಡಿಎಸ್‌ ಮುಖಂಡರೊಬ್ಬರು ಹೇಳಿದರು.

ಎಲ್‌.ಆರ್‌.ಶಿವರಾಮೇಗೌಡ ಪಟ್ಟು:
ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡುವಂತೆ ಜೆಡಿಎಸ್‌ ಮುಖಂಡ ಎಲ್‌.ಆರ್‌.ಶಿವರಾಮೇಗೌಡ ಪಟ್ಟು ಹಿಡಿದಿದ್ದಾರೆ. ಜೆಡಿಎಸ್‌ಗೆ ಬಂದು ವರ್ಷ ಕಳೆದರೂ ಸ್ಥಾನ ಸಿಕ್ಕಿಲ್ಲ ಎಂಬ ಕೊರಗು ಅವರಲ್ಲಿದೆ. ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದು ಈ ಉಪ ಚುನಾವಣೆಯಲ್ಲಿ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಉಪ ಚುನಾವಣೆ ಘೋಷಣೆಯಾದ ದಿನವೇ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿ ಟಿಕೆಟ್‌ಗೆ ಮನವಿ ಮಾಡಿದ್ದಾರೆ.

‘ಶನಿವಾರ, ಭಾನುವಾರ ಎರಡೂ ದಿನವೂ ದೇವೇಗೌಡರನ್ನು ಭೇಟಿಯಾಗಿ ಟಿಕೆಟ್‌ ಕೇಳಿದ್ದೇನೆ. ಮುಖಂಡರ ಜೊತೆ ಮಾತನಾಡಿ ನಿರ್ಧಾರ ತಿಳಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸುರೇಶ್‌ಗೌಡ ಗೆಲುವಿಗೆ ಕ್ಷೇತ್ರದಾದ್ಯಂತ ಓಡಾಡಿದ್ದೇನೆ. ಈ ಓಡಾಟದಲ್ಲಿ ವಿಧಾನ ಪರಿಷತ್‌ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.  ಹೀಗಾಗಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ಹೀಗಾಗಿ ನ್ಯಾಯಯುತವಾಗಿ ಈ ಉಪ ಚುನಾವಣೆಗೆ ಟಿಕೆಟ್‌ ನೀಡುವಂತೆ ಬೇಡಿಕೆ ಇಟ್ಟಿದ್ದೇನೆ’ ಎಂದು ಎಲ್‌.ಆರ್‌.ಶಿವರಾಮೇಗೌಡ ಹೇಳಿದರು.

****

ಸಚಿವ ತಮ್ಮಣ್ಣ ಪುತ್ರ ಸಂತೋಷ್‌ ಮನವಿ

ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಾರಿಗೆ ಸಚಿವ ಡಿ.ಸಿ.ತಮ್ಮಣ ಪುತ್ರ ಡಿ.ಟಿ.ಸಂತೋಷ್‌ ಅವರೂ ಜೆಡಿಎಸ್‌ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. ಸಚಿವ ತಮ್ಮಣ್ಣ ಅವರು ದೇವೇಗೌಡರ ಬೀಗರೂ ಆಗಿದ್ದು ಸಂತೋಷ್‌ ಕುಟುಂಬ ಸದಸ್ಯರೇ ಆಗುತ್ತಾರೆ ಎಂಬುದು ಮಹತ್ವ ಪಡೆದಿದೆ. ಸಂತೋಷ್‌ಗೆ ಅವಕಾಶ ನೀಡುವಂತೆ ತಮ್ಮಣ್ಣ ಕುಟುಂಬ ಸದಸ್ಯರೂ ಒತ್ತಾಯ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘2014ರ ಲೋಕಸಭಾ ಚುನಾವಣೆಯಲ್ಲೇ ನಾನು ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಆಗ ಕುಮಾರಸ್ವಾಮಿ ಅವರು ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದರು. ಹೀಗಾಗಿ ಈ ಉಪ ಚುನಾವಣೆಯಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ’ ಎಂದು ಡಿ.ಟಿ.ಸಂತೋಷ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !