ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಬಹಿಷ್ಕರಿಸಲು ನಿರ್ಧಾರ

ಬರಕನಕಟ್ಟೆ: ಸ್ಥಳಕ್ಕೆ ಕಂದಾಯ ಅಧಿಕಾರಿ ಭೇಟಿ: ಪರಿಹಾರಕ್ಕೆ ಕ್ರಮ
Last Updated 29 ಏಪ್ರಿಲ್ 2018, 9:10 IST
ಅಕ್ಷರ ಗಾತ್ರ

ಜಯಪುರ(ಬಾಳೆಹೊನ್ನೂರು): ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಕೊಪ್ಪ ತಾಲ್ಲೂಕಿನ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸರೀಕಟ್ಟೆ ಸಮೀಪದ ಬರಕನಕಟ್ಟೆ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

‘ಸ್ವಾತಂತ್ರ್ಯ ಬಂದು 60 ವರ್ಷ ಕಳೆದರೂ ಊರಿಗೆ ಮೂಲ ಸೌಕರ್ಯ ನೀಡುವಲ್ಲಿ ಎಲ್ಲ ಸರ್ಕಾರಗಳು ವಿಫಲ ವಾಗಿದ್ದು, ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡಿ ಮತ ಪಡೆಯುವ ಜನಪ್ರತಿನಿಧಿಗಳು ನಂತರ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಆದ್ದರಿಂದ ಈ ಬಾರಿ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ’ ಎಂದು ಬರಕನಕಟ್ಟೆ ಗ್ರಾಮದ ಮುಖಂಡ ವೆಂಕಟೇಶ್ ಸಮಸ್ಯೆ ಬಿಚ್ಚಿಟ್ಟರು.

‘ಸುಮಾರು 150 ಪರಿಶಿಷ್ಟ ಜಾತಿ ಕುಟುಂಬದವರು ಇಲ್ಲಿ ವಾಸಿಸುತ್ತಿದ್ದು, ಸಮರ್ಪಕವಾದ ಕುಡಿಯುವ ನೀರಿನ ಸೌಲಭ್ಯವಿಲ್ಲ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿದ್ದು, ಬಸರೀಕಟ್ಟೆಯಿಂದ ಊರಿಗೆ ತೆರಳುವ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದ್ದು ದುರಸ್ತಿ ಕಂಡಿಲ್ಲ’ ಎಂದು ಆರೋಪಿಸಿದರು.

‘ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಅತೀ ಹೆಚ್ಚು ಸೌಲಭ್ಯ ಹಾಗೂ ಅನುದಾನ ನೀಡುತ್ತೇವೆ ಎಂದು ಭಾಷಣ ಬಿಗಿಯುವ ಜನಪ್ರತಿನಿಧಿಗಳು ಈ ಭಾಗಕ್ಕೆ ಬಂದು ನೋಡಿದರೆ ಅವರ ಸುಳ್ಳು ಆಶ್ವಾಸನೆಗಳಿಗೆ ಸಾಕ್ಷಿ ದೊರಕುತ್ತದೆ. ಈ ಹಿನ್ನಲೆಯಲ್ಲಿ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು’ ಎಂದರು.

ಸ್ಥಳಕ್ಕೆ ಭೇಟಿ ನೀಡಿದ ಜಯಪುರದ ಕಂದಾಯ ಅಧಿಕಾರಿ ನಾಗರಾಜ್ ಮಾತನಾಡಿ ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ನಿಮ್ಮ ಹಕ್ಕು ಹಾಗೂ ಕರ್ತವ್ಯ. ನಿಮ್ಮ ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳ ಗಮನ ಸೆಳೆದು ಪರಿಹಾರಕ್ಕೆ ಕ್ರಮ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೇವಲ ಚುನಾವಣಾ ಬಹಿಷ್ಕಾರದಿಂದ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದು ತಿಳಿಸಿ ಮತದಾನ ಮಾಡುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT