ಗುರುವಾರ , ಜನವರಿ 23, 2020
28 °C
ಶಕ್ತಿ ದೇವತೆಗೆ ರಾಜ್ಯದಾದ್ಯಂತ ಭಕ್ತರು, ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ

ಮದ್ದೂರಮ್ಮನ ಗುಡಿ: ಸೌಲಭ್ಯ ಮರೀಚಿಕೆ

ಎಂ.ಆರ್‌.ಅಶೋಕ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಮದ್ದೂರು: ಪಟ್ಟಣದ ಗ್ರಾಮ ದೇವತೆ ಮದ್ದೂರಮ್ಮನ ದರ್ಶನ ಪಡೆಯಲು ರಾಜ್ಯದ ರಾಜ್ಯದ ನಾನಾ ಕಡೆಗಳಿಂದ ಭಕ್ತರ ಸಮೂಹವೇ ಬರುತ್ತದೆ. ಆದರೆ, ದೇವಾಲಯದ ಆವರಣದಲ್ಲಿ ಭಕ್ತರಿಗೆ ಮೂಲ ಸೌಲಭ್ಯಗಳಿಲ್ಲದಿರುವುದು ವಿಪರ್ಯಾಸವಾಗಿದೆ.

ಮೈಸೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಣತಿ ದೂರದಲ್ಲೇ ಶಕ್ತಿ ದೇವತೆ ಮದ್ದೂರಮ್ಮನ ದೇವಾಲಯವಿದೆ. ಪಟ್ಟಣ ಬಸ್‌ ನಿಲ್ದಾಣದ ಕೂಗಳತೆ ದೂರದಲ್ಲೇ ಮದ್ದೂರಮ್ಮ ನೆಲೆ ನಿಂತಿದ್ದಾಳೆ. ಗ್ರಾಮಕ್ಕೆ, ಗ್ರಾಮದ ಜನರಿಗೆ ಒಳಿತು ಮಾಡುತ್ತಿರುವ ಮದ್ದೂರಮ್ಮನ ದೇವಾಲಯದ ಆವರಣಕ್ಕೆ ಸೌಲಭ್ಯ ಒದಗಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಹೆದ್ದಾರಿಗೆ ಹೊಂದಿಕೊಂಡಂತೆ ಆರಂಭವಾಗುವ ರಸ್ತೆ ಇಂದಿಗೂ ಡಾಂಬರು ಕಂಡಿಲ್ಲ. ಇದು ಮಣ್ಣಿನ ರಸ್ತೆಯಾಗಿದ್ದು, ವಾಹನ ಓಡಾಟದಿಂದ ದೂಳುಮಯವಾಗುತ್ತದೆ. ಮಳೆಗಾಲ ಬಂದರೆ ದೇವಸ್ಥಾನದ ಆವರಣದಲ್ಲಿ ರಾಡಿ ನೀರು ನಿರ್ಮಾಣವಾಗಿ ದರ್ಶನಕ್ಕೆ ಬರುವ ಭಕ್ತರು ಪರದಾಡುತ್ತಾರೆ. ಆ ವೇಳೆ ವಾಹನ ಸವಾರರು ತೀರ ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸೂಕ್ತ ಚರಂಡಿ ವ್ಯವಸ್ಥೆಯೂ ಇಲ್ಲದ ಕಾರಣ ಆವರಣದ ಗುಂಡಿಗಳಲ್ಲೇ ಕೊಳಚೆ ನೀರು ನಿಂತಿರುತ್ತದೆ. ದರ್ಶನ ಪಡೆಯಲು ಬರುವ ಭಕ್ತರು ಸೊಳ್ಳೆಗಳ ಕಾಟದಿಂದ ಕಸಿವಿಸಿ ಅನುಭವಿಸುತ್ತಾರೆ.

ಪ್ರತಿನಿತ್ಯ ಒಂದಲ್ಲಾ ಒಂದು ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ದೇವಾಲಯದಲ್ಲಿ ನಿರಂತರವಾಗಿ ನಡೆಯುತ್ತವೆ. ವಿಶೇಷ ದಿನಗಳಲ್ಲಿ ದೇವಾಲಯದ ಆವರಣದಲ್ಲಿ ಜನಜಾತ್ರೆಯೇ ಸೇರುತ್ತದೆ. ಈ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಕಸ ಚೆಲ್ಲಾಡುತ್ತಿರುತ್ತದೆ. ಪುರಸಭೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಕಾರಣ ನಿತ್ಯ ದೇವಾಲಯದ ಆವರಣದಲ್ಲಿ ಕಸದ ರಾಶಿಯೇ ಬಿದ್ದಿರುತ್ತದೆ.

ಶುಕ್ರವಾರ, ಮಂಗಳವಾರದಂದು ವಿಶೇಷ ಪೂಜೆ, ವರ್ಷಕ್ಕೊಮ್ಮೆ ಮೇ ತಿಂಗಳಲ್ಲಿ ನಡೆಯುವ ಮದ್ದೂರಮ್ಮ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಬರುತ್ತಾರೆ. ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳ ಕಡೆಗಣಿಸುತ್ತಿರುವ ಕಾರಣ ದೇವಾಲಯ ಮೂಲಸೌಲಭ್ಯಗಳಿಂದ ವಂಚಿತವಾಗಿದೆ.

‘ಮದ್ದೂರಮ್ಮ ದೇವಸ್ಥಾನದ ಆವರಣದಲ್ಲಿ ಡಾಂಬರು ಹಾಕಿಸುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದೇವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಆದರೂ ಗುಡಿಯ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಇನ್ನು ಮುಂದೆಯಾದರೂ ಗ್ರಾಮಕ್ಕೆ ಒಳ್ಳೆಯದು ಮಾಡುವ ಗ್ರಾಮದ ಅಧಿದೇವತೆಯಾದ ಮದ್ದೂರಮ್ಮನವರ ದೇವಸ್ಥಾನದ ಆವರಣವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕು’ ಎಂದು ಮದ್ದೂರಮ್ಮ ಯುವಕರ ಸೇವಾ ಟ್ರಸ್ಟ್‌ ಅಧ್ಯಕ್ಷ ಯಶವಂತ್‌ ಆಗ್ರಹಿಸಿದರು.

ಕೆಟ್ಟುನಿಲ್ಲುವ ಹೈಮಾಸ್ಟ್‌ ದೀಪ

ಕುಡಿಯುವ ನೀರಿನ ವ್ಯವಸ್ಥೆಗೆಂದು ನೀರಿನ ತೊಂಬೆ ಹಾಗೂ ಸಾರ್ವಜನಿಕ ಶೌಚಾಲಯದ ವ್ಯವಸ್ಥೆಯನ್ನು ಮಾತ್ರ ಈಚೆಗೆ ಕಲ್ಪಿಸಲಾಗಿದೆ. ಅದನ್ನು ಬಿಟ್ಟರೆ ಇನ್ನುಳಿದಂತೆ ಯಾವ ಸೌಲಭ್ಯಗಳೂ ಗುಡಿಯ ಆವರಣದಲ್ಲಿ ಇಲ್ಲವಾಗಿದೆ. ಈ ಕುರಿತು ಸ್ಥಳೀಯರು ಅದೆಷ್ಟೋ ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ದೇವಸ್ಥಾನದ ಆವರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಾಕಲಾಗಿರುವ ಹೈಮಾಸ್ಟ್‌ ವಿದ್ಯುತ್ ದೀಪವೂ ಸಮಪರ್ಕವಾದ ನಿರ್ವಹಣೆ ಮಾಡುತ್ತಿಲ್ಲ. ತಿಂಗಳಲ್ಲಿ ಅದೆಷ್ಟೋ ಬಾರಿ ಕೆಟ್ಟು ಬೆಳಕಿನ ಸಮಸ್ಯೆ ಉಂಟಾಗುವುದು ಸಾಮಾನ್ಯವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು