ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರು: ಸಂಭ್ರಮದ ಎಲ್ಲಮ್ಮನ ಮುತ್ತಿನ ಪಲ್ಲಕ್ಕಿ ಉತ್ಸವ

Last Updated 5 ಫೆಬ್ರುವರಿ 2023, 21:53 IST
ಅಕ್ಷರ ಗಾತ್ರ

ಮದ್ದೂರು (ಮಂಡ್ಯ ಜಿಲ್ಲೆ): ಚಿಕ್ಕಸವದತ್ತಿ ಎಂದೇ ಪ್ರಸಿದ್ಧಿ ಪಡೆದಿರುವ ಪಟ್ಟಣದ ರೇಣುಕಾ ಎಲ್ಲಮ್ಮ ದೇವಿಯ 24ನೇ ಮಹಾಚಂಡಿಹೋಮ, 51ನೇ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಸಡಗರ, ಸಂಭ್ರಮದಿಂದ ಮುತ್ತಿನ ಪಲ್ಲಕ್ಕಿ ಉತ್ಸವ ನೆರವೇರಿತು.

ರಾತ್ರಿ 8ಕ್ಕೆ ಹೊಳೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ, ದೇವಿಯ ಉತ್ಸವ ಮೂರ್ತಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಪುಷ್ಪಾಲಂಕಾರ, ದೀಪಾಲಂಕಾರದಿಂದ ಪಲ್ಲಕ್ಕಿ ಭಕ್ತರ ಮನಸೂರೆಗೊಂಡಿತು. ಹೊಳೆಬೀದಿ, ದೊಡ್ಡಿ ಬೀದಿ, ಮೇಲಗದೊಡ್ಡಿ ಬೀದಿ, ಗಂಗಾಮತಸ್ಥ ಬೀದಿ, ಪೇಟೆಬೀದಿ ಮೂಲಕ ಮೆರವಣಿಗೆ ಸಾಗಿತು.

ತಿರುಪತಿ ತಿರುಮಲ ದೇವಸ್ಥಾನದ ಮಂಜು ಬಾಲಾಜಿ ಅವರ ವಾದ್ಯಗೋಷ್ಠಿ, ಮಂಗಳೂರಿನ ಯಕ್ಷಗಾನ, ಕೇರಳದ ಚಂಡೆ ಮೇಳ, ತಮಿಳುನಾಡಿನ ಬ್ಯಾಂಡ್‌ಸೆಟ್‌, ಮದ್ದೂರಮ್ಮ ಪೂಜಾ ಕುಣಿತ, ಸ್ಥಳೀಯ ಕಲಾವಿದರ ತಮಟೆ, ನಗಾರಿ, ಸೊಳ್ಳು ಕುಣಿತ, ವೀರಗಾಸೆ, ಗಾರುಡಿ ಗೊಂಬೆ, ಜಾನಪದ ನೃತ್ಯಗಳು ಮೆರವಣಿಗೆಯಲ್ಲಿ ಗಮನಸೆಳೆದವು.

ಅಪಾರ ಭಕ್ತರ ಸಮ್ಮುಖದಲ್ಲಿ ಬೆಳಿಗ್ಗೆ 7.30ರಿಂದ ಮಹಾಚಂಡಿಕಾ ಹೋಮ ನಡೆಯಿತು. ನಂತರ ಪೂರ್ಣಾಹುತಿ, ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥ ಪ್ರಸಾದ ಹಾಗೂ ಮಹಿಳೆಯರಿಂದ ತಂಬಿಟ್ಟಿನ ಆರತಿ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ಭಾನುವಾರ ರಾತ್ರಿಯಿಡೀ ಪಟ್ಟಣದ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಮೆರವಣಿಗೆಯುದ್ದಕ್ಕೂ ಪಟಾಕಿ ಸಿಡಿಸಲಾಯಿತು. ರೇಣುಕಾ ಎಲ್ಲಮ್ಮ ದೇವಿಯ ಉತ್ಸವ ಮೂರ್ತಿಯು ಸೋಮವಾರ ಬೆಳಿಗ್ಗೆ ದೇಗುಲಕ್ಕೆ ಹಿಂದಿರುಗಲಿದೆ. ವಿಶೇಷ ಕ್ಷೀರಾಭಿಷೇಕ, ತೀರ್ಥಪ್ರಸಾದ ವಿನಿಯೋಗದೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT