ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶಕ್ಕೆ ಗಾಂಧಿ, ಶಾಸ್ತ್ರಿ ಕೊಡುಗೆ ಅಪಾರ: ಸಚಿವ ಎನ್‌.ಚಲುವರಾಯಸ್ವಾಮಿ

Published : 2 ಅಕ್ಟೋಬರ್ 2024, 14:03 IST
Last Updated : 2 ಅಕ್ಟೋಬರ್ 2024, 14:03 IST
ಫಾಲೋ ಮಾಡಿ
Comments

ಮಂಡ್ಯ: ‘ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಸಾಧನೆ ಹಾಗೂ ಕೊಡುಗೆ ಅಪಾರ’ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗವಿರುವ ಕಾವೇರಿ ಉದ್ಯಾನದಲ್ಲಿ ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನೆಹರು ಯುವ ಕೇಂದ್ರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 155ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. 

ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರೂ ಮಹಾನ್ ವ್ಯಕ್ತಿಗಳು ಕೂಡ ಜನ್ಮ ತಾಳಿದ ದಿನವಾಗಿದ್ದು, ಎರಡು ಜಯಂತಿಗಳು ಕೂಡ ತುಂಬಾ ಮಹತ್ವವಾದದ್ದು. ಇವರಿಬ್ಬರ ಜೀವನದ ಆದರ್ಶಗಳು ಭಾರತ ದೇಶದ ನಾಗರಿಕರಿಗೆ ಮಾದರಿ ಎಂದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅತ್ಯಂತ ಸದೃಢ ಸ್ವತಂತ್ರ ಹೋರಾಟಗಾರರಾಗಿ, ಅಂದಿನ ಪ್ರಧಾನಿಯಾಗಿ ಕೃಷಿ ಯೋಜನೆಗಳ ಜೊತೆಗೆ ಇನ್ನೂ ಅನೇಕ ಯೋಜನೆಗಳನ್ನು ಲೋಕ ಕಲ್ಯಾಣಕ್ಕಾಗಿ ತಂದವರು ಎಂದು ಹೇಳಿದರು. 

ಗಾಂಧೀಜಿಯವರು ಯಾವುದೇ ಆಸೆ, ಆಮಿಷಗಳಿಗೆ ಒಳಪಡದೆ ಅಹಿಂಸಾತ್ಮಕವಾಗಿ ಅನೇಕ ಹೋರಾಟವನ್ನು ಪ್ರಾರಂಭ ಮಾಡಿದವರು. ಹೋರಾಟ ಮಾಡುವ ಸಂದರ್ಭದಲ್ಲಿ ಬಂದಂತಹ ಅನೇಕ ಸಮಸ್ಯೆಗಳನ್ನು ಎದುರಿಸಿ ಇಡೀ ದೇಶದ ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.

ನಮ್ಮ ದೇಶದಲ್ಲಿ ಸಂವಿಧಾನ ರಚನೆಯಾಗುವ ಮುನ್ನವೇ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಗಾಂಧೀಜಿಯವರು ದಲಿತರನ್ನು ತಮ್ಮ ಜೊತೆಯಲ್ಲಿ ದೇವಾಲಯಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈ ಮೂಲಕ ಸಮಾಜದಲ್ಲಿ ಸಮಾನತೆ ಮೂಡಿಸಲು ಶ್ರಮಿಸಿದರು ಎಂದು ಹೇಳಿದರು.

ಲಾಲ್ ಬಹದ್ದೂರ್ ಶಾಸ್ತ್ರಿಯವರು ಅಂದು ದೇಶದಲ್ಲಿ ರೈತರನ್ನು ಹಾಗೂ ಸೈನಿಕರನ್ನು ಹುರಿದುಂಬಿಸಲು ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆಯ ಮೂಲಕ ದೇಶದ ರೈತರಿಗೆ ಗೌರವ ಹಾಗೂ ಮನ್ನಣೆ ನೀಡಿ ಹಸಿರು ಕ್ರಾಂತಿಗೆ ಪ್ರೇರಣೆ ನೀಡಿದವರು ಎಂದರು.

ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿಭಾಗದ ಲಿಖಿತ್ ರಾಜು ಎಸ್.ಆರ್, ಸುಚಿತ್ರಾ, ಲಕ್ಷಯ್ ಗೌಡ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ವಿಜೇತರಾದ ಸಂಗೀತಾ ಎನ್, ರಕ್ಷಿತಾ. ಎಚ್.ಡಿ, ಪ್ರಜ್ವಲ್, ಪದವಿ/ಸ್ನಾತಕೋತ್ತರ ವಿಭಾಗದ ಯುಕ್ತಿ ಎಸ್, ಪೂಜಾ ಕೆ ಹಾಗೂ ನೇತ್ರಾ ಬಿ.ಎಸ್ ಅವರಿಗೆ ಬಹುಮಾನ ವಿತರಿಸಲಾಯಿತು.

ಗೊರವಾಲೆ ಚಂದ್ರಶೇಖರ್ ಮತ್ತು ತಂಡದವರಾದ ಹನಿಯಂಬಾಡಿ ಶೇಖರ್, ಸರ್ವಮಂಗಳಾ, ನವೀನ್ ಸೇರಿದಂತೆ ಇತರರು ಗಾಂಧೀಜಿ ಕುರಿತು ಗೀತಾ ಗಾಯನ ನಡೆಸಿಕೊಟ್ಟರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್ ನಾಗರಾಜು ಸ್ವಾಗತಿಸಿದರು. ಮಂಡ್ಯ ಶಾಸಕ ಪಿ. ರವಿಕುಮಾರ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಹೀಂ, ಮಾಜಿ‌ ಶಾಸಕ ಎಂ. ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲಾ ಎಸ್.ಹೆಚ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್, ನೆಹರು ಯುವ ಕೇಂದ್ರದ ಹರ್ಷ, ಅನನ್ಯ ಹಾರ್ಟ್ಸ್ ಸಂಸ್ಥೆಯ ಅನುಪಮಾ ಉಪಸ್ಥಿತರಿದ್ದರು.

ಅಹಿಂಸಾ ಪ್ರತಿಜ್ಞಾ ವಿಧಿ ಬೋಧನೆ

ಭಾರತ ದೇಶದ ಪ್ರಜೆಗಳಾದ ನಾವು ಜಾತಿ ಧರ್ಮ ಪ್ರದೇಶ ಮತ ಅಥವಾ ಭಾಷೆಯ ಬೇಧಭಾವವಿಲ್ಲದೆ ಭಾರತದ ಎಲ್ಲ ಜನತೆಯ ಭಾವೈಕ್ಯ ಮತ್ತು 'ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಅಲ್ಲದೆ ವೈಯಕ್ತಿಕವಾಗಿಯಾಗಲೀ ಅಥವಾ ಸಾಮೂಹಿಕವಾಗಿಯಾಗಲೀ ನಮ್ಮಲ್ಲಿರುವ ಎಲ್ಲಾ ಬೇಧಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇವೆಂದು ಜಿಲ್ಲಾಧಿಕಾರಿ ಕುಮಾರ ಅವರು ಗಾಂಧೀಜಿಯವರ ಅಹಿಂಸಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಹಿಂದೂ ಧರ್ಮ ಗುರು ಎಚ್.ಎನ್ ಪದ್ಮನಾಭ್ ಕ್ರಿಶ್ಚಿಯನ್ ಧರ್ಮ ಗುರು ಜಯಂತ್ ಪ್ರಸಾದ್ ಇಸ್ಲಾಂ ಧರ್ಮ ಗುರು ತನ್ವೀರ್ ಜೈನ ಧರ್ಮಗುರು ಶಾಂತಿ ಪ್ರಸಾದ್ ಜೈನ್ ಅವರುಗಳು ಸರ್ವಧರ್ಮ ಪ್ರಾರ್ಥನೆ ನಡೆದಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT