ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತರರ ಸಂಕಷ್ಟ ನಿವಾರಿಸಿದರೆ ದೇವರ ಕೃಪೆ: ಸಿದ್ದರಾಮಯ್ಯ

ಮಾರಮ್ಮ ದೇವಿ ದೇವಸ್ಥಾನದ ಗೋಪುರ ಪ್ರತಿಷ್ಠಾಪನೆ
Last Updated 16 ಫೆಬ್ರುವರಿ 2021, 2:22 IST
ಅಕ್ಷರ ಗಾತ್ರ

ಮಳವಳ್ಳಿ: ದೇವಸ್ಥಾನ ಸಂಸ್ಕೃತಿಯ ಅನೇಕ ವರ್ಷಗಳ ಪರಂಪರೆ, ಮನುಷ್ಯ ತನ್ನ ಇಷ್ಟದ ದೇವರನ್ನು ಪೂಜೆ ಮಾಡುವ ಪದ್ಧತಿ ಸಾವಿರಾರು ವರ್ಷಗಳಿಂದ ಬಂದಿದೆ. ಗುಡಿ ಕಟ್ಟಿ, ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುತ್ತೇವೆ. ಆದರೆ ಯಾವ ದೇವರೂ ಗುಡಿ ಕಟ್ಟಿ ಎಂದು ಹೇಳಿಲ್ಲ ಎಂದು ಬಸವಣ್ಣ ಹೇಳಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ತಾಲ್ಲೂಕಿನ ಸಾಹಳ್ಳಿ ಗ್ರಾಮದಲ್ಲಿ ಸೋಮವಾರ ಮಾರಮ್ಮ ದೇವಿ ದೇವಸ್ಥಾನದ ಗೋಪುರ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮಲ್ಲಿಯೇ ದೇವರು ಇದ್ದಾರೆ ಎನ್ನುವ ಬಸವಣ್ಣ ಅವರ ತತ್ವವನ್ನು ಹೇಳಿದ ಸಿದ್ದರಾಮಯ್ಯ, ದೇವರು ಎನ್ನುವುದು ನಮ್ಮ ಕಲ್ಪನೆ ಎಂದರು. ದೇವರು ಒಬ್ಬನೇ ನಾಮ ಹಲವು ಎನ್ನುವ ಸಿದ್ದರಾಮಯ್ಯ ಅವರಿಗೆ ಮಾತಿಗೆ ಜನರು ಹೌದು ಹುಲಿಯಾ ಎಂದು ಘೋಷಣೆ ಕೂಗಿದರು.

ದೇವರಿಗೆ ಯಾವ ರೀತಿ ಪೂಜೆ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದರಲ್ಲಿ ಹಾಗೂ ಇನ್ನೊಬ್ಬರಿಗೆ ಕೆಡುಕು ಬಯಸದೆ ಇದ್ದರೆ ಯಾವ ರೂಪದಲ್ಲಾದರೂ ದೇವರನ್ನು ಕಾಣಬಹುದು. ಎಲ್ಲವೂ ದೇವರಿಗೆ ಪ್ರಿಯವಾದದ್ದು, ದೇವಾಲಯಕ್ಕೆ ಹೋಗಿ ನನಗೆ ನನ್ನ ಕುಟುಂಬಕ್ಕೆ ಒಳ್ಳೆಯದು ಮಾಡು ಅಂದರೆ ದೇವರು ಮಾಡುವುದಿಲ್ಲ. ಸಮಾಜಕ್ಕೆ ಒಳಿತು ಮಾಡು ಅಂದರೆ ಮಾತ್ರ ದೇವರು ನಮಗೂ ಒಳ್ಳೆಯದನ್ನು ಮಾಡುತ್ತಾನೆ. ಈ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದರು.

‘ಹುಟ್ಟು, ಮದುವೆ, ಸಂಸಾರ ಮಾತ್ರ ಬದುಕಲ್ಲ; ಸಮಾಜಕ್ಕೆ ಒಳಿತು ಬಯಸುವುದೂ ಬದುಕು. ನಾನು ರಾಜಕೀಯದಲ್ಲಿ ಯಾರಿಗೂ ಹೆದರುವುದಿಲ್ಲ. ಪೊಲೀಸರು ಸಲ್ಯೂಟ್ ಹೊಡಿತಾರಲ್ಲ, ಆ ರೀತಿ ನಾವು ಮಾಡುವುದಿಲ್ಲ. ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣ ಇದೆ’ ಎಂದರು. ಅವರ ಮಾತಿಗೆ ಮುಂದಿನ ಸಿಎಂ ನೀವೇ ಎಂದು ಜನ ಘೋಷಣೆ ಕೂಗಿದರು.

‘ನಾನು ಸಿಎಂ ಆಗಿದ್ದಾಗ ನರೇಂದ್ರಸ್ವಾಮಿ ಕ್ಷೇತ್ರದ ಅಭಿವೃದ್ಧಿಗೆ ಕೇಳಿದ್ದನ್ನೆಲ್ಲ ಕೊಟ್ಟಿದ್ದೇನೆ. ಮಳವಳ್ಳಿಯ ಜನರ ಜೊತೆ ನನಗೆ ಬಾಂಧವ್ಯ ಚೆನ್ನಾಗಿದೆ. ನನ್ನ ಯೋಜನೆಗಳನ್ನು ಜನ ಒಪ್ಪಿಕೊಂಡರು. ಆದರೆ ಹೊಟ್ಟೆ ಉರಿಯಿಂದ ಎರಡನೇ ಬಾರಿ ಸಿಎಂ ಆಗಬಾರದು ಎಂದು ಸೋಲಿಸಿದ್ದರು’ ಎಂದರು.

ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ‘ನಾನು ಮೊದಲು ಸಿದ್ದರಾಮಯ್ಯ ಗರಡಿಯಲ್ಲೇ ಇದ್ದೆ. ಅವರು ಜೆಡಿಎಸ್‌ನಲ್ಲಿ ಇದ್ದಾಗ ಅವರ ಮಾರ್ಗದರ್ಶನದಲ್ಲಿ ಇದ್ದೆ. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಅವರು ಬೇರೆಡೆ ಹೋದರು. ಎಚ್‌.ಡಿ.ಕುಮಾರಸ್ವಾಮಿ ಜತೆ ಉಳಿದುಕೊಂಡೆ. ರಾಜಕೀಯ ಒಂದೆಡೆ ಆದರೆ ಅವರ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ’ ಎಂದರು.

ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಎಂದಿಗೂ ಮರೆಯುವಂತಿಲ್ಲ. ಬಡವರ ಹಸಿವನ್ನು ನಿವಾರಿಸಿದ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಅವರನ್ನು ಯಾರೂ ದ್ವೇಷ ಮಾಡಲು ಸಾಧ್ಯವಿಲ್ಲದಿದ್ದರೂ ಶ್ರೇಣೀಕೃತ ಸಮಾಜವೊಂದು ಅವರನ್ನು ದ್ವೇಷಿಸುತ್ತಿದೆ ಎಂದು ಹೇಳಿದರು.

ತಾಲ್ಲೂಕಿನ ಅಭಿವೃದ್ಧಿಗೆ ಎರಡು ಸಾವಿರ ಕೋಟಿ ಅನುದಾನ ನೀಡಿದ್ದು, ಕೇಳಿದ ಎಲ್ಲ ಯೋಜನೆಗಳನ್ನು ಮಂಜೂರು ಮಾಡಿದ್ದಾರೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರದ ಶಿವಣ್ಣ ಮಾತನಾಡಿ, ಸಿದ್ದರಾಮಯ್ಯ ಅವರು ಪಕ್ಷಾತೀತ ನಾಯಕರಾಗಿದ್ದು, ಅವರನ್ನು ಕಂಡರೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಭಯ. ಮುಂದಿನ ದಿನಗಳಲ್ಲಿ ಅವರು ದೆಹಲಿಯ ಕೆಂಪುಕೋಟೆ ಮೇಲೆ ಭಾರತದ ಧ್ವಜ ಹಾರಿಸುವಂತೆ ಆಗಲಿ ಎಂದರು.

ಸ್ವಾಗತ: ಗ್ರಾಮಕ್ಕೆ ಬಂದ ಮಾಜಿ ಸಿದ್ದರಾಮಯ್ಯ ಅವರಿಗೆ ಗ್ರಾಮಸ್ಥರು ಸಂಭ್ರಮ ಸ್ವಾಗತ ನೀಡಿದರು. ಕ್ರೇನ್ ಮೂಲಕ ಸೇಬಿನ ಹಾರ ಹಾಕಿದರು. ಬಳಿಕ ಮಾರಮ್ಮ ದೇವಿ ದೇವಾಲಯದ ವಿಗ್ರಹ ಪ್ರತಿಷ್ಠಾಪನೆ, ಗೋಪುರ ಕಳಸ ಪ್ರತಿಷ್ಠಾಪನೆಯಲ್ಲಿ ಭಾಗಿಯಾದ ಅವರನ್ನು ಟಗರು ಬಂತು ಟಗರು ಹಾಡು ಹಾಕಿ ವೇದಿಕೆಗೆ ಬರಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT