ಭಾನುವಾರ ಸಂತೆ: ಸಾವಯವ ತರಕಾರಿಗೆ ಮನಸೋತ ಜನ

7
ಪ್ರತಿ ತಿಂಗಳ ಮೊದಲ ಭಾನುವಾರ ಸಂತೆ, ನೀರು ತರಿಸಿದ ಸಿಹಿ ತಿಂಡಿ

ಭಾನುವಾರ ಸಂತೆ: ಸಾವಯವ ತರಕಾರಿಗೆ ಮನಸೋತ ಜನ

Published:
Updated:
Deccan Herald

ಮಂಡ್ಯ: ಸ್ವದೇಶಿ ಜಾಗರಣ ಮಂಚ್‌ ಸೇರಿ ವಿವಿಧ ಸಂಘಟನೆಗಳ ವತಿಯಿಂದ ಭಾನುವಾರ ನಗರದ ಕಾವೇರಿ ಉದ್ಯಾನದ ಬಳಿ ಆರಂಭವಾದ ‘ಸಾವಯವ ಸಂತೆ’ ನಗರವಾಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಸಾವಯವ ಕೃಷಿ ಪದ್ಧತಿಯಿಂದ ಬೆಳೆದ ತರಕಾರಿ, ಸಾವಯವ ಹಣ್ಣು, ಸೊಪ್ಪು, ವಿವಿಧ ತಿಂಡಿ, ತಿನಿಸುಗಳು ಜನರನ್ನು ಆಕರ್ಷಿಸಿದವು. ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಹಪ್ಪಳ, ಸಂಡಿಗೆ, ಜೇನುತುಪ್ಪ, ಖಾರ, ಬೂಂದಿ, ಕಜ್ಜಾಯ ಮುಂತಾದ ತಿನಿಸುಗಳು ಜನರ ಬಾಯಿಯಲ್ಲಿ ನೀರು ತರಿಸಿದವು. ಜೊತೆಗೆ ವಿಶೇಷವಾಗಿ ದೇಸಿ ತಳಿಯ ನಾಟಿ ಹಸುವಿನ ಹಾಲು ಜನರ ಮನ ಸೆಳೆಯಿತು.

ತರಕಾರಿಯಲ್ಲಿ ಆಲೂಗಡ್ಡೆ, ಬದನೆಕಾಯಿ, ಹಸಿಮೆಣಸಿನಕಾಯಿ, ಕ್ಯಾರೆಟ್, ಬೀಟ್‌ರೂಟ್, ಬೀನ್ಸ್, ಹುರುಳಿಕಾಯಿ, ಸೌತೆಕಾಯಿ, ಈರೆಕಾಯಿ, ಹಾಗಲಕಾಯಿ ಮುಂತಾದವುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಹಣ್ಣುಗಳಲ್ಲಿ ಸಾವಯವ ಏಲಕ್ಕಿ ಹಾಗೂ ಪಚ್ಚ ಬಾಳೆಹಣ್ಣು, ಪಪ್ಪಾಯ, ಸೀತಾಫಲ, ಸೀಬೆ ಹಣ್ಣುಗಳು ಮಾರಾಟಕ್ಕಿದ್ದವು. ಪಾಲಕ್, ಮೆಂಥೆ, ಸಬ್ಬಸಿಗೆ, ಕೊತ್ತಂಬರಿ, ಕೀರೆ, ಒನಗಣಿ ಹಾಗೂ ಚಿಕ್ಕೆ ಸೊಪ್ಪು ಮಾರಾಟಕ್ಕೆ ಬಂದಿದ್ದವು.

ಸಾವಯವ ಬೆಲ್ಲ, ಸಿರಿಧಾನ್ಯಗಳು, ಸಾವಯವ ಕಷಾಯದ ವಿವಿಧ ಪುಡಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಎಲ್ಲಾ ತರಕಾರಿ ಹಾಗೂ ಇತರ ವಸ್ತುಗಳಿಗೆ ಮಾರುಕಟ್ಟೆ ಬೆಲೆಗಿಂತಲೂ ಕೊಂಚ ಹೆಚ್ಚಿನ ಬೆಲೆ ನಿಗದಿ ಮಾಡಲಾಗಿತ್ತು.

ಕಡಿಮೆ ಖರ್ಚು, ಹೆಚ್ಚು ಆದಾಯ: ಸಾವಯವ ಸಂತೆ ಉದ್ಘಾಟಿಸಿದ ಸ್ವದೇಶಿ ಜಾಗರಣ ಮಂಚ್‌ನ ಸಂಘಟಕ ಜಗದೀಶ್‌ ಮಾತನಾಡಿ ‘ದೇಶದಲ್ಲಿ ಮೂರು ವರ್ಷಕ್ಕೆ 35 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸಾವಯವ ಕೃಷಿ ಮಾಡುವ ಯಾವೊಬ್ಬ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ, ಹೀಗಾಗಿ ಕಡಿಮೆ ಖರ್ಚು, ಹೆಚ್ಚು ಆದಾಯದ ಸಾವಯವ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದ್ದು ಕೃಷಿ ಅವಶ್ಯಕವಾಗಿದೆ. ಜಪಾನ್ ಅಭಿವೃದ್ಧಿಯಲ್ಲಿ ಉನ್ನತ ಮಟ್ಟದ ಸಾಧನೆ ಮಾಡಿದೆ. ತಂತ್ರಜ್ಞಾನ ಹಾಗೂ ಕೈಗಾರಿಕೆ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಆದರೆ ಆಹಾರ ಸಮಸ್ಯೆ ಎದುರಿಸುತ್ತಿದೆ. ನಮ್ಮ ದೇಶದಲ್ಲಿ ಕೃಷಿ ನಾಶ ಮಾಡಿ ಕೈಗಾರೀಕರಣ ಸ್ಥಾಪನೆ ಮಾಡಬಾರದು. ದೇಶದ ಅಭಿವೃದ್ಧಿಗೆ ಕೃಷಿ ಅವಶ್ಯಕ. ಆದರೆ ಕೃಷಿಯಲ್ಲಿ ಸಾವಯವ ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು, ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಸ್.ಸಿ.ಮಧುಚಂದನ್, ಶಿವಾನಂದ್, ಶಿವಳ್ಳಿ ಬೋರೇಗೌಡ, ಕೆ.ಟಿ.ಹನುಮಂತು, ಎ.ಸಿ.ರಮೇಶ್, ರವೀಂದ್, ಪಣಕನಹಳ್ಳಿ ವೆಂಕಟೇಶ್, ರಶ್ಮಿ, ಕಾರಸವಾಡಿ ಮಹದೇವು, ಬಿ.ಎಸ್.ಅನುಪಮಾ ಇದ್ದರು.

***
ಬಸವರಾಜ ಬೊಮ್ಮಾಯಿ ಭೇಟಿ
‘ಬೆಂಗಳೂರು, ಮೈಸೂರು, ಹುಬ್ಬಳ್ಳಿಯಂತಹ ನಗರ ಪ್ರದೇಶದಲ್ಲೂ ಸಾವಯವ ಸಂತೆ ನಡೆಯಬೇಕು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನಿಂದ ಮೈಸೂರಿಗೆ ಭಾನುವಾರ ತೆರಳುವ ವೇಳೆ ಮಾರ್ಗ ಮಧ್ಯೆ ಕಣ್ಣಿಗೆ ಬಿದ್ದ ಸಾವಯವ ಸಂತೆಗೆ ಭೇಟಿ ನೀಡಿ ಅವರು ಮಾತನಾಡಿದರು. ‘ವಿಷಮುಕ್ತ ಆಹಾರದಿಂದ ಆರೋಗ್ಯ ವೃದ್ಧಿ ಸಾಧ್ಯ. ಸಾವಯವ ಹಣ್ಣು, ಸೊಪ್ಪು, ತರಕಾರಿ ಬೆಳೆಯುವ ರೈತರಿಗೆ ಪ್ರೋತ್ಸಾಹ ಸಿಗಬೇಕು. ರೈತರು ಮೈಸೂರು, ಬೆಂಗಳೂರು ಮುಂತಾದ ನಗರ ಪ್ರದೇಶದ ಜನರಿಗೆ ಸಾವಯವ ಸೊಪ್ಪು, ತರಕಾರಿ ಮಾರಾಟ ಮಾಡಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !