ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಕ್ಕೆ ಹೋದರೂ ತವರು ನೆಲ ಮರೆಯದಿರಿ

ಪಿಇಎಸ್‌–ಐಟಿ ಪದವಿ ಪ್ರದಾನ ಸಮಾರಂಭದಲ್ಲಿ ಡಾ.ಗಿರೀಶ್‌ ಭಾರಧ್ವಾಜ್‌ ಸಲಹೆ
Last Updated 24 ಆಗಸ್ಟ್ 2019, 14:06 IST
ಅಕ್ಷರ ಗಾತ್ರ

ಮಂಡ್ಯ: ‘ವಿದ್ಯಾರ್ಥಿಗಳು ಆಕಾಶದಿಂದ ಬೀಳುವ ಶುದ್ಧ ಮಳೆ ನೀರಿದ್ದಂತೆ. ದೇಶವನ್ನು ಮೊದಲು ಪ್ರೀತಿಸಬೇಕು. ಜ್ಞಾನ ಮತ್ತು ಹಣ ಗಳಿಸಲು ವಿದೇಶಕ್ಕೆ ಹೋಗುವುದು ತಪ್ಪಲ್ಲ, ಆದರೆ ತವರು ನೆಲ ಮರೆಯಬಾರದು. ದೇಶಕ್ಕಾಗಿ ಸೇವೆಸಲ್ಲಿಸುವ ಗುಣ ಬೆಳೆಸಿಕೊಳ್ಳಬೇಕು’ ಎಂದು ಆಯಸ್‌ ಶಿಲ್ಪ ಸಂಸ್ಥೆಯ ಮುಖ್ಯಸ್ಥ ಡಾ.ಗಿರೀಶ್‌ ಭಾರಧ್ವಾಜ್‌ ಹೇಳಿದರು.

ನಗರದ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಡಾ.ಎಚ್‌.ಡಿ.ಚೌಡಯ್ಯ ಸಭಾಂಗಣದಲ್ಲಿ ಶನಿವಾರ ನಡೆದ 10ನೇ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಎಂಜಿನಿಯರಿಂಗ್‌ ಪದವಿ ಪಡೆದವರ ಮೇಲೆ ಸಾಕಷ್ಟು ಸಾಮಾಜಿಕ, ನೈತಿಕ, ಔದ್ಯೋಗಿಕ ಜವಾಬ್ದಾರಿಗಳು ಇರುತ್ತವೆ. ಅದನ್ನು ನಿರ್ಭಯ, ಬುದ್ಧಿವಂತಿಕೆಯಿಂದ ಯಶಸ್ವಿಯಾಗಿ ಪೂರೈಸಬೇಕು. ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆ ಕಂಡು ಬರುತ್ತಿದ್ದು, ನಿಮ್ಮ ಪ್ರತಿಭೆಯ ಮೂಲಕ ಪರಿಹಾರ ಕಂಡು ಹಿಡಿಯಬೇಕು. ಶಕ್ತಿಯುತ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳುವ ಮೂಲಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು’ ಎಂದು ಹೇಳಿದರು.

‘ಯಾರ ಒತ್ತಡಕ್ಕೋ ಒಳಗಾಗಿ ಯಾವುದನ್ನೂ ಆಯ್ಕೆ ಮಾಡಿಕೊಳ್ಳಬೇಡಿ. ನೀವು ಇಷ್ಟಪಡುವ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಅಚಲವಾದ ನಂಬಿಕೆಯಿಂದ ಅದರಲ್ಲಿ ತೊಡಗಿಕೊಳ್ಳಬೇಕು. ಆ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ, ಯಶಸ್ಸಿನ ಉತ್ತುಂಗಕ್ಕೆ ಏರಬೇಕು’ ಎಂದು ಸಲಹೆ ನೀಡಿದರು.

ಬಿಇಎಂಎಲ್‌ ಕಾರ್ಯ ನಿರ್ವಾಹಕ ನಿರ್ದೇಶಕ ಉಮೇಶ್‌ ಚಂದ್ರ ಮಾತನಾಡಿ ‘ಗ್ರಾಹಕರ ಅಗತ್ಯತೆ ಮತ್ತು ಅನುಕೂಲಕ್ಕೆ ತಕ್ಕಂತೆ ಸಾಫ್ಟ್‌ವೇರ್‌ ಕಂಪನಿಗಳು ಬೇಡಿಕೆಗಳನ್ನು ಪೂರೈಸುವ ಒತ್ತಡ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಂಸ್ಥೆಗಳು ಡಿಜಿಟಲೀಕರಣಗೊಳ್ಳಲು ಗ್ರಾಹಕರು ಮತ್ತು ಪ್ರತಿಸ್ಪರ್ಧಿ ಕಂಪನಿಗಳಿಂದ ಹೆಚ್ಚಿನ ಒತ್ತಡ ಎದುರಿಸುತ್ತಿದೆ ’ಎಂದು ಹೇಳಿದರು.

‘ಡಿಜಿಟಲ್‌ ತಂತ್ರಜ್ಞಾನದಿಂದ ಹೆಚ್ಚು ಕೈಗಾರಿಕೆಗಳನ್ನು ಪರಿವರ್ತಿಸಿದರೂ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಗ್ರಾಹಕರ ನಿರೀಕ್ಷೆಗಳನ್ನು ಬದಲಾಯಿಸುವ ವೇಗ, ಸಾಂಸ್ಕೃತಿಕ ಪರಿವರ್ತನೆ, ಹಳೆಯ ನಿಯಂತ್ರಣ, ಸರಿಯಾದ ಕೌಶಲ್ಯ ಗುರುತಿಸುವ ಕೆಲಸಗಳು ತುರ್ತಾಗಿ ಆಗಬೇಕು’ಎಂದು ಹೇಳಿದರು.

‘ಬಿಇಎಂಎಲ್‌ ಇಂಟಿಗ್ರೇಟೆಡ್‌ ಅಪ್ಲಿಕೇಷನ್‌ ಮ್ಯಾನೇಜ್‌ಮೆಂಟ್‌ ಹೊಂದಿದ್ದು, ಪ್ರಮುಖ ವ್ಯವಹಾರಗಳನ್ನು ಕೈಗಾರೀಕರಣಗೊಳಿಸಿದ್ದೇವೆ. ವ್ಯಾಪಾರ ಪ್ರದೇಶದ ಒಳಗೆ ಮತ್ತು ಹೊರಗೆ ಹೊಸ ವಿಷ್ಕಾರಗಳನ್ನು ಮಾಡುತ್ತಿದ್ದೇವೆ. ಮೇಘ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಐಟಿ ಮತ್ತು ನಿರ್ವಹಣೆಯ ನಡುವಿನ ಹೊಂದಾಣಿಕೆ ಕೊರತೆ ಮತ್ತು ಡಿಜಿಟಲ್‌ ಮೂಲಸೌಕರ್ಯಗಳ ಕೊರತೆಯು ಡಿಜಿಟಲ್‌ ಪ್ರಯಾಣದ ಹಾದಿಯಲ್ಲಿ ಬಹುದೊಡ್ಡ ಕಂಟಕವಾಗಿದೆ. ಪರಿವರ್ತನೆಯ ಪ್ರಯತ್ನಗಳಿಂದ ಲಾಭ ಪಡೆಯಲು ಜನರು ತಂತ್ರಜ್ಞಾನವನ್ನು ಅಗತ್ಯವಾಗಿ ಜೋಡಿಸಬೇಕು’ಎಂದು ಹೇಳಿದರು.

ಪಿಇಟಿ ಅಧ್ಯಕ್ಷ ಡಾ.ಎಚ್.ಡಿ. ಚೌಡಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಎಚ್.ವಿ. ರವೀಂದ್ರ, ಡೀನ್‌ಗಳಾದ ಡಾ. ನಾಗರತ್ನಾ, ಎಸ್.ಎಲ್.ಅಜಿತ್‌ಪ್ರಸಾದ್‌, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಕೆ.ನರಸಿಂಹಾಚಾರಿ, ಟ್ರಸ್ಟಿ ಎ.ಎಂ. ಚಂದ್ರಮೋಹನ್, ಎಸ್.ಎಲ್. ಶಿವಪ್ರಸಾದ್, ಡಾ. ಬಿ.ಎಸ್. ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT