ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ 2 ಲಕ್ಷ ಜನರಿಗೆ ಮಾನಸಿಕ ಸಮಸ್ಯೆ‌

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ; ಕಾನ್ಸೆಲಿಂಗ್‌ ಮೂಲಕ ಚಿಕಿತ್ಸೆ ಪಡೆಯಲು ಸಲಹೆ
Last Updated 14 ಅಕ್ಟೋಬರ್ 2019, 21:44 IST
ಅಕ್ಷರ ಗಾತ್ರ

ಮಂಡ್ಯ: ‘ದೇಶದಲ್ಲಿ ಶೇ 10–20ರಷ್ಟು ಯುವಜನರು ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯೊಂದರಲ್ಲೇ 2 ಲಕ್ಷ ಜನರು ಮನೋರೋಗಗಳಿಂದ ಬಳಲುತ್ತಿದ್ದಾರೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಮಾಧಿಕಾರಿ ಡಾ.ಕೆ.ಪಿ.ಅಶ್ವಥ್‌ ಹೇಳಿದರು.

ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಸೋಮವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘20ರಿಂದ 45ರವರೆಗಿನ ಯುವಜನರು ಮಾನಸಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಕೌನ್ಸೆಲಿಂಗ್‌ ಪಡೆಯುವ ಮನೋರೋಗದಿಂದ ಹೊರಬರಬೇಕು. ಇಲ್ಲಿದಿದ್ದರೆ ಆತ್ಮಹತ್ಯೆ ಸಮಸ್ಯೆ ಮತ್ತಷ್ಟು ಹೆಚ್ಚಳವಾಗಲಿದೆ. ಈ ಬಾರಿಯ ದಿನಾಚರಣೆಯು ಮಾನಸಿಕ ಆರೋಗ್ಯ ವರ್ಧನೆ ಮತ್ತು ಆತ್ಮಹತ್ಯೆ ತಡೆಯುವಿಕೆ ಘೋಷವಾಕ್ಯದೊಂದಿಗೆ ನಡೆಯುತ್ತಿದೆ. ಪ್ರತಿಯೊಬ್ಬರೂ ಈ ಬಗ್ಗೆ ಅರಿವು ಹೊಂದಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ 19 ಲಕ್ಷ ಜನಸಂಖ್ಯೆ ಇದ್ದು, ಇದರಲ್ಲಿ 2 ಲಕ್ಷದಷ್ಟು ಜನರಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇದೆ ಎಂಬ ವಿಚಾರ ಆತಂಕ ಮೂಡಿಸುತ್ತದೆ. ಒತ್ತಡದಿಂದ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅಂಥವರು ಕೂಡಲೇ ಮನೋವೈದ್ಯರನ್ನು ಸಂಪರ್ಕಿಸಿ ಸಲಹೆ, ಸೂಚನೆ ಪಡೆಯಬೇಕು. ಉತ್ತಮ ಮಾರ್ಗದರ್ಶನ ಪಡೆದು ಮನೋರೋಗದಿಂದ ಹೊರಬರಬೇಕು’ ಎಂದರು.

‘ಕೇವಲ ನೋಡುವುದಕ್ಕೆ ಚೆನ್ನಾಗಿದ್ದರೆ ಆರೋಗ್ಯವಂತ ಎಂದು ಹೇಳಲು ಆಗುವುದಿಲ್ಲ. ಆತ ಮಾನಸಿಕ, ದೈಹಿಕವಾಗಿ ಆರೋಗ್ಯದಿಂದ ಇದ್ದರೆ ಆರೋಗ್ಯವಂತ ವ್ಯಕ್ತಿ ಎಂದು ಹೇಳಬಹುದು. ಮಾನಸಿಕ ಕಾಯಿಲೆ ಎಂಬುದು ಯಾರ ಕಣ್ಣಿಗೂ ಕಾಣುವುದಿಲ್ಲ. ಅದನ್ನು ಕಂಡುಹಿಡಿದು ಮನೋರೋಗ ತಜ್ಞರು ಚಿಕಿತ್ಸೆ ನೀಡುತ್ತಾರೆ’ ಎಂದರು.

‘ಪ್ರತಿನಿತ್ಯದ ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ಒತ್ತಡದಲ್ಲಿ ಇದ್ದೇ ಇರುತ್ತಾರೆ. ಕೆಲಸ ಸ್ಥಳ, ಮನೆ, ಸ್ನೇಹಿತರು ಸೇರಿದಂತೆ ಇನ್ನಿತರ ಒತ್ತಡ, ಸಂಸಾರದ ಗೋಜಲುಗಳನ್ನು ಎದುರಿಸಲೇಬೇಕಾಗುತ್ತದೆ. ಇವುಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಬಾರದು, ಎಲ್ಲವನ್ನೂ ಎದುರಿಸಿ ಮುನ್ನಡೆಯಬೇಕು’ ಎಂದರು.

‌ಹಿರಿಯ ಸಿವಿಲ್‌ ನ್ಯಾಯಾಧೀಶ ಎಚ್‌.ಎಸ್‌.ಮಂಜುನಾಥ್‌ ಕಾರ್ಯಕ್ರಮ ಉದ್ಘಾಟಿಸಿದರು. ಡಿಎಚ್‌ಒ ಡಾ.ಎಚ್‌.ಪಿ.ಮಂಚೇಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಂ.ನಾಗರಾಜು, ಜಿಲ್ಲಾ ಕಾರಾಗೃಹ ಅಧೀಕ್ಷಕ ಪಿ.ಎಸ್‌.ಅಂಬೇಕರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್‌.ರಾಜಮೂರ್ತಿ ಮನೋರೋಗ ತಜ್ಞ ಡಾ.ಎಚ್‌.ವಿ.ಶಶಾಂಕ್‌ ಇದ್ದರು.

ಇದಕ್ಕೂ ಮುನ್ನ ನಗರದ ಜೆಸಿ ವೃತ್ತದಿಂದ ಡಿಎಚ್‌ಒ ಕಚೇರಿವರೆಗೆ ಜಾಗೃತಿ ಜಾಥಾ ನಡೆಯಿತು. ವಿವಿಧ ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳು ಹಲವು ಸಂದೇಶ ಸಾರುವ ಫಲಕಗಳನ್ನು ಹಿಡಿದು ಸಾಗಿದರು. ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಚಾಲನೆ ನೀಡಿದರು. ಜಿಪಂ ಸಿಇಒ ಕೆ.ಯಾಲಕ್ಕಿಗೌಡ ಇದ್ದರು.

***************

ಪೂರಕ ವಾತಾವರಣದಿಂದ ಒತ್ತಡ ನಿವಾರಣೆ
ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ‘ಒತ್ತಡಗಳು ಸ್ವಸ್ಥ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಒತ್ತಡವನ್ನು ಪರಿಣಾಮಕಾರಿಯಾಗಿ ಎದುರಿಸಬೇಕು. ಅವುಗಳನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಬದಲಾದ ಜೀವನ ಶೈಲಿಯಿಂದ ಮಾನಸಿಕ ಖಿನ್ನತೆ 18 ರಿಂದ 50 ವರ್ಷದವರೆಗಿನ ಜನರಿಗೆ ಹೆಚ್ಚಾಗಿ ಕಾಡುತ್ತದೆ. ಇದರ ಪರಿಣಾಮದಿಂದ ಒಂದಲ್ಲ ಒಂದು ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಾರೆ. ಆ ಅಸ್ವಸ್ಥತೆಯಿಂದ ಹೊರ ಬರಬರಬೇಕಾದರೆ ಅವರ ಮನಸಿಗೆ ಒಗ್ಗುವ ಪೂರಕ ವಾತಾವರಣ ನಿರ್ಮಿಸಿಕೊಳ್ಳಬೇಕು. ಈ ಸಮಯದಲ್ಲಿ ಪರಿಪೂರ್ಣ ಚಿಕಿತ್ಸೆಯ ಅವಶ್ಯಕತೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT