ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ ಇಲ್ಲದ ವಿಜ್ಞಾನ ಪಾಪದ ಕೂಪ: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌

ವಿಮ್ಸ್‌ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ; ಅಭಿಮತ
Last Updated 12 ಫೆಬ್ರುವರಿ 2020, 15:14 IST
ಅಕ್ಷರ ಗಾತ್ರ

ಮಂಡ್ಯ: ‘ಮಾನವೀಯತೆ ಇಲ್ಲದ ವಿಜ್ಞಾನ ದೊಡ್ಡ ಪಾಪದ ಕೂಪ. ವೈದ್ಯರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಇದನ್ನು ಅಗತ್ಯವಾಗಿ ಮನವರಿಕೆ ಮಾಡಿಕೊಡಬೇಕು. ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ಎಂದಿಗೂ ಮಾನವೀಯತೆ ಮರೆಯಬಾರದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ಯಲ್ಲಿ ಬುಧವಾರ ನಡೆದ ಪದವಿ ಪ್ರದಾನ ಸಮಾರಂಭ ಸಮ್ವಿದ್‌–2020 ಉದ್ಘಾಟಿಸಿ ಮಾತನಾಡಿದರು.

‘ಹಣ, ಜಾತಿ, ಅಂತಸ್ತು, ಶ್ರೀಮಂತಿಕೆ, ಧರ್ಮ ಸೇರಿ ಯಾವುದೇ ಕಟ್ಟುಪಾಡುಗಳಿಗೆ ಒಳಗಾಗದೆ ವೈದ್ಯರು ಮಾನವೀಯತೆಯಿಂದ ರೋಗಿಗೆ ಚಿಕಿತ್ಸೆ ನೀಡಬೇಕು. ಅದರಲ್ಲಿ ಯಾವುದೇ ಭೇದ ಮಾಡಬಾರದು. ವೈದ್ಯಕೀಯ ವೃತ್ತಿ ತುಂಬಾ ಜವಾಬ್ದಾರಿಯುತ ಹುದ್ದೆಯಾಗಿದೆ. ಹೊಸ ಉತ್ಸಾಹ, ಭರವಸೆಯೊಂದಿಗೆ ವೃತ್ತಿ ಆರಂಭಿಸಬೇಕು’ ಎಂದು ಹೇಳಿದರು.

‘ವೈದ್ಯಕೀಯ ಸಮಸ್ಯೆಗಳು ಸಮಾಜಿಕ ಸಮಸ್ಯೆಯ ಭಾಗವಾಗಿಯೇ ಇವೆ. ಸಮಾಜದ ತುರ್ತನ್ನು ಅರ್ಥೈಸಿಕೊಂಡು ಮುನ್ನಡೆಯಬೇಕಿದೆ. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇವರಲ್ಲಿ ಆದ್ಯತೆ ಮೇರೆಗೆ ಚಿಕಿತ್ಸೆ ನೀಡಬೇಕು. ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆ ಕಾರಣದಿಂದ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿನ ಅಪೌಷ್ಟಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ವೈದ್ಯರು ಮಹತ್ವದ ಹೆಜ್ಜೆ ಇಡಬೇಕು’ ಎಂದು ಹೇಳಿದರು.

‘ನಗರಗಳ ಆಧುನೀಕರಣ, ಅನಾರೋಗ್ಯಕರ ಜೀವನಶೈಲಿಯಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿದೆ. ವೈದ್ಯರ ಸರಾಸರಿ ಜೀವಿತಾವಧಿ 59–60ವರ್ಷ ಆಗಿದೆ. ವೈದ್ಯರು ಬೇಗ ಸಾವನ್ನಪ್ಪುತ್ತಿದ್ದಾರೆ. ರೋಗಿಗಳ ಚಿಕಿತ್ಸೆಯೊಂದಿಗೆ ವೈದ್ಯರೂ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಬೇಕು’ ಎಂದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಸಚಿವ (ಮೌಲ್ಯ ಮಾಪನ) ಡಾ.ಕೆ.ಬಿ.ಲಿಂಗೇಗೌಡ ಮಾತನಾಡಿ ‘ರೋಗಿಗಳನ್ನು ಹೊರಗಿನವರೆಂದು ಭಾವಿಸಬಾರದು. ಅವರು ನಮ್ಮವರೇ ಎಂಬ ಭಾವನೆಯಿಂದ ಚಿಕಿತ್ಸೆ ನೀಡಬೇಕು. ಸಾವಿರಾರು ಯುವಜನರು ತಂಬಾಕು ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ನಮಗೆ ಬಿಡುವು ಸಿಕ್ಕ ಸಮಯದಲ್ಲಿ ನಮ್ಮ ಸುತ್ತಮುತ್ತಲಿನ ಜನರಿಗೆ ಇವುಗಳಿಂದಾಗುವ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಬೇಕು. ಆ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅಡಿ ಇಡಬೇಕು. ಸಮಯವಿಲ್ಲ ಎಂದು ಕುಳಿತರೆ ಏನೂ ಮಾಡಲಾಗುವುದಿಲ್ಲ. ಸಿಕ್ಕ ಸ್ವಲ್ಪ ಸಮಯದಲ್ಲೇ ಸಮಾಜಕ್ಕೆ ಉಪಯೋಗವಾಗುವ ಯಾವುದಾದರೂ ಕೆಲಸವನ್ನು ಮಾಡಬೇಕು’ ಎಂದರು.

‘ಕ್ಯಾನ್ಸರ್‌ ಬಂದರೆ ಭಯ ಪಡುವ ಅಗತ್ಯವಿಲ್ಲ. ಅದನ್ನು ಧೈರ್ಯದಿಂದ ಎದುರಿಸಬೇಕು. ಅದು ಬಂದರೆ ಜೀವನವೇ ಮುಗಿಯಿತು ಎಂಬ ಭಾವನೆ ಹೋಗಲಾಡಿಸಬೇಕು. ವಾಸ್ತವದಲ್ಲಿ ಕ್ಯಾನ್ಸರ್‌ ವಿರುದ್ಧ ಜಯಿಸಿ ಹೆಚ್ಚೆಚ್ಚು ವರ್ಷ ಬದುಕುತ್ತಿದ್ದಾರೆ. ಶೇ 80ರಷ್ಟು ಮೀರಿ ಹೋದ ನಂತರ ಚಿಕಿತ್ಸೆಗೆ ಬರುತ್ತಾರೆ. ಇದರಿಂದ ಸಾಕಷ್ಟು ಭಯವಾಗುತ್ತದೆ. ಯಾವುದೇ ತೊಂದರೆಗಳು ಉಂಟಾದಾಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದರೆ ಅಂತಿಮ ಸ್ಥಿತಿಗೆ ಹೋಗುವುದನ್ನು ತಪ್ಪಿಸಬಹುದು’ ಎಂದು ಹೇಳಿದರು.

‘ವಿದ್ಯಾರ್ಥಿ ಜೀವನದಲ್ಲಿ ಸ್ನೇಹಿತರ ಆಯ್ಕೆ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಸ್ನೇಹಿತರ ಆಯ್ಕೆಯಲ್ಲಿ ಎಚ್ಚರವಿರಬೇಕು. ಜೀವನದ ಮಾರ್ಗದರ್ಶಕ, ಹಿತೈಷಿ, ಅಣ್ಣ, ತಮ್ಮ ಎಲ್ಲವೂ ಆಗುವವನೇ ನಿಜವಾದ ಸ್ನೇಹಿತನಾಗುತ್ತಾನೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ತುಡಿತ ಸ್ನೇಹಿತರ ನಡುವೆ ಮೂಡಬೇಕು’ ಎಂದರು.

ಮಿಮ್ಸ್‌ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ಮಿಮ್ಸ್‌ ಪ್ರಾಂಶುಪಾಲ ಡಾ.ಕೆ.ಎಂ.ಶಿವಕುಮಾರ್‌ ಪದವಿ ಪ್ರಮಾಣ ಬೋಧಿಸಿದರು. ವೈದ್ಯಕೀಯ ಅಧೀಕ್ಷಕ .ಎಂ.ಆರ್‌.ಹರೀಶ್‌, ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ.ಎಂ.ಹನುಮಂತ ಪ್ರಸಾದ್‌ ಇದ್ದರು.

ವಿದ್ಯಾರ್ಥಿಗಳ ಸಾಧನೆ
ಉತ್ತಮ ವಿದ್ಯಾರ್ಥಿ (ಔಟ್‌ಗೋಯಿಂಗ್‌ ಸ್ಟೂಡೆಂಟ್‌) ಪ್ರಶಸ್ತಿಗೆ ಸಿ.ಸಾತ್ವಿಕಾ ಭಾಜನರಾದರು. ವಿಷಯವಾರು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು: ಅಂಗ ರಚನಾಶಾಸ್ತ್ರ–ಬಿ.ಕೆ.ಶಿವಾಲಿ, ಶರೀರಶಾಸ್ತ್ರ–ಮೆಹಕ್‌ ಖಜಾಂಚಿ, ಸನೋ ಎಸ್‌. ಭೂಮ್ಕರ್‌, ಜೀವ ರಸಾಯನ ವಿಜ್ಞಾನ–ಎಸ್‌.ಸೋನಿಕಾ, ರೋಗಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಸಾಮಾನ್ಯ ಶಸ್ತ್ರಚಿಕಿತ್ಸೆ–ಆರ್‌.ನೆವೀತಾ, ಔಷಧ ವಿಜ್ಞಾನ–ಕೆ.ಎಸ್‌.ಮಹೇಶ್‌ ಕುಮಾರ್‌, ಒಬಿಜಿ–ಸಿ.ಜಿ.ರಮೇಶ, ಸಮುದಾಯ ಔಷಧ–ಎಚ್‌.ಸಂಜನಾ, ಇಎನ್‌ಟಿ–ಸಿ.ಸಾತ್ವಿಕಾ, ನೇತ್ರ ವಿಜ್ಞಾನ–ಎಸ್‌.ನಿಶ್ಮಾ, ಎಚ್‌.ಸಂಜನಾ, ಟಿ.ಎಸ್‌.ಶುಭಾ, ಸಾಮಾನ್ಯ ಔಷಧ ವಿಜ್ಞಾನ–ಎಸ್‌.ಸೋನಿಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT