ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಸದಸ್ಯರಿಲ್ಲದ 7ನೇ ವಾರ್ಡ್‌– ಸಮಸ್ಯೆ ಕೇಳುವವರಿಲ್ಲ

5 ಸಾಮಾನ್ಯ ಸಭೆಗಳಿಗೆ ನಿರಂತರ ಗೈರು, ಸದಸ್ಯತ್ವ ರದ್ದತಿಗೆ ಕ್ರಮ ಕೈಗೊಳ್ಳದ ಜಿಲ್ಲಾಡಳಿತ
Last Updated 22 ಜೂನ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ಕೊಲೆ ಪ್ರಕರಣದಲ್ಲಿ ನಗರಸಭೆ 7ನೇ ವಾರ್ಡ್‌ ಸದಸ್ಯ ಎಂ.ಎಸ್‌.ಶಿವಲಿಂಗು ಜೈಲು ಸೇರಿ ವರ್ಷ ಕಳೆದಿದ್ದು ವಾರ್ಡ್‌ನಲ್ಲಿ ಜನರ ಸಮಸ್ಯೆ ಕೇಳುವವರು ಯಾರೂ ಇಲ್ಲವಾಗಿದ್ದಾರೆ. 5 ಸಾಮಾನ್ಯ ಸಭೆಗಳಿಗೆ ಅವರು ಗೈರುಹಾಜರಾದರೂ ಅವರ ಸದಸ್ಯತ್ವ ರದ್ದುಗೊಳಿಸಲು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿ.ವಿ ನಗರದ ವ್ಯಾಪ್ತಿಯ ಬೆಲ್ಲದ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಪಿಇಎಸ್‌ ಕಾನೂನು ಕಾಲೇಜು ಎದುರಿನ ಕೊಳೆಗೇರಿ ಪ್ರದೇಶಗಳು ವಾರ್ಡ್‌ ವ್ಯಾಪ್ತಿಯಲ್ಲಿ ಬರುತ್ತವೆ. ಕಳೆದ ತಿಂಗಳು ಸುರಿದ ಕುಂಭದ್ರೋಣ ಮಳೆ ಸಂದರ್ಭದಲ್ಲಿ ಇಳಿಜಾರು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದೆ.

ಎಪಿಎಂಸಿ ಬೆಲ್ಲದ ಮಾರುಕಟ್ಟೆಗೆ ತರಕಾರಿ ಮಾರುಕಟ್ಟೆಯೂ ಸ್ಥಳಾಂತರಗೊಂಡಿರುವ ಕಾರಣ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ. ವರ್ತಕರಿಗೆ ತರಕಾರಿ ಮಾರಟ ಮಾಡಲು ಸೌಲಭ್ಯಗಳಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿ ವಾರ್ಡ್‌ ಸದಸ್ಯರೇ ಇಲ್ಲದ ಕಾರಣ ಸಮಸ್ಯೆ ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕೂ ಜನರು ನಗರಸಭೆ ಕಚೇರಿಗೆ ಅಲೆಯಬೇಕಾಗಿದೆ.

‘ನಿಯಮಾನುಸಾರ 3 ಸಭೆಗೆ ಸದಸ್ಯ ಗೈರು ಹಾಜರಾದರೆ ಅವರ ಸದಸ್ಯತ್ವ ರದ್ದಾಗಬೇಕು. ಆದರೆ ಶಿವಲಿಂಗು ಅವರು 5 ಸಭೆಗಳಿಗೆ ಗೈರುಹಾಜರಾಗಿದ್ದಾರೆ. ಅವರ ಸದಸ್ಯತ್ವ ರದ್ದುಗೊಳಿಸಿ ವಾರ್ಡ್‌ನಲ್ಲಿ ಉಪ ಚುನಾವಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ವಾರ್ಡ್‌ ನಿವಾಸಿ ರಮೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಎಂ.ಎಸ್‌. ಶಿವಲಿಂಗು ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿದ್ದರು. ಅವರ ಮಗಳ ಪ್ರೇಮ ಪ್ರಕರಣ ಸಂಬಂಧ ಏ.5, 2021ರಂದು ಭಜರಂಗದಳ ಕಾರ್ಯಕರ್ತ ದರ್ಶನ್‌ ಕೊಲೆ ನಡೆದಿತ್ತು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಿವಲಿಂಗು ಅವರನ್ನು ಬಂಧಿಸಲಾಗಿತ್ತು. ಬಾಲಮಂದಿರದಲ್ಲಿ ರಕ್ಷಣೆ ಪಡೆದಿದ್ದ ಶಿವಲಿಂಗು ಪುತ್ರಿಯೂ ಈಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಎರಡೂ ಪ್ರಕರಣಗಳ ವಿಚಾರಣೆ ಪ್ರಗತಿಯಲ್ಲದೆ.

ಶಿವಲಿಂಗು ಜೈಲು ಸೇರಿದ ನಂತರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವೂ ಖಾಲಿ ಉಳಿದಿದೆ. ಇಲ್ಲಿಯವರೆಗೆ ನೂತನ ಅಧ್ಯಕ್ಷರ ಆಯ್ಕೆಯೂ ಆಗಿಲ್ಲ. ನಗರಸಭೆಯಲ್ಲಿ ಜೆಡಿಎಸ್‌ ಅಧಿಕಾರದಲ್ಲಿದ್ದು ಸ್ಥಾಯಿ ಸಮಿತಿ ಸಭೆ ನಡೆಸದಿರುವುದಕ್ಕೆ ಕಾಂಗ್ರೆಸ್‌, ಬಿಜೆಪಿ, ಪಕ್ಷೇತರ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.

ನಗರಸಭೆ ಶಿಫಾರಸು: ಶಿವಲಿಂಗು ಕಳೆದೊಂದು ವರ್ಷದಿಂದ 3 ನಗರಸಭೆ ಸಾಮಾನ್ಯ ಸಭೆ ಹಾಗೂ 2 ವಿಶೇಷ ಸಭೆಗಳಿಗೆ ಗೈರುಹಾಜರಾಗಿದ್ಧಾರೆ. ನಿಯಮಾನುಸಾರ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ನಗರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಘಟಕ್ಕೆ (ಡಿಯುಡಿಸಿ) ಶಿಫಾರಸು ಮಾಡಿ 3 ತಿಂಗಳಾಗಿದೆ. ಆದರೆ ಜಿಲ್ಲಾಡಳಿತ ಇಲ್ಲಿಯವರೆಗೂ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಲ್ಲ.

‘ನಗರಸಭೆಯಿಂದ ಸದಸ್ಯತ್ವ ರದ್ದತಿ ಕುರಿತಂತೆ ಶಿಫಾರಸು ಬಂದಿದೆ. ಆದರೆ ಕೆಲವು ಪ್ರಶ್ನೆಗಳಿಗೆ ನಗರಸಭೆಯಿಂದ ಸ್ಪಷ್ಟನೆ ಕೇಳಲಾಗಿತ್ತು. ಇದರಿಂದಾಗಿ ಕೊಂಚ ತಡವಾಗಿದೆ. ಈಗ ಎಲ್ಲಾ ಪ್ರಶ್ನೆಗಳಿಗೂ ಸ್ಪಷ್ಟನೆ ದೊರಕಿದ್ದು ತಕ್ಷಣವೇ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗುವುದು. ನಂತರ ಇಲಾಖೆಯ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ತಿಳಿಸಿದರು.

******

ಜೈಲಿನಿಂದಲೇ ಚುನಾವಣೆಗೆ ನಿಲ್ಲುವುದಿಲ್ಲವೇ?

‘ಶಿವಲಿಂಗು ಅವರು ಕೊಲೆ ಪ್ರಕರಣದಲ್ಲಿ ಕೇವಲ ಆರೋಪಿಯಾಗಿದ್ದಾರೆ, ಅಪರಾಧಿಯಲ್ಲ. ಹೀಗಾಗಿ ಅವರು ಸಭೆಗಳಿಗೆ ಬರಲು ಸಾಧ್ಯವಾಗಿಲ್ಲ. ಅವರು ಅಪರಾಧಿ ಎಂದು ಸಾಬೀತಾದಾರೆ ಅವರ ಸದಸ್ಯತ್ವ ರದ್ದಾಗುತ್ತದೆ, ಇಲ್ಲದಿದ್ದರೆ ಅವರೇ ಸದಸ್ಯರಾಗಿ ಮುಂದುವರಿಯುತ್ತಾರೆ’ ಎಂದು ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು ಹೇಳಿದರು.

‘ಎಷ್ಟೋ ಜನರು ಜೈಲಿನಲ್ಲಿ ಇದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸುವುದಿಲ್ಲವೇ? ಜೈಲು ಸೇರಿದ ಮಾತ್ರಕ್ಕೆ ಅವರ ಸದಸ್ಯತ್ವ ರದ್ದುಗೊಳಿಸಬೇಕಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT