ಮಂಗಳವಾರ, ಆಗಸ್ಟ್ 16, 2022
30 °C
ಸರ್ಕಾರದ ಅನುಮತಿ ಕೋರುವುದಾಗಿ ತಿಳಿಸಿದ ಜಿಲ್ಲಾಧಿಕಾರಿ, ಹೋರಾಟಕ್ಕೆ ರೈತಸಂಘ ನಿರ್ಧಾರ

ಬೇಬಿಬೆಟ್ಟದಲ್ಲಿ 3 ಕಡೆ ಪರೀಕ್ಷಾರ್ಥ ಸ್ಫೋಟ

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆ ಉಂಟಾಗಲಿದೆಯೇ ಎಂಬ ಬಗ್ಗೆ ಪರೀಕ್ಷೆ ನಡೆಸುತ್ತಿರುವ ಜಾರ್ಖಾಂಡ್‌ ಮೂಲದ ವಿಜ್ಞಾನಿಗಳ ತಂಡ ಗಣಿ ಪ್ರದೇಶದ ಮೂರು ಕಡೆ ಪರೀಕ್ಷಾರ್ಥ ಸ್ಫೋಟ ನಡೆಸಲು ಅನುಮತಿ ಕೋರಿದೆ.

ಕಾವೇರಿ ನೀರಾವರಿ ನಿಗಮದ ಮನವಿಯ ಮೇರೆಗೆ ಜಾರ್ಖಾಂಡ್‌, ಧನಬಾದ್‌ನ ಸಿಎಸ್‌ಐಆರ್‌–ಸಿಐಎಂಎಫ್‌ಆರ್‌ (ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ– ಗಣಿ ಮತ್ತು ಇಂಧನ ಸಂಶೋಧನಾ ಕೇಂದ್ರೀಯ ಸಂಸ್ಥೆ) ವಿಜ್ಞಾನಿಗಳ ತಂಡವು ಗಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

2018, ಸೆ.24ರಂದು ಬೇಬಿಬೆಟ್ಟದಲ್ಲಿ ಭಾರಿ ಶಬ್ದ ಬಂದಿತ್ತು. ಶಬ್ದದ ಬೆನ್ನು ಹತ್ತಿದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಂಡ, ಸ್ಫೋಟದ ಕಂಪನದಿಂದ ಸಮೀಪದಲ್ಲೇ ಇರುವ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ, ಕೆಆರ್‌ಎಸ್‌ನ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿ ಚಟುವಟಿಕೆ ನಡೆಸಬಾರದು ಎಂದು ವರದಿ ನೀಡಿತ್ತು.

ಸಿಎಸ್‌ಐಆರ್‌–ಸಿಐಎಂಎಫ್‌ಆರ್‌ ತಂಡ ಕೂಡ ಇದೇ ಪ್ರದೇಶದಲ್ಲಿ ಮೂರು ಕಡೆ ಜಾಗ ಗುರುತಿಸಿದ್ದು ಪರೀಕ್ಷಾರ್ಥ ಸ್ಫೋಟಕ್ಕೆ ಅನುಮತಿ ಕೋರಿದೆ. ತಿಂಗಳ ನಂತರ ಬರುವುದಾಗಿ ತಜ್ಞರು ತಿಳಿಸಿದ್ದು ಅಲ್ಲಿಯವರೆಗೂ ಗಣಿಗಾರಿಕೆಗೆ ಅವಕಾಶ ನೀಡದಂತೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ತಜ್ಞರ ತಂಡ ಪರೀಕ್ಷಾರ್ಥ ಸ್ಫೋಟದ ಅವಶ್ಯಕತೆ ಇದೆ ಎಂದು ತಿಳಿಸಿದೆ. ಆದರೆ, ಸ್ಫೋಟದ ನಡೆಸಲು ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಸರ್ಕಾರ ಅನುಮತಿ ನೀಡಿದರೆ ಮಾತ್ರ ಸ್ಫೋಟಕ್ಕೆ ಅವಕಾಶ ನೀಡಲಾಗುವುದು. ಇಲ್ಲದಿದ್ದರೆ ಸರ್ಕಾರದ ನಿರ್ದೇಶನದಂತೆ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವಥಿ ತಿಳಿಸಿದರು.

ಅವಕಾಶ ನೀಡೆವು: ಪರೀಕ್ಷಾರ್ಥ ಸ್ಫೋಟಕ್ಕೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿರುವ ರೈತರು ಈಗಲೂ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. 2019ರಲ್ಲಿ ಪುಣೆಯ ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರದ (ಸಿಡಬ್ಲ್ಯುಪಿಆರ್‌ಎಸ್‌) ಭೂವಿಜ್ಞಾನಿಗಳ ತಂಡವು ಪರೀಕ್ಷಾರ್ಥ ಸ್ಫೋಟಕ್ಕೆ ಮುಂದಾಗಿತ್ತು. ಆದರೆ ರೈತಸಂಘಟನೆಗಳು ಗೋಬ್ಯಾಕ್‌ ಚಳವಳಿ ನಡೆಸಿದರು, ಇದರ ಪರಿಣಾಮ ವಿಜ್ಞಾನಿಗಳ ತಂಡ ಅನಿವಾರ್ಯವಾಗಿ ವಾಪಸ್‌ ತೆರಳಬೇಕಾಯಿತು.

‘ಸರ್ಕಾರಿ ಸ್ವಾಮ್ಯದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಜ್ಞರು ಕಲ್ಲು ಗಣಿಗಾರಿಕೆಯಿಂದಾಗಿ ಕೆಆರ್‌ಎಸ್‌ಗೆ ಧಕ್ಕೆ ಉಂಟಾಗಲಿದೆ ಎಂದು ಹೇಳಿದ ಮೇಲೂ ಮತ್ತೊಮ್ಮೆ ಪರೀಕ್ಷೆ ನಡೆಸುವ ಅವಶ್ಯಕತೆ ಏನಿದೆ? ತಪ್ಪು ವರದಿ ಪಡೆದು ಗಣಿಗಾರಿಕೆ ನಡೆಸಲು ಅವಕಾಶ ಕೊಡಿಸಲು ಸರ್ಕಾರವೇ ಮುಂದಾಗಿದೆ. ನಾವು ಯಾವದೇ ಕಾರಣಕ್ಕೂ ಪರೀಕ್ಷಾರ್ಥ ಸ್ಫೋಟಕ್ಕೆ ಅವಕಾಶ ನೀಡುವುದಿಲ್ಲ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ಹೇಳಿದರು.

10 ಕಿ.ಮೀ ನಿಗದಿಗೊಳಿಸುವ ಹುನ್ನಾರ

ಕೆಆರ್‌ಎಸ್‌ ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯಬಾರದು ಎಂಬ ಚರ್ಚೆಗಳು ನಡೆಯುತ್ತಿವೆ. ಸರ್ಕಾರ ಗಣಿ ಮಾಲೀಕರ ಲಾಬಿಗೆ ಮಣಿದು ಆ ಮಿತಿಯನ್ನು 10 ಕಿ.ಮೀ.ಗೆ ನಿಗದಿಗೊಳಿಸಲು ಹುನ್ನಾರ ನಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

‘ಸ್ಫೋಟಕ್ಕೆ ಗುರುತು ಮಾಡಿರುವ ಜಾಗ ಜಲಾಶಯಕ್ಕೆ 10 ಕಿ.ಮೀ ದೂರದಲ್ಲಿದೆ. ಇದರ ಉದ್ದೇಶ 10 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಬಾರದು ಎಂಬ ವರದಿ ಪಡೆಯುವುದೇ ಆಗಿದೆ. ಆ ರೀತಿ ವರದಿ ಬಂದರೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು’ ಹೋರಾಟಗಾರರೊಬ್ಬರು ತಿಳಿಸಿದರು.

ಗಣಿ ಮಾಲೀಕರ ಮೊರೆ

ಗಣಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ಆದೇಶದ ವಿರುದ್ಧ ಗಣಿ ಮಾಲೀಕರು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಗಣಿ ಚಟುವಟಿಕೆಗೆ ಅವಕಾಶ ನೀಡುವಂತೆ ಗಣಿ ಮಾಲೀಕರು ಒತ್ತಾಯಿಸುತ್ತಿದ್ದಾರೆ.

‘ನಿಷೇಧಾಜ್ಞೆಗೆ ಮಾತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ, ಗಣಿಗಾರಿಕೆಗೆ ನಡೆಸಲು ಅನುಮತಿ ನೀಡುವ ವಿವೇಚನೆಯನ್ನು ಜಿಲ್ಲಾಡಳಿತಕ್ಕೆ ನೀಡಿದೆ. ಮುಂದಿನ ವಾರ ನಡೆಯಲಿರುವ ಟಾಸ್ಕ್‌ ಫೋ ರ್ಸ್‌ ಸಮಿತಿಯಲ್ಲಿ  ಈ ವಿಚಾರ ಚರ್ಚಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಅಶ್ವಥಿ ತಿಳಿಸಿದರು.

ಕಾಟಾಚಾರದ ಪರಿಶೀಲನೆ

ಸಿಎಸ್‌ಐಆರ್‌–ಸಿಐಎಂಎಫ್‌ಆರ್‌ ತಜ್ಞರ ತಂಡ ಮಾರ್ಚ್‌ 3 ಹಾಗೂ 4ರಂದು ಗಣಿ ಪ್ರದೇಶಗಳಲ್ಲಿ ತಪಾಸಣೆ ನಡೆಸಬೇಕಾಗಿತ್ತು. ಆದರೆ ತಂಡ ಮಾರ್ಚ್‌ 3ರಂದು ಕೇವಲ ಅರ್ಧ ದಿನ ನಾಲ್ಕೈದು ಕಡೆ ಮಾತ್ರ ವೀಕ್ಷಣೆ ನಡೆಸಿ ತೆರಳಿರುವುದು ಅನುಮಾನಕ್ಕೆ ಕಾರಣವಾಗಿದೆ.

ತಂಡ ಕಾಟಾಚಾರಕ್ಕೆ ಪರಿಶೀಲನೆ ನಡೆಸಿದೆ, ಇದರಿಂದ ಕೆಆರ್‌ಎಸ್‌ ಸುರಕ್ಷತೆಯ ಬಗ್ಗೆ ಯಾವುದೇ ಸತ್ಯಾಂಶ ಹೊರ ಬರುವುದಿಲ್ಲ ಎಂದು ರೈತ ಮುಖಂಡರು ಆರೋ‍ಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು