ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಬಂದ್‌ಗೆ ಪೊಲೀಸರ ಅಡ್ಡಿ- ಹೋರಾಟಗಾರರ ಬಂಧನ, ಬಿಡುಗಡೆ

ಬಂದ್‌ಗೆ ನೀರಸ ಪ್ರತಿಕ್ರಿಯೆ, ಎಂದಿನಂತೆ ನಡೆದ ಚಟುವಟಿಕೆ
Last Updated 29 ಜುಲೈ 2020, 15:23 IST
ಅಕ್ಷರ ಗಾತ್ರ

ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟೆ 20 ಕಿ.ಮೀ. ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಆಗ್ರಹಿಸಿ ಕಾವೇರಿ–ಕೆಆರ್‌ಎಸ್‌ ಉಳಿವಿಗಾಗಿ ಜನಾಂದೋಲನ ಸಮಿತಿ ಹಾಗೂ ವಿವಿಧ ಸಂಘಟನೆಗಳು ಕರೆಕೊಟ್ಟಿದ್ದ ಮಂಡ್ಯ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ಬಂದ್ ಆಚರಣೆ ವಿಫಲಗೊಂಡಿತು. ನಿಷೇಧಾಜ್ಞೆ ಉಲ್ಲಂಘಿಸಿದ ಹೋರಾಟಗಾರರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ನಗರದ ಸಿಲ್ವರ್‌ ಜ್ಯೂಬಿಲಿ ಉದ್ಯಾನದಲ್ಲೇ ತಡೆದರು. ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಪೊಲೀಸರು ಬಂದ್‌ ಆಚರಣೆಗೆ ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಕಲ್ಲುಗಣಿಗಾರಿಕೆಯಿಂದ ಕೆಆರ್‌ಎಸ್‌ ಹಾಗೂ ಸುತ್ತಮುತ್ತಲ ಪರಿಸರ ಸಮತೋಲನ ಹಾಳಾಗಿದೆ. ಕಲ್ಲು ಗಣಿ ಚಟುವಟಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಸಾಕಷ್ಟು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಇದೂವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಗಣಿಗಾರಿಕೆಯಿಂದ ಜಲಾಶಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ವರದಿ ಇದ್ದರೂ ಪ್ರಭಾವಿಗಳು ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗಣಿಗಾರಿಕೆಯಿಂದ ಸುತ್ತಮುತ್ತಲ ಮನೆಗಳು ಬಿರುಕು ಬಿಡುತ್ತಿದ್ದು, ಜನಜೀವನ ಹಾಳಾಗುತ್ತಿದೆ. ಕಲ್ಲು ಲಾರಿಗಳ ಸಂಚಾರದಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗುತ್ತಿದೆ. ಜಿಲ್ಲಾಡಳಿತ ನೆಪಮಾತ್ರಕ್ಕೆ ಗಣಿಗಾರಿಕೆ ನಿಷೇಧ ಹೇರಿದ್ದು ಪ್ರಭಾವಿಗಳು ಎಂದಿನಂತೆ ಗಣಿ ಚಟುವಟಿಕೆ ನಡೆಸುತ್ತಿದ್ದಾರೆ. ಕೆಆರ್‌ಎಸ್‌ ಜಲಾಶಯದ ದೃಷ್ಟಿಯಿಂದ ಗಣಿಗಾರಿಕೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ಮಾತನಾಡಿ ‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಗಣಿ ಮಾಲೀಕ, ತಮ್ಮ ಪಕ್ಷದ ಮುಖಂಡನೊಬ್ಬನ ಬೆಂಬಲಕ್ಕೆ ನಿಂತು ಗಣಿಕಾರಿಕೆಗೆ ಅಕಾಶ ಕೋರಿದ್ದರು. ಅವಕಾಶ ನೀಡದಿದ್ದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರುವುದಾಗಿ ಬೆದರಿಕೆ ಹಾಕಿದ್ದರು. ದೇವೇಗೌಡರ ಬೆದರಿಕೆಗೆ ಹೆದರಿದ ಜಿಲ್ಲಾಧಿಕಾರಿಗಳು ಪ್ರಭಾವಿಗಳ ಗಣಿ ಚಟುವಟಿಕೆಗೆ ಅವಕಾಶ ನೀಡಿದ್ದಾರೆ’ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್‌.ಕೆಂಪೂಗೌಡ, ರೈತ ಸಂಘ ಮೂಲ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಬೋರಾಪುರ ಶಂಕರೇಗೌಡ, ಸಮಿತಿ ಸಂಚಾಲಕ ಜಿ.ಟಿ.ವೀರಪ್ಪ, ರೈತ ನಾಯಕಿ ಸುನಂದಾ ಜಯರಾಂ, ಶಂಭೂನಹಳ್ಳಿ ಸುರೇಶ್‌, ಎಂ.ಬಿ.ನಾಗಣ್ಣಗೌಡ, ಶಿವರಾಮೇಗೌಡ, ನಾಗೇಂದ್ರ ಸ್ವಾಮಿ, ಇಂಡುವಾಳು ಚಂದ್ರಶೇಖರ್‌, ತಮ್ಮೇಗೌಡ, ಬೊಮ್ಮೇಗೌಡ, ಮುದ್ದೇಗೌಡ, ಬಿ.ಟಿ.ವಿಶ್ವನಾಥ್‌ ಇದ್ದರು.

***

ಪ್ರತಿಭಟನೆಗಷ್ಟೇ ಸಮೀತ

ಕಲ್ಲುಗಣಿಗಾರಿಕೆ ನಿಷೇಧಕ್ಕೆ ಆಗ್ರಹಿಸಿ ಕರೆ ನೀಡಿದ್ದ ಮಂಡ್ಯ ಬಂದ್‌ ಕೇವಲ ಪ್ರತಿಭಟನೆಗಷ್ಟೇ ಸೀಮಿತವಾಗಿತ್ತು. ವಿವಿಧ ಸಂಘಟನೆಗಳ ಹೋರಾಟಗಾರರು ವಿವಿಧೆಡೆ ಸಂಚರಿಸಿ ಅಂಗಡಿ–ಮುಂಗಟ್ಟುಗಳನ್ನು ಮುಚ್ಚಿಸಲು ಯತ್ನಿಸಿದರು. ಆದರೆ ಕೆಲವೇ ನಿಮಿಷಗಳಲ್ಲಿ ಅಂಗಡಿ ಮಾಲೀಕರು ಬಾಗಿಲು ತೆರೆದು ವಹಿವಾಟು ಮುಂದುವರಿಸಿದರು.

ವಿವಿ ರಸ್ತೆ, ಪೇಟೆಬೀದಿ, ಆರ್‌ಪಿ ರಸ್ತೆ, ನೂರಡಿ ರಸ್ತೆಯಲ್ಲಿ ಯಾವುದೇ ಬಂದ್‌ ವಾತಾವರಣ ಇರಲಿಲ್ಲ. ಪೆಟ್ರೋಲ್‌ ಬಂಕ್‌ ಕೂಡ ತೆರೆದಿದ್ದವು. ಆಟೊ, ಬಸ್‌ ಎಂದಿನಂತೆ ಓಡಾಡಿದವು. ಲಾಕ್‌ಡೌನ್‌, ಭಾನುವಾರದ ಕರ್ಫ್ಯೂ ಆಚರಣೆಯಿಂದ ನಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಈ ಬಂದ್‌ ಬೇಕಿತ್ತಾ ಎಂದು ವ್ಯಾಪಾರಿಗಳು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT