ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಬಿಜೆಪಿಯತ್ತ ಯುವ ಮುಖಂಡರ ದಂಡು!

ಮೇ 7ರವರೆಗೆ ಜಿಲ್ಲೆಯಾದ್ಯಂತ ಬಿಜೆಪಿ ಸೇರ್ಪಡೆ ಅಭಿಯಾನ, ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳ
Last Updated 2 ಮೇ 2022, 11:39 IST
ಅಕ್ಷರ ಗಾತ್ರ

ಮಂಡ್ಯ: ಮುಂಬರುವ ವಿಧಾನಸಬಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಯುವ ಮುಖಂಡರು ಟಿಕೆಟ್‌ಗಾಗಿ ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ಜಿಲ್ಲೆಯಾದ್ಯಂತ ಯುವಕರ ದಂಡು ವಿವಿಧ ಪಕ್ಷ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗುತ್ತಿದ್ದು ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಬೇಸಿಗೆ ಬಿಲಿಸಿನ ಜೊತೆಜೊತೆಗೆ ಚುನಾವಣಾ ಕಾವು ಕೂಡ ಏರತೊಡಗಿದೆ.

ಕೆ.ಆರ್‌.ಪೇಟೆ ವಿಧಾನಸಭಾ ಉಪ ಚುನಾವಣೆವರೆಗೂ ಮೊದಲು ಬಿಜೆಪಿಗೆ ಜಿಲ್ಲೆಯಲ್ಲಿ ಹೇಳ ಹೆಸರಿರಲಿಲ್ಲ. ಕೆ.ಸಿ.ನಾರಾಯಣಗೌಡರು ಗೆಲುವು ದಾಖಲಿಸಿದ ನಂತರ ಜಿಲ್ಲೆಯಲ್ಲಿ ಬಿಜೆಗೆ ಕೊಂಚ ಶಕ್ತಿ ಬಂದಂತಾಗದ್ದು ಹೆಚ್ಚಿನ ಮುಖಂಡರು ಕಮಲ ಪಾಳಯ ಸೇರುತ್ತಿದ್ದಾರೆ. ಮೇ 2ರಿಂದ ಎಲ್ಲಾ ಬಿಜೆಪಿ ಮಂಡಳಗಳಲ್ಲಿ ಪಕ್ಷ ಸೇರ್ಪಡೆ ಪ್ರಕ್ರಿಯೆ ಆರಂಭವಾಗಿದ್ದು ಮೇ 7ರವರೆಗೂ ಮುಂದುವರಿಯಲಿದೆ.

‘ಚುನಾವಣೆ ಹೊತ್ತಿಗೆ ಬಿಜೆಪಿ ಮುಖಂಡರು ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ’ ಎಂಬ ಮಾತು ಈಗಲೂ ಜನಜನಿತವಾಗಿಯೇ ಇದೆ. ಆದರೆ, ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಶಕ್ತಿ ತುಂಬಲಾಗುವುದು ಎಂದು ವರಿಷ್ಠರು ಘೋಷಣೆ ಮಾಡಿರುವ ಕಾರಣ ಯುವ ಮುಖಂಡರ ಚಿತ್ತ ಬಿಜೆಪಿಯತ್ತ ನೆಟ್ಟಿದೆ. ಆದರೂ ಬಿಜೆಪಿ ಮುಖಂಡರು ‘ಒಳ ಒಪ್ಪಂದದ ಆಟ’ವನ್ನು ಮೀರಿ ಪಕ್ಷ ಕಟ್ಟುವರೇ ಎಂಬ ಪ್ರಶ್ನೆ ಮಾತ್ರ ಸಾರ್ವಜನಿಕರಲ್ಲಿ ಜೀವಂತವಾಗಿದೆ.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರೂ ಆಗಿರುವ ಎಸ್‌.ಡಿ.ಜಯರಾಂ ಪುತ್ರ ಅಶೋಕ್‌ ಜಯರಾಂ ಬಿಜೆಪಿ ಸೇರುವುದು ಖಾತ್ರಿಯಾಗಿದ್ದು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ಧಾರೆ. ಈಗಾಗಲೇ ಅವರು ಬಿಜೆಪಿ ಮುಖಂಡರ ಜೊತೆ ಓಡಾಡುತ್ತಿದ್ದಾರೆ.

ಅಶೋಕ್‌ಗೆ ಟಿಕೆಟ್‌ ಕೊಟ್ಟರೆ ‍ಪಕ್ಷದ ಮುಖಂಡ ಚಂದಗಾಲು ಶಿವಣ್ಣ ಅವರಿಗೆ ಟಿಕೆಟ್‌ ತಪ್ಪುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಠೇವಣಿ ಉಳಿಸಿಕೊಂಡು ಜಿಲ್ಲೆಯಲ್ಲಿ ಬಿಜೆಪಿ ಮಾನ ಕಾಪಾಡಿದ್ದು ಚಂದಗಾಲು ಶಿವಣ್ಣ ಮಾತ್ರ. ಹೀಗಾಗಿ ಶಿವಣ್ಣ ಅವರನ್ನು ಹೊರತುಪಡಿಸಿ ಅಶೋಕ್‌ ಜಯರಾಂ ಅವರಿಗೆ ಟಿಕೆಟ್‌ ದೊರೆಯುವ ಸಾಧ್ಯತೆ ಕಡಿಮೆ ಎಂಬ ಮಾತು ಬಿಜೆಪಿ ಮುಖಂಡರಲ್ಲೇ ಇದೆ.

ಕೆಪಿಸಿಸಿ ಸದಸ್ಯರಾಗಿದ್ದ ಇಂಡುವಾಳು ಸಚ್ಚಿದಾನಂದ ಅವರನ್ನು ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಲಿದೆ ಎಂಬ ಮಾತುಗಳು ವ್ಯಾಪಕವಾಗಿವೆ. ಈಗಾಗಲೇ ಚುನಾವಣೆ ಸಿದ್ಧತೆ ಆರಂಭಿಸಿರುವ ಅವರು ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಶಂಕರೇಗೌಡ ಚಾರಿಟಬಲ್‌ ಟ್ರಸ್ಟ್‌ ಸ್ಥಾಪಿಸಿ ಕ್ಷೇತ್ರದಾದ್ಯಂತ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಅವರು ಬಿಜೆಪಿ ಸೇರುವ ಕುರಿತು ಇಲ್ಲಿಯವರೆಗೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಈಚೆಗೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದು ಬಿಜೆಪಿ ಸೇರುವ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೇಲುಕೋಟೆ ಕ್ಷೇತ್ರದಲ್ಲಿ ಕಳೆದೊಂದು ವರ್ಷದಿಂದ ವೈದ್ಯ ಡಾ.ಇಂದ್ರೇಶ್‌ ಬಿಜೆಪಿ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದು ತಾಲ್ಲೂಕಿನಾದ್ಯಂತ ಓಡಾಡುತ್ತಿದ್ದಾರೆ. ನರ್ಸಿಂಗ್‌ ಹೋಂ, ಫಾರ್ಮಾ ಏಜೆನ್ಸಿ ನಡೆಸುವ ಅವರು ಪಾಂಡವಪುರ ತಾಲ್ಲೂಕಿನಾದ್ಯಂತ ಬಿಜೆಪಿ ಪರ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದಾರೆ. ಬಿಜೆಪಿಯತ್ತ ಯುವಕರನ್ನು ಒಗ್ಗೂಡಿಸುತ್ತಿರುವ ಕಾರಣ ಮುಂದಿನ ಚುನಾವಣೆಯಲ್ಲಿ ಅವರೇ ಅಭ್ಯರ್ಥಿಯಾಗುತ್ತಾರೆ ಎಂದು ಕಾರ್ಯಕರ್ತರು ಹೇಳುತ್ತಾರೆ.

ಐಆರ್‌ಎಸ್‌ ಹುದ್ದೆ ತ್ಯಜಿಸಿ ಜೆಡಿಎಸ್‌ ಸೇರಿದ್ದ ಲಕ್ಷ್ಮಿ ಅಶ್ವಿನ್‌ಗೌಡ ಅವರು ಬಿಜೆಪಿ ಸೇರಿ ನಾಗಮಂಗಲ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂದೇ ಹೇಳಲಾಗುತ್ತಿದೆ. ಅವರು ಈಗಾಗಲೇ ಉದ್ಯೋಗ ಮೇಳ, ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡಿದ್ದು ಚುನಾವಣೆಗೆ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಕೈತಪ್ಪಿದ ನಂತರ ಜೆಡಿಎಸ್‌ನಿಂದ ಹೊರಗಿರುವ ಅವರು ಬಿಜೆಪಿ ಸೇರುವುದು ನಿಶ್ಚಿತ ಎಂದು ಅವರ ಬೆಂಬಲಿಗರು ಹೇಳುತ್ತಾರೆ.

***

ಬಿಜೆಪಿ ಟಿಕೆಟ್‌ ‘ಬಸ್‌ ಟಿಕೆಟ್‌’ ಅಲ್ಲ!

‘ಮಂಡ್ಯ ಜಿಲ್ಲೆಯಾದ್ಯಂತ 2 ಸಾವಿರಕ್ಕೂ ಹೆಚ್ಚು ಜನರು ಬಿಜೆಪಿ ಸೇರುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಪಕ್ಷದ ಬೇರು ಬಲಪಡಿಸಲು ನಿರ್ಧರಿಸಿರುವ ವರಿಷ್ಠರು ಮಂಡ್ಯ ಜಿಲ್ಲೆಗೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ಬಿಜೆಪಿಗೆ ಬಂದವರೆಲ್ಲರಿಗೂ ಸ್ವಾಗತವಿದೆ, ಆದರೆ ವರಿಷ್ಠರು ಯಾರಿಗೂ ಟಿಕೆಟ್‌ ಭರವಸೆ ನೀಡಿಲ್ಲ. ಬಿಜೆಪಿ ಟಿಕೆಟ್‌ ಎಂದರೆ ಬಸ್‌ ಟಿಕೆಟ್‌ ಅಲ್ಲ’ ಎಂದು ಬಿಜೆಪಿ ರೈತ ಮೊರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್‌.ನಂಜುಂಡೇಗೌಡ ಹೇಳಿದರು.

‘ಬಿಜೆಪಿಯಿಂದ ಬಿ ಫಾರಂ ಪಡೆಯುವುದು ಸುಲಭದ ಮಾತಲ್ಲ. ಹಣ, ಪ್ರಭಾವ ಏನೇ ಇದ್ದರೂ ಜನರ ವರದಿಗೆ ವರಿಷ್ಠರು ಆದ್ಯತೆ ನೀಡುತ್ತಾರೆ’ ಎಂದು ಬಿಜೆಪಿ ಮುಖಂಡರ ಚಂದಗಾಲು ಶಿವಣ್ಣ ಹೇಳಿದರು.

**

ಮತ್ತೆ ತಾರಾ ಮೆರುಗು

ಮಂಡ್ಯ ಜಿಲ್ಲೆಯ ಚುನಾವಣೆಗೂ, ಚಿತ್ರ ತಾರೆಯರಿಗೂ ಅವಿನಾಭಾವ ನಂಟಿದೆ. ಮುಂದಿನ ಚುನಾವಣೆಯಲ್ಲೂ ತಾರಾ ಮೆರುಗಿನ ಮೂಲಕ ಸಕ್ಕರೆ ನಾಡು ಗಮನ ಸೆಳೆಯುವ ಸಾಧ್ಯತೆ ಇದೆ. ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್‌ ಅಂಬರೀಷ್‌ ಕೂಡ ಮಂಡ್ಯ ಅಥವಾ ಮದ್ದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ ಎಂಬ ಮಾತುಗಳಿವೆ. ಅದು ಸಾಧ್ಯವಾದರೆ ನಟ ದರ್ಶನ್‌ ಸೇರಿದಂತೆ ಹಲವು ತಾರೆಯರು ಪ್ರಚಾರ ಕಣಕ್ಕೆ ಧುಮುಕುತ್ತಾರೆ ಎಂಬ ಮಾತು ಜನರಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT