ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ನಗರಸಭೆ ಬಜೆಟ್‌: ಮೂಲ ಸೌಲಭ್ಯಕ್ಕಾಗಿ ₹11 ಕೋಟಿ ನಿಗದಿ

ನನೆಗುದಿಗೆ ಬಿದ್ದಿರುವ ಮಾರುಕಟ್ಟೆ ಕಾಮಗಾರಿಕೆ ₹ 8 ಕೋಟಿ ಹಣ ಮೀಸಲು
Last Updated 16 ಮಾರ್ಚ್ 2022, 13:13 IST
ಅಕ್ಷರ ಗಾತ್ರ

ಮಂಡ್ಯ: ‘ಆಧುನಿಕ ಮೂಲ ಸೌಕರ್ಯಗಳೊಂದಿಗೆ ನಗರದ ಸಮಗ್ರ ಅಭಿವೃದ್ಧಿಗಾಗಿ ₹ 11.50 ಕೋಟಿ ಮೀಸಲಿಡಲಾಗುವುದು. ಉತ್ತಮ ರಸ್ತೆ, ಕಲ್ಲು ಹಾಸು, ಪಾದಾಚಾರಿ ಮಾರ್ಗ, ಮಳೆ ನೀರು ಚರಂಡಿ ನಿರ್ಮಿಸಿ ನಗರದ ಸೌಂದರ್ಯ ಕಾಪಾಡಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು ಪ್ರಕಟಿಸಿದರು.

ನಗರಸಭೆ ಧರಣಪ್ಪ ಸಭಾಂಗಣದಲ್ಲಿ ಮಂಗಳವಾರ 2022–23ನೇ ಸಾಲಿನ ಬಜೆಟ್‌ ಮಂಡಿಸಿದ ಅವರು ನಗರಸಭೆ ಆದಾಯ, ಸರ್ಕಾರದಿಂದ ಬರಬಹುದಾದ ಅನುದಾನ ಒಳಗೊಂಡಂತೆ ₹ 98.68 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಅದರಲ್ಲಿ ₹ 94.44 ಕೋಟಿ ಅನುದಾನವನ್ನು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಿಳ್ಳಲಾಗುವುದು. ₹ 4.23 ಲಕ್ಷ ಉಳಿಕೆಯಾಗಲಿದೆ ಎಂದು ತಿಳಿಸಿದರು.

ಮಾರುಕಟ್ಟೆಗೆ ಆದ್ಯತೆ: ಕಳೆದ 20 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಾರುಕಟ್ಟೆ ನಿರ್ಮಾಣಕ್ಕೆ ಆದ್ಯತೆ ನೀಡಿರುವ ಅಧ್ಯಕ್ಷರು ಐಡಿಎಸ್ಎಂಟಿ ಅನುದಾನ, ನಗರಸಭೆ ಮಳಿಗೆ ಬಾಡಿಗೆ ಹಣದಿಂದ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ₹ 8 ಕೋಟಿ ಮೀಸಲಿಟ್ಟಿದ್ದಾರೆ. ಕೆ.ಎಚ್‌.ಬಿ ಬಡಾವಣೆಯಲ್ಲಿ ರಸ್ತೆ, ಚರಂಡಿ, ವಿದ್ಯುತ್‌ ದೀಪಗಳ ₹ 5.50 ಕೋಟಿ ಮೀಸಲಿಡಲಾಗಿದೆ. ನಗರದ ಜನತೆಗೆ ಶುದ್ಧ ನೀರು ಸರಬರಾಜು ವ್ಯವಸ್ಥೆಗಾಗಿ ₹ 1.50 ಕೋಟಿ ಹಣ ತೆಗೆದಿರಿಸಿದ್ದಾರೆ.

ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಸ್ವಂತ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ಜಿ ಪ್ಲಸ್‌ 3 ಮಾದಿಯಲ್ಲಿ 104 ಮನೆ ನಿರ್ಮಾಣಗೊಳ್ಳುತ್ತಿದ್ದು ಕಾಮಗಾರಿ ಪೂರ್ಣಗೊಳಿಸಲು ₹ 1.20 ಕೋಟಿ ಮೀಸಲಿಟ್ಟಿದ್ದಾರೆ. ನಗರದಲ್ಲಿ ಉತ್ಪಾದನೆಯಾಗುವ ಘನ ತ್ಯಾಜ್ಯ ನಿರ್ವಹಣೆಗಾಗಿ ₹ 1.50 ಕೋಟಿ ಹಣ ತೆಗೆದಿರಿಸಿದ್ದಾರೆ.

ಪ್ರತಿನಿತ್ಯ ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ನೇರ ಪಾವತಿ ಪೌರಕಾರ್ಮಿಕರ ವೇತನಕ್ಕಾಗಿ ₹ 3.50 ಕೋಟಿ ಹಣ ಮೀಸಲಿಡಲಾಗಿದೆ. ನೈರ್ಮಲ್ಯ ಕಾರ್ಯದಲ್ಲಿ ತೊಡಗಿರುವ ಹೊರಗುತ್ತಿಗೆ ಪೌರಕಾರ್ಮಿಕರು, ವಾಹನ ಚಾಲಕರು ಮತ್ತು ಭದ್ರತಾ ಸಿಬ್ಬಂದಿಗಳ ವೇತನ ಪಾವತಿಗಾಗಿ ₹ 3.23 ಕೋಟಿ ಮೀಸಲಿಡಲಾಗಿದೆ. ವಿವಿಧ ಸಮುದಾಯಗಳ ಸ್ಮಶಾನ ಅಭಿವೃದ್ಧಿಪಡಿಸುವುದಕ್ಕಾಗಿ ₹ 1 ಕೋಟಿ ತೆಗೆದಿರಿಸಲಾಗಿದೆ.

ಬೀದಿ ದೀಪಗಳ ನಿರ್ವಹಣೆಗಾಗಿ ₹ 1.25 ಕೋಟಿ, ನಗರಸಭಾ ಸದಸ್ಯರ ಗೌರವಧನ, ಪ್ರವಾಸ ಕಾರ್ಯಕ್ರಮ ಹಾಗೂ ಇತರ ವೆಚ್ಚಳಿಗಾಗಿ ₹ 60 ಲಕ್ಷ ಮೀಸಲಿರಿಸಲಾಗಿದೆ. ಸೂರಿಲ್ಲದೆ ದೇವಾಲಯ, ಬಸ್‌ ನಿಲ್ದಾಣದಲ್ಲಿ ಮಲಗುವ ನಿರ್ಗತಿಕರಿಗೆ ಊಟ ಮತ್ತು ವಸತಿ ಕಲ್ಪಿಸುವುದಕ್ಕಾಗಿ ₹ 10 ಲಕ್ಷ, ನಿರಾಶ್ರಿತರ ಕೇಂದ್ರ ತೆರೆದು ನಿರ್ವಹಣೆ ಮಾಡುವುದಕ್ಕಾಗಿ ₹ 20 ಲಕ್ಷ ಮೀಸಲಿಡಲಾಗಿದೆ.

ನಗರದಲ್ಲಿ ಮಾರ್ಗಸೂಚಿ ಫಲಕಗಳ ಅಳವಡಿಕೆಗಾಗಿ ₹ 40 ಲಕ್ಷ, ನಗರದಲ್ಲಿ ಸೌಂದರ್ಯ ಹೆಚ್ಚಿಸಲು, ಹಸಿರು ವಾತಾವರಣ ಕಲ್ಪಿಸಲು ಗಿಡ ನೆಡುವುದಕ್ಕಾಗಿ 6 ಲಕ್ಷ ಹಣ ಕಾಯ್ದಿರಿಸಲಾಗಿದೆ. ಈ ಹಣದಲ್ಲಿ ಗಿಡ ನೆಟ್ಟು 1 ವರ್ಷ ಪೋಷಣೆ ಮಾಡಿದವರಿಗೆ ಗಿಡವೊಂದಕ್ಕೆ ₹ 500 ಪ್ರೋತ್ಸಾಹಧನ ಪಾವತಿ ಮಾಡುವುದಾಗಿ ಅವರು ಪ್ರಕಟಿದ್ದಾರೆ. ನಗರದ ಉದ್ಯಾನಗಳಲ್ಲಿ ವಿಹಾರ ಮಾಡುವವರಿಗೆ ವ್ಯಾಯಾಮ ಸಾಧನ, ಮಕ್ಕಳ ಆಟಿಗೆ ಅಳವಡಿಸುವುದಕ್ಕಾಗಿ ₹ 1.5 ಕೋಟಿ ತೆಗೆದಿರಿಸಲಾಗಿದೆ.

ಅಮೃತ ನಗರೋತ್ಥಾನ ಯೋಜನೆಯಡಿ ಸರ್ಕಾರದಿಂದ ಬರುವ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ₹ 21 ಕೋಟಿ, ಚರಂಡಿ ಅಭಿವೃದ್ಧಿಗೆ ₹ 3.46 ಕೋಟಿ, ನೀರು ಸರಬರಾಜು ಮತ್ತು ಒಳಚರಂಡಿಗಾಗಿ₹ 6.10 ಕೋಟಿ, ಉದ್ಯಾನ ಮತ್ತು ಸರ್ಕಲ್‌ ಅಭಿವೃದ್ಧಿಗೆ ₹ 1 ಕೋಟಿ, ನಗರಸಭೆ ಕಚೇರಿ ಸಭಾಂಗಣ ಮತ್ತು ಪೌರಕಾರ್ಮಿಕರ ಮನೆಗಳ ಅಭಿವೃದ್ಧಿಗಾಗಿ ₹ 2.35 ಕೋಟಿ ವಿನಿಯೋಗ ಮಾಡಲಾಗುವುದು ಎಂದು ಅಧ್ಯಕ್ಷರು ಪ್ರಕಟಿಸಿದರು.

ಬಜೆಟ್‌ ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಇಶ್ರತ್‌ ಫಾತಿಮಾ, ಪೌರಾಯುಕ್ತ ಎಸ್‌.ಲೋಕೇಶ್‌ ಇದ್ದರು.

ಪ್ರತಿಧ್ವನಿಸಿದ ‘ಪ್ರಜಾವಾಣಿ’ ವರದಿ

ನಗರಸಭೆಯಲ್ಲಿ ಜನರನ್ನು ಕಾಡುತ್ತಿರುವ ಬಗ್ಗೆ ಪ್ರಜಾವಾಣಿಯಲ್ಲಿ ಈಚೆಗೆ ಪ್ರಕಟಗೊಂಡಿದ್ದ ‘ನಗರಸಭೆಯಲ್ಲಿ ಹೆಚ್ಚುತ್ತಿರುವ ಇ–ಖಾತೆ ದಂಧೆ’ ವರದಿಯನ್ನು 11ನೇ ವಾರ್ಡ್‌ ಸದಸ್ಯ ಅರುಣ್‌ ಕುಮಾರ್‌ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿದರು. ಈ ಕುರಿತು 45 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆಯಾಯಿತು.

‘ನಗರಸಭೆ ಅಧಿಕಾರಿಗಳು ಆಸ್ತಿ ಮಾಲೀಕರಿಗೆ ತೊಂದರೆ ಕೊಡುತ್ತಿರುವ ವಿಚಾರ ಪ್ರಜಾವಾಣಿ ಪತ್ರಿಕೆಯಲ್ಲಿ ಬಂದಿದೆ. ಇದರಿಂದ ನಗರಸಭೆಗೆ ಕೆಟ್ಟ ಹೆಸರು ಬರುತ್ತಿದೆ. ಜಿಲ್ಲಾಧಿಕಾರಿಯಿಂದ ಪೌರಾಯುಕ್ತರಿಗೆ ಕ್ರಮ ಕೈಗೊಳ್ಳಲು ಸೂಚನೆ ಬಂದಿದ್ದರೂ ಪೌರಾಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

ಅಧ್ಯಕ್ಷ ಮಂಜು ಉತ್ತರಿಸಿ ‘ಅನ್ಯಾಯಕ್ಕೆ ಒಳಗಾದವರು ನೇರವಾಗಿ ದೂರುಕೊಟ್ಟರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಉತ್ತರಿಸಿದರು. ಆದರೆ, ಈ ವಿಚಾರದಲ್ಲಿ ಪೌರಾಯುಕ್ತ ಎಸ್‌.ಲೋಕೇಶ್‌ ಮೌನ ವಹಿಸಿದ್ದುದು ಅನುಮಾನಕ್ಕೆ ಕಾರಣವಾಯಿತು.

ಅಂಬೇಡ್ಕರ್‌ ಭವನ ನಗರಸಭೆಗೆ ಕೊಡಿ

26ನೇ ವಾರ್ಡ್‌ ಸದಸ್ಯ ಎಂ.ಎನ್‌.ಶ್ರೀಧರ್‌ ಮಾತನಾಡಿ ‘ಅಸಮರ್ಪಕ ನಿರ್ವಹಣೆಯಿಂದಾಗಿ ಅಂಬೇಡ್ಕರ್‌ ಭವನ ಅವ್ಯವಸ್ಥೆಯ ಆಗರವಾಗಿದೆ. ಕರೆಂಟ್‌ ಬಿಲ್‌ ಕಟ್ಟದ ಕಾರಣ ಲೈನ್‌ ಕತ್ತರಿಸಲಾಗಿದೆ’ ಎಂದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷರು ‘ಕಾರ್ಯಕ್ರಮ ಆಯೋಜಕರಿಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಡಿಗೆ ವಸೂಲಿ ಮಾಡುತ್ತಾರೆ. ಆ ಹಣದಲ್ಲಿ ಭವನ ನಿರ್ವಹಣೆ ಮಾಡಲು ಸಾಧ್ಯವಿದೆ. ಅವರಿಂದ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಭವನವನ್ನು ನಗರಸಭೆಗೆ ವಹಿಸಲಿ’ ಎಂದು ಹೇಳಿದರು.

ಜಲಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ

ಜಲಮಂಡಳಿ ಅಧಿಕಾರಿಗಳು ಎಲ್ಲೆಂದರಲ್ಲಿ ರಸ್ತೆ ಅಗೆಯುತ್ತಿರುವ ಕಾರಣ ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ಅಗೆದ ನಂತರ ಮೊದಲ ಸ್ಥಿತಿಗೆ ತರಬೇಕಾಗಿದ್ದು ಅವರ ಕರ್ತವ್ಯವಾಗಿದೆ. ಈ ವಿಚಾರದಲ್ಲಿ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದರು. ಜಲಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಚಿಕ್ಕೇಗೌಡನ ದೊಡ್ಡಿ ಗ್ರಾಮದ ಬಳಿ ಇರುವ ಕೊಳಚೆ ನೀರು ಶುದ್ಧೀಕರಣ ಘಟಕದ ಮೋಟಾರ್‌ ಹಾಳಾಗಿ 2 ತಿಂಗಳಾದರೂ ಅದನ್ನು ಸರಿಪಡಿಸಿಲ್ಲ ಎಂದು ಆರೋಪಿಸಿದರು. ಕೂಡಲೇ ಮೋಟಾರ್‌ ಸರಿಪಡಿಸುವಂತೆ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.

ಅಂಕಿ ಅಂಶ (₹ ಕೋಟಿ)

98.68: ಬಜೆಟ್‌ನ ಒಟ್ಟು ಗಾತ್ರ
94.44: ನಿರೀಕ್ಷಿಸಲಾದ ಒಟ್ಟು ಖರ್ಚು
4.23 ಲಕ್ಷ: ಉಳಿತಾಯ
21.08: ರಸ್ತೆ ಅಭಿವೃದ್ಧಿಗಾಗಿ
6.1: ನೀರು ಸರಬರಾಜು
3.46: ಚರಂಡಿ ಅಭಿವೃದ್ಧಿಗಾಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT