ಸಂತೇಬಾಚಹಳ್ಳಿ: ಮಂಡ್ಯ ಜಿಲ್ಲೆಯಲ್ಲಿ ಬರದ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಹೋಬಳಿ ವ್ಯಾಪ್ತಿಗೆ ನೀರಾವರಿ ಒದಗಿಸುವ ಉದ್ದೇಶದಿಂದ ಅನುಷ್ಠಾನಗೊಳಿಸಲಾಗಿದ್ದ ಗೂಡೆಹೊಸಹಳ್ಳಿ ಏತ ನೀರಾವರಿ ಯೋಜನೆ ನನೆಗುದಿಗೆ ಬಿದ್ದಿದ್ದು ನೀರಾವರಿ ಕನಸು ಕಟ್ಟಿಕೊಂಡಿದ್ದ ಈ ಭಾಗದ ಜನರು ನಿರಾಸೆಗೊಂಡಿದ್ದಾರೆ.
₹ 212 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಿತ್ತು, ಬಳ್ಳಾರಿ ಮೂಲದ ಕಂಪನಿ 2019ರಲ್ಲೇ ಕಾಮಗಾರಿ ಆರಂಭಿಸಬೇಕಾಗಿತ್ತು. ಆದರೆ ಗುತ್ತಿಗೆದಾರರು 2020ರಲ್ಲಿ ಕಾಮಗಾರಿ ಆರಂಭಿಸಿದರು. ಕೆಲಸ ಆರಂಭವಾಗಿ 3 ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ, ಸದ್ಯ ಕೆಲಸ ಸ್ಥಗಿತಗೊಂಡಿದ್ದು ಬರ ಪರಿಸ್ಥಿತಿಯಲ್ಲಾದರೂ ನೀರು ದೊರೆಯಬಹುದೆಂದು ಕಾಯುತ್ತಿದ್ದ ರೈತರು ಅಸಮಾಧಾನಗೊಂಡಿದ್ದಾರೆ.
ಗೂಡೆಹೊಸಹಳ್ಳಿ ಗ್ರಾಮದ ಬಳಿ ಹೇಮಾವತಿ ನದಿಯಿಂದ ಅಘಲಯ ಕೆರೆಗೆ ಪೈಪ್‌ಲೈನ್ ಮೂಲಕ ನೀರೊದಗಿಸಿ ಕೆರೆ ತುಂಬಿಸುವುದು ಯೋಜನೆಯ ಉದ್ದೇಶ. ಇದರಿಂದ ಮಾಳಗೂರು, ದೊಡ್ಡಹಾರನಹಳ್ಳಿ, ನಾಗರಘಟ್ಟ, ನಾರಾಯಣಪುರ, ರಾಮನಕೊಪ್ಪಲು, ಸಂತೇಬಾಚಹಳ್ಳಿ, ಬಿಲ್ಲೇನಹಳ್ಳಿ, ಆದಿಹಳ್ಳಿ, ಹುಬ್ಬನಹಳ್ಳಿ, ಚಿಕ್ಕಸೋಮನಹಳ್ಳಿ, ದೊಡ್ಡಸೋಮನಹಳ್ಳಿ ಗ್ರಾಮಸ್ಥರ ನೀರಾವರಿ ಕನಸು ಈಡೇರುತ್ತದೆ. ಆದರೆ ಆಮೆಗತಿ ಕೆಲಸದಿಂದಾಗಿ ಯೋಜನೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ.
ಕೆಲಸ ಪ್ರಾರಂಭವಾಗುವ ಮುನ್ನವೇ ₹10.36 ಕೋಟಿ ಹಣ ಮುಂಗಡ ರೂಪದಲ್ಲಿ ಬಡ್ಡಿರಹಿತವಾಗಿ ಪಡೆದಿದ್ದರೂ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಯೋಜನೆಯಂತೆ ಈ ವೇಳೆಗೆ ಕಾಮಗಾರಿ ಪೂರ್ಣಗೊಂಡಿದ್ದರೆ ಈ ಬರ ಪರಿಸ್ಥಿತಿಯಲ್ಲಿ ರೈತರಿಗೆ ಅನುಕೂಲವಾಗುತ್ತಿತ್ತು.
ಜೂ 11, 2021ಕಾಲಮಿತಿ ನಿಗದಿ ಮಾಡಲಾಗಿತ್ತು, ಆದರೆ ಗುತ್ತಿಗೆದಾರರು ಡಿಸೆಂಬರ್ 2022ರ ಅಂತ್ಯದವರೆಗೆ ಕಾಲ ವಿಸ್ತರಣೆ ಪಡೆದಿದ್ದರು. ಕಾಲ ವಿಸ್ತರಣೆ ಅವಧಿಯೂ ಮುಗಿದು ವರ್ಷವಾಗುತ್ತಿದ್ದರೂ ಕೆಲಸ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇಲ್ಲಿಯವರೆಗೆ ನಿರ್ಮಿಸಿರುವ ಕಟ್ಟಡ ಪಾಳುಬಿದ್ದಿದ್ದು ಸಾರ್ವಜನಿಕರಿಗೆ ಬೇಸರ ಮೂಡಿಸಿದೆ.
‘ಸರ್ಕಾರದ ಪುಕ್ಕಟೆ ಬಡ್ಡಿಯ ಮುಂಗಡ ಹಣವನ್ನು ಗುತ್ತಿಗೆದಾರರು ದುರುಪಯೋಗ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಕೂಡ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅಕ್ಷಮ್ಯ. ಇನ್ನಾದರೂ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಸೂಚನೆ ನೀಡಬೇಕು’ ಎಂದು ಸಾಮಾಜಿಕ ಹೋರಾಟಗಾರ ಜಯಣ್ಣ ಒತ್ತಾಯಿಸಿದರು.
‘ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಶಾಸಕ ಎಚ್.ಟಿ.ಮಂಜು ಹೇಳುತ್ತಾರೆ.
‘ಜೂನ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ರೈತರು ಕೆಲವು ಕಡೆ ಪೈಪ್‌ಲೈನ್ ಕಾಮಗಾರಿಗೆ ಅನುವು ಮಾಡಿಕೊಟ್ಟಿರಲಿಲ್ಲ. ಸಮಸ್ಯೆ ಪರಿಹಾರವಾಗಿದ್ದು ಜೂನ್ ತಿಂಗಳಲ್ಲಿ ಕಾಮಗಾರಿ ಪೂರ್ಣವಾಗಲಿದೆ’ ಎಂದು ಹೇಮಾವತಿ ಜಲಾಶಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರೇಗೌಡ ಹೇಳಿದರು.
ದೂರು ತನಿಖೆಗೆ ಆಗ್ರಹ ‘ಏತ ನೀರಾವರಿ ಕಾಮಗಾರಿಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ಆ.20 2020ರಂದೇ ಮುಖ್ಯಮಂತ್ರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಲಾಗಿದೆ. ಕಾಮಗಾರಿ ಅನುಷ್ಠಾನದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ದೂರುದಾರ ನಾಗೇಗೌಡ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.