ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ ರೈತಸಂಘ

ಟನ್‌ ಕಬ್ಬಿಗೆ ₹ 4,500 ದರ, ಎಫ್‌ಆರ್‌ಪಿ ನಿಗದಿಗೆ ಶೇ 8.5 ಇಳುವರಿ ಪರಿಗಣನೆಗೆ ಆಗ್ರಹ
Last Updated 7 ನವೆಂಬರ್ 2022, 12:34 IST
ಅಕ್ಷರ ಗಾತ್ರ

ಮಂಡ್ಯ: ಪ್ರತಿ ಟನ್‌ ಕಬ್ಬಿಗೆ ₹4,500 ದರ ನಿಗದಿ, ಹಳೇ ಬಾಕಿ ಪಾವತಿ, ಎಸ್‌ಎಪಿ, ಎಫ್‌ಆರ್‌ಪಿ ನಿಗದಿಗೆ ಶೇ 8.5 ಇಳುವರಿ ಮಾನದಂಡ ಪರಿಗಣನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ರೈತಸಂಘದ ಕಾರ್ಯಕರ್ತರು ನಗರದ ಸರ್‌ ಎಂ.ವಿ. ಪ್ರತಿಮೆ ಎದುರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಕೆಆರ್‌ಎಸ್‌ ಸುತ್ತ–ಮುತ್ತ 20 ಕಿ.ಮೀ ವ್ಯಾಪ್ತಿ, ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ನಾಲೆಗಳ 1 ಕಿ.ಮೀ ಅಂತರದಲ್ಲಿ ಶಾಶ್ವತವಾಗಿ ಕಲ್ಲು ಗಣಿಗಾರಿಕೆ ನಿಷೇಧಿಸಬೇಕು. ಕೇಂದ್ರ ಸರ್ಕಾರವು ವಿದ್ಯುತ್‌ ಕಾಯಿದೆಗೆ ತಿದ್ದುಪಡಿ ತಂದು ವಿದ್ಯುತ್‌ ಉತ್ಪಾದನೆ ಮತ್ತು ಸರಬರಾಜನ್ನು ಖಾಸಗೀಕರಣ ಮಾಡುವುದನ್ನು ರದ್ದುಪಡಿಸಬೇಕು. ರೈತರಿಂದ ಖರೀದಿಸುವ ಹಾಲಿನ ದರವನ್ನು ಹೆಚ್ಚಳ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ದಸರಾ ನಾಡಹಬ್ಬಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಸ್ಎಪಿ ದರ ನಿಗದಿಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿವರೆಗೂ ಸರ್ಕಾರ ಎಸ್ಎಪಿ ದರ ನಿಗದಿಪಡಿಸಿಲ್ಲ, ಕೊಟ್ಟ ಮಾತಿಗೆ ತಪ್ಪಿದೆ ಸರ್ಕಾರದ ನಡೆ ರೈತರ ವಿರೋಧಿಯಾಗಿದೆ. ಆದ್ದರಿಂದ ಅನಿರ್ದಿಷ್ಟಾವಧಿ ಧರಣಿ ಅನಿವಾರ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾತನಾಡಿ ‘ರೈತರ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು ಎಂಬುವ ನಿಟ್ಟಿನಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದೇವೆ, ಇದಕ್ಕೆ ಸ್ಪಂದಿಸದಿದ್ದರೆ ಸರ್ಕಾರದ ವಿರುದ್ಧ ಸಂಘದ ರಾಜ್ಯ ಘಟಕ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಚಳವಳಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಸಂಸದರು ಹಾಗೂ ಕೆಲ ಶಾಸಕರು ಮೇಲುಕೋಟೆಯಲ್ಲಿ ಆಣೆ ಪ್ರಮಾಣಕ್ಕಾಗಿ ಪಂಥಾಹ್ವಾನ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಈ ರೀತಿ ನಡೆದುಕೊಳ್ಳಲೆಂದು ಕ್ಷೇತ್ರದ ಜನರು ಆಯ್ಕೆ ಮಾಡಿ ಕಳುಹಿಸಿರುವುದಾ? ತಹಶೀಲ್ದಾರ್‌ ವಿರುದ್ಧ ಆರೋಪ ಮಾಡಿರುವ ಆರ್.ಟಿ.ಐ ಕಾರ್ಯಕರ್ತ ಕಲ್ಲಹಳ್ಳಿ ರವೀಂದ್ರ ಅವರಿಗೆ ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ. ಜಿಲ್ಲಾಡಳಿತ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲೆಯಲ್ಲಿ ರಸ್ತೆಗಳು ಗುಂಡಿ ಬಿದ್ದಿದೆ. ರಸ್ತೆ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಬೈಕ್ ರ‍್ಯಾಲಿ ನಡೆಸಿದ ಪರಿಣಾಮ ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕೆಲಸ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿಯೂ ರಸ್ತೆಗಳು ಹಾಳಾಗಿವೆ. ಅವುಗಳನ್ನು ದುರಸ್ತಿ ಮಾಡಿಸಿಕೊಡುವ ಕೆಲಸಕ್ಕೆ ಆಯಾ ಸಂಬಂಧಪಟ್ಟ ಇಲಾಖೆಗಳು ನಿರತರಾಗಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ ‘ಕಬ್ಬಿಗೆ ಸರ್ಕಾರ ಎಸ್‌ಎಪಿ ದರ ನಿಗದಿಪಡಿಸುವವರೆಗೂ ಅನಿರ್ದಿಷ್ಟಾವಧಿ ಚಳವಳಿ ಮುಂದುವರಿಯಲಿದೆ. ಕೂಡಲೇ ಸರ್ಕಾರ ಚಳವಳಿಗೆ ಸ್ಪಂದಿಸಬೇಕು. ಇಲ್ಲವಾದರೆ ಬೇರೆ ರೀತಿ ಚಳವಳಿ ಆಯಾಮ ಪಡೆದುಕೊಳ್ಳುತ್ತದೆ ಎಂಬುದನ್ನು ಮನಗಂಡು ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

‘ರೈತರ ಮಕ್ಕಳು ಎನ್ನುವ ಜನಪ್ರತಿನಿಧಿಗಳು ರೈತರ ಮಕ್ಕಳ ಸಮಸ್ಯೆಗಳ ಬಗ್ಗೆ ಏಕೆ ಸರ್ಕಾರದ ಗಮನಕ್ಕೆ ತರುತ್ತಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸದೆ ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡು ಕಾಲಹರಣ ಮಾಡುತ್ತಿರುವುದು ವಿಪರ್ಯಾಸ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ರಾಜ್ಯ ಸಮಿತಿ ಸದಸ್ಯ ಪ್ರಸನ್ನ ಎನ್.ಗೌಡ, ಮುಖಂಡರಾದ ಸುನೀತಾ ಪುಟ್ಟಣ್ಣಯ್ಯ, ಕೆ.ಪಿ.ಗೋವಿಂದೇಗೌಡ, ಶಿವಳ್ಳಿ ಚಂದ್ರು, ಶೆಟ್ಟಹಳ್ಳಿ ರವಿಕುಮಾರ್, ಶಿವಳ್ಳಿ ಬೋರೇಗೌಡ, ರಘು, ಮಂಜುನಾಥ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT