ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಮೀನು ಪೋಷಣಾ ಕೇಂದ್ರ ಅನೈತಿಕ ಚಟುವಟಿಕೆ ತಾಣ

ಸೊಳ್ಳೆ, ಹಾವು, ಹಲ್ಲಿ, ಕ್ರಿಮಿ, ಕೀಟಗಳ ವಾಸಸ್ಥಳ, ಕಟ್ಟಡಗಳಲ್ಲಿ ಮಾಂಸಾಹಾರ, ಮದ್ಯ ಸೇವನೆ
Last Updated 29 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಮಂಡ್ಯ: ಮೀನುಗಾರಿಕೆ ಪೋಷಣೆ ಮಾಡುವ ಉದ್ದೇಶದಿಂದ ತಾಲ್ಲೂಕಿನ ಗೋಪಾಲಪುರ ಗ್ರಾಮದ ಬಳಿ 29 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಸರ್‌ ಎಂ. ವಿಶ್ವೇಶ್ವರಯ್ಯ ಮೀನು ಮರಿ ಉತ್ಪಾದನಾ ಹಾಗೂ ಪೋಷಣಾ ಕೇಂದ್ರ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಮೀನುಗಾರಿಕೆ ಇಲಾಖೆಯ ಸಂಪೂರ್ಣ ಚಟುವಟಿಕೆ ಗೋಪಾಲಪುರದಲ್ಲೇ ನಡೆಯಬೇಕು ಎಂಬ ಉದ್ದೇಶದಿಂದ 1990ರಲ್ಲಿ ಕೇಂದ್ರ ಸ್ಥಾಪಿಸಲಾಯಿತು. ಅರಣ್ಯ ಇಲಾಖೆಗೆ ಸೇರಿದ್ದ 25 ಎಕರೆ ಭೂಪ್ರದೇಶವನ್ನು ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಅವರ ವಿಶೇಷ ಅನುಮತಿಯ ಮೇರೆಗೆ ಮೀನು ಮರಿ ಉತ್ಪಾದನಾ ಕೇಂದ್ರಕ್ಕೆ ಬಿಟ್ಟುಕೊಡಲಾಯಿತು. ಕಚೇರಿಯ ಜೊತೆಗೆ ಸಿಬ್ಬಂದಿ ವಾಸಿಸಲು ವಸತಿ ಗೃಹಗಳನ್ನೂ ನಿರ್ಮಾಣ ಮಾಡಲಾಯಿತು.

ಆದರೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಅಲ್ಲಿ ಕರ್ತವ್ಯ ನಿರ್ವಹಿಸಲು ಹಾಗೂ ವಾಸಿಸಲು ನಿರಾಕರಣೆ ಮಾಡಿದ ಪರಿಣಾಮ ಕಟ್ಟಡಗಳು ಆಗಿನಿಂದಲೂ ಪಾಳು ಬಿದ್ದವು. ಈಗ ಅವು ಭೂತ ಬಂಗಲೆಯಂತಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಮೂರು ವಸತಿಗೃಹಗಳ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿವೆ.

ಕೇಂದ್ರ ಸುತ್ತಲೂ ಬೇಲಿಯೂ ಇಲ್ಲದ ಕಾರಣ ಹೇಳುವವರು, ಕೇಳುವವರು ಇಲ್ಲವಾಗಿದ್ದಾರೆ. ಪಾಳು ಬಿದ್ದ ಕಟ್ಟಡಗಳಲ್ಲಿ ಮದ್ಯ ಸೇವನೆ, ಮಾಂಸಾಹಾರ ತಯಾರಿಕೆ ಮುಂತಾದ ಚಟುವಟಿಕೆ ನಡೆಸಿ ಪರಿಸರ ಹಾಳು ಮಾಡಿದ್ದಾರೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿ, ಮೂಳೆಗಳು ಬಿದ್ದು ಚೆಲ್ಲಾಡುತ್ತಿವೆ. ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ.

ಮೀನುಮರಿ ಉತ್ಪಾದನೆ ಮಾಡಿ ಅವುಗಳನ್ನು ರೈತರಿಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಕೇಂದ್ರ ನಿರ್ಮಿಸಲಾಗಿದೆ. ಆರಂಭದಲ್ಲಿ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಕ್ರಮೇಣ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕೇಂದ್ರದ ನಿರ್ವಹಣೆ ಕುಂಠಿತಗೊಂಡಿತು. ಈಗ ಮೀನು ಉತ್ಪಾದನೆ, ಪೋಷಣೆ ಕೇವಲ ನೆಪ ಮಾತ್ರಕ್ಕೆ ಎಂಬಂತಾಯಿತು.

‘ಮೀನು ಉತ್ಪಾದನೆ ಕೇಂದ್ರಕ್ಕೆ ಕಾವಲುಗಾರರೇ ಇಲ್ಲ. ಕೇಂದ್ರದ ಆವರಣದಲ್ಲಿ 35 ಮೀನು ಕೊಳ (ಪಾಂಡ್‌) ನಿರ್ಮಾಣ ಮಾಡಲಾಗಿದೆ. ಸಾವಿರಾರು ತೇಗ, ಬೀಟೆ ಮರಗಳಿಗೆ ಅವುಗಳಿಗೆ ರಕ್ಷಣೆಯೇ ಇಲ್ಲವಾಗಿದೆ. ಕುಡುಕರ ಹಾವಳಿ ವಿಪರೀತವಾಗಿದೆ. ರಾತ್ರಿಯ ವೇಳೆ ಅಲ್ಲಿ ಓಡಾಡಲು ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಇಲ್ಲಿಯೇ ಇದೆ. ಆದರೆ ಅವರು ಇಲ್ಲಿಗೆ ಬರುವುದೇ ಅಪರೂಪವಾಗಿದೆ’ ಎಂದು ಗೋಪಾಲಪುರ ಗ್ರಾಮಸ್ಥ ಶ್ರೀನಿವಾಸ್‌ಗೌಡ ಆರೋಪಿಸಿದರು.

ದುರ್ವಾಸನೆ: ಕೇಂದ್ರದ ಆವರಣದಲ್ಲಿರುವ ಎಲ್ಲಾ ಕೊಳಗಳಲ್ಲಿ ನೀರು ತುಂಬಿದೆ. ಆದರೆ ಆ ನೀರನ್ನು ಸ್ವಚ್ಛಗೊಳಿಸದ ಕಾರಣ ನೀರು ಕೊಳಚೆಯಾಗಿದ್ದು ಸುತ್ತಲೂ ದುರ್ವಾಸನೆ ಬೀರುತ್ತಿದೆ. ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ಮೀನು ಸಾಕಣೆ ಕೇಂದ್ರ ಕಪ್ಪೆ, ಹಾವು, ಕ್ರಿಮಿ, ಕೀಟಗಳ ವಾಸಸ್ಥಳವಾಗಿ ಮಾರ್ಪಟ್ಟಿದೆ. ಹಲವು ಕೊಳಗಳಲ್ಲಿ ಜೊಂಡು, ವಡಿಕೆ, ಮುಳ್ಳಿನ ಗಿಡಗಳು ಬೆಳೆದು ನಿಂತಿವೆ.

‘ಎಲ್ಲಾ ಕೊಳಗಳಿಗೆ ನೀರು ಪೂರೈಸಲು ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪೈಪ್‌ಗಳು ಹಾಗೂ ಇತರ ವಸ್ತುಗಳು ಕಳ್ಳಕಾಕರ ಪಾಲಾಗಿವೆ. ಕೇಂದ್ರದಲ್ಲಿರುವ ಬೆಲೆಬಾಳುವ ಮರಗಳು ಕೂಡ ಕಳ್ಳಕಾಕರ ಪಾಲಾಗುವ ಅಪಾಯವಿದೆ’ ಎಂದು ಸ್ಥಳೀಯರು ದೂರಿದರು.

ಮೀನುಮರಿಗಳ ಮಾರಣ ಹೋಮ
ಕಳೆದವಾರ ಸುರಿದ ಭಾರಿ ಮಳೆಯಿಂದಾಗಿ ನೀರು ಮೀನು ಮರಿ ಸಾಕಣೆ ಕೇಂದ್ರದೊಳಕ್ಕೆ ನುಗ್ಗಿದೆ. ಹೀಗಾಗಿ ಕೊಳದಲ್ಲಿದ್ದ ಅಲ್ಪಸಲ್ಪ ಮೀನು ಮರಿಗಳು ಕೊಚ್ಚಿ ಹೋಗಿ ಮೃತಪಟ್ಟಿದೆ. ಪ್ರತಿ ಬಾರಿ ಮಳೆ ಬಂದಾಗಲೂ ಇಲ್ಲಿ ಮೀನು ಮರಿಗಳು ಸಾವನ್ನಪ್ಪುವುದು ಸಾಮಾನ್ಯವಾಗಿದೆ.

ಗೋಪಾಲಪುರ ಕೆರೆ ಹಾಗೂ ನಾಲೆಯ ಕೆಳಭಾಗದಲ್ಲೇ ಮೀನು ಸಾಕಣೆ ಕೇಂದ್ರವಿದ್ದು ಮೀನು ಸಾಕಣೆಗೆ ಅಡ್ಡಿಯಾಗಿದೆ. ಹಿನ್ನೀರು ಕೊಳಗಳಿಗೆ ನುಗ್ಗುತ್ತಿರುವ ಕಾರಣ ಮೀನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

‘ಕೇಂದ್ರದ ಅವೈಜ್ಞಾನಿಕ ನಿರ್ಮಾಣದಿಂದಾಗಿ ಮಳೆಗಾಲದಲ್ಲಿ ಮೀನು ಸಾಕಣೆ ಸಾಧ್ಯವಾಗುತ್ತಿಲ್ಲ. ಸದಾ ಕಾಲ ನೀರು ತೆರವುಗೊಳಿಸಿ ಮೀನು ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಸ್ಥಳೀಯರು ಕೇಂದ್ರದ ಪರಿಕರಗಳನ್ನು ಕದ್ದೊಯ್ದಿದ್ದಾರೆ. ಕಿಡಿಗೇಡಿಗಳ ತಡೆಗೆ ಬೃಹತ್‌ ರಕ್ಷಣಾ ಗೋಪುರ ನಿರ್ಮಿಸಬೇಕು, ಆದರೆ ಹಣಕಾಸಿನ ಕೊರತೆ ಇದೆ’ ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಬಬಿನ್‌ ಬೋಪಣ್ಣ ಹೇಳಿದರು.

ಅಪಾಯಕ್ಕೆ ಆಹ್ವಾನಿಸುತ್ತಿದೆ ಬಾವಿ
ಮೀನು ಸಾಕಣೆ ಕೊಳಗಳಿಗೆ ನೀರು ಪೂರೈಸಲು ಕೇಂದ್ರದ ಆವರಣದಲ್ಲಿ ತೆರೆದ ಬಾವಿಯೊಂದಿದೆ. ಆ ಬಾವಿಗೆ ರಕ್ಷಣೆ ಇಲ್ಲದ ಕಾರಣ ಯುವಕರು ಅಲ್ಲಿ ಈಜಾಡಲು ತೆರಳುತ್ತಾರೆ. ಮಂಡ್ಯ ನಗರ ಸೇರಿ ವಿವಿಧೆಡೆಯಿಂದ ಯುವಕರು ಅಲ್ಲಿಗೆ ತೆರಳಿ ಈಜಾಡುತ್ತಾರೆ.

ಕೆಲವು ವೇಳೆ ಯುವಕರು ಕುಡಿದ ಮತ್ತಿನಲ್ಲಿ ಈಜಾಡುವ ಕಾರಣ ಯಾವುದೇ ಸಮಯದಲ್ಲಿ ಅವಘಡ ಸಂಭವಸಬಹುದು. ಹೀಗಾಗಿ ಬಾವಿಗೆ ಬೇಲಿ ಹಾಕಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT