ಶನಿವಾರ, ಡಿಸೆಂಬರ್ 14, 2019
21 °C

ಚಪ್ಪಲಿ ಎಸೆತ: ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಕೆ.ಆರ್‌.ಪೇಟೆಯಲ್ಲಿ ಸೋಮವಾರ ಸಚಿವ ಜೆ.ಮಾಧುಸ್ವಾಮಿ, ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಅವರ ಮೇಲೆ ಚಪ್ಪಲಿ ಎಸೆದ ಆರೋಪದ ಮೇಲೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಿದ್ದಾರೆ.

ಸೋಮವಾರ ರಾತ್ರಿ ಬಂಡಿಹೊಳೆ ಗ್ರಾಮದ ದೀಪು ಎಂಬಾತನನ್ನು ಬಂಧಿಸಲಾಗಿತ್ತು. ಮಂಗಳವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಜೆಡಿಎಸ್‌ ಕಾರ್ಯಕರ್ತರು ಎಂದು ಶಂಕಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 143, 341, 323, 353, 504 ಅಡಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಬುಧವಾರ ಕೆ.ಆರ್‌.ಪೇಟೆಗೆ ದಕ್ಷಿಣ ವಲಯದ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ವಿಪುಲ್‌ ಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಕ್ಷೇತ್ರ ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ಪಡೆ ನಿಯೋಜನೆ ಮಾಡಲಾಗುವುದು. ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರಿಗೆ ಭದ್ರತೆ ನೀಡಲಾಗಿದೆ. ರೌಡಿಶೀಟರ್‌ಗಳು, ಜಾಮೀನಿನ ಮೇಲೆ ಬಿಡುಗಡೆಯಾದವರಿಂದ ಅಪರಾಧಿಕ ಪ್ರಕರಣಗಳಲ್ಲಿ ಭಾಗಿಯಾಗದಂತೆ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

ಎರಡು ನಾಮಪತ್ರ ತಿರಸ್ಕೃತ: ಬುಧವಾರ ನಡೆದ ನಾಮಪತ್ರ ಪರಿಶೀಲನೆಯಲ್ಲಿ 2 ನಾಮಪತ್ರ ತಿರಸ್ಕೃತಗೊಂಡಿವೆ. ಉಪ ಚುನಾವಣೆ ಮುಂದೂಡುವುದಕ್ಕೂ ಮೊದಲು ಅ.23ರಂದು ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಲ್‌.ದೇವರಾಜು ಅವರು ಎ ಹಾಗೂ ಬಿ ಫಾರಂ ಸಲ್ಲಿಸದ ಕಾರಣ ಅವರ ನಾಮಪತ್ರ ತಿರಸ್ಕೃತ ಗೊಂಡಿದೆ. ಪಕ್ಷೇತರ ಅಭ್ಯರ್ಥಿಯಾಗಿ ಎರಡು ನಾಮಪತ್ರ ಸಲ್ಲಿಸಿದ್ದ ದೇವೇಗೌಡ ಅವರ ಒಂದು ನಾಮಪತ್ರ ತಿರಸ್ಕೃತಗೊಂಡಿದೆ.

ಪ್ರತಿಕ್ರಿಯಿಸಿ (+)