ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಜೀವನ ಮಿಷನ್‌: ಮಂಡ್ಯದಲ್ಲಿ ಅನವಶ್ಯಕ ಕಾಮಗಾರಿ

ಯೋಜನೆ ಅನುಷ್ಠಾನದಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ; ಅಧಿಕಾರಿಗಳ ವಿರುದ್ಧ ಆಕ್ರೋಶ
Last Updated 21 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ್‌ ಮಿಷನ್‌ ಕಾಮಗಾರಿ ಅನುಷ್ಠಾನದಲ್ಲಿ ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ಅಧಿಕಾರಿ ವರ್ಗದಿಂದ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು ಹಲವು ದೂರುಗಳು ದಾಖಲಾಗಿವೆ.

ಕಾಮಗಾರಿ ಆರಂಭವಾಗಿ ವರ್ಷವಾಗುತ್ತಿದ್ದರೂ ಜಿಲ್ಲೆಯ ಯಾವುದೇ ಮೂಲೆಯಲ್ಲಿ ಒಂದು ಹನಿ ನೀರು ಕೊಡಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೂ ಕೇವಲ ಶೇ 50ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮಾನದಂಡ ಉಲ್ಲಂಘನೆ ಮಾಡಿ ಅನವಶ್ಯಕ ಕಾಮಗಾರಿ ಮಾಡುತ್ತಿರುವ ಅಧಿಕಾರಿಗಳು ಗುತ್ತಿಗೆದಾರರು ಬಿಲ್‌ ಮಾಡಿಸಿಕೊಳ್ಳುವುದಕ್ಕಷ್ಟೇ ಆದ್ಯತೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಕಾರ್ಯದರ್ಶಿ ಕಚೇರಿಗೆ ಹಲವು ದೂರುಗಳು ದಾಖಲಾಗಿವೆ.

ನಿಯಮಾನುಸಾರ ಹಳ್ಳಿಗಳಲ್ಲಿ ನೀರಿನ ಲಭ್ಯತೆ ಆಧಾರದ ಮೇಲೆ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ, ಪೈಪ್‌ ಅಳವಡಿಕೆ ಕಾಮಗಾರಿ ಮಾಡಬೇಕು. ಅದಕ್ಕೂ ಮೊದಲು ‘ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ’ ಅನುಮೋದನೆ ಪಡೆಯಬೇಕು. ಆದರೆ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಕಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಗ್ರಾಮೀಣ ಜನರು ಆರೋಪಿಸುತ್ತಾರೆ.

ಈಗಾಗಲೇ ಪೈಪ್‌ಲೈನ್‌ ಅಳವಡಿಸಿದ್ದರೆ, ಅದು ಸುಸ್ಥಿತಿಯಲ್ಲಿದ್ದರೆ ಅಲ್ಲಿಗೆ ಮತ್ತೆ ಪೈಪ್‌ಲೈನ್‌ ಅಳವಡಿಸುವಂತಿಲ್ಲ. ಅನುದಾನ ಸದುಪಯೋಗ ಈ ಮೂಲಕ ಸಾಧ್ಯವಾಗುತ್ತದೆ. ಆದರೆ, ಅಧಿಕಾರಿಗಳು ಹಳೆಯ ಪೈಪ್‌ಲೈನ್‌ ಚೆನ್ನಾಗಿದ್ದರೂ ಮತ್ತೆ ಇನ್ನೊಂದು ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಮಾಡುತ್ತಿದ್ದಾರೆ.

ಕಾಮಗಾರಿ ಹೆಸರಿನಲ್ಲಿ ಸುಸ್ಥಿತಿಯಲ್ಲಿರುವ ಗ್ರಾಮೀಣ ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಡಾಂಬರ್‌, ಸಿಮೆಂಟ್‌ ರಸ್ತೆಗಳು ಹಾಳಾಗಿವೆ. ಅವೈಜ್ಞಾನಿಕವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ರಸ್ತೆಯ ಎರಡೂ ಕಡೆ ರಸ್ತೆ ಅಗೆದಿದ್ದಾರೆ. ಒಮ್ಮೆ ರಸ್ತೆ ಅಗೆದರೆ ಅದನ್ನು ದುರಸ್ತಿ ಮಾಡುವುದು ಅದೇ ಗುತ್ತಿಗೆದಾರನ ಜವಾಬ್ದಾರಿ. ಆದರೆ ಅವರು ರಸ್ತೆ ಅಗೆದು ಹಾಗೆಯೇ ಬಿಟ್ಟು ಹೋಗುತ್ತಿರುವುದು ಗ್ರಾಮೀಣ ಜನರಿಗೆ ತಲೆನೋವಾಗಿದೆ.

‘ನಮ್ಮ ಊರಿನಲ್ಲಿ ಪೈಪ್‌ಲೈನ್‌ ತುಂಬಾ ಚೆನ್ನಾಗಿತ್ತು, ಆರು ತಿಂಗಳ ಹಿಂದಷ್ಟೇ ಹೊಸ ಪೈಪ್‌ಲೈನ್‌ ಅಳವಡಿಸಲಾಗಿತ್ತು. ಅದೇ ಪೈಪ್‌ಲೈನ್‌ ಮೂಲಕ ಜಲಜೀವನ ಮಿಷನ್‌ ಯೋಜನೆ ಅನುಷ್ಠಾನ ಮಾಡಬಹುದಾಗಿತ್ತು. ಆದರೆ ಅಧಿಕಾರಿಗಳು ಅನಾವಶ್ಯಕವಾಗಿ ಇನ್ನೊಮ್ಮೆ ಪೈಪ್‌ಲೈನ್‌ ಅಳವಡಿಸುತ್ತಿದ್ದಾರೆ. ಎಲ್ಲೆಡೆ ಕಳಪೆ ಉಪಕರಣ ಅಳವಡಿಸಿದ್ದಾರೆ. ಈ ಬಗ್ಗೆ ಎಂಜಿನಿಯರ್‌ಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು ಅಧಿಕಾರಿಗಳು ಶಾಮೀಲಾಗಿದ್ಧಾರೆ’ ಎಂದು ಮದ್ದೂರು ತಾಲ್ಲೂಕು ಬೆಸಗರಹಳ್ಳಿಯ ನಾಗರಾಜ್‌ ಹೇಳಿದರು.

ಮತ್ತೆ ಮತ್ತೆ ಕೊಳವೆಬಾವಿ: ಜಿಲ್ಲೆಯ ವಿವಿಧೆಡೆ ಕೊಳವೆ ಬಾವಿ ಕೊರೆಸುವಲ್ಲೂ ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ನಿಯಮಾನುಸಾರ ಕೊಳವೆಬಾವಿಯಲ್ಲಿ ಉತ್ತಮ ನೀರು ದೊರೆತರೆ ಮತ್ತೆ ಬಾವಿ ಕೊರೆಸುವ ಅವಶ್ಯಕತೆ ಇಲ್ಲ. ಆದರೆ, ಕೊಳವೆಬಾವಿಗಳು ಸುಸ್ಥಿತಿಯಲ್ಲಿದ್ದರೂ ಮತ್ತೆ ಮತ್ತೆ ಕೊಳವೆಬಾವಿ ಕೊರೆಸಲಾಗಿದೆ.

‘5 ಇಂಚು ನೀರು ಇದ್ದರೂ ಮತ್ತೆ ಕೊಳವೆಬಾವಿ ಕೊರೆಸುವ ಅವಶ್ಯಕತೆ ಏನಿತ್ತು? 200 ಮನೆಗೆ ನೀರು ಪೂರೈಸಲು 1 ಕೊಳವೆಬಾವಿ ಸಾಕಿತ್ತು, ಆದರೆ ಇನ್ನೊಂದು ಕೊಳವೆಬಾವಿ ಕೊರೆಸಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಈ ಬಗ್ಗೆ ಎಂಜಿನಿಯರ್‌ಗೆ ದೂರು ನೀಡಲಾಗಿದೆ’ ಎಂದು ಮಳವಳ್ಳಿ ತಾಲ್ಲೂಕು ಬಿ.ಜಿ.ಪುರದ ಮಾಜಿ ಗ್ರಾ.ಪಂ ಸದಸ್ಯರೊಬ್ಬರು ದೂರಿದರು.

ಬಹುತೇಕ ಹೊರ ಜಿಲ್ಲೆ ಹಾಗೂ ಹೊರರಾಜ್ಯದ ಗುತ್ತಿಗೆದಾರರಿಗೆ ಕಾಮಗಾರಿ ಅನುಷ್ಠಾನದ ಗುತ್ತಿಗೆ ನೀಡಲಾಗಿದೆ. ಸ್ಥಳೀಯ ಗುತ್ತಿಗೆದಾರರು ಕೇವಲ ಉಪ ಗುತ್ತಿಗೆ ಪಡೆದಿದ್ಧಾರೆ. ಮುಖ್ಯ ಗುತ್ತಿಗೆದಾರರು ಗ್ರಾಮಿಣ ಜನರ ಕೈಗೆ ಸಿಗದ ಕಾರಣ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ಹಳ್ಳಿ ಜನರು ಆರೋಪಿಸುತ್ತಾರೆ.

******

ಹೈಕೋರ್ಟ್‌ಗೆ ದೂರು: ಎಚ್ಚರಿಕೆ

ಜಲಜೀವನ ಮಿಷನ್‌ ಕಾಮಗಾರಿ ಅನುಷ್ಠಾನದಲ್ಲಿ ಜಿಲ್ಲೆಯಾದ್ಯಂತ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು ಅಧಿಕಾರಿಗಳು ಯೋಜನೆಯ ಉದ್ದೇಶವನ್ನು ಹಾಳುಗೆಡವುತ್ತಿದ್ದಾರೆ. ಸರ್ಕಾರದ ನಿಯಮ ಪಾಲನೆ ಮಾಡುತ್ತಿಲ್ಲ. ಕಾಮಗಾರಿ ನೆಪದಲ್ಲಿ ರಸ್ತೆ, ಚರಂಡಿ ಹಾಳು ಮಾಡಿ ಗ್ರಾಮೀಣ ಜನರ ನೆಮ್ಮದಿ ಕಸಿದುಕೊಂಡಿದ್ದಾರೆ ಎಂದು ಆರೋ‍ಪಿಸಿ ಮದ್ದೂರು ತಾಲ್ಲೂಕು ಆನೆದೊಡ್ಡಿ ಗ್ರಾಮದ ಎ.ಟಿ.ರಾಮೇಗೌಡ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ.

‘ಸರ್ಕಾರ ಮಧ್ಯಪ್ರವೇಶಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು, ಅಧಿಕಾರಿಗಳು ಪರ್ಸೆಂಟೇಜ್‌ ಲೆಕ್ಕದಲ್ಲಿ ಲಂಚ ಪಡೆಯುತ್ತಿದ್ದು ಆ ಬಗ್ಗೆ ತನಿಖೆ ನಡೆಸಬೇಕು, ತಪ್ಪೆಸಗಿರುವ ಅಧಿಕಾರಿಗಳಿಂದ ವಾಪಸ್‌ ಹಣ ಕಟ್ಟಿಸಿಕೊಳ್ಳಬೇಕು. ಇಲ್ಲದಿದ್ದರೆ ಜಿಲ್ಲೆಯ ಎಲ್ಲಾ ಅಧಿಕಾರಿಗಳನ್ನು ಪಕ್ಷಗಾರರನ್ನಾಗಿ ಮಾಡಿ ಹೈಕೋರ್ಟ್‌ಗೆ ದೂರು ಸಲ್ಲಿಸಲಾಗುವುದು’ ಎಂದು ರಾಮೇಗೌಡ ಎಚ್ಚರಿಸಿದರು.

*

ದೂರುಗಳ ಬಗ್ಗೆ ಪರಿಶೀಲಿಸಲಾಗುವುದು. ಯಾವುದೇ ಹಂತದಲ್ಲಿ ತಪ್ಪಾಗಿರುವುದು ಕಂಡುಬಂದರೂ ಅದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲಾಗುವುದು

– ತಮ್ಮಣ್ಣ, ತಮ್ಮಣ್ಣ, ಕಾರ್ಯಪಾಲಕ ಎಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT