ಬೆಳಿಗ್ಗೆ ಮದ್ದೂರಿನ ಎಪಿಎಂಸಿ ಮಾರುಕಟ್ಟೆಗೆ ಕಾಲಿಟ್ಟ ಕ್ಷಣವೇ ಒಂದು ವಿಷಯ ಸ್ಪಷ್ಟವಾಗುತ್ತದೆ. ಇಲ್ಲಿ ದಿನವನ್ನು ಗಡಿಯಾರವಲ್ಲ, ಲಾರಿಗಳ ಸರದಿ ನಿರ್ಧರಿಸುತ್ತದೆ. ತೋಟಗಳಿಂದ ಬಂದ ಎಳನೀರು ಗೊನೆಗಳ ರಾಶಿಗಳು ಒಂದರ ಹಿಂದೆ ಒಂದಾಗಿ ಇಳಿಯುತ್ತವೆ. ಕೂಲಿ ಕಾರ್ಮಿಕರ ಕೈಗಳು ನಿಲ್ಲುವುದೇ ಇಲ್ಲ. ಒಂದು ಲಾರಿ ಖಾಲಿಯಾಗುವಷ್ಟರಲ್ಲಿ ಮತ್ತೊಂದು ಲಾರಿ ಸರದಿಗೆ ಬರುತ್ತದೆ. ಹರಾಜು ಕಟ್ಟೆಗಳ ಬಳಿ ದರ ಮಾತುಕತೆಗಳು ನಡೆಯುತ್ತಿರುತ್ತವೆ. ಲಾರಿಗಳ ಸರದಿ ನಿಧಾನವಾಗಿ ಮುಂದೆ ಸರಿಯುತ್ತಾ, ಈ ಜಾಗದ ದಿನಚರಿಯನ್ನು ನಿರ್ಧರಿಸುತ್ತದೆ.

ಮಂಡ್ಯ ಸಮೀಪವಿರುವ ಮದ್ದೂರಿನ ಈ ಎಪಿಎಂಸಿ ಮಾರುಕಟ್ಟೆ ದೇಶದ ಪ್ರಮುಖ ಎಳನೀರು ವಹಿವಾಟು ಕೇಂದ್ರಗಳಲ್ಲಿ ಒಂದಾಗಿದೆ. ಬೆಂಗಳೂರು–ಮೈಸೂರು ಹೆದ್ದಾರಿಯ ಚನ್ನೇಗೌಡನದೊಡ್ಡಿ ಸಮೀಪ ಹರಡಿರುವ 6.12 ಎಕರೆ ಪ್ರಾಂಗಣ, ಬೇಸಿಗೆಯಲ್ಲಿ ತನ್ನ ಗರಿಷ್ಠ ಚಟುವಟಿಕೆಯನ್ನು ಕಾಣುತ್ತದೆ. ದಿನಕ್ಕೆ 150ಕ್ಕೂ ಹೆಚ್ಚು ಲಾರಿಗಳು ಲೋಡ್ ಆಗುವುದು ಇಲ್ಲಿ ಸಾಮಾನ್ಯ. ತಾಪಮಾನ ಏರಿದಂತೆ ಬೇಡಿಕೆ ಏರಿಕೆಯಾಗುತ್ತದೆ. ಅದಕ್ಕೆ ಅನುಗುಣವಾಗಿ ದರವೂ ಬದಲಾಗುತ್ತದೆ.

ಮದ್ದೂರಿನ ಎಳನೀರು ತನ್ನ ಗುಣಮಟ್ಟದಿಂದಲೇ ದೂರದ ಮಾರುಕಟ್ಟೆಗಳನ್ನು ತಲುಪಿದೆ. ಹೆಚ್ಚು ನೀರಿನ ಪ್ರಮಾಣ, ಸಿಹಿ ಮತ್ತು ತಾಜಾತನವೇ ಇದಕ್ಕೆ ವಿಶೇಷ ಬೇಡಿಕೆಯನ್ನು ತಂದಿವೆ. ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಗೋವಾ, ಅಹಮದಾಬಾದ್, ಚಂಡೀಗಡ, ಲಖನೌ ಹಾಗೂ ಜೈಪುರ ಸೇರಿದಂತೆ ಹಲವು ನಗರಗಳಿಗೆ ಇಲ್ಲಿಂದ ಸರಬರಾಜು ಆಗುತ್ತದೆ. ಮದ್ದೂರು ಎನ್ನುವ ಹೆಸರು ರಾಜ್ಯದೊಳಗೆ ‘ವಡೆ’ಯಿಂದ ಪ್ರಸಿದ್ಧಿಯಾದರೆ, ಹೊರ ರಾಜ್ಯಗಳಲ್ಲಿ ಈ ಎಳನೀರು ‘ಮದ್ದೂರು ಮಾಲ್’ ಎಂದೇ ಹೆಸರಾಗಿದೆ.

ಈ ಮಾರುಕಟ್ಟೆಯ ಚಟುವಟಿಕೆ ವರ್ಷಪೂರ್ತಿ ಒಂದೇ ತರಹ ಇರುವುದಿಲ್ಲ. ಮಳೆಗಾಲ ಮತ್ತು ಚಳಿಗಾಲದಲ್ಲಿ ಚಟುವಟಿಕೆ ಕುಂಠಿತವಾಗಿರುತ್ತದೆ. ಆದರೆ ಫೆಬ್ರುವರಿಯಿಂದ ಜುಲೈವರೆಗೆ ವಹಿವಾಟು ಉತ್ತುಂಗದಲ್ಲಿರುತ್ತದೆ. ಗಾತ್ರ, ರುಚಿ, ನೀರಿನ ಪ್ರಮಾಣ ಈ ಅಂಶಗಳ ಆಧಾರದ ಮೇಲೆ ದರ ನಿಗದಿಯಾಗುತ್ತದೆ.

ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ತೋಟಗಳಿಂದ ಇಲ್ಲಿಗೆ ಎಳನೀರು ತರಲಾಗುತ್ತದೆ. ರೈತರಿಂದ ನೇರವಾಗಿ ಖರೀದಿ ಮಾಡುವುದಕ್ಕಿಂತ ಮಧ್ಯವರ್ತಿಗಳ ಪಾತ್ರವೇ ಹೆಚ್ಚು. ಅವರು ತೋಟಗಳಿಗೆ ತೆರಳಿ ಸ್ಥಳದಲ್ಲೇ ಹಣ ನೀಡಿ ಕೊಯ್ಲು ಮಾಡಿಸಿ ಮಾರುಕಟ್ಟೆಗೆ ತರುತ್ತಾರೆ. 367 ಪರವಾನಗಿ ಪಡೆದ ವರ್ತಕರು ಗುಣಮಟ್ಟದ ಆಧಾರದ ಮೇಲೆ ದರ ನಿಗದಿಪಡಿಸುತ್ತಾರೆ. ಹರಾಜು ಕಟ್ಟೆಗಳಲ್ಲಿ ನಡೆಯುವ ಮಾತುಕತೆಗಳ ನಂತರ, ಎಳನೀರನ್ನು ಲಾರಿಗಳ ಮೂಲಕ ವಿವಿಧ ನಗರಗಳಿಗೆ ಕಳುಹಿಸಲಾಗುತ್ತದೆ. ಈ ಪ್ರಕ್ರಿಯೆ ಪ್ರತಿದಿನವೂ ಒಂದೇ ರೀತಿಯಲ್ಲಿ ನಡೆಯುತ್ತಿದ್ದರೂ, ಅದರ ಹಿಂದೆ ಇರುವ ಶ್ರಮ ದೊಡ್ಡದು.

ಈ ವ್ಯವಸ್ಥೆಯಲ್ಲಿ ಎಲ್ಲರೂ ಭಾಗಿಯಾಗಿದ್ದರೂ, ಲಾಭದ ಹಂಚಿಕೆ ಸಮವಾಗಿಲ್ಲ. ‘ತೋಟದಲ್ಲೇ ₹28ರಿಂದ ₹32ಕ್ಕೆ ಎಳನೀರು ತೆಗೆದುಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ₹45ರಿಂದ ₹52ಕ್ಕೆ ಮಾರಾಟವಾಗುತ್ತದೆ. ನಗರಗಳಲ್ಲಿ ಗ್ರಾಹಕರು ಇನ್ನೂ ಹೆಚ್ಚಿನ ದರ ಕೊಡುತ್ತಾರೆ’ ಎಂದು ರೈತ ರಾಮೇಗೌಡ ಹೇಳುತ್ತಾರೆ.

ರೈತ ಸಂಘಟನೆಗಳ ಅಭಿಪ್ರಾಯವೂ ಅದೇ ದಿಕ್ಕಿನಲ್ಲಿ ಇದೆ. ‘ಎಪಿಎಂಸಿಗಳು ರೈತರಿಗಾಗಿ ಎಂಬ ಮಾತು ಇದೆ. ಆದರೆ ಇಲ್ಲಿ ವ್ಯವಹಾರದ ನಿಯಂತ್ರಣ ಮಧ್ಯವರ್ತಿಗಳಲ್ಲೇ ಹೆಚ್ಚು. ರೈತರಿಗೆ ನೇರವಾಗಿ ಮಾರಾಟ ಮಾಡಲು ಬೇಕಾದ ವ್ಯವಸ್ಥೆ ಇಲ್ಲ’ ಎಂದು ರೈತ ಮುಖಂಡ ಕೆ. ಬೋರಯ್ಯ ಹೇಳುತ್ತಾರೆ. ಮಾರುಕಟ್ಟೆಯ ವಿಸ್ತಾರ ಹೆಚ್ಚಾದಂತೆ, ರೈತರ ಪಾಲಿನ ನಿಯಂತ್ರಣ ಕಡಿಮೆಯಾಗುತ್ತಿದೆ ಎನ್ನುವ ಆತಂಕವೂ ವ್ಯಕ್ತವಾಗುತ್ತದೆ.

‘ನೀರಿನ ಪ್ರಮಾಣ ಹೆಚ್ಚು ಇರುವುದರಿಂದ ಇಲ್ಲಿನ ಎಳನೀರಿಗೆ ಬೇಡಿಕೆ ಇದೆ. ಆದರೆ ನಿರಂತರ ಕೊಯ್ಲು ಮಾಡಿದರೆ ಮರದ ಆಯುಷ್ಯ ಕಡಿಮೆಯಾಗುತ್ತದೆ’ ಎಂದು ಮಳವಳ್ಳಿ ರೈತ ನಾಗರಾಜು ತಿಳಿಸುತ್ತಾರೆ. ಅಂದರೆ ಮಾರುಕಟ್ಟೆಯ ಬೇಡಿಕೆ ಮತ್ತು ತೋಟಗಳ ಸ್ಥಿರತೆ ನಡುವೆ ಸಮತೋಲನ ಕಾಪಾಡುವುದು ರೈತರಿಗೆ ಸವಾಲಾಗಿದೆ.

ಈ ಮಾರುಕಟ್ಟೆ ಕೇವಲ ವಹಿವಾಟಿನ ಸ್ಥಳವಲ್ಲ; ಸಾವಿರಾರು ಜನರ ಜೀವನ ಇದರೊಂದಿಗೆ ಬೆಸೆದುಕೊಂಡಿದೆ. ತೆಂಗು ಬೆಳೆಗಾರರು, 367 ವರ್ತಕರು, 68 ಕೂಲಿ ಕಾರ್ಮಿಕರು ಮತ್ತು ಹೊರ ರಾಜ್ಯಗಳ ವ್ಯಾಪಾರಿಗಳೆಲ್ಲಾ ಈ ಚಟುವಟಿಕೆಯ ಭಾಗ. ‘ಇಪ್ಪತ್ತೈದು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಬೇಸಿಗೆಯಲ್ಲಿ ದಿನದ ಆದಾಯ ₹1000 ರಿಂದ ₹1500ವರೆಗೆ ಬರುತ್ತದೆ. ಆದರೆ ಕೆಲಸವೂ ಅಷ್ಟೇ ಕಷ್ಟಕರ’ ಎಂದು ಕಾರ್ಮಿಕರಾದ ಶಂಕರ್ ಹೇಳುತ್ತಾರೆ.

‘ಇಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಎಲ್ಲೆಡೆ ಕಸದ ರಾಶಿ ಕಾಣಿಸುವುದು ಸಾಮಾನ್ಯ. ಶೌಚಾಲಯಗಳ ಸ್ಥಿತಿ ತೀರಾ ಕೆಟ್ಟದಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಬಾಯಾರಿದರೆ ಎಳನೀರನ್ನೇ ಕುಡಿಯಬೇಕಷ್ಟೆ. ಹೊರ ರಾಜ್ಯದಿಂದ ಬರುವ ವರ್ತಕರು, ಕಾರ್ಮಿಕರು ಮೂಗು ಮುರಿಯುತ್ತಾರೆ’ ಎಂದು ವರ್ತಕರಾದ ವಿಶ್ವನಾಥ್, ಮಂಜೇಶ್, ರವಿ ಚನ್ನಸಂದ್ರ ಬೇಸರ ವ್ಯಕ್ತಪಡಿಸಿದರು.

ಅಂಕಿಅಂಶಗಳ ಮಟ್ಟದಲ್ಲಿ ಮಾರುಕಟ್ಟೆ ವಿಸ್ತರಿಸುತ್ತಿದೆ. 2024–25ರಲ್ಲಿ 9.32 ಕೋಟಿ ಎಳನೀರು ಆವಕದಿಂದ ₹193 ಕೋಟಿ ವಹಿವಾಟು ನಡೆದಿದ್ದರೆ, 2025–26ರಲ್ಲಿ ಅದು 11.59 ಕೋಟಿಗೆ ಏರಿ ₹245 ಕೋಟಿಗೆ ತಲುಪಿದೆ. ಈ ಏರಿಕೆ ಮಾರುಕಟ್ಟೆಯ ಬೇಡಿಕೆಯನ್ನು ತೋರಿಸಿದರೂ, ಅದಕ್ಕೆ ತಕ್ಕಂತೆ ಸುಧಾರಣೆಗಳು ನಡೆದಿವೆಯೇ ಎಂಬ ಪ್ರಶ್ನೆ ಉಳಿದಿದೆ. ಸಿಬ್ಬಂದಿ ಕೊರತೆ ಇನ್ನೂ ಪರಿಹಾರವಾಗಿಲ್ಲ.

ಇನ್ನೊಂದೆಡೆ, ಸೆಸ್ ತಪ್ಪಿಸಲು ಕೆಲ ವ್ಯಾಪಾರಿಗಳು ನೇರವಾಗಿ ತೋಟಗಳಲ್ಲೇ ಖರೀದಿ ಮಾಡುವ ಪ್ರವೃತ್ತಿಯೂ ಇದೆ. ಮಂಡ್ಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಟ್ರಕ್ಗಳನ್ನು ನಿಲ್ಲಿಸಿ ಎಳನೀರು ಸಂಗ್ರಹಿಸುವುದು ಸಾಮಾನ್ಯವಾಗಿದೆ. ಇದರಿಂದ ಮಾರುಕಟ್ಟೆಯ ಅಧಿಕೃತ ವಹಿವಾಟಿಗೂ ಹೊಡೆತ ಬೀಳುತ್ತಿದೆ.

ಮದ್ದೂರಿನ ಎಳನೀರು ಮಾರುಕಟ್ಟೆ ಒಂದು ದೊಡ್ಡ ಆರ್ಥಿಕ ಚಟುವಟಿಕೆಯ ಕೇಂದ್ರ. ಆದರೆ ಅದರ ಒಳ–ಹೊರಗೆ ನೋಡಿದಾಗ, ವಹಿವಾಟಿನ ಬೆಳವಣಿಗೆ ಜೊತೆಗೆ ಸಮಾನವಾಗಿ ಮುಂದೆ ಸಾಗದ ಕೆಲವು ಅಂಶಗಳು ಸ್ಪಷ್ಟವಾಗುತ್ತವೆ.

ಬೇಸಿಗೆಯಲ್ಲಿ ಈ ಮಾರುಕಟ್ಟೆ ಹೆಚ್ಚು ಚಟುವಟಿಕೆಯಿಂದ ತುಂಬಿದರೂ, ಅದೇ ಸಮಯದಲ್ಲಿ ಅದರ ಕೊರತೆಗಳನ್ನು ಇನ್ನೂ ಸ್ಪಷ್ಟವಾಗಿ ತೋರಿಸುತ್ತದೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-51-1778189024

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.