ಸೋಮವಾರ, ಸೆಪ್ಟೆಂಬರ್ 26, 2022
22 °C
ಮಳವಳ್ಳಿ– ಮೈಸೂರು ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು; ಅಧಿಕಾರಿಗಳ ವಿರುದ್ಧ ಆಕ್ರೋಶ

ಮಳವಳ್ಳಿ: ಸಂಚಾರ ದುಸ್ತರ; ಸವಾರರ ಹಿಡಿಶಾಪ

ಟಿ.ಕೆ.ಲಿಂಗರಾಜು Updated:

ಅಕ್ಷರ ಗಾತ್ರ : | |

Prajavani

ಮಳವಳ್ಳಿ: ಪಟ್ಟಣದಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ–33 ರಸ್ತೆಯು ಗುಂಡಿಗಳಿಂದ ತುಂಬಿದೆ. ಇಲ್ಲಿ ವಾಹನ ಸಂಚಾರ ದುಸ್ತರವಾಗಿದ್ದು, ಸವಾರರು ಹಾಗೂ ಪ್ರಯಾಣಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ತಾಲ್ಲೂಕು ಕೇಂದ್ರದಿಂದ ದಿನನಿತ್ಯ ಸಾವಿರಾರು ವಾಹನಗಳು ಪಟ್ಟಣದಿಂದ ಕಿರುಗಾವಲು, ಬನ್ನೂರು ಮಾರ್ಗವಾಗಿ ಮೈಸೂರಿಗೆ ಸಂಚರಿಸುತ್ತವೆ. ಆದರೆ, ಈ ರಸ್ತೆಯಲ್ಲಿ ನೂರಾರು ಗುಂಡಿಗಳು ಬಿದ್ದಿವೆ. ಮಳೆಗಾಲ ಪ್ರಾರಂಭಗೊಂಡರೆ ದ್ವಿಚಕ್ರ ವಾಹನಗಳು ಸೇರಿದಂತೆ ಬಸ್‌ ಗಳು ಓಡಾಡಲು ತೀವ್ರ ಕಷ್ಟವಾಗುತ್ತದೆ. 

ಪಟ್ಟಣದ ವ್ಯಾಪ್ತಿಯಲ್ಲಿ ಅನಂತ್‌ರಾಂ ವೃತ್ತದ ಬಳಿ, ಎಸ್.ಬಿ.ಎಂ ಬ್ಯಾಂಕ್ ಹಾಗೂ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಗುಂಡಿಗಳು ಬಿದ್ದಿವೆ. ರಸ್ತೆಗೆ ಡಾಂಬರು ಹಾಕಿ ವರ್ಷಗಳೇ ಉರುಳಿದ್ದು, ಈಗ ಡಾಂಬರು ಎಲ್ಲಿದೆ ಎಂದು ಹುಡುಕಾಟ ನಡೆಸಬೇಕಿದೆ. ಎಲ್ಲ ಕಡೆ ಜಲ್ಲಿ ಕಲ್ಲುಗಳು ಮೇಲೆ ಬಂದು ರಸ್ತೆಯಲ್ಲಿ ಹರಡಿಕೊಂಡು ಎರಡು ಅಡಿಗಳಷ್ಟು ಗುಂಡಿ ಬಿದ್ದಿವೆ. ಇದರಿಂದ ದ್ವಿಚಕ್ರ ವಾಹನಗಳು ಹಲವು ಬಾರಿ ಆಯಾ ತಪ್ಪಿ ಬಿದ್ದು, ಸವಾರರು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಿ ಈಗ ಮಳೆ ನೀರು ತುಂಬಿಕೊಂಡು ವಾಹನ ಸವಾರರಿಗೆ ಮತ್ತಷ್ಟು ಸಮಸ್ಯೆಯಾಗಿದೆ.

‘ಈ ರಸ್ತೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹತ್ತಾರು ಬಾರಿ ತೇಪೆ ಹಾಕಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಗುಂಡಿ ಮುಚ್ಚಿದ ಒಂದು ದಿನದೊಳಗೆ ಮತ್ತೆ ಕಾಣಿಸಿಕೊಂಡು, ರಸ್ತೆ ಮೊದಲ ಸ್ಥಿತಿಗೆ ಬರುತ್ತಿದೆ. ಕಳಪೆ ಕಾಮಗಾರಿಯೂ ಇದಕ್ಕೆ ಕಾರಣವಾಗಿದೆ’ ಎಂದು ಕಿರುಗಾವಲಿನ ರಾಜೇಶ್ ದೂರಿದ್ದಾರೆ.

ತಾಲ್ಲೂಕಿನ ಕಿರುಗಾವಲಿನಿಂದ ತಿ.ನರಸೀಪುರ ಹಾಗೂ ನಂಜನಗೂಡಿನ ಮಾರ್ಗದ ರಸ್ತೆಯಲ್ಲಿ ಚಿಕ್ಕಮಾಳಿಗೆಕೊಪ್ಪಲಿನಿಂದ ಕಲ್ಕುಣಿ ಗ್ರಾಮದ ಕೆರೆಯವರೆಗೆ ಸುಮಾರು 1 ಕಿ.ಮೀ.ನಷ್ಟು ಉದ್ದದ ರಸ್ತೆಯಲ್ಲಿ ನೂರಾರು ಗುಂಡಿಗಳು ಬಿದ್ದಿವೆ.

ತಾಲ್ಲೂಕಿನ ಟಿ.ಕಾಗೇಪುರದಿಂದ ತಳಗವಾದಿ ಸಂಪರ್ಕದ ರಸ್ತೆಯಲ್ಲಿ, ಮಾದಹಳ್ಳಿ ರಸ್ತೆ, ಹೊಸರೋಡ್ ರಸ್ತೆ ಸೇರಿದಂತೆ ಜಿಲ್ಲಾ ಪಂಚಾಯತಿ ಹಾಗೂ ಲೋಕೋಪಯೋಗಿ ಇಲಾಖೆಯ ಹತ್ತಾರು ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದರೂ ಅಧಿಕಾರಿಗಳು ಹಾಗೂ ಶಾಸಕರು ಕ್ರಮ ಕೈಗೊಳ್ಳುತ್ತಿಲ್ಲ.

***

ಗುಂಡಿ ಬಿದ್ದಿರುವ ರಸ್ತೆಗಳ ಅಭಿವೃದ್ಧಿಗೆ ಈಗಷ್ಟೇ ಅನುದಾನ ಬಂದಿದೆ. ಟೆಂಡರ್ ಕಾರ್ಯ ಪ್ರಗತಿಯಲ್ಲಿದ್ದು, ಗುಂಡಿ ಮುಕ್ತ ರಸ್ತೆಗಳನ್ನಾಗಿ ಮಾಡಲಾಗುವುದು.

–ಪುಟ್ಟಸ್ವಾಮಿ, ಎಇಇ, ಲೋಕೋಪಯೋಗಿ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು