ಮಂಗಳವಾರ, ಆಗಸ್ಟ್ 3, 2021
21 °C
ಆ.16ರಂದು ಮತದಾನ; ಕೊರೊನಾ ಸೋಂಕಿನ ನಡುವೆಯೂ ಗರಿಗೆದರಿದ ರಾಜಕೀಯ ಚಟುವಟಿಕೆ

ರಂಗೇರುತ್ತಿದೆ ಮಂಡ್ಯ ಡಿಸಿಸಿ ಬ್ಯಾಂಕ್‌ ಚುನಾವಣೆ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿಬಿ) ಆಡಳಿತ ಮಂಡಳಿ ಚುನಾವಣೆ ಘೊಷಣೆಯಾಗಿದ್ದು ಕೊರೊನಾ ಸೋಂಕಿನ ನಡುವೆಯೂ ಚುನಾವಣಾ ಕಣ ರಂಗೇರುತ್ತಿದೆ. ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಸಜ್ಜಾಗಿರುವ ಆಕಾಂಕ್ಷಿಗಳು ವಿವಿಧ ಸಹಕಾರ ಸಂಘಗಳ ಪ್ರತಿನಿಧಿ ಮತದಾರರ ಮನವೊಲಿಕೆಯಲ್ಲಿ ತೊಡಗಿದ್ದಾರೆ.

ಹಳೆಯ ಆಡಳಿತ ಮಂಡಳಿ ಜೂನ್‌ 13ರಂದು ಕೊನೆಗೊಂಡಿದ್ದು ಹೊಸ ಆಡಳಿತ ಮಂಡಳಿ ರಚನೆಗೆ ಆ.16ರಂದು ಚುನಾವಣೆ ನಡೆಸುವಂತೆ ಸಹಕಾರ ಸಂಘಗಳ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಜೂನ್‌ 25ರಂದು ಅಧಿಸೂಚನೆ ಹೊರಬಿದ್ದಿದ್ದು ನಾಮಪತ್ರ ಸಲ್ಲಿಸಲು ಆ.1ರಿಂದ ಆ.8ರವರೆಗೂ ಅವಕಾಶ ಕಲ್ಪಿಸಲಾಗಿದೆ.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮತದಾನಕ್ಕೆ ಅರ್ಹತೆ ಪಡೆದಿರುವ ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಪ್ರತಿನಿಧಿಗಳು ಜಾಗೃತರಾಗಿದ್ದು ವಿವಿಧ ಚಟುವಟಿಕೆಗಳು ಆರಂಭವಾಗಿದೆ. ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿರುವ ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು ವಿವಿಧ ಕಸರತ್ತು ನಡೆಸುತ್ತಿದ್ದಾರೆ.

ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಬೆಂಬಲಿಗರು ಈ ಸಂಬಂಧ ಹಲವು ಸಭೆ ಆರಂಭಿಸಿದ್ದು ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮತದಾರರ ಮನೆಗಳಿಗೆ ತೆರಳಿ ಅವರನ್ನು ಸೆಳೆಯುತ್ತಿದ್ದಾರೆ. ವಿಧಾನಸಭಾ ಚುನಾವಣೆಗೆ ಸರಿಯಾಟಿಗುವ ರೀತಿಯಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಮತಹಾಕಲು ಅರ್ಹತೆ ಹೊಂದಿರುವ ವಿವಿಧ ಸಹಕಾರ ಸಂಘಗಳ ಪ್ರತಿನಿಧಿಗಳಿಗೆ ಅಪಾರ ಬೇಡಿಕೆ ಬಂದಿದ್ದು ಅವರನ್ನು ಆಕರ್ಷಿಕರು ಮತದಾರರ ಸಭೆ ನಡೆಸುತ್ತಿದ್ದಾರೆ.

‘ಕೊರೊನಾ ಸೋಂಕು ಇರುವ ಕಾರಣ ಬಹಿರಂಗವಾಗಿ ಮತದಾರರ ಸಭೆ ನಡೆಯುತ್ತಿಲ್ಲ. ಫಾರಂ ಹೌಸ್‌ಗಳಲ್ಲಿ, ತೋಟದಲ್ಲಿ ಸಭೆ ನಡೆಸುತ್ತಿದ್ದಾರೆ. ಮತದಾರರಿಗೆ ಹಲವು ಆಮಿಷ ಒಡ್ಡುತ್ತಿದ್ದಾರೆ’ ಎಂದು ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರತಿನಿಧಿಯೊಬ್ಬರು ತಿಳಿಸಿದರು.

ಅಭ್ಯರ್ಥಿಗಳು ಯಾರು?: ಮಳವಳ್ಳಿ ತಾಲ್ಲೂಕು ಪೂರಿಗಾಗಿ ವ್ಯವಸಾಯೋತ್ಪನ್ನ ಸಹಕಾರ ಸಂಘದಿಂದ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರೇ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಹರಡಿದೆ. ಇಲ್ಲಿಯವರೆಗೂ ಈ ಸಹಕಾರ ಸಂಘವನ್ನು ಪುಟ್ಟರಾಮು ಪ್ರತಿನಿಧಿಸುತ್ತಿದ್ದರು. ಜೊತೆಗೆ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷರಾದ ಅಶ್ವಥ್‌, ಸಾತನೂರು ಸತೀಶ್‌ ಮುಂತಾದವರೂ ಸ್ಪರ್ಧೆಗೆ ಸಕಲ ನಡೆಸಿದ್ದಾರೆ.

12 ಸ್ಥಾನಗಳಿಗೆ ಚುನಾವಣೆ: ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿಯಲ್ಲಿ 16 ಸದಸ್ಯರಿದ್ದು ಜಿಲ್ಲೆಯ ವಿವಿಧ ಸಹಕಾರ ಸಂಘಗಳಿಂದ 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಏಳು ತಾಲ್ಲೂಕುಗಳ ವ್ಯವಸಾಯ ಸೇವಾ ಸಹಕಾರ ಸಂಘದಿಂದ ಆಯ್ಕೆಯಾದ 7 ಸ್ಥಾನ, ಹಾಲು ಉತ್ಪಾದಕರ ಸಹಕಾರ ಸಂಘ (ಮಂಡ್ಯ ಮತ್ತು ಪಾಂಡವಪುರ ಉಪ ವಿಭಾಗ)ದಿಂದ ಇಬ್ಬರು, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಘಗಳಿಂದ ಒಬ್ಬರು, ಬಳಕೆದಾರರ ಸಹಕಾರ ಸಂಘಗಳಿಂದ ಒಬ್ಬರು, ಟಿಎಟಿಎಪಿಸಿಎಂಎಸ್‌ನಿಂದ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಉಳಿದ 4 ಸ್ಥಾನಗಳಲ್ಲಿ ಅಧಿಕಾರಿಗಳಿರುತ್ತಾರೆ.

387 ಅರ್ಹ ಮತದಾರರು

ಡಿಸಿಸಿ ಬ್ಯಾಂಕ್‌ನಲ್ಲಿ 1041 ಸಂಘಗಳ 905 ಮಂದಿ ಸದಸ್ಯರಿದ್ದಾರೆ. ಅವರಲ್ಲಿ ಮತದಾನ ಮಾಡಲು ಕೇವಲ 387 ಮಂದಿ ಅರ್ಹತೆ ಪಡೆದಿದ್ದಾರೆ. 300 ಮಂದಿ ಅನರ್ಹಗೊಂಡಿದ್ದಾರೆ. ನಿಯಮಾನುಸಾರ ಹಣಕಾಸು ವಹಿವಾಟು ನಡೆಸಿದ, ಕಳೆದ ಮೂರು ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಸಂಘಗಳ ಸದಸ್ಯರು ಮಾತ್ರ ಮತದಾನದ ಅರ್ಹತೆ ಪಡೆದಿದ್ದಾರೆ.

ಮತದಾರರ ಸಂಖ್ಯೆ ಹೆಚ್ಚಿಸಲು ಅಭ್ಯರ್ಥಿಗಳು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮತದಾನದ ಹಕ್ಕಿಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಅನರ್ಹಗೊಂಡಿರುವ ಸದಸ್ಯರ ಮಾಹಿತಿ ಪಡೆಯುತ್ತಿದ್ದಾರೆ. 800ಕ್ಕೂ ಹೆಚ್ಚು ಮಂದಿ ಮತದಾರರಾಗುವ ಸಾಧ್ಯತೆ ಇದೆ ಎಂದು ಸದಸ್ಯರೊಬ್ಬರು ತಿಳಿಸಿದರು.

ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ

ಡಿಸಿಸಿ ಬ್ಯಾಂಕ್‌ ಚುನಾವಣೆಗೆ ಸ್ಪರ್ಧೆ ಮಾಡುವಂತೆ ನನ್ನ ಬೆಂಬಲಿಗರು ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಮಳವಳ್ಳಿ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು