ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಬರೆ ಕಾಮಗಾರಿಗೆ ಚಾಲನೆ; ಆಯೋಗಕ್ಕೆ ದೂರು

ಅಪೂರ್ಣ ಪೂರಿಗಾಲಿ ಹನಿ ನೀರಾವರಿ ಯೋಜನೆ ಉದ್ಘಾಟನೆಗೆ ತರಾತುರಿ; ಪಿ.ಎಂ.ನರೇಂದ್ರಸ್ವಾಮಿ ಆಕ್ರೋಶ
Last Updated 18 ಮಾರ್ಚ್ 2023, 14:36 IST
ಅಕ್ಷರ ಗಾತ್ರ

ಮಂಡ್ಯ: ‘ಮಳವಳ್ಳಿ ಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ಅರೆಬರೆ ಕಾಮಗಾರಿಗಳ ಉದ್ಘಾಟನೆ, ವಿವಿಧ ಯೋಜನೆಗಳ ಶಂಕಸ್ಥಾಪನೆ ಮಾಡಲಾಗುತ್ತಿದೆ. ಇದರಿಂದ ಯೋಜನೆಗಳ ಉದ್ದೇಶವೇ ಹಾಳಾಗುತ್ತಿದ್ದು ಜನರಿಗೆ ಅನ್ಯಾಯವಾಗುತ್ತಿದೆ. ಇದರ ವಿರುದ್ಧ ರಾಜ್ಯ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು’ ಎಂದು ಎಐಸಿಸಿ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ ಶನಿವಾರ ಹೇಳಿದರು.

‘ಚುನಾವಣಾ ನೀತಿ ಸಂಹಿತೆ ಜಾರಿಗೂ ಮೊದಲು ತರಾತುರಿಯಲ್ಲಿ ಮುಗಿಯದ ಕಾಮಗಾರಿ ಉದ್ಘಾಟನೆ ಮಾಡಲಾಗುತ್ತಿದೆ. ಟೆಂಡರ್‌ ಹಂತದಲ್ಲಿರುವ ಕಾಮಗಾರಿಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಇದರಿಂದ ಯೋಜನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಇಷ್ಟಾದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಪೂರಿಗಾಲಿ ಹನಿ ನೀರಾವರಿ ಯೋಜನೆ ಪೂರ್ಣಗೊಳ್ಳಲು ಇನ್ನೂ ಶೇ 30ರಷ್ಟು ಕೆಲಸ ಬಾಕಿ ಇದೆ. ಕಾಮಗಾರಿ 2023 ಜೂನ್‌ ವೇಳೆಗೆ ಒಂದು ಹಂತಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಇಷ್ಟಾದರೂ ಶಾಸಕರು ತರಾತುರಿಯಲ್ಲಿ ಕಾಮಗಾರಿ ಉದ್ಘಾಟಿಸಲು ಸಿದ್ಧತೆ ನಡೆಸುತ್ತಿದ್ದಾರೆ’ ಎಂದರು.

‘ಪೂರಿಗಾಲಿ ಯೋಜನೆ ದೇಶದಲ್ಲೇ ಮೊದಲ ಅತ್ಯಾಧುನಿಕ ಹನಿ ನೀರಾವರಿ ಯೋಜನೆಯಾಗಿದ್ದು ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ. ವಿದ್ಯುಚ್ಛಕ್ತಿ ಅಳವಡಿಕೆ, ನೀರಿನ ಪಂಪಿಂಗ್‌ ಪರೀಕ್ಷೆ, ನೀರಿನ ಹರಿವಿನ ಪರಿಶೀಲನೆ ಕೆಲಸ ಆರಂಭವಾಗಿಲ್ಲ. ಅವಸರದಲ್ಲಿ ಕಾಮಗಾರಿಗೆ ಚಾಲನೆ ನೀಡಿದರೆ ಯೋಜನೆಯ ಮೂಲ ಉದ್ದೇಶ ಹಾಳಾಗುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ರೈತರು ಬೆಳೆಯಬೇಕಾದ ಬೆಳೆ ನಿರ್ಧಾರ, ಬೆಳೆ ಅವಧಿ, ಮಾರಾಟ, ಮಾರುಕಟ್ಟೆ, ರೈತರಿಗೆ ತರಬೇತಿ ಈ ಯೋಜನೆಯ ಮೂಲ ಉದ್ದೇಶಗಳಲ್ಲೊಂದು. ಇದಾವುದನ್ನೂ ಗಣನೆಗೆ ತೆಗೆದುಕೊಳ್ಳದೇ, ಉದ್ದೇಶವನ್ನೇ ಅರ್ಥ ಮಾಡಿಕೊಳ್ಳದೇ ಕಾಮಗಾರಿ ಉದ್ಘಾಟಿಸುವುದು ಎಷ್ಟು ಸರಿ? ಶಾಸಕರ ಹಕ್ಕುಗಳನ್ನು ನಾನು ಪ್ರಶ್ನಿಸುತ್ತಿಲ್ಲ. ಆದರೆ ಜನೋಪಯೋಗಿ ಯೋಜನೆ ಉದ್ಘಾಟನೆಗೆ ತರಾತುರಿ ಏಕೆ’ ಎಂದು ಪ್ರಶ್ನಿಸಿದರು.

‘ಕಾಮಗಾರಿ ಉದ್ಘಾಟನೆಗೆ, ಶಂಕುಸ್ಥಾಪನೆ ವಿಚಾರದಲ್ಲಿ ಚುನಾವಣಾ ಆಯೋಗದ ನೀತಿಗಳನ್ನು ಗಾಳಿಗೆ ತೂರಲಾಗುತ್ತಿದೆ. ಇಲಾಖಾ ಮಂತ್ರಿ, ಸಂಸದೆ, ವಿಧಾನ ಪರಿಷತ್‌ ಸದಸ್ಯರಿಗೂ ಆಹ್ವಾನ ನೀಡದೇ ಏಕಪಕ್ಷೀಯವಾಗಿ ಉದ್ಘಾಟನೆ ಮಾಡಲಾಗುತ್ತಿದೆ. ಅಧಿಕಾರಿಗಳು ಪ್ರಶ್ನಿಸಿದೇ ಕಣ್ಣು ಮುಚ್ಚಿ ಕುಳಿತಿದ್ದಾರೆ’ ಎಂದು ಆರೋಪಿಸಿದರು.

‘ಶಾಸಕರ ನಡೆ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸಾಕಷ್ಟು ಸಂಶಯ ಮೂಡಿದೆ. ಈ ಬಾರಿಯ ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಲಿದೆ ಎಂಬ ಬಗ್ಗೆ ಭರವಸೆ ಇಲ್ಲ. ಹೀಗಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು’ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌, ಮುಖಂಡರಾದ ಅಶೋಕ್‌, ಸಿ.ಎಂ.ದ್ಯಾವಪ್ಪ, ಮುಜಾಯಿದ್‌, ನಾಗೇಶ್‌ ಇದ್ದರು.

ವಿಷಾದ: ‘ಅಪೂರ್ಣ ವಸತಿ ಶಾಲೆ ಉದ್ಘಾಟನೆ ಖಂಡಿಸಿ ನಡೆಸಿದ ಪ್ರತಿಭಟನೆ ವೇಳೆ ನಾನು ಬಳಸಿದ ಪದದ ಬಗ್ಗೆ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದೇನೆ. ಮಾತಿನ ಭರದಲ್ಲಿ ಪದ ಬಳಕೆಯಾಯಿತು, ನಾನು ಯಾವುದೇ ರಾಜಕೀಯ ಪಕ್ಷದ ಹೆಸರು ಬಳಸಿಲ್ಲ. ಯಾವ ಪಕ್ಷವನ್ನೂ ಅಮಮಾನ ಮಾಡುವ ಉದ್ದೇಶ ಇರಲಿಲ್ಲ’ ಎಂದು ನರೇಂದ್ರಸ್ವಾಮಿ ಸ್ಪಷ್ಟಪಡಿಸಿದರು.

****

ಶಿಷ್ಟಾಚಾರ ಉಲ್ಲಂಘನೆ; ಗೂಳಿಗೌಡ

ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಮಾತನಾಡಿ ‘ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ನು ಗಾಳಿಗೆ ತೂರಲಾಗುತ್ತಿದೆ. ಜೊತೆಗೆ ಯಾವುದೇ ಕಾರ್ಯಕ್ರಮಕ್ಕೂ ಆಹ್ವಾನ ನೀಡದೇ ಶಿಷ್ಟಾಚಾರದ ಉಲ್ಲಂಘನೆಯಾಗುತ್ತಿದೆ. ಈ ಬಗ್ಗೆ ಪರಿಷತ್‌ ಸಭಾಪತಿ ಎದುರು ಹಕ್ಕುಚ್ಯುತಿ ಮಂಡಿಸಲಾಗುವುದು’ ಎಂದು ಹೇಳಿದರು.

‘ಕೇಂದ್ರ ಚುನಾವಣಾ ಆಯೋಗದ ತಂಡ ರಾಜ್ಯಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದೆ. ನೀತಿ ನಿಯಮಗಳ ಉಲ್ಲಂಘನೆಯಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT