ಮಂಡ್ಯ: ಲಕ್ಷ್ಮಿ, ನಿಖಿಲ್‌ ಜೆಡಿಎಸ್‌ ಅಭ್ಯರ್ಥಿಗಳು?

7
ಆರು ತಿಂಗಳ ಅವಧಿಗೆ ಲೋಕಸಭಾ ಉಪಚುನಾವಣೆ, ಮೈತ್ರಿ ಮುಂದುವರಿಯುವ ಸಾಧ್ಯತೆ

ಮಂಡ್ಯ: ಲಕ್ಷ್ಮಿ, ನಿಖಿಲ್‌ ಜೆಡಿಎಸ್‌ ಅಭ್ಯರ್ಥಿಗಳು?

Published:
Updated:
Deccan Herald

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು ಆರು ತಿಂಗಳ ಅವಧಿಗೆ ಯಾರು ಸಂಸತ್‌ ಸದಸ್ಯರಾಗುತ್ತಾರೆ ಎಂಬ ಪ್ರಶ್ನೆ ಸೃಷ್ಟಿಯಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮುಂದುವರಿಯುವ ಲಕ್ಷಣಗಳು ದಟ್ಟವಾಗಿವೆ.

ಸಚಿವ ಸಿ.ಎಸ್‌.ಪುಟ್ಟರಾಜು ರಾಜೀನಾಮೆಯಿಂದ ತೆರವಾಗಿದ್ದು, ಸಾರ್ವತ್ರಿಕ ಚುನಾವಣೆಗೆ ಆರು ತಿಂಗಳಿರುವಾಗ ಬಂದಿರುವ ಉಪಚುನಾವಣೆ ಎಲ್ಲ ಪಕ್ಷಗಳಿಗೂ ಬಿಸಿ ತುಪ್ಪವೇ ಆಗಿದೆ. ಆದರೆ ಸಾರ್ವತ್ರಿಕ ಚುನಾವಣೆ ಎದುರಿಗೆ ಇರುವ ಕಾರಣಕ್ಕೆ ಹೋರಾಟವೂ ಅನಿವಾರ್ಯವಾಗಿದೆ. ಹೊಂದಾಣಿಕೆ ಎಳೆಗಳು ಗೋಚರಿಸುತ್ತಿದ್ದು, ಜೆಡಿಎಸ್‌ ವಲಯದಲ್ಲಿ ಚಟುವಟಿಕೆಗಳು ಬಿರುಸಾಗಿವೆ.

ಐಆರ್‌ಎಸ್‌ ಮಾಜಿ ಅಧಿಕಾರಿ ಡಾ.ಲಕ್ಷ್ಮಿ ಅಶ್ವಿನ್‌ಗೌಡ ಉಪ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅವರಿಗೆ ಲೋಕಸಭಾ ಉಪಚುನಾವಣೆಗೆ ಟಿಕೆಟ್‌ ನೀಡುವ ಭರವಸೆ ಸಿಕ್ಕಿತ್ತು ಎನ್ನಲಾಗಿದೆ.

‘ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಮೂರು ತಿಂಗಳ ಹಿಂದೆಯೇ ಸೂಚನೆ ಕೊಟ್ಟಿದ್ದರು. ಆಗಿನಿಂದಲೂ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಈಗಾಗಲೇ ಎಲ್ಲ ಕ್ಷೇತ್ರಗಳಿಗೂ ಭೇಟಿ ನೀಡಿ ಮತದಾರರ ಅಂತರಾಳ ಅರಿತಿದ್ದೇನೆ. ಅವಧಿ ಎಷ್ಟಾದರೂ ಆಗಲಿ, ಚುನಾವಣೆಯನ್ನು ಚುನಾವಣೆಯಂತೆಯೇ ಎದುರಿಸುತ್ತೇನೆ’ ಎಂದು ಲಕ್ಷ್ಮಿ ಅಶ್ವಿನ್‌ಗೌಡ ಹೇಳಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ, ನಟ ನಿಖಿಲ್‌ ಹೆಸರು ಸಹ ಕೇಳಿ ಬರುತ್ತಿದೆ. ಈಚೆಗೆ ನಗರಕ್ಕೆ ಭೇಟಿ ನೀಡಿದ್ದ ನಿಖಿಲ್‌, ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದರು. ಕಣಕಣದಲ್ಲೂ ರಾಜಕಾರಣವೇ ಹರಿಯುತ್ತಿದೆ ಎಂದು ಹೇಳಿಕೆ ನೀಡಿದ್ದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರಿಗೆ ಮೊಮ್ಮಗ ನಿಖಿಲ್‌ ಅವರನ್ನೇ ಕಣಕ್ಕಿಳಿಸಬೇಕು ಎಂಬ ಚಿಂತನೆ ಇದೆ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಚುನಾವಣೆಯಲ್ಲಿ ಲಕ್ಷ್ಮಿ ಅಶ್ವಿನ್‌ಗೌಡ ಅವರನ್ನು ಕಣಕ್ಕಿಳಿಸಿ, ಸಾರ್ವತ್ರಿಕ ಚುನಾವಣೆಯಲ್ಲಿ ನಿಖಿಲ್‌ರನ್ನು ಅಭ್ಯರ್ಥಿಯನ್ನಾಗಿಸುವ ಚಿಂತನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜತೆಗೆ ಜೆಡಿಎಸ್‌ನಲ್ಲಿ ಡಾ.ಎಚ್‌.ಕೃಷ್ಣ , ಜಿ.ಬಿ.ಶಿವಕುಮಾರ್‌, ಎಲ್‌.ಆರ್‌.ಶಿವರಾಮೇಗೌಡ ಸಹ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಚುನಾವಣೆ ಬೇಕಿರಲಿಲ್ಲ:  ಅಲ್ಪಾವಧಿಗೆ ಚುನಾವಣೆ ಬೇಕಿರಲಿಲ್ಲ ಎಂಬ ಅಭಿಪ್ರಾಯ ಬಿಜೆಪಿ ವಲಯದಲ್ಲಿ ಕೇಳಿ ಬಂದಿದೆ. ಆದರೂ ರೈತ ಹೋರಾಟಗಾರ ಕೆ.ಎಸ್‌.ನಂಜುಂಡೇಗೌಡ, ರಾಜ್ಯ ಮುಕ್ತ ವಿಶ್ವವಿದ್ಯಾಲಯದ ದಾವಣಗೆರೆ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಸುಧಾಕರ್‌ ಹೊಸಳ್ಳಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ರಮ್ಯಾಗೆ 8 ತಿಂಗಳ ಅವಕಾಶ: ಕಳೆದ ಬಾರಿಯೂ ಸಾರ್ವತ್ರಿಕ ಚುನಾವಣೆಗೆ 8 ತಿಂಗಳ ಮೊದಲು ಉಪಚುನಾವಣೆ ನಡೆದಿತ್ತು. ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ರಮ್ಯಾ ಆಯ್ಕೆಯಾಗಿದ್ದರು. ನಂತರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲುಕಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !