ಗುರುವಾರ , ಡಿಸೆಂಬರ್ 5, 2019
19 °C
ಕೆ.ಆರ್‌.ಪೇಟೆ; 10ಕ್ಕೂ ಹೆಚ್ಚು ಮುಖಂಡರಿಂದ ಬಿಜೆಪಿ ಸೇರ್ಪಡೆ

ಮುಖ್ಯಮಂತ್ರಿಗಳ ತವರಿನಲ್ಲಿ ಪಕ್ಷಾಂತರ ವರ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ತವರು ಕ್ಷೇತ್ರ ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಖಾತೆ ತೆರೆಯುವ ಹಟ ತೊಟ್ಟಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಾಂಗ್ರೆಸ್‌, ಜೆಡಿಎಸ್‌ ಮುಖಂಡರನ್ನು ಪಕ್ಷಕ್ಕೆ ಸೆಳೆಯುತ್ತಿದ್ದಾರೆ. ಕಳೆದೆರಡು ದಿನಗಳಿಂದ ಅನ್ಯ ಪಕ್ಷಗಳ 10ಕ್ಕೂ ಹೆಚ್ಚು ಮುಖಂಡರು, 200ಕ್ಕೂ ಕಾರ್ಯಕರ್ತರನ್ನು ಬಿಜೆಪಿ ತೆಕ್ಕೆಗೆ ಸೇರಿಸಿಕೊಂಡಿದ್ದಾರೆ.

ಮುಖಂಡರನ್ನು ಬೆಂಗಳೂರಿಗೆ ಕರೆಸಿಕೊಳ್ಳುತ್ತಿರುವ ಮುಖ್ಯಮಂತ್ರಿಗಳು ಬಿಜೆಪಿ ಕಚೇರಿಯಲ್ಲೇ ಅಧಿಕೃತವಾಗಿ ಪಕ್ಷದ ಧ್ವಜ ನೀಡಿ ಸ್ವಾಗತಿಸುತ್ತಿದ್ದಾರೆ. ಜೆಡಿಎಸ್, ಕಾಂಗ್ರೆಸ್‌ನ ಪ್ರಭಾವಿ ಮುಖಂಡರು ಬಿಜೆಪಿ ಕದ ತಟ್ಟಿದ್ದು ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವವೇ ಆರಂಭವಾಗಿದೆ. ಜೊತೆಗೆ ಅನರ್ಹ ಶಾಸಕ ನಾರಾಯಣಗೌಡರು ಕೂಡ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ.

ಜಿ.ಪಂ ಮಾಜಿ ಉಪಾಧ್ಯಕ್ಷ ಕಿಕ್ಕೇರಿ ಪ್ರಭಾಕರ್‌ ಜೆಡಿಎಸ್‌ನಿಂದ, ಮಾಜಿ ಸದಸ್ಯ, ಮನ್‌ಮುಲ್‌ ಮಾಜಿ ನಿರ್ದೇಶಕ ಶೀಳನೆರೆ ಅಂಬರೀಷ್‌ ಕಾಂಗ್ರೆಸ್‌ನಿಂದ, ಮಾಜಿ ಸ್ಪೀಕರ್‌ ಕೃಷ್ಣ ಅವರ ಬೆಂಬಲಿಗ ಅಘಲಯ ಮಂಜುನಾಥ್‌ ಕಾಂಗ್ರೆಸ್‌ನಿಂದ ಯಡಿಯೂರಪ್ಪ ಅವರ ಸಮ್ಮುಖದಲ್ಲೇ ಬಿಜೆಪಿ ಸೇರಿದ್ದಾರೆ. ಇವರ ಜೊತೆಗೆ ತಾ.ಪಂ ಉಪಾಧ್ಯಕ್ಷ ರವಿ ಜೆಡಿಎಸ್‌ನಿಂದ, ಕಾರಿಗನಹಳ್ಳಿ ಕುಮಾರ್‌ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ್ದಾರೆ.

ಮುಖಂಡರಿಗೆ ಸ್ಥಾನ: ಬೇರೆ ಪಕ್ಷದ ಮುಖಂಡರನ್ನು ಬಿಜೆಪಿಗೆ ಸೆಳೆಯುವ ಕೆಲಸ ತಿಂಗಳಿಂದಲೂ ನಡೆಯುತ್ತಿದೆ. ಪಕ್ಷಕ್ಕೆ ಸೇರಿಸಿಕೊಳ್ಳುವ ಜೊತೆಗೆ ಅವರಿಗೆ ಅಧಿಕಾರವನ್ನೂ ನೀಡಲಾಗುತ್ತಿದೆ. ಕುರುಬ ಸಮಾಜದ ಮುಖಂಡ ಕೆ.ಶ್ರೀನಿವಾಸ್‌ ಜೆಡಿಎಸ್‌ ತ್ಯಜಿಸಿ ಬಿಜೆಪಿ ಸೇರಿದ್ದಾರೆ. ಅವರಿಗೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಸ್ಥಾನ ನೀಡಲಾಗಿದೆ. ಮಂಡ್ಯಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗೆ ಮುಡಾ ಅಧ್ಯಕ್ಷ ಸ್ಥಾನ ನೀಡಿರುವುದು ಸ್ಥಳೀಯ ಬಿಜೆಪಿ ಮುಖಂಡರ ವಿರೋಧಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿರುವ ಕೆ.ಜಿ.ತಮ್ಮಣ್ಣ ಅವರನ್ನು ಮಂಡ್ಯ ಜಿಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟದ (ಮನ್‌ಮುಲ್‌) ನಾಮ ನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಲಾಗಿದೆ.

‘ಎಚ್‌.ಡಿ.ಕುಮಾರಸ್ವಾಮಿ ಅವರ ಧೋರಣೆಯಿಂದ ಬೇಸತ್ತು ಬಿಜೆಪಿ ಸೇರಿದ್ದೇವೆ. ಜೆಡಿಎಸ್‌ನಿಂದ ನಾನೂ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಟಿಕೆಟ್‌ ಕೇಳಲು 500ಕ್ಕೂಹೆಚ್ಚು ಬೆಂಬಲಿಗರ ಜೊತೆ ಬೆಂಗಳೂರಿಗೆ ತೆರಳಿದ್ದೆ. ಕುಮಾರಸ್ವಾಮಿ ಅವರು ಸೌಜನ್ಯಕ್ಕಾದರೂ ನಮ್ಮ ಜೊತೆ ಮಾತನಾಡಲಿಲ್ಲ’ ಎಂದು ಕಿಕ್ಕೇರಿ ಪ್ರಭಾಕರ್‌ ಆರೋಪಿಸಿದರು.

ಇಂದು ನಾಮಪತ್ರ: ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಸೋಮವಾರ ಬಿಜೆಪಿ ಅಭ್ಯರ್ಥಿಯಾಗಿ ಕೆ.ಸಿ.ನಾರಾಯಣಗೌಡ, ಜೆಡಿಎಸ್‌ ಅಭ್ಯರ್ಥಿಯಾಗಿ ಬಿ.ಎಲ್‌.ದೇವರಾಜು, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆ.ಬಿ.ಚಂದ್ರಶೇಖರ್‌ ನಾಮಪತ್ರ ಸಲ್ಲಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು