ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಕೈ ಹಿಡಿದ ಪಾಸಿಂಗ್ ಪ್ಯಾಕೇಜ್

ಎಸ್‌ಎಸ್‌ಎಲ್‌ಸಿ: 28ರಿಂದ 10ನೇ ಸ್ಥಾನಕ್ಕೆ ಏರಿದ ಮಂಡ್ಯ ಜಿಲ್ಲೆಯ ಫಲಿತಾಂಶ
Last Updated 3 ಮೇ 2019, 5:06 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳ ಶ್ರಮದಿಂದಾಗಿ 2018– 19ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯು ಶೇ 86.65 ರಷ್ಟು ಫಲಿತಾಂಶ ಪಡೆದು 10ನೇ ಸ್ಥಾನ ಬಡ್ತಿ ಪಡೆದಿದೆ.

2017–18ನೇ ಸಾಲಿನಲ್ಲಿ ಶೇ 71.57 ಫಲಿತಾಂಶದೊಂದಿಗೆ 28ನೇ ಸ್ಥಾನ ಪಡೆದುಕೊಂಡಿತ್ತು. ಆದರೆ, ಈ ವರ್ಷ ಶೇ 86.65ರಷ್ಟು ಫಲಿತಾಂಶದೊಂದಿಗೆ 10ನೇ ಸ್ಥಾನಕ್ಕೆ ಏರಿದೆ. ಶೇ 15.08ರಷ್ಟು ಫಲಿತಾಂಶ ಏರಿಕೆ ಕಾಣುವ ಮೂಲಕ 18 ಸ್ಥಾನಗಳಷ್ಟು ಮೇಲಕ್ಕೇರಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ ಉನ್ನತ ದರ್ಜೆ ಹಾಗೂ ಪ್ರಥಮ ಶ್ರೇಣಿ ಪಡೆದ ವಿದ್ಯಾರ್ಥಿಗಳ ಗುಣಮಟ್ಟದ ಆಧಾರದ ಮೇಲೆ ಫಲಿತಾಂಶ ಬಿಡುಗಡೆ ಮಾಡಲಾಗಿದೆ. ಗುಣಮಟ್ಟದ ಫಲಿತಾಂಶದಲ್ಲಿ ಜಿಲ್ಲೆ 8ನೇ ಸ್ಥಾನ ಪಡೆದುಕೊಂಡಿದೆ.

ಅಧಿಕಾರಿಗಳ ನಿರಂತರ ಶ್ರಮ: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಕನಿಷ್ಠ 10 ಸ್ಥಾನದೊಳಗೆ ತರಬೇಕು ಎನ್ನುವ ಕಾರ್ಯಸೂಚಿ ಈಡೇರಿದೆ. ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಜಿಲ್ಲೆಯ ಫಲಿತಾಂಶದ ಕುರಿತು ಚರ್ಚೆಯಾಗಿತ್ತು. ಮಕ್ಕಳನ್ನುಕನಿಷ್ಠ ಶೇ 35 ಅಂಕ ಗಳಿಸುವಂತೆ ಸಿದ್ಧಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಆಡಳಿತ ಅಧಿಕಾರಿಗಳು ಜಿಲ್ಲೆಯ ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಎಸ್‌ಎಸ್‌ಎಲ್‌ಸಿಫಲಿತಾಂಶ ಹೆಚ್ಚಳ ಮಾಡುವ ಉದ್ದೇಶದಿಂದ ಶಾಲಾ ಅವಧಿಗೂ ಮುನ್ನವೇ ಬೆಳಿಗ್ಗೆ 9 ಗಂಟೆಯಿಂದ ವಿಶೇಷ ತರಗತಿ ತೆಗೆದುಕೊಳ್ಳಲಾಗುತ್ತಿತ್ತು. ಸಾಮಾನ್ಯ ತರಗತಿ ವೇಳೆಯಲ್ಲಿ ಶಿಸ್ತು ಗುಣಮಟ್ಟದ ಬೋಧನೆ ಮಾಡಲಾಗುತ್ತಿತ್ತು. ಜೊತೆಗೆ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಜೆ 6 ಗಂಟೆವರೆಗೂ ಪೂರಕ ಪಾಠ ಮಾಡಲಾಗುತ್ತಿತ್ತು. ದಸರಾ ರಜೆಯಲ್ಲಿಯೂ ವಿಶೇಷ ತರಗತಿಗಳನ್ನು ನಡೆಸಲಾಗಿತ್ತು.

ಜಿಲ್ಲಾ ಮಟ್ಟದ ಪೂರಕ ಪರೀಕ್ಷೆ: ರಾಜ್ಯ ಸರ್ಕಾರದಿಂದ ನಡೆಸುವ ಪೂರ್ವಭಾವಿ ಪರೀಕ್ಷೆ ಜೊತೆಗೆ ಜಿಲ್ಲಾ ಮಟ್ಟದ ಪ್ರತ್ಯೇಕ ಪರೀಕ್ಷೆ ನಡೆಸಲಾಗಿತ್ತು. ಕೆಲವು ಶಾಲೆಗಳು ಘಟಕ ಪರೀಕ್ಷೆ ಹಾಗೂ ಮಾಸಿಕ ಪರೀಕ್ಷೆಯೊಂದಿಗೆ ವಿದ್ಯಾರ್ಥಿಗಳಿಗೆ ನಿರಂತರ ಸಿದ್ಧತೆ ಮಾಡುತ್ತಿದ್ದವು. ಇದರ ಫಲವಾಗಿ ಈ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ 28ರಿಂದ 10ನೇ ಸ್ಥಾನಕ್ಕೆ ಜಿಗಿತವಾಗಿದೆ.

ಬಾಲಕಿಯರ ಮೇಲುಗೈ: ರಾಜ್ಯ ಹಾಗೂ ಜಿಲ್ಲೆಯ ಫಲಿತಾಂಶದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬಾಲಕಿಯರೇ ಮುಂಚೂಣಿಯಲ್ಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ 10,064 ಬಾಲಕಿಯರು ಹಾಗೂ 10,584 ಬಾಲಕರು ಸೇರಿ ಒಟ್ಟಾರೆ 20,648 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ ಬಾಲಕಿಯರು ಶೇ 89.87 ಪಡೆದು ಮೇಲುಗೈ ಸಾಧಿಸಿದರೆ, ಬಾಲಕರು ಶೇ 77.05ರಷ್ಟು ಪಡೆದುಕೊಂಡಿದ್ದಾರೆ. ಒಟ್ಟಾರೆ 17,801 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಲ್ಲೆಯಾದ್ಯಂತ 449 ಶಾಲೆಗಳಲ್ಲಿ 133 ಖಾಸಗಿ ಶಾಲೆಗಳು ಶೇ 90.9ರಷ್ಟು ಫಲಿತಾಂಶ, 79 ಅನುದಾನಿತ ಶಾಲೆಗಳು ಶೇ 84.36ರಷ್ಟು ಹಾಗೂ 237 ಸರ್ಕಾರಿ ಶಾಲೆಗಳು ಶೇ 84.12ರಷ್ಟು ಫಲಿತಾಂಶ ಪಡೆದುಕೊಂಡಿವೆ.

74 ಶಾಲೆಗಳು 100ರಷ್ಟು ಫಲಿತಾಂಶ: ಜಿಲ್ಲೆಯ 36 ಸರ್ಕಾರಿ, 6 ಅನುದಾನಿತ ಹಾಗೂ 32 ಖಾಸಗಿ ಪ್ರೌಢ ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ. ಯಾವುದೇ ಶಾಲೆಗೆ ಶೂನ್ಯ ಫಲಿತಾಂಶ ಪಡೆದಿಲ್ಲ.

ಜಿಲ್ಲೆಗೆ ಜೀವನ್‌ಗೌಡ ಪ್ರಥಮ

ಮದ್ದೂರು ತಾಲ್ಲೂಕಿನ ಶಿವಪುರ ಗ್ರಾಮದ ಪೂರ್ಣಪ್ರಜ್ಞಾ ಶಾಲೆಯ ವಿದ್ಯಾರ್ಥಿ ಜೀವನ್‌ಗೌಡ 621 ಅಂಕ (ಶೇ 99.36) ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಕನ್ನಡದಲ್ಲಿ 125 ಅಂಕ, ಇಂಗ್ಲಿಷ್‌ 100, ಹಿಂದಿ 99, ಗಣಿತ 100, ಸಮಾಜ 98, ವಿಜ್ಞಾನ 99 ಅಂಕ ಪಡೆದಿದ್ದಾನೆ.

ಆಶೀರ್ವಾದ್ ಇಂಗ್ಲಿಷ್ ಮಾಧ್ಯಮ ಶಾಲೆಯ ಆರ್.ಮೋನಿಷಾ (ಶೇ 98.88 ಅಂಕ) ದ್ವಿತೀಯ, ವಿನಾಯಕ ಶಾಲೆಯ ಶ್ರೇಯಾಶಿವ (ಶೇ 98.72) ಹಾಗೂ ಜೆಜೆ ಪಬ್ಲಿಕ್ ಪ್ರೌಢಶಾಲೆಯ ಬಿ.ಎಂ.ಅನನ್ಯ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಮದ್ದೂರುತಾಲ್ಲೂಕು ಪ್ರಥಮ

ತಾಲ್ಲೂಕುವಾರು ಫಲಿತಾಂಶದಲ್ಲಿ ಮದ್ದೂರು ತಾಲ್ಲೂಕು ಶೇ 80.09ರಷ್ಟು ಫಲಿತಾಂಶ ಪಡೆಯುವ ಮೂಲಕ ಪ್ರಥಮ ಸ್ಥಾನ ಗಳಿಸಿದೆ. ಪಾಂಡವಪುರ ಶೇ 86.58ರಷ್ಟು ಪಡೆದು ದ್ವಿತೀಯ ಹಾಗೂ ನಾಗಮಂಗಲ ಶೇ 83.31ರಷ್ಟು ಫಲಿತಾಂಶದೊಂದಿಗೆ ತೃತೀಯ ಸ್ಥಾನ ಪಡೆದಿವೆ.

ಮಳವಳ್ಳಿ (ಶೇ 83.24) ನಾಲ್ಕನೇ ಸ್ಥಾನ, ಕೆ.ಆರ್.ಪೇಟೆ (ಶೇ 81.70) 5ನೇ ಸ್ಥಾನ, ಮಂಡ್ಯ ಉತ್ತರ ವಲಯ (ಶೇ 81.11) ಆರನೇ ಸ್ಥಾನ, ಮಂಡ್ಯ ದಕ್ಷಿಣ ವಲಯ (ಶೇ 77) ಏಳನೇ ಸ್ಥಾನ ಹಾಗೂ ಶ್ರೀರಂಗಪಟ್ಟಣ (ಶೇ 71.26) ಎಂಟನೇ ಸ್ಥಾನ ಪಡೆದುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT