ಹಲಗೂರು: ಸಮೀಪದ ಬೆನಮನಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ ಮನೆಯ ಬಾಗಿಲು ಬೀಗ ಒಡೆದ ಕಳ್ಳರು, ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಮತ್ತು ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.
ಮನೆ ಮಾಲೀಕ ರವಿ ಅವರ ಪತ್ನಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಶಾಲೆಗೆ ತೆರಳಿದ್ದರು. ಮಾಲೀಕ ರವಿ ಸಂಬಂಧಿಕರ ತಿಥಿ ಕಾರ್ಯದಲ್ಲಿ ಭಾಗವಹಿಸಲು ಇಗ್ಗಲೂರಿಗೆ ತೆರಳಿದ್ದರು. ಮಧ್ಯಾಹ್ನ ಮನೆಗೆ ಬಂದಾಗ ಬಾಗಿಲು ಒಡೆದಿರುವುದು ಗೊತ್ತಾಯಿತು.
ಬೆನಮನಹಳ್ಳಿ ಮತ್ತು ಕರಡಹಳ್ಳಿ ನಡುವಿನ ಹೊರ ವಲಯದಲ್ಲಿರುವ ಒಂಟಿ ಮನೆಗೆ ನುಗ್ಗಿದ ಕಳ್ಳರು, ಬೀರುವಿನಲ್ಲಿದ್ದ ಸುಮಾರು 131 ಗ್ರಾಂ ಚಿನ್ನಾಭರಣ, 81 ಗ್ರಾಂ ಬೆಳ್ಳಿ ಪದಾರ್ಥ ಮತ್ತು ₹1.32 ಲಕ್ಷ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಮನೆಯ ಮಾಲೀಕ ರವಿ ದೂರು ನೀಡಿದಾರೆ.
ಸ್ಥಳಕ್ಕೆ ಮಳವಳ್ಳಿ ವಿಭಾಗದ ಡಿವೈಎಸ್ಪಿ ವಿ.ಕೃಷ್ಣಪ್ಪ, ಹಲಗೂರು ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಸ್. ಶ್ರೀಧರ್ ಮತ್ತು ಪಿಎಸ್ಐ ಬಿ.ಮಹೇಂದ್ರ ಭೇಟಿ ನೀಡಿ ಮಾಹಿತಿ ಪಡೆದರು. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ತಪಾಸಣೆ ನಡೆಸಿದರು.