ಮಂಡ್ಯ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ ಅವರ ಅಧಿಕೃತ ನಿವಾಸದ ಆವರಣದಲ್ಲಿದ್ದ 11 ಫಾಲ್ಸ್ ಅಶೋಕ ಮರಗಳನ್ನುಸೋಮವಾರ ಕಡಿದಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಐತಿಹಾಸಿಕ ಕಟ್ಟಡವಾಗಿರುವ ಎಸ್‌ಪಿ ನಿವಾಸದ ಒಳ ಆವರಣದಲ್ಲಿ ಹಲವು ವರ್ಷಗಳಿಂದ ಮರಗಳಿದ್ದವು. ಡಾ.ಅಶ್ವಿನಿ ಅವರು ಸೋಮವಾರ ತಮ್ಮ ನಿವಾಸವನ್ನು ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಿ ಮರ ಕಡಿಸಿದ್ದಾರೆ. ಪ್ರಕೃತಿಯನ್ನು ಪ್ರೀತಿಸಬೇಕಾದ ಐಪಿಎಸ್ ಅಧಿಕಾರಿ ಮರಗಳನ್ನು ಕಡಿಸಿರುವುದು ಖಂಡನೀಯ ಎಂದು ಆರೋಪಿಸಿದ್ದಾರೆ.
ಅರಣ್ಯಾಧಿಕಾರಿಗಳಿಗೆ ಪರಿಸರ ಪ್ರೇಮಿಗಳು, ಸಾರ್ವಜನಿಕರು ಮೌಖಿಕ ದೂರು ನೀಡಿದ ನಂತರ ಆರ್‌ಎಫ್‌ಒ ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಕಡಿದಿರುವ ಮರಗಳನ್ನು ವಶಕ್ಕೆ ಪಡೆದಿದ್ದಾರೆ.
ಅನುಮತಿ: ‘ಮಳೆಗಾಲದಲ್ಲಿ ಮರದ ಕೊಂಬೆಗಳು ನಿವಾಸದ ಕಾಂಪೌಂಡ್ ಮೇಲೆ ಹಾಗೂ ವಿದ್ಯುತ್ ತಂತಿಗಳ ಮೇಲೆ ಬಿದ್ದು ಅಪಾಯ ಸೃಷ್ಟಿಯಾಗುವ ಸಂಭವ ಇತ್ತು. ಹೀಗಾಗಿ ವಸತಿ ಗೃಹಗಳ ಅಧಿಕಾರಿ, ಸೆಸ್ಕ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ. ಪೂರ್ಣವಾಗಿ ಮರ ಕಡಿಯದೇ ರೆಂಬೆಗಳನ್ನಷ್ಟೇ ಕಡಿಯಲಾಗಿದೆ’ ಎಂದು ಡಾ.ಅಶ್ವಿನಿ ಸ್ಪಷ್ಟನೆ ನೀಡಿದ್ದಾರೆ.
‘ಲಿಖಿತ ಮನವಿ ಸಲ್ಲಿಸಿರುವುದಾಗಿ ಎಸ್‌ಪಿ ತಿಳಿಸಿದ್ದಾರೆ, ಈ ಬಗ್ಗೆ ಪರಿಶೀಲಿಸಲಾಗುವುದು. ಫಾಲ್ಸ್ ಅಶೋಕ ಮರ ಕಡಿಯುವುದಕ್ಕೆ ಅನುಮತಿ ಪಡೆಯುವ ಅಗತ್ಯವಿಲ್ಲ, ಸಾಗಣೆಗೆ ಮಾತ್ರ ಅನುಮತಿಯ ಅವಶ್ಯಕತೆ ಇದೆ. ಆದರೂ ಈ ಕುರಿತು ಆರ್‌ಎಫ್‌ಒ ಕಡೆಯಿಂದ ವರದಿ ಪಡೆಯಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ರವಿಶಂಕರ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.