ಶುಕ್ರವಾರ, ಸೆಪ್ಟೆಂಬರ್ 20, 2019
25 °C
ರೈತರ ನಿರೀಕ್ಷೆ ಹುಸಿಗೊಳಿಸಿದ ಹಣ್ಣುಗಳ ರಾಜ, ನಷ್ಟ ಭೀತಿ, ಬೆಲೆ ದುಬಾರಿ

ಕುಸಿದ ಮಾವು ಫಸಲು: ಬೆಳೆಗಾರ ಕಂಗಾಲು

Published:
Updated:

ಮಂಡ್ಯ: ಮಾವಿನ ಈಚುಗಳು ಕಾಯಾಗಿ, ಹಣ್ಣಾಗುವ ಹೊತ್ತಿಗೆ ರಣಬಿಸಿಲಿನ ಹೊಡೆತಕ್ಕೆ ಸಿಲುಕಿ ಕರಗಿ ಹೋಗಿವೆ. ಅಧಿಕ ಉಷ್ಣಾಂಶದಿಂದಾಗಿ ಈ ವರ್ಷದ ಮಾವಿನ ಫಸಲಿನಲ್ಲಿ ಶೇ 37ರಷ್ಟು ಕುಸಿತ ಉಂಟಾಗಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಬೆಳೆಗಾರರು ನಷ್ಟ ಭೀತಿ ಅನುಭವಿಸುತ್ತಿದ್ದಾರೆ.

ಫೆಬ್ರುವರಿ, ಮಾರ್ಚ್‌ ತಿಂಗಳಲ್ಲಿ ಮಳೆಯಾಗದ ಕಾರಣ ಕಾಯಿ ಕಟ್ಟುವ ಹಂತದಲ್ಲೇ ಮಾವಿನ ಫಸಲಿಗೆ ಹೊಡೆತ ಬಿತ್ತು. ತೇವಾಂಶದ ಕೊರತೆಯಿಂದಾಗಿ ಕಾಯಿಗಳು ನೆಲ ಕಚ್ಚಿದವು. ಇಷ್ಟರ ನಡುವೆಯೂ ಕೆಲ ರೈತರು ವೈಜ್ಞಾನಿಕ ನೀರು ನಿರ್ವಹಣೆಯ ಮೂಲಕ ಹಾಗೂ ಕೀಟನಾಶಕಗಳ ಬಳಕೆಯಿಂದ ಕಾಯಿ ಉದುರುವುದನ್ನು ತಪ್ಪಿಸಿದ್ದರು. ಆದರೆ, ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ತಲುಪಿದ ಹಿನ್ನೆಲೆಯಲ್ಲಿ ಕಾಯಿಗಳನ್ನು ಉಳಿಸಿ ಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ವರ್ಷ ಒಟ್ಟು ಇಳುವರಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

ಕಳೆದ ವರ್ಷ 6,569 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗಿತ್ತು. 75,548 ಟನ್‌ ಮಾವಿನ ಫಸಲು ಉತ್ಪಾದನೆಯಾಗಿತ್ತು. ಆದರೆ, ಈ ಬಾರಿ ಅತಿಯಾದ ಬಿಸಿಲಿನ ಕಾರಣಕ್ಕೆ ಮಾವಿನ ಫಸಲು ಇರುವ ವಿಸ್ತೀರ್ಣ ಅರ್ಧದಷ್ಟು ಕಡಿಮೆಯಾಗಿದೆ. 2,320 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಮಾತ್ರ ಮಾವಿನ ಫಸಲು ಇದೆ. ಇದರಿಂದ 40,000 ಟನ್‌ ಮಾವಿನ ಹಣ್ಣಿನ ಇಳುವರಿ ನಿರೀಕ್ಷಿಸಲಾಗಿದೆ. ಈಗಾಗಲೇ ಹಣ್ಣುಗಳ ಕೊಯ್ಲು ಆರಂಭವಾಗಿದ್ದು, ನಿಧಾನವಾಗಿ ಮಾರುಕಟ್ಟೆಗೆ ಬರುತ್ತಿದೆ. ಜಿಲ್ಲೆಯಲ್ಲಿ ತೋತಾಪುರಿ, ಬಾದಾಮಿ, ಆಲ್ಫೋನ್ಸೋ, ನೀಲಂ ತಳಿಯ ಮಾವಿನ ಫಸಲು ಇದೆ.

‘ಈ ಬಾರಿ ಬಿರುಗಾಳಿ ಇರಲಿಲ್ಲ ವಾದ್ದರಿಂದ ಹೆಚ್ಚು ಇಳುವರಿ ನಿರೀಕ್ಷೆ ಮಾಡಿದ್ದೆವು. ಆದರೆ, ಬಿಸಿಲು ಹೆಚ್ಚಾದ ಕಾರಣ ಹಣ್ಣು ಉಳಿಯಲಿಲ್ಲ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತು. ಕಳೆದ ಮೂರು ದಿನಗಳಿಂದ ಹೆಚ್ಚು ಗಾಳಿಯೂ ಆರಂಭವಾಗಿದ್ದು, ಮತ್ತೆ ಕಾಯಿಗಳು ಉದುರುತ್ತಿವೆ. ನಷ್ಟ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೊಳಲು ಗ್ರಾಮದ ಮಾವು ಬೆಳೆಗಾರ ನಾಗರಾಜ್‌ ಹೇಳಿದರು.

ಬೆಲೆ ದುಬಾರಿ: ಮಾವಿನ ಹಣ್ಣಿನ ಉತ್ಪಾದನೆ ಕುಗ್ಗಿರುವ ಹಿನ್ನೆಲೆಯಲ್ಲಿ ಸಹಜವಾಗಿ ಬೆಲೆ ದುಬಾರಿಯಾಗಿದೆ. ಎಲ್ಲಾ ತಳಿಯ ಆರಂಭಿಕ ಬೆಲೆಯೇ ಕೆ.ಜಿಗೆ ₹ 100 ಇದೆ. ಗ್ರಾಹಕರು ಬೆಲೆ ಕೇಳಿ ಬೆಚ್ಚಿ ಬೀಳುವಂತಾಗಿದೆ. ಅಷ್ಟು ದರ ನೀಡಿದರೂ ಉತ್ತಮ ಗುಣಮಟ್ಟದ ಹಣ್ಣುಗಳು ದೊರೆಯುತ್ತಿಲ್ಲ. ಒಣಗಿ ದಂತಿರುವ ಹಣ್ಣುಗಳನ್ನು ಖರೀದಿ ಮಾಡಬೇಕಾಗಿದೆ. ಮಾವಿನ ಹಣ್ಣಿನ ಪರಿಮಳವೂ ಮೂಗು ತಲುಪುತ್ತಿಲ್ಲ. ಗ್ರಾಹಕರು ಕೂಡ ಮಾವಿನಹಣ್ಣು ಖರೀದಿಗೆ ಅನುಮಾನ ಪಡುವ ಸ್ಥಿತಿ ಉಂಟಾಗಿದೆ.

ಪ್ರತಿವರ್ಷ ಏಪ್ರಿಲ್‌ನಲ್ಲೇ ಉತ್ತಮ ಗುಣಮಟ್ಟದ ಹಣ್ಣು ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಈ ಬಾರಿ ಮಾವಿನ ಹಣ್ಣಿನ ಕಾಲ ಎಂದು ಅನ್ನಿಸುತ್ತಲೇ ಇಲ್ಲ. ಹಣ್ಣುಗಳನ್ನು ನೋಡಿದರೆ ಕೊಳ್ಳಲೂ ಮನಸ್ಸು ಬರುತ್ತಿಲ್ಲ ಎಂದು ಗ್ರಾಹಕರೊಬ್ಬರು ತಿಳಿಸಿದರು.

 

ಜೂನ್‌ನಲ್ಲಿ ಮಾವು ಮೇಳ

ಪ್ರತಿ ವರ್ಷದಂತೆ ಈ ಬಾರಿಯೂ ತೋಟಗಾರಿಕೆ ಇಲಾಖೆ ಕಾವೇರಿ ಉದ್ಯಾನದ ಸಮೀಪ ಮಾವು ಮೇಳ ಆಯೋಜಿಸಲು ನಿರ್ಧರಿಸಿದೆ. ರಾಸಾಯನಿಕಮುಕ್ತ ಸಾವಯವ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಇಲಾಖೆ ಮೇಳ ಆಯೋಜನೆ ಮಾಡುತ್ತಿದೆ. ಮಂಡ್ಯ ಮಾತ್ರವಲ್ಲದೆ ಹೊರಗಿನ ಜಿಲ್ಲೆಗಳ ಬೆಳೆಗಾರರೂ ಮಾವಿನ ಹಣ್ಣು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಇಲಾಖೆ ಸಹಾಯಧನದಲ್ಲಿ ಕ್ರೇಟ್‌ಗಳು, ಬಲೆ ಮಾರಾಟ ಮಾಡುತ್ತಿದೆ.

ಲೋಕಸಭಾ ಚುನಾವಣೆ ಎಣಿಕೆ ಕಾರ್ಯ ಮುಗಿದ ನಂತರ ಜೂನ್‌ನಲ್ಲಿ ಮಾವಿನ ಮೇಳ ಆಯೋಜಿಸಲಾಗುವುದು. ಶೀಘ್ರ ದಿನಾಂಕ ಪ್ರಕಟಿಸಲಾಗುವುದು ಎಂದು ಇಲಾಖೆ ಉಪ ನಿರ್ದೇಶಕ ರಾಜು ತಿಳಿಸಿದರು.

 

ರಾಸಾಯನಿಕ ಬಳಸಿದರೆ ಕ್ರಮ

ರಾಸಾಯನಿಕ ಬಳಸಿ ಹಣ್ಣು ಮಾಗಿಸುವ ವ್ಯಾಪಾರಿಗಳ ವಿರುದ್ಧ ತೋಟಗಾರಿಕೆ ಇಲಾಖೆ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.  ಅಪಾಯಕಾರಿ ‘ಕ್ಯಾಲ್ಸಿಯಂ ಕಾರ್ಬೈಡ್‌’ ರಾಸಾಯನಿಕ ಬಳಸಿ ಹಣ್ಣುಗಳನ್ನು ಮಾಗಿಸುವುದು ಪತ್ತೆಯಾಗಿದೆ. ಇದರಿಂದ ಹಣ್ಣು ತಾಜಾತನ ಕಳೆದುಕೊಳ್ಳಲಿದ್ದು, ಕೇವಲ ಬಣ್ಣದಿಂದ ಗ್ರಾಹಕರನ್ನು ಸೆಳೆಯುತ್ತದೆ. ಈ ರಾಸಾಯನಿಕದಲ್ಲಿ ಕ್ಯಾನ್ಸರ್‌ಕಾರಕ ಆರ್ಸಿಯೋ ಜೆನಿಕ್‌ ಅಂಶವಿದ್ದು, ಅದರ ಬಳಕೆಯನ್ನು ನಿಷೇಧಿಸಲಾಗಿದೆ.

ಕ್ಯಾಲ್ಸಿಯಂ ಕಾರ್ಬೈಡ್‌ ರಾಸಾಯನಿಕ ಬಳಕೆ ಮಾಡಿದರೆ ಆಹಾರ ಕಲಬೆರಕೆ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಲಾಗುವುದು. ಆರೋಪ ಸಾಬೀತಾದರೆ ಐದು ವರ್ಷ ಜೈಲುಶಿಕ್ಷೆ, ₹2 ಲಕ್ಷದವರೆಗೆ ದಂಡವಿಧಿಸುವ ಅವಕಾಶವಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ರಾಜು ಎಚ್ಚರಿಕೆ ನೀಡಿದರು.

Post Comments (+)