ಬುಧವಾರ, ಅಕ್ಟೋಬರ್ 23, 2019
20 °C
ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ; ಫಲಿತಾಂಶ ಘೋಷಣೆ ಮಂಗಳವಾರಕ್ಕೆ ಮುಂದೂಡಿಕೆ

ಮನ್‌ಮುಲ್‌: ಸ್ವಾಮಿ ಆಯ್ಕೆ ಬಹುತೇಕ ಖಚಿತ?

Published:
Updated:
Prajavani

ಮದ್ದೂರು: ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಜಿಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟದ (ಮನ್‌ಮುಲ್‌) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಸೋಮವಾರ ನಡೆಯಿತು. ಫಲಿತಾಂಶ ಘೋಷಣೆ ಬಾಕಿ ಉಳಿದಿದ್ದು ಜೆಡಿಎಸ್‌ ಬೆಂಬಲದೊಂದಿಗೆ ಗೆದ್ದು ಬಿಜೆಪಿ ತೆಕ್ಕೆಗೆ ಸೇರಿರುವ ಎಸ್‌.ಪಿ.ಸ್ವಾಮಿ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ ಬೆಂಬಲಿತ ನಿರ್ದೇಶಕ ರಾಮಚಂದ್ರು ಹಾಗೂ ವಿಶ್ವನಾಥ್, ಉಪಾಧ್ಯಕ್ಷ ಸ್ಥಾನಕ್ಕೆ ರಘುನಂದನ್ ನಾಮಪತ್ರ ಸಲ್ಲಿಸಿದರು.  ಮೈಸೂರು ವಿಭಾಗ ಜೆಡಿಎಸ್ ವೀಕ್ಷಕರಾಗಿದ್ದ ಎಸ್.ಪಿ.ಸ್ವಾಮಿ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮಣ್ಣ ಆಯ್ಕೆಬಯಸಿ ನಾಮಪತ್ರವನ್ನು ಸಲ್ಲಸಿದರು.

ನಂತರ  ವಿಶ್ವನಾಥ್ ನಾಮಪತ್ರ ಹಿಂಪಡೆದುಕೊಂಡ ಕಾರಣ ಜೆಡಿಎಸ್ ನಿಂದ ರಾಮಚಂದ್ರು ಮಾತ್ರ ಅಧ್ಯಕ್ಷ ಸ್ಥಾನ ಕಣದಲ್ಲಿ ಉಳಿದುಕೊಂಡರು. ಚುನಾವಣಾಧಿಕಾರಿ, ಅಪರ ಜಿಲ್ಲಾಧಿಕಾರಿ ಯೋಗೇಶ್ ಸಮ್ಮುಖದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.  ಜೆಡಿಎಸ್ ಬೆಂಬಲಿತ ನಿರ್ದೇಶಕರಾದ ಬಾಲಕೃಷ್ಣ ಹಾಗೂ ಎಚ್‌.ಟಿ.ಮಂಜು ಅವರ ಆಯ್ಕೆ ಕುರಿತ ಪ್ರಕರಣದ ಆದೇಶ ಮಂಗಳವಾರ ಬರುವ ನಿರೀಕ್ಷೆ ಇರುವ ಕಾರಣ ಚುನಾವಣೆಯ ಫಲಿತಾಂಶ ಘೋಷಣೆಯನ್ನು ಮಂಗಳವಾರಕ್ಕೆ ಕಾಯ್ದಿರಿಸಲಾಯಿತು.

ಸ್ವಾಮಿ ಆಯ್ಕೆ ಖಚಿತ: ಅಧಿಕಾರಕ್ಕಾಗಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರುವ ಸ್ವಾಮಿ ಆಯ್ಕೆ ಖಚಿತ ಎಂದೇ ಹೇಳಲಾಗುತ್ತಿದೆ. 8 ಸ್ಥಾನ ಗಳಿಸಿದ್ದರೂ ಮನ್‌ಮುಲ್‌ ಆಡಳಿತ ಹಿಡಿಯಲು ಸಾಧ್ಯವಾಗುತ್ತಿಲ್ಲ ಎನ್ನುವುದು ಜೆಡಿಎಸ್‌ ಮುಖಂಡರ ಕೊರಗು.

ಕೇವಲ ಒಂದು ನಿರ್ದೇಶಕ ಸ್ಥಾನ ಗೆಲುವು ಕಂಡಿರುವ ಬಿಜೆಪಿ ಮೂವರು ಕಾಂಗ್ರೆಸ್‌ ಬೆಂಬಲಿತರು, ಒಬ್ಬರು ನಾಮ ನಿರ್ದೇಶಿತ ನಿರ್ದೇಶಕರು, ಅಧಿಕಾರಿ ವಲಯದ ಮೂವರು ನಾಮನಿರ್ದೇಶಿತರು ಸೇರಿ ಒಟ್ಟು 9 ನಿರ್ದೇಶಕರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಬಿಜೆಪಿ ಹಿಡಿಯುವ ಲಕ್ಷಣಗಳು ದಟ್ಟವಾಗಿವೆ. ಎಲ್ಲದಕ್ಕೂ ಮಂಗಳವಾರ ಉತ್ತರ ದೊರೆಯಲಿದೆ.

ಸೋಮವಾರ ನಡೆದ ಚುನಾವಣೆಯ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು ಕುತೂಹಲ ಮನೆ ಮಾಡಿದೆ. ಚುನಾವಣೆಗೂ ಮುನ್ನ ಜೆಡಿಎಸ್ ಶಾಸಕರಾದ ಡಿ.ಸಿ.ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಅನ್ನದಾನಿ, ಸುರೇಶ್‌ಗೌಡ, ಎಂ.ಶ್ರೀನಿವಾಸ್ ಹಾಗೂ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ಪ್ರವಾಸಿ ಮಂದಿರದಲ್ಲಿ ಸೇರಿ  ಮಾತುಕತೆ ನಡೆಸಿದರು. ನಂತರ ನಿರ್ದೇಶಕರು ಪ್ರವಾಸಿ ಮಂದಿರದಿಂದ ಚುನಾವಣೆಯ ವೇಳೆಗೆ ಗೆಜ್ಜಲಗೆರೆಯಲ್ಲಿರುವ ಮನ್‌ಮುಲ್ ಪ್ರವೇಶಿಸಿದರು.

ಎಸ್.ಪಿ.ಸ್ವಾಮಿ ಮಂಡ್ಯದ ಬಿಜೆಪಿ ನಾಯಕರಾದ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದರು. ಬಿಜೆಪಿಯ ಬೆಂಲಿತ ನಿರ್ದೇಶಕಿ ರೂಪಾ ಕೂಡಾ ಬಿಜೆಪಿ ಮುಖಂಡರೊಂದಿಗೆ ಚರ್ಚಿಸಿದರು.

ಮತದಾನದ ನಂತರ ಮತ ಪೆಟ್ಟಿಗೆಗಳನ್ನು ಪೊಲೀಸರ ಬಂದೋಬಸ್ತ್‌ನಲ್ಲಿ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿಯ ಖಜಾನೆಯಲ್ಲಿ ಇಡಲಾಯಿತು. ಫಲಿತಾಂಶ ಘೋಷಣೆಗೂ ಮುನ್ನವೇ ಎಸ್‌.ಪಿ.ಸ್ವಾಮಿ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)