ಮದ್ದೂರು ತುಂಬೆಲ್ಲ ಸಂಭ್ರಮ

ಶುಕ್ರವಾರ, ಮೇ 24, 2019
29 °C
ಕೊಂಡೋತ್ಸವ ಇಂದು: ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು

ಮದ್ದೂರು ತುಂಬೆಲ್ಲ ಸಂಭ್ರಮ

Published:
Updated:
Prajavani

ಮದ್ದೂರು: ಪುರಾಣ ಪ್ರಸಿದ್ಧ ಮದ್ದೂರಮ್ಮನವರ ಜಾತ್ರಾ ಮಹೋತ್ಸವ ಅತ್ಯಂತ ಸಂಭ್ರಮ, ಸಡಗರದಿಂದ ನಡೆಯುತ್ತಿದ್ದು, ಪಟ್ಟಣದ ಬೀದಿಗಳು ತಳಿರು, ತೋರಣಗಳಿಂದ ಅಲಂಕೃತಗೊಂಡಿವೆ.

ಏ.21ರಂದು ಆರಂಭವಾದ ಉತ್ಸವ ಹಲವು ಧಾರ್ಮಿಕ ಉತ್ಸವಗಳೊಂದಿಗೆ ನಡೆಯುತ್ತಿದೆ. ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿರುವ ಮದ್ದೂರಮ್ಮನ ದೇವಸ್ಥಾನ ಹಲವು ಪೂಜಾ ಕೈಂಕರ್ಯಕ್ಕೆ ಸಾಕ್ಷಿಯಾಗಿದೆ. ಮಂಗಳವಾರ ಬೆಳಿಗ್ಗೆ ಹೋಮ, ಹವನ ನಡೆದವು. ಮಧ್ಯಾಹ್ನ 2.30ಕ್ಕೆ ಎಲ್ಲಮ್ಮ ದೇವಿಯವರಿಗೆ ಚಂದ್ರಭಂಡಾರ ಸೇವೆ ಸಲ್ಲಿಸಲಾಯಿತು.

ಸಂಜೆ 4ಕ್ಕೆ ಮದ್ದೂರಿನ ಗ್ರಾಮಸ್ಥರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಂಡಿ ಉತ್ಸವ ನಡೆಯಿತು. ಸಂಜೆ 6.30ಕ್ಕೆ ಮದ್ದೂರಮ್ಮನವರ ಮೂಲ ದೇವಸ್ಥಾನದಲ್ಲಿ ಅಭಿಷೇಕ ಮತ್ತು ಹೋಮ ಹವನ ನಡೆದವು. ರಾತ್ರಿ ಕೊಂಡಕ್ಕೆ ಅಗ್ನಿ ಸ್ಪರ್ಶ ನೆರವೇರಿಸಲಾಯಿತು.

ಏ.24ರ ಬುಧವಾರ ಬೆಳಿಗ್ಗೆ 6ರ ಬ್ರಾಹ್ಮಿ ಮುಹೂರ್ತದಲ್ಲಿ ಕೊಂಡೋತ್ಸವ ನಡೆಯಲಿದ್ದು, ಭಕ್ತ ಸಾಗರವೇ ಬಂದು ಸೇರಲಿದೆ. ಏ.25ರಂದು ಸಿಡಿ ಉತ್ಸವ ನಡೆಯಲಿದೆ. ಏ.26ರಂದು ಸಂಜೆ 4ಕ್ಕೆ ಮದ್ದೂರಮ್ಮನವರಿಗೆ ಓಕುಳಿ ಸೇವೆ, ಸಂಜೆ 6.30ಕ್ಕೆ ಉಯ್ಯಾಲೆ ಉತ್ಸವ, ರಾತ್ರಿ 9ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಏ.27ರಂದು ಅಮ್ಮನವರಿಗೆ ಎಣ್ಣೆ ಮಜ್ಜನ ಸೇವೆ, ಪುಷ್ಪಾಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.

ಉಗ್ರನರಸಿಂಹ ದೇವರ ರಥೋತ್ಸವ: ಪುರಾಣ ಪ್ರಸಿದ್ಧ ಉಗ್ರ ನರಸಿಂಹಸ್ವಾಮಿ ಬ್ರಹ್ಮ ರಥೋತ್ಸವವು ಏ.25ರಂದು ನಡೆಯಲಿದೆ. ಮಧ್ಯಾಹ್ನ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

ದನಗಳ ಜಾತ್ರೆ: ಮದ್ದೂರಿನಲ್ಲಿ ಜಾತ್ರಾ ಮಹೋತ್ಸವವು ಆರಂಭವಾಗುವುದಕ್ಕೂ ಮುನ್ನ ದನಗಳ ಜಾತ್ರೆಯೂ ಆರಂಭವಾಗುತ್ತದೆ. ಮಳವಳ್ಳಿ, ಮಂಡ್ಯ, ಚನ್ನಪಟ್ಟಣ, ರಾಮನಗರ ಸೇರಿದಂತೆ ವಿವಿಧ ಭಾಗಗಳಿಂದ ರಾಸುಗಳು ಬಂದಿವೆ. ₹ 50 ಸಾವಿರದಿಂದ ₹ 2 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ವಿವಿಧ ಜಾತಿಯ ರಾಸುಗಳು ಜಾತ್ರೆಯಲ್ಲಿರುವುದು ವಿಶೇಷ. ದನಗಳ ಜಾತ್ರೆಯು ಏ.20ರಿಂದ ಆರಂಭವಾಗಿದ್ದು, ಏ.30ರವರೆಗೆ ನಡೆಯಲಿದೆ.

ರಾಜ್ಯದಲ್ಲೆಡೆ ಹೆಸರಾಗಿರುವ ಮದ್ದೂರಮ್ಮನವರ ಜಾತ್ರಾ ಮಹೋತ್ಸವಕ್ಕೆ ದೂರದೂರುಗಳಿಂದ ಜನರು ಭೇಟಿ ನೀಡುತ್ತಿದ್ದಾರೆ. ಈ ಹಬ್ಬದ ಬಗ್ಗೆ ಹಿರಿಯರು ಆಡಿರುವ ಒಂದು ನಾಣ್ಣುಡಿಯಂತೆ ‘ತೈಲೂರ ಕೊಂಡ ಚೆಂದ, ಹೆಮ್ಮನಹಳ್ಳಿಯ ಬಂಡಿ ಚೆಂದ, ಮದ್ದೂರ ಸಿಡಿ ನೋಡಲು ಚೆಂದವೋ ಚಂದ’ ಎಂಬ ಮಾತು ಹಿಂದಿನಿಂದಲೂ ಚಾಲ್ತಿಯಲ್ಲಿದೆ.

ಕ್ಷೇತ್ರದ ಹಿನ್ನೆಲೆ:
ಹಿಂದೆ ಕೊಡಗಿನ ಭೈರಶೆಟ್ಟಿ ಎಂಬಾತ ಮದ್ದೂರಿನಲ್ಲಿ ಅಡಿಕೆ ವ್ಯಾಪಾರ ಮಾಡಲು ಬರುತ್ತಿದ್ದಾಗ, ಆತನಿಗೆ ಕೊಡಗಿನಲ್ಲಿ ಪ್ರೇಯಸಿ ಇದ್ದಳು. ಇವರ ಪ್ರೇಮ ಅರಿತ ಎರಡು ಕಡೆಯವರು ಕೊಲೆ ಸಂಚು ಮಾಡಿದ್ದರು. ವಿಷಯ ತಿಳಿದ ಭೈರಶೆಟ್ಟಿ ತನ್ನ ಪ್ರೇಯಸಿಗೆ ಎಲ್ಲಿಯಾದರೂ ಹೋಗಿ ಜೀವ ಉಳಿಸಿಕೊಳ್ಳಲು ಹೇಳಿ, ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ದೇವಿಗೆ ಹರಕೆ ಹೊತ್ತು ಎತ್ತಿನ ಗಾಡಿ ಏರಿ ತಾನು ಮದ್ದೂರಿನೆಡೆಗೆ ಹೊರಟ.

ದೇವಿಯನ್ನು ಮನದಲ್ಲೇ ನೆನೆದು, ಶ್ರದ್ಧಾ– ಭಕ್ತಿಯಿಂದ ದೇವಿಯ ಆರಾಧನೆ ಮಾಡಿದ. ಈತನ ಭಕ್ತಿಗೆ ಮೆಚ್ಚಿದ ದೇವಿ ಕೊಡಗಿನ ಗಡಿಯಲ್ಲಿ ಮುದುಕಿ ವೇಷಧಾರಿಯಾಗಿ ಈತನ ಗಾಡಿಯಲ್ಲಿ ಕುಳಿತಳು. ಅಲ್ಲಿಂದ ಗಾಡಿಯಲ್ಲಿ ಮದ್ದೂರಿನ ಗುಂಡು ತೋಪಿಗೆ ಬಂದಿಳಿದು ನೆಲೆಯಾದಳು. ನಂತರ ಅಂದು ಕನಸಿನಲ್ಲಿ ಭೈರಶೆಟ್ಟಿಗೆ ದರ್ಶನ ನೀಡಿದ ದೇವಿ, ನಿನ್ನ ಪ್ರೇಯಸಿಯ ಮನೆ ದೇವರು ನಾನು.

ನಿನ್ನನ್ನು ರಕ್ಷಿಸಲೆಂದೇ ಬಂದೆ. ಇನ್ನು ಮುಂದೆ ಮದ್ದೂರಿನಲ್ಲಿಯೇ ನೆಲೆಯಾಗುತ್ತೇನೆ ಎಂದು ಅದೃಶ್ಯಳಾದಳಂತೆ. ಬೆಳಿಗ್ಗೆ ಎದ್ದ ಭೈರಶೆಟ್ಟಿ ಕನಸಿನಲ್ಲಿ ಕಂಡ ಸ್ಥಳದಲ್ಲಿ ಮೂಡಿದ್ದ ಕಲ್ಲುಗಳನ್ನು ತೊಳೆದು ಪೂಜೆ ಆರಂಭಿಸಿದ. ಅಂದಿನಿಂದ ಅದೇ ದೇವತೆ ಮದ್ದೂರಮ್ಮನವರ ಹೆಸರಿನಿಂದ ನೆಲೆ ನಿಂತ ಊರು ಮದ್ದೂರಾಯಿತು. ನೆಲೆ ನಿಂತ ದೇವತೆಗೆ ಮದ್ದೂರಮ್ಮ ಎಂಬ ಹೆಸರು ಜನಜನಿತವಾಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !