ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ- ಮಾರ್ಲಾಮಿ ಹಬ್ಬ; ಎಲ್ಲೆಡೆ ಭರ್ಜರಿ ಬಾಡೂಟ

ಮಹಾಲಯ ಅಮಾವಾಸ್ಯೆ: ನಿಧನ ಹೊಂದಿದ ಹಿರಿಯರಿಗೆ ನೈವೇದ್ಯ ಅರ್ಪಣೆ
Last Updated 25 ಸೆಪ್ಟೆಂಬರ್ 2022, 13:14 IST
ಅಕ್ಷರ ಗಾತ್ರ

ಮಂಡ್ಯ: ನಗರ, ಗ್ರಾಮಾಂತರ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಭಾನುವಾರ ಜನರು ಪಿತೃಪಕ್ಷ ಆಚರಿಸಿದರು. ಮಾರ್ಲಾಮಿ ಹಬ್ಬ ಎಂದೇ ಪ್ರಸಿದ್ಧಿ ಪಡೆದಿರುವ ಆಚರಣೆಯಲ್ಲಿ ಬಾಡೂಟ ತಯಾರಿಸಿ ಸಂಭ್ರಮಿಸಿದರು.

ಹಬ್ಬಕ್ಕೆ ಮಾಂಸದೂಟ ಮಾಡಿ ನಿಧನ ಹೊಂದಿರುವ ಮನೆಯ ಹಿರಿಯರಿಗೆ ಎಡೆ ಅರ್ಪಿಸಿದರು. ವಿವಿಧ ನಗರ, ಪಟ್ಟಣಗಳಿಗೆ ದುಡಿಯಲು ತೆರಳಿದ್ದ ಜನರು ಮನೆಗೆ ಮರಳಿ ಹಿರಿಯರಿಗೆ ನೈವೇದ್ಯ ಅರ್ಪಿಸಿದರು. ನಂತರ ನೆಂಟರಿಷ್ಟರಿಗೆ ಮಾಂಸದೂಟ ಬಡಿಸಿ ಹಬ್ಬ ಆಚರಣೆ ಮಾಡಿದರು. ಹಳ್ಳಿಗಳಲ್ಲಿ ಮನೆಗೊಂದು, ಎರಡು ಮರಿ ಕಡಿದು ಮಾಂಸದೂಟ ತಯಾರಿಸಿದರು.

ಹಬ್ಬದ ಅಂಗವಾಗಿ ಕುರಿ, ಮೇಕೆ ಮಾಂಸ, ಕೋಳಿ ಮಾಂಸಕ್ಕೆ ವಿಪರೀತ ಬೇಡಿಕೆ ನಿರ್ಮಾಣವಾಗಿತ್ತು. ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಾಂಸದ ಅಂಗಡಿಗಳು ತುಂಬಿ ತುಳುಕುತ್ತಿದ್ದವು. ಚಿಕ್ಕಮಂಡ್ಯ ಮಾಂಸದ ಅಂಗಡಿಗಳಲ್ಲಿ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಮಾಂಸ ಖರೀದಿ ಮಾಡುತ್ತಿದ್ದರು. ಗುಡ್ಡೆ ಬಾಡು ಖರೀದಿಸಲು ಕೂಡ ಜನರು ಸಾಲಿನಲ್ಲಿ ನಿಂತಿದ್ದರು.

ನಿಧನರಾದ ಹಿರಿಯರು ಸೇವಿಸುತ್ತಿದ್ದ ಇಷ್ಟದ ಆಹಾರ ಪದಾರ್ಥಗಳು, ಅವರ ಧರಿಸುತ್ತಿದ್ದ ಬಟ್ಟೆಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ಹಿರಿಯರಿಗೆ ಇಷ್ಟವಾಗಿದ್ದ ಬೀಡಿ, ಸಿಗರೇಟು, ಮದ್ಯದ ಬಾಟಲಿಗಳನ್ನೂ ಇಟ್ಟು ಪೂಜಿಸಿದರು. ಹಬ್ಬದ ಅಂಗವಾಗಿ ಕಳೆದ ಎರಡು ದಿನಗಳ ಕಾಲ ನಗರದ ಮಾರುಕಟ್ಟೆಗಳಲ್ಲಿ, ಹಳ್ಳಿಗಳ ಸಂತೆಗಳಲ್ಲಿ ಭರ್ಜರಿ ಖರೀದಿ ನಡೆಯಿತು.

ಹಬ್ಬದ ಪ್ರಯುಕ್ತ ವಸ್ತುಗಳ ಬೆಲೆ ತುಸು ಏರಿಕೆ ಕಂಡಿತ್ತು. ಹೂವು, ಹಣ್ಣು ಸೇರಿದಂತೆ ಇತರ ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೆ ಏರಿತ್ತು. ಬೆಲೆ ಏರಿಕೆಯ ನಡುವೆಯೂ ಜನರು ಉತ್ಸಾಹದಿಂದ ಅಗತ್ಯ ವಸ್ತುಗಳನ್ನು ಖರೀದಿ ಮಾಡಿದರು. ಮಹಾಲಯ ಅಮಾವಾಸ್ಯೆ ಅಂಗವಾಗಿ ನಗರದ ಕಾಳಿಕಾಂಬ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು.

ವಾಹನ ಸವಾರರು ಬೈಕ್‌ ಸೇರಿದಂತೆ ಇತರ ವಾಹನ ತೊಳೆದು ದೇವಸ್ಥಾನದಲ್ಲಿ ಪೂಜೆ ಮಾಡಿಸಿದರು. ಶಕ್ತಿ ದೇವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಭಕ್ತರು ಬಂದು ದೇವರ ದರ್ಶನ ಪಡೆಯುತ್ತಿದ್ದರು.

‘ಮಾರ್ಲಾಮಿ ಹಬ್ಬದಲ್ಲಿ ಹಿರಿಯರಿಗೆ ಎಡೆ ಅರ್ಪಿಸುವುದು ಸಂಪ್ರದಾಯ. ಮಕ್ಕಳು ನಿಧನ ಹೊಂದಿದ ತಮ್ಮ ತಂದೆ–ತಾಯಿಗೆ ತಪ್ಪದೇ ಎಡೆ ಇಡುತ್ತಾರೆ. ಕೆಲವರು ನದಿ ತೀರಗಳಿಗೆ ತೆರಳಿ ಹಿರಿಯರ ಹೆಸರಿನಲ್ಲಿ ಪೂಜೆ ಮಾಡಿಸುತ್ತಾರೆ. ಇನ್ನೂ ಕೆಲವರು ದೇವಾಲಯಗಳಿಗೆ ತೆರಳಿ ಅಲ್ಲಿ ಪೂಜೆ ಮಾಡಿಸುತ್ತಾರೆ. ಮಂಡ್ಯ, ಮೈಸೂರು, ಹಾಸನ ಭಾಗದಲ್ಲಿ ಮಾಂಸದೂಟ ಮಾಡಿ ಹಬ್ಬ ಮಾಡುವುದು ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ’ ಎಂದು ಮಂಡ್ಯದ ರಾಜೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT