ಶುಕ್ರವಾರ, ಡಿಸೆಂಬರ್ 6, 2019
19 °C

ಆರ್‌ಎಂಪಿ ವೈದ್ಯನ ಚುಚ್ಚುಮದ್ದಿನಿಂದ ರೋಗಿ ಸಾವು: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಲಗೂರು: ಆರ್‌ಎಂಪಿ ವೈದ್ಯ ನೀಡಿದ ಚುಚ್ಚುಮದ್ದಿನಿಂದ ಇಲ್ಲಿಯ ದಡಮಹಳ್ಳಿ ಗ್ರಾಮದ ಶಿವಲಿಂಗೇಗೌಡ (58) ಮೃತಪಟ್ಟಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ಮಂಗಳೂರು ಮೂಲದ ಡಾ.ಕೃಷ್ಣಮೂರ್ತಿ ತೊರೆಕಾಡನಹಳ್ಳಿ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಆರ್‌ಎಂಪಿ ವೈದ್ಯರಾಗಿ ಕ್ಲಿನಿಕ್‌ ನಡೆಸುತ್ತಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಶಿವಲಿಂಗೇಗೌಡ ಕಳೆದ ಭಾನುವಾರ ಕೃಷ್ಣಮೂರ್ತಿ ಅವರಿಗೆ ತೋರಿಸಿದ್ದಾರೆ. ವೈದ್ಯರು ರೋಗಿಗೆ ಚುಚ್ಚುಮದ್ದು ನಿಡಿದ್ದಾರೆ. ಚುಚ್ಚುಮದ್ದು ನೀಡಿದ ಸ್ಥಳದಲಿ ಊತ ಆಗಿ ನೋವು ಕಾಣಿಸಿಕೊಂಡಿದೆ. ಸೋಮವಾರ ಪುನಃ ಕ್ಲಿನಿಕ್‌ಗೆ ತೆರಳಿದ್ದಾರೆ, ಊತದಿಂದ ಏನೂ ಆಗುವುದಿಲ್ಲ, ಮುಲಾಮು ಹಚ್ಚಿಕೊಳ್ಳುವಂತೆ ಹೇಳಿ ಕಳುಹಿಸಿದ್ದಾರೆ.

ಚುಚ್ಚುಮದ್ದು ನೀಡಿದ ಜಾಗದಲ್ಲಿ ನೋವು ತಾಳಲಾರದ ಶಿವಲಿಂಗೇಗೌಡ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ತೆರಳಿದ್ದಾರೆ. ಚುಚ್ಚುಮದ್ದು ಪಡೆದ ಜಾಗ ವಿಷಯುಕ್ತ ಅಂಶ ಸೇರದ್ದು ಅದು ದೇಹಪೂರ್ತಿ ಹರಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ತಕ್ಷಣ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ಧಾರೆ. ಸಾವಿಗೆ ಡಾ.ಕೃಷ್ಣಮೂರ್ತಿ ನೀಡಿದ ಚುಚ್ಚುಮದ್ದೇ ಕಾರಣ ಎಂದು ಸಂಬಂಧಿಕರು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ನನ್ನ ಚಿಕ್ಕಿಪ್ಪನಿಗೆ ಸಾಯುವಂತಹ ಕಾಯಿಲೆ ಇರಲಿಲ್ಲ. ಈ ವೈದ್ಯನ ಬಳಿ ಚುಚ್ಚುಮದ್ದು ಸ್ವೀಕರಿಸಿದ ಬಳಿಕ ದೇಹವಿಡೀ ವಿಷಪೂರಿವಾಯಿತು’ ಎಂದು ಮೃತರ ಸಂಬಂಧಿ ನಂದೀಶ್‌ ಆರೋಪಿಸಿದರು.

‘ಕ್ಲಿನಿಕ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೃಷ್ಣಮೂರ್ತಿ ಅವರು ಕರ್ನಾಟಕ ಖಾಸಗಿ ವೈದ್ಯಕೀಯ ಕಾಯ್ದೆ ಅನುಸಾರ ಯಾವುದೇ ದಾಖಲೆ ಸಲ್ಲಿಸಿಲ್ಲ. ಸದ್ಯ ಕ್ಲಿನಿಕ್ ಮುಚ್ಚಿಸಲಾಗಿದ್ದು, ತನಿಖೆ ಮುಗಿಯುವವರೆಗೂ ಚಿಕಿತ್ಸೆ ನೀಡದಂತೆ ಸೂಚನೆ ನೀಡಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ ಹೇಳಿದರು.

ಪ್ರತಿಕ್ರಿಯಿಸಿ (+)