ಮಂಗಳವಾರ, ನವೆಂಬರ್ 24, 2020
22 °C
ನೋವು ನಿವಾರಕ ಕೇಂದ್ರ ಎಂದೇ ಪ್ರಸಿದ್ಧಿ, ಮೂರು ಜಿಲ್ಲೆಯ ಜನರಿಗೆ ಅನುಕೂಲ, ಆಧುನಿಕ ಧನ್ವಂತರಿ

ಮಂದಗೆರೆ ಆಯುರ್ವೇದ ಚಿಕಿತ್ಸಾಲಯದ ಸುತ್ತ ವೈದ್ಯಕೀಯ ಸಸ್ಯಸಂಕುಲ

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಜಿಲ್ಲೆಯ ಗಡಿ ಭಾಗದಲ್ಲಿರುವ ಆಯುರ್ವೇದ ಆಸ್ಪತ್ರೆಯೊಂದು ಮೂರು ಜಿಲ್ಲೆಗಳಲ್ಲಿ ಪ್ರಸಿದ್ಧಿ ಪಡೆದಿದೆ. ಆಸ್ಪತ್ರೆ ಕಟ್ಟಡದ ಸುತ್ತಲೂ ವೈದ್ಯಕೀಯ ಸಸ್ಯಸಂಕುಲ ಬೆಳೆದೆ ನಿಂತಿದ್ದು ಹಲವು ಕ್ಲಿಷ್ಟಕರ ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ದೊರೆಯುತ್ತಿದೆ.

ಕೆ.ಆರ್‌.ಪೇಟೆ ತಾಲ್ಲೂಕು ಕಿಕ್ಕೇರಿಯಿಂದ 6 ಕಿ.ಮೀ ದೂರದಲ್ಲಿರುವ ಮಂದಗೆರೆ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಕ್ಕೆ ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲೆಯ ರೋಗಿಗಳು ಬರುತ್ತಾರೆ. ಇಂಗ್ಲಿಷ್‌ ವೈದ್ಯಕೀಯ ಚಿಕಿತ್ಸಾ ವಿಧಾನದಲ್ಲಿ ಗುಣ ಕಾಣದ ನೂರಾರು ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಜೊತೆಗೆ ನೆಮ್ಮದಿಯನ್ನೂ ಪಡೆದಿದ್ದಾರೆ.

ನೋವು ನಿವಾರಕ ಕೇಂದ್ರ ಎಂದೇ ಪ್ರಸಿದ್ಧಿ ಪಡೆದಿರುವ ಈ ಆಸ್ಪತ್ರೆಗೆ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಯುವ ವೈದ್ಯ ಡಾ.ಎಚ್‌.ಪಿ.ಚಂದ್ರಶೇಖರ್‌ ಕಳೆದ 12 ವರ್ಷಗಳಿಂದ ಗ್ರಾಮೀಣ ಜನರಿಗೆ ಆಧುನಿಕ ಧನ್ವಂತರಿಯಂತೆ ಕಂಡಿದ್ದಾರೆ. ಅವರ ಕೈಗುಣವನ್ನು ನಂಬುವ ಜನರು ದೂರದ ಊರುಗಳಿಂದ ಬಂದು ಚಿಕಿತ್ಸೆ ಪಡೆಯುತ್ತಾರೆ.

ಬೆಂಗಳೂರಿನಲ್ಲಿ ನೆಲಸಿರುವ ಈ ಭಾಗದ ಜನರು ಆರೋಗ್ಯ ಸಮಸ್ಯೆ ಇದ್ದಾಗ ಚಂದ್ರಶೇಖರ್‌ ಅವರನ್ನೇ ಹುಡುಕಿಕೊಂಡು ಬರುತ್ತಾರೆ. ಚಿಕಿತ್ಸಾಲಯದ ಖ್ಯಾತಿ ಬಾಯಿಯಿಂದ ಬಾಯಿಗೆ ಹರಡಿದ್ದು ಗ್ರಾಮೀಣ ಭಾಗದಲ್ಲಿ ಉತ್ತಮ ಚಿಕಿತ್ಸೆ ದೊರೆಯುವ ಆಸ್ಪತ್ರೆ ಎಂಬ ಖ್ಯಾತಿ ಪಡೆದಿದೆ.

ಆಸ್ಪತ್ರೆಯ ಒಂದು ಭಾಗವನ್ನು ಪಂಚಕರ್ಮ ಚಿಕಿತ್ಸೆಗಾಗಿ ಮೀಸಲಿಡಲಾಗಿದ್ದು ಶುದ್ಧ ವಾತಾವರಣ ಕಲ್ಪಿಸಲಾಗಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಕೊಠಡಿಯನ್ನೂ ರೂಪಿಸಲಾಗಿದೆ.  ಇಲ್ಲಿ ಚುಚ್ಚುಮದ್ದು, ಇಂಗ್ಲಿಷ್‌ ಮಾತ್ರೆಗಳ ವಿತರಣೆ ನಿಷಿದ್ಧ. ಡಾ.ಚಂದ್ರಶೇಖರ್‌ ಕಳೆದ 12 ವರ್ಷಗಳಿಂದ ಆಯುರ್ವೇದ ಚಿಕಿತ್ಸಾ ವಿಧಾನವನ್ನು ಹಳ್ಳಿಗಳಲ್ಲಿ ಪ್ರಚುರಪಡಿಸಲು ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ.

ಡಿಸ್ಕ್‌ ಸಮಸ್ಯೆ, ನರ ಸಂಬಂಧಿ ನೋವು, ಅಲರ್ಜಿ, ಶ್ವಾಸಕೋಶ, ಚರ್ಮವ್ಯಾದಿಗಳಿಗೆ ಸಂಜೀವಿನಿಯಂತಿರುವ ಆಸ್ಪತ್ರೆಯಲ್ಲಿ ನಿತ್ಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಸ್ತ್ರೀರೋಗ ಸಮಸ್ಯೆಗಳು, ಬಂಜೆತನ ನಿವಾರಣೆಗೂ ಚಿಕಿತ್ಸೆ ದೊರೆಯುತ್ತಿದೆ. ಆಸ್ಪತ್ರೆ ಸುತ್ತಲೂ ಅಮೃತಬಳ್ಳಿ, ಆಡುಸೋಗೆ, ನುಗ್ಗೆಕಾಯಿ ಗಿಡ, ದಾಳಿಂಬೆ, ಇನ್ಸುಲಿನ್‌ ಮುಂತಾದ ಸಸಿ ಬೆಳೆಸಲಾಗಿದೆ. ಎಲ್ಲಾ ಸಸಿಗಳ ಎಲೆಗಳನ್ನು ಒಂದುಗೂಡಿಸಿ ಬೇಯಿಸಿ, ಜಜ್ಜಿ ನೀಡುವ ‘ಪತ್ರಪಿಂಡ ಸ್ವೇದ’ ಚಿಕಿತ್ಸೆ ಪರಿಣಾಮಕಾರಿಯಾಗಿದೆ.

‘ನಾನು ಬೆಂಗಳೂರಿನಲ್ಲಿ ಆಟೊ ಓಡಿಸುತ್ತೇನೆ. ಡಿಸ್ಕ್‌ ತೊಂದರೆಯಾಗಿ ಮೂರು ತಿಂಗಳ ಕಾಲ ಹಾಸಿಗೆ ಹಿಡಿದಿದ್ದೆ. ಅಲ್ಲೇ ಆಸ್ಪತ್ರೆಗೆ ತೋರಿಸಿದಾಗ ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ತಿಳಿಸಿದರು. ಶಸ್ತ್ರಚಿಕಿತ್ಸೆ ಮಾಡಿಸುವುದಕ್ಕೂ ಮೊದಲು ಮಂದಗೆರೆ ಆಯುರ್ವೇದ ವೈದ್ಯರ ಬಳಿ ತೋರಿಸುವಂತೆ ಕೆಲವರು ಸಲಹೆ ಕೊಟ್ಟರು. ಇಲ್ಲಿ ಬಂದು ತೋರಿಸಿದಾಗ ಕೇವಲ 15 ದಿನಗಳಲ್ಲಿ ನೋವು ನಿಯಂತ್ರಣಕ್ಕೆ ಬಂತು’ ಎಂದು ಕಿಕ್ಕೇರಿಯ ರಾಮೇಗೌಡ ತಿಳಿಸಿದರು.

ರೋಗಗಳಿಗೇ ಸವಾಲು: ಹಲವು ವರ್ಷಗಳಿಂದ ಗುಣವಾಗದ ಸಮಸ್ಯೆಗಳನ್ನು ಡಾ.ಚಂದ್ರಶೇಖರ್‌ ಸವಾಲಾಗಿ ಸ್ವೀಕರಿಸುತ್ತಾರೆ. ತನ್ನ ಚಿಕಿತ್ಸೆಯಿಂದ ಈ ರೋಗ ಗುಣಪಡಿಸಲು ಸಾಧ್ಯವಿದೆ ಎಂಬ ವಿಶ್ವಾಸವನ್ನು ಮೊದಲು ರೋಗಿಗಳ ಮನಸ್ಸಿನಲ್ಲಿ ತುಂಬುತ್ತಾರೆ. ರೋಗ, ರೋಗಿಯನ್ನು ಅರಿತು ಚಿಕಿತ್ಸೆ ಆರಂಭಿಸುತ್ತಾರೆ. ದೀರ್ಘ ಕಾಲದ ಗ್ಯಾಂಗ್ರಿನ್‌, ಆಸ್ತಮಾ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಸಿಕ್ಕಿದೆ.

‘ಆಯುರ್ವೇದ ಎಂದರೆ ಕೇವಲ ಗಿಡಮೂಲಿಕೆ ಮಾತ್ರವಲ್ಲ, ಆಯುರ್ವೇದವನ್ನು ಎಲ್ಲಾ ವಿಜ್ಞಾನಗಳ ತಾಯಿ ಎನ್ನಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಆಯುರ್ವೇದ ಜಾಗೃತಿ ಮೂಡಿಸುವುದು ಆಯುಷ್‌ ಇಲಾಖೆಯ ಉದ್ದೇಶ. ನಮ್ಮ ಮೇಲಾಧಿಕಾರಿಗಳ ಪ್ರೋತ್ಸಾಹ, ಜನರ ಸಹಕಾರದಿಂದ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಿದೆ’ ಎಂದು ಡಾ.ಎಚ್‌.ಪಿ.ಚಂದ್ರಶೇಖರ್‌ ತಿಳಿಸಿದರು.

ಗ್ರಾಮೀಣ ಜನರಿಗೆ ಪ್ರಾಣಾಯಾಮದ ಅರಿವು

ಡಾ.ಚಂದ್ರಶೇಖರ್‌ ಅವರು ಗ್ರಾಮೀಣ ಭಾಗದ ಜನರಲ್ಲಿ ಯೋಗ ಮತ್ತು ಪ್ರಾಣಾಯಾಮದ ಅರಿವು ಮೂಡಿಸುತ್ತಿದ್ದಾರೆ. ಹಳ್ಳಿಗಳಿಗೆ ತೆರಳಿ ಅಲ್ಲಿಯ ಅಂಗನವಾಡಿಗಳಲ್ಲಿ ಜನರನ್ನು ಒಂದುಗೂಡಿಸಿ ಪ್ರಾಣಾಯಾಮದ ಮಹಿಮೆಯನ್ನು ತಿಳಿಸುತ್ತಾರೆ. ಹಲವು ಶಿಬಿರಗಳನ್ನೂ ಆಯೋಜಿಸಿ ಜಾಗೃತಿ ಮೂಡಿಸುತ್ತಿದ್ದಾರೆ.

ಈ ಕೋವಿಡ್‌ ಅವಧಿಯಲ್ಲಿ ಜನರ ದಿನಚರಿ ಹೇಗಿರಬೇಕು ಎಂಬ ಬಗ್ಗೆಯೂ ತಿಳಿವಳಿಕೆ ಮೂಡಿಸುತ್ತಿದ್ದಾರೆ. ಮನೆಯಲ್ಲೇ ಮದ್ದು ತಯಾರಿಸಿಕೊಳ್ಳುವ ಬಗೆ, ದಿನಬಳಕೆ ವಸ್ತುಗಳಲ್ಲಿ ಇರುವ ವೈದ್ಯಕೀಯ ಗುಣದ ಬಗ್ಗೆಯೂ ಅರಿವು ಮೂಡಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು