ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣ್ಯಕ್ಷೇತ್ರದಲ್ಲಿ ಪುನರ್ವಸು ಉತ್ಸವ ಇಂದು

ತಳಿರು ತೋರಣಗಳಿಂದ ಸಿಂಗಾರಗೊಂಡ ಮೇಲುಕೋಟೆ, ಜೀರ್ಣೋದ್ಧಾರ ಸಂಭ್ರಮ
Last Updated 19 ಜನವರಿ 2019, 19:26 IST
ಅಕ್ಷರ ಗಾತ್ರ

ಮೇಲುಕೋಟೆ: ಶ್ರೀಕ್ಷೇತ್ರ ಮೇಲುಕೋಟೆ ಭಾರತದ ವೈಷ್ಣವ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಪುರಾಣ ಪ್ರಸಿದ್ಧ ಧಾರ್ಮಿಕ ಸ್ಥಳ. ಇಂತಹ ಮಹತ್ವದ ಕ್ಷೇತ್ರದಲ್ಲಿ ಜೀರ್ಣೋದ್ಧಾರದ ಸಂಭ್ರಮ ಮನೆ ಮಾಡಿದೆ.

ಬೆಟ್ಟಗುಡ್ಡಗಳ ಮಧ್ಯೆ ಅಜ್ಞಾತವಾಗಿದ್ದ ದಕ್ಷಿಣ ಬದರೀಕಾಶ್ರಮ, ತಿರುನಾರಾಯಣಪುರಂ ಎಂಬ ಮೇಲುಕೋಟೆಯನ್ನು 12ನೇ ಶತಮಾನ ದಲ್ಲಿ ರಾಮಾನುಜಾ ಚಾರ್ಯರು ಜೀರ್ಣೋದ್ಧಾರ ಗೊಳಿಸಿದ್ದರು. ಹುತ್ತದಲ್ಲಡಗಿದ್ದ ನಾರಾಯಣನನ್ನು ಕಲ್ಯಾಣಿಯ ಪವಿತ್ರ ತೀರ್ಥ ಮತ್ತು ಹಾಲಿನಿಂದ ಅಭಿಷೇಕ ಮಾಡಿ ಜಗತ್ತಿಗೆ ಚೆಲುವ ನಾರಾಯಣನಾಗಿ ಪ್ರಕಾಶಪಡಿಸಿದರು. ಮಕರ ಶುದ್ಧ ಪುನರ್ವಸು ನಕ್ಷತ್ರದಂದು ಆಚಾರ್ಯರು ಸಮೀಪದ (ಕೆರೆ ತೊಣ್ಣೂರು) ತೊಂಡನೂರು ಗ್ರಾಮದಿಂದ ಕಾಡಿನ ನಡುವೆ ನಡೆದು ಬಂದು ತಮ್ಮ ಪುನೀತ ಪಾದಸ್ಪರ್ಶದಿಂದ ಪಾವನಗೊಳಿಸಿ ನಾರಾಯಣನ ಸಾನ್ನಿಧ್ಯವನ್ನು ಭಕ್ತರ ದರ್ಶನಕ್ಕೆ ತೆರೆದಿಟ್ಟರು. ಈ ಸಂಭ್ರಮ ಶತ ಶತಮಾನಗಳ ನಂತರವೂ ಮೇಲುಕೋಟೆ ಚೆಲುವನಾರಾಯಣನ ಸನ್ನಿಧಿಯಲ್ಲಿ ನೆರವೇರುತ್ತಾ ಬಂದಿದ್ದು, ಜ.20ರ ಭಾನುವಾರ ವೈಭವದ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

ಇಂದು ವಿವಿಧ ಕಾರ್ಯಕ್ರಮ: ಪುನರ್ವಸು ಉತ್ಸವದ ಅಂಗವಾಗಿ ರಾಮಾನಜರಿಗೆ ನಸುಕಿನ 5 ಗಂಟೆಗೆ ದೇವಾಲಯದಲ್ಲಿ ವೇದಘೋಷ ದೊಂದಿಗೆ ಅಭಿಷೇಕ ನೆರವೇರಲಿದೆ. ಇಡೀ ವರ್ಷದಲ್ಲಿ ಮುಂಜಾನೆ ಅಭಿಷೇಕ ನಡೆಯುವುದು ಭಗವದ್ರಾಮಾನುಜರಿಗೆ ಮಾತ್ರ. ಅಭಿಷೇಕದ ನಂತರ ಕಲ್ಯಾಣಿ ಉತ್ಸವ ನೆರವೇರಲಿದೆ. ಅಲ್ಲಿ ಸಹಸ್ರನಾಮ ನಿತ್ಯಾರಾಧನೆ ಶಾತ್ತುಮೊರೈ ನಡೆದು ಭವ್ಯ ಮೆರವಣಿಗೆಯಲ್ಲಿ ರಾಮಾನುಜರ ಉತ್ಸವ ದೇವಾಲಯಕ್ಕೆ ಮರಳಲಿದೆ. ವೇದಾಂತ ದೇಶಿಕರು, ಮನವಾಳ ಮಾಮುನಿ ಜೀಯರ್ ಸನ್ನಿಧಿಯ ಬಳಿ ವಿಶೇಷ ಮಂಗಳಾರತಿ ಇದೆ. ದೇವಾಲಯದ ರಾಜ ಗೋಪುರದ ಬಳಿ, ನಂತರ ಎದುರು ಸೇವೆಯಲ್ಲಿ ಮಂಗಳಾಶಾಸನ ಮತ್ತು ಮಹಾಮಂಗಳಾರತಿ ನಡೆಯಲಿದೆ. ಈ ವೇಳೆ ರಾಮಾನುಜರೇ 12ನೇ ಶತಮಾನದಲ್ಲಿ ಚೆಲುವನಾರಾಯಣ ನನ್ನು ಮೊದಲ ಬಾರಿಗೆ ದರ್ಶನ
ಮಾಡಿ ಸ್ತುತಿಸಿದ ಮಂತ್ರವನ್ನು ಕೈಂಕರ್ಯಪರರು ಒಟ್ಟಾಗಿ ಪಾರಾಯಣ ಮಾಡಲಿದ್ದಾರೆ.

ಹಣ್ಣುಗಳ ತಟ್ಟೆ ಸಮರ್ಪಣೆ: ಚೆಲುವ ನಾರಾಯಣಸ್ವಾಮಿಗೆ ಸಮರ್ಪಿಸಲು ವಂಗೀಪುರಂ ತಿರುಮಾಳಿಗೆಯಲ್ಲಿ 300ಕ್ಕೂ ಹೆಚ್ಚು ತಟ್ಟೆಗಳಲ್ಲಿ ವಿವಿಧ ಹಣ್ಣುಗಳು, ಪುಷ್ಪಹಾರ ಇಟ್ಟು, ಪೂಜೆ ಮಾಡಿ ಭವ್ಯ ಮೆರವಣಿಗೆಯಲ್ಲಿ ದೇವಾಲಯಕ್ಕೆ ಕೊಂಡೊಯ್ಯಲಾಗುತ್ತದೆ. ಇಡೀ ದಿನ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ. ಬಹುತೇಕ ಕೈಂಕರ್ಯ, ವ್ಯವಸ್ಥೆಯನ್ನು ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ ಆನಂದಾಳ್ವಾರ್ ಮಾಡಿದ್ದು, ದೇಗುಲದ ಆವರಣ ತಳಿರು ತೋರಣ ಹಾಗೂ ಚಪ್ಪರದಿಂದ ಸಿಂಗಾರಗೊಂಡಿದೆ. ಉತ್ಸವ ಬೀದಿಗಳಲ್ಲಿ ಆಕರ್ಷಕ ರಂಗೋಲಿ ಹಾಕಲಾಗಿದೆ. ನಾರಾಯಣನಿಗೆ ಸಮರ್ಪಿಸಿದ ಹಣ್ಣುಗಳಿಂದ ಪಂಚಾಮೃತ ಪ್ರಸಾದ ತಯಾರಿಸಿ ಸಂಜೆ ಸಹಸ್ರಾರು ಭಕ್ತರಿಗೆ ವಿತರಣೆ ಮಾಡಲಾಗುತ್ತದೆ.

ಇಂದು ಸಂಜೆವರೆಗೆ ಚೆಲುವನ ದರ್ಶನ ಇಲ್ಲ:

ಭಾನುವಾರ ನಸುಕಿನ 4 ಗಂಟೆಯಿಂದ ಪುನರ್ವಸು ಮಹೋತ್ಸವದ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮ ಮುಕ್ತಾಯವಾಗುವವರೆಗೆ ದೇವಾಲಯದಲ್ಲಿ ದೇವರ ದರ್ಶನ ಇರುವುದಿಲ್ಲ. ಆಚಾರ್ಯ ರಾಮಾನುಜರೇ ದೇವಾಲಯದಲ್ಲಿ ಪೂಜಾ ಕೈಂಕರ್ಯ ನೆರವೇರಿಸುವ ಮಾದರಿಯಲ್ಲಿ ಪೂಜಾ ಪದ್ಧತಿಗಳು ನಡೆಯುವ ಕಾರಣ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಆದರೆ, ಬೆಟ್ಟದ ಯೋಗನರಸಿಂಹಸ್ವಾಮಿ ದೇಗುಲದಲ್ಲಿ ದೇವರ ದರ್ಶನಕ್ಕೆ ಅವಕಾಶವಿದೆ. ಮೇಲುಕೋಟೆಗೆ ಬರುವ ಭಕ್ತರು ಧಾರ್ಮಿಕ ಮಹೋತ್ಸವದ ಯಶಸ್ಸಿಗೆ ಸಹಕಾರ ನೀಡಬೇಕು. ಸಂಜೆ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶವಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT