ಮೇಲುಕೋಟೆ: ವೈಭವದ ಕೃಷ್ಣರಾಜಮುಡಿ

7

ಮೇಲುಕೋಟೆ: ವೈಭವದ ಕೃಷ್ಣರಾಜಮುಡಿ

Published:
Updated:
Deccan Herald

ಮೇಲುಕೋಟೆ: ಚೆಲುವನಾರಾಯಣಸ್ವಾಮಿಗೆ ಬುಧವಾರ ರಾತ್ರಿ ಐತಿಹಾಸಿಕ ಮಹತ್ವದ ಕೃಷ್ಣರಾಜಮುಡಿ ಉತ್ಸವ ವೈಭವವಾಗಿ ನೆರವೇರಿತು.

ಶ್ರೀದೇವಿ ಭೂದೇವಿಯೊಂದಿಗೆ ವಜ್ರ ಖಚಿತ ಕಿರೀಟಧಾರಿಯಾಗಿ ಅರ್ಧ ಚಂದ್ರಾಕೃತಿಯ ಪ್ರಭಾವಳಿಯೊಂದಿಗೆ ಭವ್ಯ ಅಲಂಕಾರದಲ್ಲಿ ಕಂಗೊಳಿಸಿದ ಚೆಲುವನ ವೈಭವವನ್ನು ಭಕ್ತರು ಕಣ್ತುಂಬಿಕೊಂಡರು.

ಚೆಲುವನಾರಾಯಣಸ್ವಾಮಿಗೆ ರಾತ್ರಿ 8-30ರ ವೇಳೆಗೆ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ಧಾರಣೆ ಮಾಡಿ ಮಹಾಮಂಗಳಾರತಿ ನೆರವೇರಿಸಲಾಯಿತು.

ದಿವ್ಯಪ್ರಭಂದಪಾರಾಯಣ ಮತ್ತು ಮಂಗಳವಾದ್ಯಗಳೊಂದಿಗೆ ವೇದಾಂತ ದೇಶಿಕರ ಸನ್ನಿಧಿಯಲ್ಲಿ ಆರಂಭವಾದ ಕೃಷ್ಣರಾಜಮುಡಿ ಉತ್ಸವ ಚತುರ್ವೀದಿಗಳಲ್ಲಿ ನೆರವೇರಿದ ನಂತರ ರಾತ್ರಿ10ಕ್ಕೆ ಮುಕ್ತಾಯವಾಯಿತು.

ರಾತ್ರಿ ದೇವಾಲಯದಲ್ಲಿ ನಿತ್ಯಪೂಜೆ ಬಲಿಪ್ರದಾನ, ಯಾಗಶಾಲಾ ಕಾರ್ಯಕ್ರಮ ಮುಗಿದ ನಂತರ ಗರುಡನ ಮೆರವಣಿಗೆ ನಡೆಯಿತು.

ಕಿರೀಟ ಪರಿಶೀಲನೆ: ಮಂಡ್ಯ ಜಿಲ್ಲಾ ಖಜಾನೆಯಿಂದ ಪೊಲೀಸ್ ಬಂದೋಬಸ್ತಿನಲ್ಲಿ ಮೇಲುಕೋಟೆಗೆ ತಂದ ಕೃಷ್ಣರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಪಟ್ಟಣದ ಹೊರವಲಯದಲ್ಲಿರುವ ಆಂಜನೇಯಸ್ವಾಮಿ ಸನ್ನಿಧಿಯಲ್ಲಿರಿಸಿ ಪೂಜೆ ನೆರವೇರಿಸಿ ಭದ್ರತಾ ಅಧಿಕಾರಿಗಳಿಗೆ ಮಾಲೆ ಮರ್ಯಾದೆ ಮಾಡಲಾಯಿತು. ನಂತರ ತಿರುವಾಭರಣಪೆಟ್ಟಿಗೆಯನ್ನು ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ತರಲಾಯಿತು. ವೇದಾಂತದೇಶಿಕರ ಸನ್ನಿಧಿಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಯಶೋದಾ, ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ಸಮಕ್ಷಮ ಪೆಟ್ಟಿಗೆಯ ಮೊಹರನ್ನು ಪರಿಶೀಲಿಸಿ, ಕೃಷ್ಣರಾಜಮುಡಿ ಮತ್ತು ಗಂಡಭೇರುಂಡ ಪದಕಗಳನ್ನು ಪರಿಶೀಲನೆ ಮಾಡಿ, ದೇವಾಲಯದ ಸ್ಥಾನೀಕರು, ಅರ್ಚಕ ಪರಿಚಾರಕರು ಹಾಗೂ ಕಾವಲುಗಾರರ ಜಂಟಿ ವಶಕ್ಕೆ ನೀಡಲಾಯಿತು.

ಈ ವೇಳೆ ಸ್ಥಾನೀಕರಾದ ಕರಗಂನಾರಾಯಣ ಅಯ್ಯಂಗಾರ್, ಎಸ್.ತಿರುನಾರಾಯಣ ಅಯ್ಯಂಗಾರ್, ಶ್ರೀನಿವಾಸ ನರಸಿಂಹನ್‌ ಗುರೂಜಿ, ಮುಕುಂದನ್, ನರಸಿಂಹಯ್ಯಂಗಾರ್, ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ. ಆನಂದಾಳ್ವಾರ್, ಸ್ವಾಮಿಸನ್ನಿಧಿ ಅರ್ಚಕ ವರದರಾಜಭಟ್ ಪರಿಚಾರಕ ಎಂ.ಎ.ನರಸಿಂಹಯ್ಯಂಗಾರ್ ಇದ್ದರು.

ಕೃಷ್ಣರಾಜಮುಡಿ ಉತ್ಸವಕ್ಕೂ ಮುನ್ನ ದೇವಾಲಯದಲ್ಲಿ ನಾಗವಲ್ಲೀ ಮತ್ತು ನರಾಂದಾಳಿಕಾರೋಹಣ ನೆರವೇರಿತು. ಅಮ್ಮನವರ ಸನ್ನಿಧಿಯ ಬಳಿ ಹೋಮ ಹವನ ನಡೆದ ನಂತರ ಕಲ್ಯಾಣನಾಯಕಿ ಮತ್ತು ಚೆಲುವನಾರಾಯಣಸ್ವಾಮಿಗೆ ಬೆಳ್ಳಿಯಪಲ್ಲಕ್ಕಿಯಲ್ಲಿ ನಾಗವಲ್ಲಿ ಉತ್ಸವ ನೆರವೇರಿತು. ಬ್ರಹ್ಮೋತ್ಸವದ ಅಂಗವಾಗಿ ದೇವಾಲಯದ ರಾಜಗೋಪುರಕ್ಕೆ ಸರಳ ದೀಪಾಲಂಕಾರ ಮಾಡಲಾಗಿತ್ತು.

ಕೃಷ್ಣರಾಜಮುಡಿ ಕಿರೀಟ ಆ. 5ರವರೆಗೆ ವಿವಿಧ ಉತ್ಸವಗಳಲ್ಲಿ ಚೆಲುವನಾರಾಯಣಸ್ವಾಮಿಯನ್ನು ಪ್ರತಿದಿನ ಸಂಜೆ ಹಾಗೂ 6ರಂದು ನಡೆಯುವ ತೀರ್ಥಸ್ನಾನದಂದು ಇಡೀ ದಿನ ಸ್ವಾಮಿಯನ್ನು ಅಲಂಕರಿಸಲಿದ್ದು, ಭಕ್ತರು ದರ್ಶನ ಮಾಡಬಹುದು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !