ಭಾನುವಾರ, ಸೆಪ್ಟೆಂಬರ್ 26, 2021
21 °C
ಕೋವಿಡ್‌ ಕಾರಣಕ್ಕೆ ಸರಳ ಆಚರಣೆ, ಭಕ್ತರಿಲ್ಲದೇ ಭಣಗುಟ್ಟಿದ ಮೇಲುಕೋಟೆ ಕ್ಷೇತ್ರ; ಸ್ಥಳೀಯ ಭಕ್ತರು ಭಾಗಿ

ಪೊಲೀಸರು, ಅಧಿಕಾರಿಗಳ ವೈರಮುಡಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೇಲುಕೋಟೆ: ಕೋವಿಡ್‌– 19 ಕಾರಣಕ್ಕೆ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ ಬುಧವಾರ ಅತ್ಯಂತ ಸರಳವಾಗಿ ನೆರವೇರಿತು. ಸ್ಥಳೀಯ ಭಕ್ತರ ನಡುವೆ ಶ್ರೀದೇವಿ ಭೂದೇವಿ ಸಮೇತನಾದ ಚೆಲುವ ನಾರಾಯಣ ಸ್ವಾಮಿಯ ಉತ್ಸವ ಭಕ್ತಿ ಭಾವದಿಂದ ನೆರವೇರಿತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ದಂಪತಿ ಸಂಜೆ ದೇವಾಲಯಕ್ಕೆ ಬಂದು ರಾಜಮುಡಿ ತಿರುವಾಭರಣಪೆಟ್ಟಿಗೆ ಪರ್ಕಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾದರು. ನಂತರ ಗರುಡದೇವನ ಉತ್ಸವವಾದ ನಂತರ ಸಚಿವರ ಸಮಕ್ಷಮ ಚೆಲುವ ನಾರಾಯಣಸ್ವಾಮಿಗೆ ಮಹಾ ಮಂಗಳಾರತಿ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ರಾತ್ರಿ 8 ಗಂಟೆಗೆ ಆರಂಭವಾದ ಉತ್ಸವ 12 ಗಂಟೆವರೆಗೂ ನೆರವೇರಿತು. ಮೇಲುಕೋಟೆ ಯಲ್ಲಿ ಜಗಮಗಿಸುವ ದೀಪಾಲಂಕಾರ ಮಾಡಲಾಗಿತ್ತು. ಯೋಗ ನರಸಿಂಹಸ್ವಾಮಿ ಬೆಟ್ಟ, ದೇವಾಲಯದ ರಾಜಗೋಪುರ, ಕಲ್ಯಾಣಿಗೆ ಮಾಡಿದ ದೀಪಾಲಂಕಾರ ನಯನಮನೋಹರವಾಗಿತ್ತು.

ಮಹೋತ್ಸವದ ಅಂಗವಾಗಿ ದೇವಾಲಯದ ಒಳ ಆವರಣಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ದೀಪಾಲಂಕಾರ ಕಂಗೊಳಿಸುತ್ತಿದ್ದರೂ ಅದನ್ನು ಕಣ್ತುಂಬಿಕೊಳ್ಳಲು ಭಕ್ತರ ಕೊರತೆ ಎದ್ದು ಕಂಡಿತು.

ಅಧಿಕಾರಿಗಳ ಉತ್ಸವ: ಸಾಂಪ್ರದಾಯಿಕ ವಾಗಿ ನಡೆದ ವೈರಮುಡಿ ಉತ್ಸವಕ್ಕೆ ಕಟ್ಟುನಿಟ್ಟಾಗಿ ಹೊರ ಜಿಲ್ಲೆ, ಹೊರರಾಜ್ಯಗಳ ಭಕ್ತರ ನಿಷೇಧ ಮಾಡಿದ್ದ ಕಾರಣ ವೈರಮುಡಿ ಉತ್ಸವ ಪೊಲೀಸರು, ಅಧಿಕಾರಿಗಳಿಗಾಗಿ ಮಾಡಿದ ಉತ್ಸವದಂತ್ತಿತ್ತು.

ಯಾವುದೇ ವಸತಿಗೃಹಗಳು, ಛತ್ರಗಳಲ್ಲೂ ಭಕ್ತರು ತಂಗುವುದು, ಅನ್ನದಾನ, ಪ್ರಸಾದ ವಿತರಣೆ, ಆಹಾರ ಪದಾರ್ಥ ಮಾರಾಟ ನಿಷೇಧಿಸಲಾಗಿತ್ತು. ಹೊರರಾಜ್ಯದ, ಜಿಲ್ಲೆಯ ಹಾಗೂ ಅಂತರ ತಾಲ್ಲೂಕುಗಳ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಮೇಲುಕೋಟೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ಬರುವ ಸ್ಥಳೀಯ ಭಕ್ತರನ್ನು ತಪಾಸಣೆಗೊಳಪಡಿಸಿ ಬಿಡಲಾಗುತ್ತಿತ್ತು.

ದೇವಾಲಯದ ಪ್ರವೇಶಿಸುವ ಭಕ್ತರಿಗೆ ಗುರುತಿನ ಚೀಟಿ ತಪಾಸಣೆ ನಡೆಸಲಾಯಿತು. ಸ್ಥಳೀಯ ಭಕ್ತರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಸ್ಥಳದಲ್ಲೇ ಥರ್ಮಲ್‌ ಸ್ಕ್ಯಾನಿಂಗ್ ಮಾಡಲಾಯಿತು. ಅದಕ್ಕಾಗಿ ಆಶಾ, ಆರೋಗ್ಯ ಇಲಾಖೆ ಕಾರ್ಯಕರ್ತೆಯರನ್ನು ನೇಮಕ ಮಾಡಲಾಗಿತ್ತು.

ಲೇಸರ್‌ ಆಕರ್ಷಣೆ: ವೈರಮುಡಿ ಇತಿಹಾಸ, ಧಾರ್ಮಿಕ ಹಿನ್ನೆಲೆ ಕುರಿತು ಲೇಸರ್‌ ಪ್ರದರ್ಶನ ಆಯೋಜಿಸಿದ್ದ ಗಮನ ಸೆಳೆಯಿತು. ಮಂಡ್ಯದ ಕ್ರಿಯೇಟಿವ್‌ ಲೇಸರ್‌ ಇನ್ಫೊಟೆಕ್‌ ಸಂಸ್ಥೆಯಿಂದ ಪ್ರದರ್ಶನ ನಡೆಯಿತು. ಈಚೆಗೆ ಮದ್ದೂರಿನಲ್ಲಿ ನಡೆದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದಲ್ಲೂ ಲೇಸರ್‌ ಪ್ರದರ್ಶನ ಆಯೋಜನೆ ಮಾಡಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ‘ಜಗತ್ತಿಗೆ ಅಂಟಿರುವ ಕೊರೊನಾ ಸೋಂಕು ಶೀಘ್ರವೇ ತೊಲಗಲಿ. ನಾಡು ಸುಭಿಕ್ಷೆಯಿಂದ ಇರುವಂತಾಗಲಿ’ ಎಂದು ಚೆಲುವ ನಾರಾಯಣಸ್ವಾಮಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ನಮ್ಮ ಸರ್ಕಾರದಿಂದ ಉತ್ತಮ ಕಾರ್ಯಗಳು ಆಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದೇನೆ. ಪ್ರತಿ ವರ್ಷ ವಿಜೃಂಭಣೆಯಿಂದ ವೈರಮುಡಿ ಉತ್ಸವ ನಡೆಯುತ್ತಿತ್ತು. ಕೊರೊನಾ ಕಾರಣದಿಂದ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿಲ್ಲ. ಇದು ಬೇಸರದ ಸಂಗತಿ. ಮುಂದಿನ ವರ್ಷ ಎಲ್ಲ ಸಮಸ್ಯೆ ಪರಿಹಾರವಾಗಿ ವಿಜೃಂಭಣೆಯಿಂದ ಉತ್ಸವ ನಡೆಸುವಂತಾಗಲಿ ಎಂದು ಬೇಡಿಕೊಂಡಿದ್ದೇನೆ’ ಎಂದರು.

ಸ್ಥಾನೀಕರಲ್ಲಿ ಗೊಂದಲ
ಜಿಲ್ಲಾ ಖಜಾನೆಯಿಂದ ತಿರುವಾಭರಣ ಪೆಟ್ಟಿಗೆ ತರುವ ವಿಚಾರದಲ್ಲಿ ಚೆಲುವನಾರಾಯಣಸ್ವಾಮಿ ದೇವಾಲಯದ 1ನೇ ಮತ್ತು 4ನೇ ಸ್ಥಾನೀಕರ ನಡುವೆ ಗೊಂದಲ ಉಂಟಾಯಿತು.

ಆಭರಣ ಪೆಟ್ಟಿಗೆ ತರಲು 1ನೇ ಸ್ಥಾನೀಕ ಕರಗಂ ನಾರಾಯಣ ಐಯ್ಯಂಗಾರ್‌ ಅವರನ್ನು ಮಂಡ್ಯಕ್ಕೆ ಕರೆದೊಯ್ಯಲಾಗಿತ್ತು. ಪೂಜೆಗೆ 4ನೇ ಸ್ಥಾನೀಕ ಶ್ರೀನಿವಾಸನರಸಿಂಹನ್‌ ಅವರಿಗೂ ಅವಕಾಶ ನೀಡಲಾಗಿತ್ತು. ಆದರೆ 1ನೇ ಸ್ಥಾನೀಕರು ಹಾಗೂ ಅವರ ಕುಟುಂಬ ಸದಸ್ಯರು ಇದನ್ನು ವಿರೋಧಿಸಿದರು. 4ನೇ ಸ್ಥಾನೀಕರು ಭಾಗವಹಿಸಲು ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ಸುದ್ದಿ ಹರಡಿದ್ದ ಕಾರಣ ಅವರನ್ನು ವಾಪಸ್‌ ಕಳುಹಿಸಲಾಯಿತು.

‘ಆಭರಣ ತರುವ ಪ್ರಕ್ರಿಯೆಯಲ್ಲಿ 4ನೇ ಸ್ಥಾನೀಕ ಭಾಗವಹಿಸಬಾರದು ಎಂಬ ಕುರಿತು ಸಲ್ಲಿಕೆಯಾಗಿದ್ದ ರಿಟ್‌ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್‌ 26ಕ್ಕೆ ಮುಂದೂಡಿದೆ. ಆದರೆ ತಡೆಯಾಜ್ಞೆ ನೀಡಿದೆ ಎಂಬ ಸುಳ್ಳು ಸುದ್ದಿ ಹರಡಿಸಿ ನಾನು ಭಾಗವಹಿಸುವುದನ್ನು ತಡೆಯಲಾಗಿದೆ’ ಎಂದು ಶ್ರೀನಿವಾಸನರಸಿಂಹನ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು