ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಸಿಲುಕಿರುವ ಕೊಪ್ಪಳ ಕೂಲಿ ಕಾರ್ಮಿಕರು

ಕಬ್ಬು ಕಟಾವಿಗೆ ಬಂದು ‘ಲಾಕ್‌ಡೌನ್’ ಆದ ಕೂಲಿಗಳು
Last Updated 2 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಪಾಂಡವಪುರ: ಕೊಪ್ಪಳ ಜಿಲ್ಲೆಯಿಂದ ಇಲ್ಲಿಗೆ ಕಬ್ಬು ಕಟಾವು ಮಾಡಲು ಬಂದಿರುವ ಕೂಲಿ ಕಾರ್ಮಿಕರ ಸುಮಾರು 8 ಕುಟುಂಬಗಳು ಲಾಕ್‌ಡೌನ್‌ನಿಂದಾಗಿ ಇತ್ತ ಕೆಲಸವಿಲ್ಲದೆ, ಅತ್ತ ಊರಿಗೆ ತಲುಪಲಾಗದೆ ಸಂಕಷ್ಟದಲ್ಲಿದ್ದು ಇತ್ತ ಧರಿ ಅತ್ತ ಪುಲಿ ಎಂಬಂತಾಗಿದೆ.

ತಾಲ್ಲೂಕಿನ ಮಹದೇಶ್ವರಪುರ ಗ್ರಾಮದ ಸಮೀಪದ ಪಾಳು ಜಮೀನಿನಲ್ಲಿ ಚಿಕ್ಕ ಚಿಕ್ಕ 8 ಟೆಂಟ್‌ಗಳನ್ನು ಹಾಕಿಕೊಂಡು ತಮ್ಮ ಮಡದಿ ಮಕ್ಕಳೊಂದಿಗೆ ಕಷ್ಟದ ಜೀವನ ನಡೆಸುತ್ತಿದ್ದಾರೆ. ಒಟ್ಟು 24 ಮಂದಿ ಇಲ್ಲಿದ್ದಾರೆ. ಟೆಂಟ್‌ನಲ್ಲಿ ರೆಸ್ಟ್‌, ನಿದ್ರೆ, ಟೆಂಟ್‌ ಮುಂದೆ ಉರಿಯುವ ಒಲೆಗಳು. ಅಕ್ಕಪಕ್ಕದಲ್ಲಿ ನಿತ್ಯ ಕರ್ಮದಲ್ಲಿ ಕಾಲ ದೂಡುತ್ತಿದ್ದಾರೆ.

ಕೊಪ್ಪಳ ಜಿಲ್ಲೆ ಕನಕಗಿರಿ ತಾಲ್ಲೂಕು ಅಡಿಪಾಯಿ ದೊಡ್ಡತಾಂಡಾದಿಂದ 2 ತಿಂಗಳ ಹಿಂದೆ ಕೂಲಿ ಅರಸುತ್ತ ಬಂದಿರುವ ಈ ಕುಟುಂಬಗಳು ತಾಲ್ಲೂಕಿನ ವಿವಿಧೆಡೆ ಕಬ್ಬು ಕಟಾವು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ‌ಇಲ್ಲಿನ ಕಟಾವಿನ ಕಬ್ಬು ಸ್ಥಳೀಯ ಆಲೆಮನೆ ಹಾಗೂ ಹೊರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಸಾಗಣೆಯಾಗುತ್ತಿತ್ತು. ಆದರೆ, ಕೊರೊನಾ ಲಾಕ್‌ಡೌನ್‌ನಿಂದಾಗಿ ಆಲೆಮನೆ ಮತ್ತು ಹೊರಗಿನ ಸಕ್ಕರೆ ಕಾರ್ಖಾನೆಗಳು ನಿಂತಿವೆ. ಹೀಗಾಗಿ ದುಡಿಯುವ ಈ ಕೈಗಳಿಗೆ ಕೂಲಿ ಇಲ್ಲದಂತಾಯಿತು. ತಮ್ಮೂರಿಗೆ ಹೊರಟು ನಿಂತರೆ ಬಸ್ ಸಂಚಾರದ ಸಮಸ್ಯೆ ಎದುರಾಯಿತು. ಹೇಗೋ ಮಾಡಿ ತಮ್ಮೂರ ಸೇರಿ ಬಿಡೋಣವೆಂದರೆ ಅಲ್ಲಿ ಹೊರಗಿನಿಂದ ಬಂದವರಿಗೆ ಪ್ರವೇಶ ನಿಷೇಧ ಮಾಡಿದ್ದಾರೆ ಎಂದು ಗೋಳು ಹೇಳಿಕೊಂಡರು.

ಕಬ್ಬು ಕಟಾವು ಮಾಡುವ ಜಮೀನಿನ ಆಸುಪಾಸಿನಲ್ಲಿ ಟೆಂಟ್‌ ಹಾಕಿಕೊಂಡು, ನಿತ್ಯ ಒಬ್ಬರು 1 ಟನ್‌ ಕಬ್ಬು ಕಟಾವು ಮಾಡಿ ₹ 600–700ರವರೆಗೆ ಸಂಪಾದನೆ ಮಾಡಿ ಒಂದಿಷ್ಟು ನೆಮ್ಮದಿ ಜೀವನ ನಡೆಸುತ್ತಿದ್ದರು. ಆದರೆ, ಈಗ ಕೊರೊನಾ ಲಾಕ್‌ಡೌನ್‌ನಿಂದಾಗಿ ಇವರ ತುತ್ತಿನ ಚೀಲ ತುಂಬದೆ ಬದುಕೇ ‘ಲಾಕ್‌’ ಆಗಿದೆ.

ಕಳೆದ ಒಂದು ವಾರದಿಂದ ಈ ಕೂಲಿ ಕಾರ್ಮಿಕರು ಇಲ್ಲಿನ ಜಮೀನಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿ ಕೊಟ್ಟಿದ್ದಕ್ಕೆ ರೈತರು ಒಂದಿಷ್ಟು ಹಣ ಹಾಗೂ ದವಸ ಧಾನ್ಯ ನೀಡಿದ್ದಾರೆ. ಆದರೆ, ಮುಂದಿನ ದಿನಗಳ ದಿಕ್ಕು ಇವರಿಗೆ ದೋಚದಾಗಿದೆ.

ನೆರವಿಗೆ ಬಾರದ ತಾಲ್ಲೂಕು ಆಡಳಿತ: ಕೂಲಿಗಾಗಿ ವಲಸೆ ಬಂದು, ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಈ ಕೂಲಿ ಕುಟಂಬಗಳ ನೆರವಿಗೆ ಯಾವುದೇ ಅಧಿಕಾರಿಗಳು ಇತ್ತ ಸುಳಿದಿಲ್ಲ. ತಾಲ್ಲೂಕು ಆಡಳಿತವು ಯಾವುದೇ ಕ್ರಮ ಕೈಗೊಂಡಿಲ್ಲ.

‘ಕೂ‌ಲಿಗಾಗಿ ಊರಿಂದ ಊರಿಗೆ ಬಂದಿರುವ ನಮಗೆ ಅದ್ಯಾವುದೋ ಕೊರೊನಾ ರೋಗ ನಮ್ಮ ಅನ್ನವನ್ನು ಕಿತ್ಕೊಂಡಿದೆ ಸ್ವಾಮಿ, ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಕೂತಿದ್ದೇವೆ, ಮುಂದೇನೂ ಎಂಬುದು ನಮಗೆ ತಿಳಿದಾಗಿದೆ ಸ್ವಾಮಿ’ ಎಂದು ಕೂಲಿ ಕಾರ್ಮಿಕರಾದ ನೀಲಪ್ಪ, ಕೃಷ್ಣ, ಅನಿಲ, ಅಂಬರೀಷ್, ರಾಜ, ಮಲ್ಲೇಶ್, ಹೇಮಣ್ಣ ತಮ್ಮ ಅಳಲನ್ನು ತೋಡಿಕೊಂಡರು.

ಈ ಕುಟುಂಬಗಳ ಲಕ್ಷ್ಮಮ್ಮ, ಮಂಜುಳಾ, ತಿಪ್ಪಮ್ಮ, ಶ್ರುತಿ, ಭೀಮವ್ವ, ಶಾಂತಾ, ಗೀತಾ ಇದೇ ಯೋಚನೆಯಲ್ಲಿದ್ದಾರೆ.

‘ನಾನು 6 ಕ್ಲಾಸ್ ಓದುತ್ತಿದ್ದೇನೆ, ರಜೆ ಇತ್ತು ನಮ್ಮಪ್ಪ ನಮ್ಮವ್ವರ ಜೊತೆ ಬಂದುಬಿಟ್ಟೆ ಎನ್ನುತ್ತಾನೆ ಅನಿಲ್ ಎಂಬ ಬಾಲಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT