ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮೆಂಟ್‌ ಕಾಡು: ಕಿಷ್ಕಿಂಧೆಯಾದ ಮಿಮ್ಸ್‌

ಸುತ್ತಲೂ ಒತ್ತುವರಿ, ಕುಗ್ಗುತ್ತಿರುವ ಜಿಲ್ಲಾಸ್ಪತ್ರೆ ವಿಸ್ತೀರ್ಣ, ಕಮಿಷನ್‌ ದಂಧೆ, ನಿರ್ದೇಶಕರ ವಿರುದ್ಧ ಆರೋಪ
Last Updated 16 ಜೂನ್ 2019, 19:45 IST
ಅಕ್ಷರ ಗಾತ್ರ

ಮಂಡ್ಯ: ನಿತ್ಯ ತಲೆ ಎತ್ತುತ್ತಿರುವ ಕಟ್ಟಡಗಳಿಂದಾಗಿ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಮಿಮ್ಸ್‌) ಆವರಣದಲ್ಲಿ ರೋಗಿಗಳು ಉಸಿರುಗಟ್ಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗಿಡ, ಮರ ಬೆಳೆಸಬೇಕಾದ ಜಾಗದಲ್ಲಿ ಸಿಮೆಂಟ್‌ ಕಾಡು ರೂಪುಗೊಳ್ಳುತ್ತಿದ್ದು, ರೋಗ ವಾಸಿ ಮಾಡಿಕೊಳ್ಳಲು ಬಂದ ಬಡಜನರು ಇನ್ನಷ್ಟು ಕಾಯಿಲೆಗಳನ್ನು ಪಡೆದು ತೆರಳುತ್ತಿದ್ದಾರೆ.

ಮಿಮ್ಸ್‌ ಆವರಣದಲ್ಲಿ ಸದಾ ಒಂದಲ್ಲಾ ಒಂದು ಕಾಮಗಾರಿ ನಡೆಯುತ್ತಲೇ ಇರುತ್ತವೆ. ಮೈಸೂರು ಮಹಾರಾಜರು ಜಿಲ್ಲಾಸ್ಪತ್ರೆಗೆ ಮೀಸಲಿಟ್ಟದ್ದ ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದು, ಆಸ್ಪತ್ರೆ ವಿಸ್ತೀರ್ಣ ಕಡಿಮೆಯಾಗುತ್ತಲೇ ಇದೆ. ಕುಗ್ಗುತ್ತಿರುವ ಜಾಗದಲ್ಲೇ ಹೊಸ ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಇಡೀ ಆವರಣ ಕಿಷ್ಕಿಂಧೆಯಂತಾಗಿದೆ. ಅವೈಜ್ಞಾನಿಕ ರೀತಿಯಲ್ಲಿ ಕಟ್ಟಡಗಳು ನಿರ್ಮಾಣಗೊಳ್ಳುತ್ತಿದ್ದು, ಸರಾಗವಾಗಿ ಗಾಳಿಯೂ ಆಡದಂತಾಗಿದೆ. ರೋಗಿಗಳ ಸಂಬಂಧಿಕರು ವಿಶ್ರಾಂತಿ ಪಡೆಯುವ ತಾಣವನ್ನೇ ತೆರವುಗೊಳಿಸಿ ಕಟ್ಟಡ ಕಟ್ಟುತ್ತಿದ್ದಾರೆ.

ಸ್ಥಳೀಯ ಜನಪ್ರತಿನಿಧಿಗಳು, ಆಸ್ಪತ್ರೆ ಮುಖ್ಯಸ್ಥರು ಕಮಿಷನ್‌ ದಂಧೆಯಲ್ಲಿ ಮುಳುಗಿದ್ದು, ಬರೀ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ, ಕಾಮಗಾರಿಗಳು ಕಳಪೆಯಾಗಿದ್ದು, ಇದರ ಲಾಭ ಅಧಿಕಾರಿಗಳ ಜೇಬು ತುಂಬಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

‌ಹೊರ ರೋಗಿಗಳ ವಿಭಾಗದ ಮೇಲ್ಮಹಡಿ ಕಟ್ಟಡ ಕಳಪೆಯಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಮೇಲೆ ಇನ್ನೊಂದು ಮಹಡಿ ನಿರ್ಮಾಣ ಮಾಡಲು ಯೋಗ್ಯವಾಗಿಲ್ಲ ಎಂಬ ವರದಿ ಇದ್ದರೂ ಮಹಡಿ ಕಟ್ಟಿ ಶೀಟ್‌ ಹಾಕಲಾಗಿದೆ. ಇದರಿಂದ ರೋಗಿಗಳು ಬಿಸಿಲಿನ ಝಳದಿಂದ ಪರಿತಪಿಸುವಂತಾಗಿದೆ.

ಸದ್ಯ ಮಿಮ್ಸ್‌ ಆಸ್ಪತ್ರೆಯ ಆವರಣದಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಕ್ಯಾನ್ಸರ್‌ ಆಸ್ಪತ್ರೆ, ನರ್ಸಿಂಗ್‌ ಕಾಲೇಜು ವಸತಿ ನಿಲಯ,
ಮಕ್ಕಳ ಆಸ್ಪತ್ರೆ, ವೈದ್ಯಕೀಯ ಕಾಲೇಜಿನ ಗ್ರಂಥಾಲಯ ಕಟ್ಟಡ ಕಾಮಗಾರಿಗಳು ನಡೆಯುತ್ತಿವೆ. ಅಕ್ಕಪಕ್ಕದಲ್ಲೇ ಕಟ್ಟಡ ಕಾಮಗಾರಿ ನಡೆಯುತ್ತಿರುವ ಕಾರಣ ಮಿಮ್ಸ್‌ ಆವರಣದಲ್ಲಿ ದೂಳು ವಿಪರೀತವಾಗಿದೆ. ಆಸ್ಪತ್ರೆ ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ವಿವಿಧ ವಾರ್ಡ್‌ಗಳಲ್ಲಿರುವ ರೋಗಿ ಗಳು ತಮ್ಮ ಹಾಸಿಗೆ ಪಕ್ಕದಲ್ಲಿ ಸೊಳ್ಳೆ ಬತ್ತಿ ಹೊತ್ತಿಸಿಕೊಂಡು ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

‘ನನ್ನ ಮಗುವಿಗೆ ಡೆಂಗಿ ಜ್ವರ ಬಂದಿದ್ದು, ಕಳೆದ ಐದು ದಿನಗಳಿಂದ ಮಕ್ಕಳ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದೇನೆ. ಹಿಂಭಾಗದಲ್ಲೇ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಮಗುವಿಗೆ ದೂಳಿನ ಕಾಟ ಹೆಚ್ಚಾಗಿದೆ. ಎಲ್ಲೆಂದರಲ್ಲಿ ಮಳೆ ನೀರು ನಿಂತಿದ್ದು ಸೊಳ್ಳೆಗಳೂ ಹೆಚ್ಚಾಗಿವೆ. ಮನೆಯಿಂದ ಸೊಳ್ಳೆ ಪರದೆ ತಂದು ಹಾಸಿಗೆಗೆ ಕಟ್ಟಿದ್ದೇನೆ’ ಎಂದು ಮದ್ದೂರು ತಾಲ್ಲೂಕು ಆತಗೂರು ಗ್ರಾಮದ ಶಿವಶಂಕರ್‌ ನೋವು ತೋಡಿಕೊಂಡರು.

ಐದು ದಶಕಗಳಿಂದ ಜಿಲ್ಲಾಸ್ಪತ್ರೆ ಆವರಣದಲ್ಲಿದ್ದ ಕಿರಿಯ ಆರೋಗ್ಯ ಸಹಾಯಕಿಯರ (ಎಎನ್‌ಎಂ) ತರಬೇತಿ ಕೇಂದ್ರ ಸ್ಥಗಿತಗೊಂಡಿದೆ. ಸದ್ಯ ಆ ಕಟ್ಟಡದಲ್ಲಿ ಮಿಮ್ಸ್‌ ಆಸ್ಪತ್ರೆಯ ಪ್ರಯೋಗಾಲಯ ನಡೆಯುತ್ತಿದೆ. ಎಎನ್‌ಎಂ ತರಬೇತಿಗೆ ಆಸ್ಪತ್ರೆ ಸಿಬ್ಬಂದಿ ಕಟ್ಟಡ ಬಿಟ್ಟುಕೊಡದ ಕಾರಣ ನಾಲ್ಕು ವರ್ಷಗಳಿಂದ ಜಿಲ್ಲೆಯ ವಿದ್ಯಾರ್ಥಿನಿಯರು ತರಬೇತಿ ವಂಚಿತರಾಗಿದ್ದಾರೆ.

ಆವರಣದಲ್ಲಿ ಏನೇನಿದೆ?: ಜಿಲ್ಲಾಸ್ಪತ್ರೆ ಮುಖ್ಯ ಕಟ್ಟಡದ (ಕಲ್ಲು ಕಟ್ಟಡ) ಸುತ್ತಲೂ ಒಂದರ ಪಕ್ಕದಲ್ಲಿ ಒಂದು ಕಟ್ಟಡಗಳು ತಲೆ ಎತ್ತಿ ನಿಂತಿವೆ. ಬಲ ಭಾಗದಲ್ಲಿ ತುರ್ತು ಚಿಕಿತ್ಸಾ ವಿಭಾಗ, ಹೊರ ರೋಗಿಗಳ ವಿಭಾಗ, ಎಡ ಭಾಗದಲ್ಲಿ ಕ್ಯಾನ್ಸರ್‌ ಆಸ್ಪತ್ರೆ, ಮಕ್ಕಳ ಆಸ್ಪತ್ರೆ, ಕ್ಯಾಂಟೀನ್‌, ಸಹಾಯಕ ಎಂಜಿನಿಯರ್‌ ಕಚೇರಿ, ಭಾರತೀಯ ಸ್ಟೇಟ್‌ ಬ್ಯಾಂಕ್‌, ಎಟಿಎಂಗಳಿವೆ. ಹಿಂಭಾಗದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್‌ಗಳು, ಸುಟ್ಟ ಗಾಯಗಳ ವಾರ್ಡ್‌, ಶವಾಗಾರ ಇವೆ. ಮುಂಭಾಗದಲ್ಲಿ ವೈದ್ಯರ ವಸತಿ ನಿಲಯದ ಕಟ್ಟಡವಿದೆ. ಮಕ್ಕಳ ಆಸ್ಪತ್ರೆ ಜಾಗದಲ್ಲಿ ಉದ್ಯಾನಕ್ಕಾಗಿ ಮೀಸಲಿಟ್ಟಿದ್ದ ಜಾಗದಲ್ಲೂ ಕಟ್ಟಡಗಳು ಬರುತ್ತಿವೆ. ಆಸ್ಪತ್ರೆ ಮುಂದಿನ ಆಟದ ಮೈದಾನದಲ್ಲೂ ಕೆಲವೇ ದಿನಗಳಲ್ಲಿ ಕಟ್ಟಡಗಳು ನಿರ್ಮಾಣಗೊಳ್ಳಲಿವೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಾರೆ.

ಮಿಮ್ಸ್‌ ಆಸ್ಪತ್ರೆಯಲ್ಲಿ ಪ್ರತಿನಿತ್ಯ 30ಕ್ಕೂ ಹೆಚ್ಚು ಮಕ್ಕಳು ಜನ್ಮ ತಾಳುತ್ತವೆ. ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಡಾ.ವಿ.ಟಿ.ಸುಶೀಲಾ ಜಯರಾಂ ಟ್ರಸ್ಟ್‌ 60 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯ ಕಟ್ಟಡವೊಂದನ್ನು ನಿರ್ಮಿಸಿಕೊಟ್ಟಿದೆ. ಒತ್ತುವರಿಗೆ ಒಳಗಾದ ಜಾಗ ಬಿಡಿಸಿಕೊಳ್ಳದೆ ಗಾಳಿ, ಬೆಳಕಿಗೆ ಇರುವ ಸ್ಥಳದಲ್ಲೂ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.

50 ಎಕರೆಯಿಂದ 25 ಎಕರೆಗೆ ಇಳಿಕೆ

ಮೈಸೂರು ಮಹಾರಾಜರು ಜಿಲ್ಲಾಸ್ಪತ್ರೆ ಉದ್ದೇಶಕ್ಕಾಗಿ 50 ಎಕರೆ ಜಮೀನು ಮೀಸಲಿಟ್ಟಿದ್ದರು. 1941ರಲ್ಲಿ 21.4 ಎಕರೆ, 1948 ರಲ್ಲಿ 17 ಎಕರೆ ಜಾಗವನ್ನು ಸ್ವಾಧೀನಕ್ಕೆ ಪಡೆಯಲಾಗಿತ್ತು. ಖರಾಬು ಭೂಮಿ 15 ಎಕರೆ ಸೇರಿದರೆ ಒಟ್ಟು 50 ಎಕರೆಗೂ ಹೆಚ್ಚು ಭೂಮಿ ಆಸ್ಪತ್ರೆಗೆ ಮೀಸಲಿಡಲಾಯಿತು.

ಆದರೆ, ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆಗೆ ಮೀಸಲಿಟ್ಟಿದ್ದ ಭೂಮಿಯನ್ನು ತಮಿಳುನಾಡಿನಿಂದ ವಲಸೆ ಬಂದ ಕಾರ್ಮಿಕರ ವಾಸಕ್ಕೆ ತಾತ್ಕಾಲಿಕವಾಗಿ ನೀಡಿದರು. ಆದರೆ, ತಮಿಳು ನಿವಾಸಿಗಳು ಅದೇ ಭೂಮಿಯಲ್ಲಿ ಹಕ್ಕುಪತ್ರ ಕೇಳಿದರು. ವೋಟಿನ ಆಸೆಗೆ ಜನಪ್ರತಿನಿಧಿಗಳು ಭೂಮಿ ಕೊಡುವ ಭರವಸೆ ನೀಡುತ್ತಲೇ ಬಂದರು.

ಜೊತೆಗೆ ಆಸ್ಪತ್ರೆ ಸುತ್ತಲೂ ಸರ್ಕಾರಿ ಕಟ್ಟಡಗಳಿಗೆ, ಶಾಲಾ–ಕಾಲೇಜುಗಳಿಗೂ ಜಾಗ ನೀಡಲಾಯಿತು. ಖಾಸಗಿ ಸಂಘ ಸಂಸ್ಥೆಗಳೂ ಮಿಮ್ಸ್‌ ಜಾಗ ಒತ್ತುವರಿ ಮಾಡಿಕೊಂಡವು. ಈ ಕಾರಣದಿಂದ ಮಿಮ್ಸ್‌ ಆಸ್ಪತ್ರೆ ಆವರಣ ಸಣ್ಣದಾಯಿತು.

ನ್ಯಾಯಾಂಗ ನಿಂದನೆ ಪ್ರಕರಣ ದಾಖಲು

ಮಿಮ್ಸ್‌ ಆಸ್ಪತ್ರೆ ಜಾಗದಲ್ಲಿ ವಾಸ ಮಾಡುತ್ತಿರುವ ತಮಿಳು ಕಾಲೊನಿ ನಿವಾಸಿಗಳನ್ನು ತೆರವುಗೊಳಿಸಿ ಬೇರೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿ ಕೊಡುವಂತೆ ಹೈಕೋರ್ಟ್‌ 2015ರಲ್ಲೇ ಆದೇಶ ನೀಡಿತ್ತು. ಒಂದು ವರ್ಷದೊಳಗೆ ತೆರವುಗೊಳಿಸುವಂತೆ ಗಡುವು ನೀಡಿತ್ತು. ಆದರೆ, ಆದೇಶ ಬಂದು ನಾಲ್ಕು ವರ್ಷಗಳು ಕಳೆದರೂ ಕಾಲೊನಿ ತೆರವುಗೊಂಡಿಲ್ಲ. ಹೀಗಾಗಿ ಸಂಘ ಸಂಸ್ಥೆಗಳ ಸದಸ್ಯರು ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡಿದ್ದಾರೆ. ಜಿಲ್ಲಾಧಿಕಾರಿ, ಪೌರಾಡಳಿತ ಇಲಾಖೆ ನಿರ್ದೇಶಕರು, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸೇರಿ 11 ಅಧಿಕಾರಿಗಳ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಹೈಕೋರ್ಟ್‌ ಆದೇಶವನ್ನು ಸ್ಪಷ್ಟ ನಿಯಮ ಉಲ್ಲಂಘನೆ ಮಾಡಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರು ನ್ಯಾಯಾಲಯದ ಕೆಂಗಣ್ಣಿಗೆ ಗುರಿ ಯಾಗಿದ್ದಾರೆ. ಇದಕ್ಕೆ ಎಲ್ಲರೂ ತಕ್ಕ ಬೆಲೆ ತರುತ್ತಾರೆ. ತಮಿಳು ಕಾಲೊನಿ ತೆರವು ಗೊಳ್ಳಲೇಬೇಕು. ಅವರು ಬೇರೆಡೆ ವಾಸ ಮಾಡಲು ಜಾಗ ಗುರುತಿಸಲಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ಹೇಳಿದರು.

ಹಲೋ.. ಹಲೋ.. ಕರೆ ಸ್ಥಗಿತಗೊಳಿಸಿದ ಪ್ರಕಾಶ್‌

ಮಿಮ್ಸ್‌ ಆವರಣದಲ್ಲಿರುವ ಗೊಂದಲಗಳ ಕುರಿತು ಪ್ರತಿಕ್ರಿಯೆ ಪಡೆಯಲು ಮಿಮ್ಸ್‌ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್‌ ಅವರಿಗೆ ಕರೆ ಮಾಡಿದಾಗ ಅವರು ಹಲೋ... ಹಲೋ... ಎನ್ನುತ್ತಾ ಕರೆ ಸ್ಥಗಿತಗೊಳಿಸಿದರು. ನಂತರ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಂಟಿನ ಕಾರಣಕ್ಕೆ ಡಾ.ಪ್ರಕಾಶ್‌ ಅವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ವರ್ಗಾವಣೆ ಮಾಡಲಾಗಿತ್ತು. ಅಕ್ರಮ ಬೋಧನಾ ಪ್ರಮಾಣ ಪತ್ರ ಹಗರಣ, ಕಾರ್ಪೊರೇಷನ್‌ ಬ್ಯಾಂಕ್‌ನಿಂದ ಎಚ್‌.ಡಿ.ಎಫ್‌.ಸಿ ಬ್ಯಾಂಕ್‌ಗೆ ₹ 10 ಕೋಟಿ ಹಣ ವರ್ಗಾವಣೆ, ಅಕ್ರಮ ಕ್ಯಾಂಟೀನ್‌ ನಿರ್ಮಾಣ, ಕಾನೂನು ಬಾಹಿರವಾಗಿ ಔಷಧಿ ಖರೀದಿ ಪ್ರಕರಣದಲ್ಲಿ ಪ್ರಕಾಶ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಇದರ ನಡುವೆಯೂ ಮತ್ತೆ ಮಿಮ್ಸ್‌ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT