ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಳ ವಶಕ್ಕೆ ಪಡೆಯಲು ಸೂಚನೆ: ಅಧಿಕಾರಿಗಳ ಸಭೆ ನಡೆಸಿದ ಪ್ರಭು ಚವಾಣ್‌

ಅಧಿಕಾರಿಗಳ ಸಭೆ ನಡೆಸಿದ ಪ್ರಭು ಚವಾಣ್‌, ಕಾಯ್ದೆಯ ಕಟ್ಟುನಿಟ್ಟಿನ ಜಾರಿಗೆ ಸಲಹೆ
Last Updated 15 ಫೆಬ್ರುವರಿ 2021, 13:44 IST
ಅಕ್ಷರ ಗಾತ್ರ

ಮಂಡ್ಯ: ‘ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಯಾದ ನಂತರ ಗೋಶಾಲೆಗಳ ಸಂಖ್ಯೆ ಹೆಚ್ಚಾಗಲಿವೆ. ಜಾನುವಾರುಗಳಿಗೆ ಮೇವು ಬೆಳೆದುಕೊಳ್ಳಲು ಒತ್ತುವರಿಯಾಗಿರುವ ಗೋಮಾಳ ಬಿಡಿಸಿಕೊಳ್ಳಬೇಕು’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಅವರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಗೋಮಾಳಗಳು ಪಶು ಸಂಗೋಪನಾ ಇಲಾಖೆಯ ವ್ಯಾಪ್ತಿಗೆ ಬರಬೇಕು. ಅವುಗಳನ್ನು ವಶಕ್ಕೆ ಪಡೆಯುವುದರಿಂದ ಗೋಶಾಲೆಗೆ ಅನುಕೂಲವಾಗಲಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯ ನಂತರ ಹಂತಹಂತವಾಗಿ ಗೋಶಾಲೆಗಳ ಸಂಖ್ಯೆ ಹೆಚ್ಚಾಗಲಿದೆ. ಜಾನುವಾರುಗಳ ಮೇವಿಗೆ ತೊಂದರೆಯಾಗದಂತೆ ಗೋಮಾಳಗಳನ್ನು ಮೇವು ಬೆಳೆದುಕೊಳ್ಳಲು ಬಳಸಿಕೊಳ್ಳಬೇಕು’ ಎಂದರು.

‘ಮಂಡ್ಯ ಜಿಲ್ಲೆಯ ಗೋಮಾಳಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಇದೆ. ಜಿಲ್ಲಾಧಿಕಾರಿಗಳು ಕೂಡಲೇ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್‌ಗಳ ಸಭೆ ನಡೆಸಿ ಗೋಮಾಳ ಸ್ವಾಧೀನಕ್ಕೆ ಪಡೆಯಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಗೋಹತ್ಯೆ ನಿಷೇಧ ಕಾಯ್ದೆ ಜಾರಿಯ ನಂತರ ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ. ಗೋಮಾತೆ ಕಸಾಯಿಖಾತೆಗೆ ಹೋಗುವುದನ್ನು ತಡೆಬೇಕು. ಅನುಮತಿ ಇಲ್ಲದೇ ಗೋವುಗಳ ಸಾಗಣೆ ಮಾಡುವುದನ್ನು ತಡೆಯಬೇಕು. ಅಧಿಕಾರಿಗಳು ಪೊಲೀಸರ ಸಹಾಯ ಪಡೆದು ಪ್ರಕರಣ ದಾಖಲು ಮಾಡಬೇಕು. ಇಲಾಖೆಯ ಅಧಿಕಾರಿಗಳು ಕಾಯ್ದೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದರು.

‘ಜಿಲ್ಲೆಯಲ್ಲಿ ಪಶು ವೈದ್ಯರು ಹಳ್ಳಿಗಳಿಗೆ ಹೋಗುವುದಿಲ್ಲ, ರೈತರು ಕರೆ ಮಾಡಿದರೆ ಸ್ವೀಕಾರ ಮಾಡುವುದಿಲ್ಲ. ಔಷಧಿ ತರಲು ಚೀಟಿ ಬರೆದುಕೊಡುತ್ತಾರೆ ಎಂಬ ದೂರುಗಳು ಕೇಳಿಬಂದಿವೆ. ವೈದ್ಯರು, ಅಧಿಕಾರಿಗಳಿಂದ ಇಂತಹ ವರ್ತನೆಯನ್ನು ಸಹಿಸುವುದಿಲ್ಲ. ರೈತರ ಮನವಿಗೆ ಸ್ಪಂದಿಸಬೇಕು. ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು. ಪಶು ಸಂಜೀವಿನಿ ಯೋಜನೆಯ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು’ ಎಂದರು.

ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಮಂಜುನಾಥ್‌ ಮಾತನಾಡಿ ‘ಜಿಲ್ಲೆಯಲ್ಲಿ ಐದು ಗೋಶಾಲೆಗಳಿದ್ದು ಅವುಗಳಲ್ಲಿ 2 ಸರ್ಕಾರದ ಅನುದಾನದಲ್ಲಿ ನಡೆಯುತ್ತವೆ. ವಿವಿಧೆಡೆ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ, ಹಳೆಯ ಕಟ್ಟಡಗಳ ದುರಸ್ತಿಯಾಗಬೇಕಾಗಿದೆ’ ಎಂದು ಹೇಳಿದರು. ಇದಕ್ಕೆ ಸಚಿವರು, ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕುರಿ ಮತ್ತು ಉಣ್ಣೆ ನಿಗಮದ ಡಾ.ವಿವೇಕಾನಂದ ಮಾತನಾಡಿ ‘ಜಿಲ್ಲೆಯಲ್ಲಿ 6,96,318 ಕುರಿ–ಮೇಕೆಗಳಿವೆ. ವಲಸೆ ಕುರಿ ಸಾಕಣೆದಾರರಿಗೆ ಟೆಂಟ್‌ ಹಾಗೂ ಇತರ ಪರಿಕರ ವಿತರಣೆ ಮಾಡಲಾಗಿದೆ. ಎಸ್‌ಸಿಪಿ–ಟಿಎಸ್‌ಪಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಸಂಚಾರ ಮಾಂಸದ ಅಂಗಡಿ ತೆರೆಯಲು ಪೊಲೀಸ್‌ ಇಲಾಖೆ ಹಾಗೂ ನಗರಸಭೆ ಅನುಮತಿ ನೀಡಬೇಕು’ ಎಂದರು.

‘ ಆಡು–ಕುರಿ ಸತ್ತರೆ ಸರ್ಕಾರ ಮೊದಲು ₹ 5 ಸಾವಿರ ಎಕ್ಸ್‌ಗ್ರೇಷಿಯಾ ನೀಡುತ್ತಿತ್ತು. ಆದರೆ ಈಗ ಈ ಹಣ ಬಾರದ ಕಾರಣ ಕುರಿ ಸಾಕಣೆದಾರರಿಗೆ ತೊಂದರೆಯಾಗಿದೆ. ಜಿಲ್ಲೆಯಲ್ಲಿ 2,912 ಕುರಿಗಳು ಸತ್ತಿದ್ದು ಬಾಕಿ ಎಕ್ಸ್‌ಗ್ರೇಷಿಯಾ ಬರಬೇಕಾಗಿದೆ’ ಎಂದರು.

‘ಸದನದಲ್ಲೂ ಈ ಬಗ್ಗೆ ಪ್ರಶ್ನಿಸಲಾಗಿದೆ. ಶೀಘ್ರ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಸಚಿವ ಚವಾಣ್‌ ಹೇಳಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಅಶ್ವಥಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಂ ಇದ್ದರು.

ಅರಣ್ಯ ಭೂಮಿಯಲ್ಲಿ ಕುರಿ ಫಾರಂ

ಬಂಡೂರು ಸಂವರ್ಧನಾ ಕೇಂದ್ರದ ಅಧಿಕಾರಿ ಡಾ.ಅನಿಲ್‌ ಕುಮಾರ್‌ ಮಾತನಾಡಿ ‘ಧನಗೂರು ಕುರಿ ಫಾರಂ ಅರಣ್ಯ ಭೂಮಿಯಲ್ಲಿದೆ, 336 ಎಕರೆ ಭೂಮಿಯನ್ನು ಗುತ್ತಿಗೆ ಪಡೆಯಲಾಗಿದೆ. ಫಾರಂ ವಶದಲ್ಲಿ ಭೂಮಿ ಇಲ್ಲದ ಕಾರಣ ಕುರಿ ಸಾಕಣೆಗೆ ತೊಂದರೆಯಾಗಿದೆ’ ಎಂದರು.

‘ಫಾರಂ ವ್ಯಾಪ್ತಿಗೆ ಭೂಮಿ ಮೋಜಣಿ ಮಾಡಿಸಿಕೊಟ್ಟರೆ ಆ ಭಾಗಕ್ಕೆ ಬೇಲಿ ಹಾಕಿಕೊಳ್ಳಲಾಗುವುದು. ಆ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಕಾರಣ ಬೇಲಿ ಹಾಕುವ ಮೂಲಕ ಕುರಿಗಳನ್ನು ರಕ್ಷಣೆ ಮಾಡಿಕೊಳ್ಳಲಾಗುವುದು’ ಎಂದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಚಿವ ಪ್ರಭು ಚವಾಣ್‌ ಜಿಲ್ಲಾಧಿಕಾರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT